
ನೀತಾ ರಾವ್
ಮಟಮಟ ಮಧ್ಯಾಹ್ನದ ಬಿಸಿಲೊಳು
ದಯೆಯಿರದ ಸೂರ್ಯನ ಶಪಿಸುತ್ತ
ಮುದುರಿ ಮುದ್ದೆಯಾದ ಸೀರೆಯನೊದರುತ್ತ
ಸಾಮಾನು ಸರಂಜಾಮುಗಳೊಂದಿಗೆ ಮಕ್ಕಳನೂ
ಹಳದಿ-ಹಸಿರು ಸರಕಾರಿ ಬಸ್ಸಿನಿಂದಿಳಿಸುತ್ತ
ಬೆವರೊಡೆದ ಹಣೆಯ ಸೆರಗಿನಿಂದೊರೆಸುತ್ತ
ನಿಟ್ಟುಸಿರುಬಿಡುವಾಗ
ಅರೆ!
ಇದೇನು ಇವನು, ಇಲ್ಲಿ, ಈಗ, ಈ ಜಾಗದಲ್ಲಿ
ಈಗಷ್ಟೇ ಸವಿಗನಸನಿದ್ದೆಯಿಂದೆದ್ದು
ಹುಣ್ಣಿಮೆಯ ಬೆಳಕಿನಲಿ ಸೊಂಪಾಗಿ ಮಿಂದೆದ್ದು
ಬುಲೆಟ್ಗಾಡಿಯ ಡುರುಗುಟ್ಟಿಸುತ, ನನ್ನ ಮೈಯೆಲ್ಲ
ಮರಗಟ್ಟಿಸುತ, ನಗುತ ನಿಂತಿದ್ದಾನೆ ಎದುರಿಗೆಯೇ!
ಓಹ್!
ಎಷ್ಟೊಂದು ವರುಷಗಳು ಕಳೆದುದರ ಲೆಕ್ಕವಿಟ್ಟವರಾರು?
ಇಂದು ಕಂಡದ್ದಕ್ಕೆ ಹುಚ್ಚೆದ್ದು ಹಾರಾಡಿದ ಮನಸು
ಮರುಕ್ಷಣವೇ, ಅಯ್ಯೋ ಇದೆಂಥ ಅವಸ್ಥೆ ನನದು
ಇವನೇಕೆ ಭೆಟ್ಟಿಯಾದ? ಎಂದು ಇಬ್ಬಂದಿಗೆ ಸಿಲುಕಿದ್ದು
ವಿಪರ್ಯಾಸವಲ್ಲದೇ ಇನ್ನೇನು ಗೆಳೆಯಾ!





0 Comments