ಥೇಟ್ ಕ್ಷಣಭಂಗುರವಾದ ಪ್ರೀತಿಯಂತೆ..

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣತುಂಬ ಪ್ರೀತಿ…

“Of all the gin joints in all the towns in all the world she walks into mine” –

’ಪ್ರಪಂಚದ ಎಲ್ಲಾ ಊರುಗಳ, ಎಲ್ಲಾ ಮಧುಶಾಲೆಗಳನ್ನು ಬಿಟ್ಟು ಅವಳು ನನ್ನದಕ್ಕೇ ನಡೆದು ಬಂದಳು’

-ಮೊದಲ ಸಲ ಈ ಸಾಲನ್ನು ನಾನು ಕೇಳಿದ್ದು ವರ್ಷಗಳ ಮೊದಲು. ಆಗ ನೋಡಿದ್ದ ಚಿತ್ರ ಅದು, ಇಂದು ಮತ್ತೆ ನೋಡಿದೆ. ಸಾಧಾರಣವಾಗಿ ಚಲನಚಿತ್ರಗಳಿಗೆ ಒಂದು ಆಯಸ್ಸಿರುತ್ತದೆ. ಆ ಕಾಲಘಟ್ಟಕ್ಕೆ ಅದು ಸಲ್ಲುತ್ತಿರುತ್ತದೆ. ಸ್ವಲ್ಪ ಕಾಲದ ನಂತರ ನೋಡಿದರೆ ಮೊದಲು ಎದೆ ಕರಗಿಸಿದ ದೃಶ್ಯಗಳು ನಂತರ ನಗು ತರಿಸಿದರೂ ಆಶ್ಚರ್ಯವಿಲ್ಲ.

ಆದರೆ ಕೆಲವು ಚಿತ್ರಗಳಿರುತ್ತವೆ. ಅವು ಕಾಲದ ಎಲ್ಲಾ ನಿಯಮಗಳನ್ನೂ ಧಿಕ್ಕರಿಸುತ್ತವೆ. ಕಾಲ ಕಳೆದಂತೆ, ನಮಗೆ ವಯಸ್ಸಾದಂತೆ ಅದರ ಪರಿಣಾಮ ಹೊಸದಾಗಿ ಮತ್ತಷ್ಟು ತೀವ್ರವಾಗುತ್ತಾ ಹೋಗುತ್ತದೆ. ಅಂತಹ ಚಿತ್ರಗಳು ಕ್ಲಾಸಿಕ್ ಎನ್ನಿಸಿಕೊಳ್ಳುತ್ತವೆ. ಅಂತಹ ಒಂದು ಚಿತ್ರ 1942 ರಲ್ಲಿ ಬಿಡುಗಡೆಯಾದ Casa Blanca.

’ಮೊನ್ನೆ ಮತ್ತೆ ಎದುರಾದೆ,
ಮುಖತಿರುಗಿಸಿ ನಡೆದೇ ಬಿಟ್ಟೆ,
ಮೊದಲಸಲ ನನ್ನನ್ನು ಕಂಡಾಗಲೂ
ಹಾಗೆ ನಡೆದುಬಿಟ್ಟಿದ್ದರೆ….’

ಎನ್ನುವ ಅರ್ಥ ಬರುವ ಒಂದು ಶಾಯರಿ ಓದಿದ್ದೆ.

ಕೆಲವು ಭೇಟಿಗಳು ಹಾಗೆ, ಆಗಲಿ ಎಂದು ಮನಸ್ಸು ಬಯಸುತ್ತಿರುತ್ತದೆ, ಆಗಿಹೋದರೆ ಎಂದು ಹೃದಯ ನಡುಗುತ್ತಿರುತ್ತದೆ. ಪ್ರತಿಸಲ ನಿನ್ನೆಗಳು ಎದುರಾದಾಗಲೂ ಸಂತೋಷವೇ ಆಗುವುದಿಲ್ಲ, ಕೆಲವು ಸಲ ನಿನ್ನೆಗಳು ಕಣ್ಣೆದುರು ನಡೆದುಬಂದಾಗ ಅವು ಒಂಟಿಯಾಗಿರುವುದಿಲ್ಲ, ಅವುಗಳ ಬಗಲಿನಲ್ಲಿ ಮತ್ತ್ಯಾರೋ ಇರುತ್ತಾರೆ…

ಚಿತ್ರ ನಡೆಯುವುದು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ. ಅಮೇರಿಕಾ ಇನ್ನೂ ಯುದ್ಧಕ್ಕೆ ಕೈಜೋಡಿಸಿರುವುದಿಲ್ಲ. ಜರ್ಮನಿ ಇನ್ನೂ ವಿಜೃಂಭಿಸುತ್ತಿರುತ್ತದೆ. ಜರ್ಮನಿ ಆಕ್ರಮಿಸಿಕೊಂಡ ಪ್ರದೇಶಗಳಿಂದ ಜನ ತಂಡ ತಂಡವಾಗಿ ಗುಳೆ ಹೋಗುತ್ತಿರುತ್ತಾರೆ. ಅವರೆಲ್ಲರ ದೃಷ್ಟಿ ಅಮೇರಿಕಾದ ಮೇಲೆ.

ಅಮೇರಿಕ ಅವರಿಗೆ ಸಾವಿಲ್ಲದ, ನೋವಿಲ್ಲದ ’ಶಾಂಗ್ರಿಲಾ’ ತರಹ ಕಾಣುತ್ತಿದೆ. ಹಾಗೆ ಅಮೇರಿಕಾಗೆ ಹೋಗಬೇಕಾದರೆ ಇರುವ ಮುಖ್ಯರಸ್ತೆ ’ಕಾಸಾಬ್ಲಾಂಕ’ ಎನ್ನುವ ಊರಿನ ಮೂಲಕ ಹಾದುಹೋಗುತ್ತಿರುತ್ತದೆ. ಕಾಸಾಬ್ಲಾಂಕ, ಅಲ್ಲಿಂದ ಲಿಸ್ಬನ್, ಅಲ್ಲಿಂದ ನೇರ ಅಮೇರಿಕ. ಹಾಗಾಗಿ ಕಾಸಾಬ್ಲಾಂಕ ಒಂದು ಕಾಯುವಿಕೆಯ ತಾಣ. ಅಲ್ಲಿರುವವರೆಲ್ಲಾ ಬೇರೆಲ್ಲೋ ಹೋಗಲು ಹೆಜ್ಜೆ ಎತ್ತಿಟ್ಟವರು. ಅಲ್ಲಿರುವವರೆಲ್ಲಾ ಇನ್ನೊಂದು ಜಗತ್ತಿಗೆ ಹೋಗುವ ರಹದಾರಿ ಪತ್ರದ ಹುಡುಕಾಟದಲ್ಲಿರುತ್ತಾರೆ. ಅದೊಂದು ಯಾರಿಗೂ ಸೇರದ, ಯಾರಿಗೂ ಬೇಡದ ನೆಲ. ಸಂಬಂಧಗಳಲ್ಲೂ ಈ ನೆಲ ಇರುತ್ತದೆಯೇ…?

ಈ ಚಿತ್ರವನ್ನು ನಾನು ಮತ್ತೆ ನೋಡಿದ್ದು ಮುಖ್ಯವಾಗಿ ಅದರ ಸ್ಕ್ರಿಪ್ಟ್ ದೃಷ್ಟಿಯಿಂದ. ಅತ್ಯಂತ ಕಡಿಮೆ ದೃಶ್ಯಗಳಲ್ಲಿ ಅತ್ಯಂತ ಗಾಢವಾದ ಪರಿಣಾಮ. ಪ್ರತಿಯೊಂದು ಪಾತ್ರಪೋಷಣೆಗೂ ಕೊಟ್ಟ ಗಮನ, ಸಣ್ಣ ಸಣ್ಣ ವಿವರಗಳಿಗೆ ಕೊಟ್ಟ ಗಮನ ಮತ್ತು ಆತ್ಮಕ್ಕೆ ತಾಕುವಂತಹ ಸಂಗೀತ ಈ ಚಿತ್ರದ ಹೆಗ್ಗಳಿಕೆ.

ಚಿತ್ರದ ಮೊದಲ ದೃಶ್ಯದಲ್ಲೇ ಯುದ್ಧದ ಭೀಕರತೆಯನ್ನು, ಅದು ಹೊತ್ತುತರುವ ಕ್ರೌರ್ಯವನ್ನು ತೋರಿಸಲಾಗಿದೆ. ಸರಿಯಾದ ಪೇಪರ್ ಇಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ಅಲ್ಲಿ ಬಂದೂಕು ಮಾತನಾಡುತ್ತದೆ. ಆ ಊರಿಂದ ಹೊರಗೆ ಹಾರುವ ವಿಮಾನವನ್ನು ನೆಲದ ಮೇಲೆ ನಿಂತವರೆಲ್ಲರೂ ಅಪಾರವಾದ ನಿರೀಕ್ಷೆ, ಭರವಸೆಯಿಂದ ನೋಡುತ್ತಿರುತ್ತಾರೆ. ಹೆಸರಿಗೆ ಅದು ಆಕ್ರಮಣಕ್ಕೆ ಒಳಗಾಗದ ಮೊರಕ್ಕೋಗೆ ಸೇರಿದ್ದರೂ ಅಲ್ಲಿ ಜರ್ಮನ್ ಪ್ರಾಬಲ್ಯವಿದೆ.

ಅಂತಹ ಅಲೆಮಾರಿ ಊರಿನಲ್ಲಿ ಒಂದು ಜನಪ್ರಿಯ ಹೋಟೆಲ್, ಅದರ ಮಾಲಿಕ ರಿಕ್. ಕಾಸಾಬ್ಲಾಂಕಾದ ಸಂಜೆಗಳು ಅಲ್ಲಿ ರಂಗೇರುತ್ತವೆ. ಸಾಮಾನ್ಯ ನಾಗರೀಕರು, ಪೋಲೀಸ್, ಅಧಿಕಾರಿಗಳು, ಸೈನ್ಯ, ಜೂಜುಕೋರರು, ಕಾಳಸಂತೆಕೋರರು, ಮೈಮೇಲಿನ ಬಂಗಾರ ಮಾರುವವರು, ಕೊಳ್ಳುವವರು ಎಲ್ಲರೂ ಅಲ್ಲಿ ಸೇರುತ್ತಾರೆ.

ಅಲ್ಲಿ ಅತ್ಯಂತ ಮಧುರವಾಗಿ ಹಾಡುವ ಸ್ಯಾಮ್ ಎನ್ನುವ ಒಬ್ಬ ಪಿಯಾನೋವಾದಕ ಇದ್ದಾನೆ, ಅವನು ರಿಕ್ ನ ಒಬ್ಬನೇ ಗೆಳೆಯ. ರಿಕ್ ಅಲ್ಲಿನ ಸಾಮ್ರಾಟ, ಅದು ಅವನ ಸಾಮ್ರಾಜ್ಯ. ಅವನು ಅಧಿಕಾರಿಗಳನ್ನು ಗೌರವದಿಂದ ಮಾತನಾಡಿಸುತ್ತಾನೆ ಆದರೆ ಅವರಿಗೆ ಡೊಗ್ಗುಸಲಾಮು ಹಾಕುವುದಿಲ್ಲ. ಅವನ ಕೆಲವು ನಿಯಮಗಳಿವೆ : ಅವನು ಎಂದೂ ಗಿರಾಕಿಗಳ ಜೊತೆ ಕೂತು ಕುಡಿಯುವುದಿಲ್ಲ, ಯಾರನ್ನೂ ಮನಸಿನೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ, ತನ್ನ ವ್ಯವಹಾರ ಬಿಟ್ಟು ಯಾವುದೇ ರಾಜಕೀಯ ಮತ್ತು ಸಾಮಾಜಿಕ ಧ್ಯೇಯ ಧೋರಣೆಗಳನ್ನು ಇಟ್ಟುಕೊಳ್ಳುದೆ ಅಲಿಪ್ತನಾಗಿರುತ್ತಾನೆ ಮತ್ತು ಯಾರೆಂದರೆ ಯಾರಿಗಾಗಿಯೂ ತಾನು ಅಪಾಯವನ್ನು ಆಹ್ವಾನಿಸುವುದಿಲ್ಲ. ಪ್ರತಿ ಹೆಜ್ಜೆಯಲ್ಲೂ ತನ್ನ ಸುತ್ತಲೂ ಒಂದು ಅಭೇಧ್ಯವಾದ ಕೋಟೆ ಕಟ್ಟಿಕೊಂಡೇ ಓಡಾಡುವನು ರಿಕ್.

ಇಬ್ಬರು ಜರ್ಮನ್ನರು ಕೊಲೆಯಾಗಿ, ಆ ಕಾಗದ ಪತ್ರಗಳು ಕಾಣೆಯಾಗಿವೆ ಎಂದು ಸುದ್ದಿ ಹಬ್ಬಿದೆ. ಆ ಸಂಜೆ ಒಬ್ಬ ವ್ಯಕ್ತಿ ರಿಕ್ ಹೋಟೆಲ್ಲಿಗೆ ಬರುತ್ತಾನೆ. ಅವನ ಬಳಿ ಇಬ್ಬರು ವ್ಯಕ್ತಿಗಳು ದೇಶಬಿಟ್ಟು ಹೋಗಲು ಬೇಕಾದ ಕಾಗದ ಪತ್ರಗಳಿರುತ್ತವೆ. ಅವಕ್ಕೆ ಒಂದು ವಿಶೇಷತೆ ಇದೆ, ಅದರಲ್ಲಿ ಯಾರ ಹೆಸರನ್ನೂ ಬರೆದಿರುವುದಿಲ್ಲ, ಯಾರ ಹೆಸರನ್ನು ಬೇಕಾದರು ಅಲ್ಲಿ ಸೇರಿಸಬಹುದು. ಅಂತಹ ಒಂದು ಪತ್ರಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಆ ವ್ಯಕ್ತಿ ರಿಕ್ ಬಳಿ ಆ ಕಾಗದಪತ್ರಗಳನ್ನು ಹುಷಾರಾಗಿಟ್ಟುಕೊಳ್ಳಲು ಕೊಡುತ್ತಾನೆ. ರಿಕ್ ಅದನ್ನು ಎತ್ತಿಡುತ್ತಾನೆ. ಇಲ್ಲಿಯವರೆಗೂ ಚಿತ್ರ ರಿಕ್ ನ ಪಾತ್ರ, ಅವನ ಸ್ವಭಾವ ಮತ್ತು ಆಗಿನ ರಾಜಕೀಯ ಪರಿಸ್ಥಿತಿಯನ್ನು ಕಟ್ಟಿಕೊಡುತ್ತದೆ. ಮುಂದೆ ಕತೆ ಸಾಂದ್ರವಾಗುತ್ತಾ ಹೋಗುತ್ತದೆ.

ಅಂದು ಆ ಹೋಟೆಲ್ ಗೆ ಜರ್ಮನ್ ಸೈನ್ಯಾಧಿಕಾರಿ, ಕಾಸಾಬ್ಲಾಂಕಾದ ಪೋಲೀಸ್ ಅಧಿಕಾರಿಯೊಡನೆ ಬಂದಿದ್ದಾನೆ. ಆ ಅಧಿಕಾರಿ ತಾನೇ ಹೇಳಿಕೊಳ್ಳುವ ಹಾಗೆ ಒಬ್ಬ ಲಂಚಕೋರ. ಜರ್ಮನ್ ಸೇನಾಧಿಕಾರಿಯನ್ನು ಇಂಪ್ರೆಸ್ ಮಾಡಲು ಅವನೆದುರಲ್ಲಿ ಆ ಕಾಗದ ಪತ್ರ ತಂದವನನ್ನು ಸೆರೆ ಹಿಡಿಯಲಾಗುತ್ತದೆ. ಆದರೆ ಅಂದಿನ ಸಂಜೆ ಇನ್ನೂ ಮುಗಿದಿರುವುದಿಲ್ಲ. ಜೆಕೋಸ್ಲೋವೇಕಿಯಾದ ಕ್ರಾಂತಿಕಾರ ವಿಕ್ಟರ್ ಲಾಜ್ಲೋ ಅಂದು ಅಲ್ಲಿಗೆ ಬರಲಿದ್ದಾನೆ. ಅವನನ್ನು ಹಿಡಿಯಲು ಜರ್ಮನ್ನರು ಕಾದಿದ್ದಾರೆ ಎಂದು ಆ ಪೋಲೀಸ್ ಅಧಿಕಾರಿ ರಿಕ್ ಗೆ ಹೇಳುತ್ತಾನೆ. ಆದರೆ ಆ ಹೆಸರು ತನ್ನ ಬದುಕಿನಲ್ಲಿ ತರುವ ಬಿರುಗಾಳಿಯ ಬಗ್ಗೆ ರಿಕ್ ಗೆ ಅಂದಾಜಿಲ್ಲ.
ಲಾಜ್ಲೋ ಹೋಟೆಲ್ ಒಳಗೆ ಬರುತ್ತಾನೆ, ಅವನೊಂದಿಗೆ ಒಬ್ಬಳು ದೇವತೆಯಂತಹ ಹೆಣ್ಣಿರುತ್ತಾಳೆ. ನಡೆದುಬರುತ್ತಿದ್ದವಳು ಪಿಯಾನೋ ವಾದಕನನ್ನು ನೋಡಿ ನಿಧಾನಿಸುತ್ತಾಳೆ, ಪಿಯಾನೋ ವಾದಕ ಸ್ಯಾಮ್ ಅವಳನ್ನು ನೋಡಿ ಬೆಚ್ಚುತ್ತಾನೆ.

ಇಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆಕೆ ಇಸ್ಲಾ, ಲಾಜ್ಲೋನ ಪತ್ನಿ. ಲಾಜ್ಲೋ ಅಲ್ಲಿ ಆ ರಹದಾರಿ ಪತ್ರ ಪಡೆದುಕೊಂಡು ಹೆಂಡತಿಯೊಡನೆ ದೇಶಬಿಟ್ಟು ಹೋಗಲು ಬಂದಿದ್ದಾನೆ. ಆದರೆ ಕಾಗದ ಪತ್ರ ತರಬೇಕಿದ್ದ ವ್ಯಕ್ತಿ ಬಂಧಿತನಾಗಿರುವುದು ತಿಳಿಯುತ್ತದೆ. ಇಸ್ಲಾ ಸ್ಯಾಮ್ ನನ್ನು ಕರೆದು ರಿಕ್ ಹೇಗಿದ್ದಾನೆ ಎಂದು ಕೇಳುತ್ತಾಳೆ. ಆಕೆಯನ್ನು ರಿಕ್ ನನ್ನು ನೋಡದಂತೆ ತಡೆಯುವ ಎಲ್ಲಾ ಪ್ರಯತ್ನಗಳನ್ನೂ ಸ್ಯಾಮ್ ಮಾಡುತ್ತಾನೆ. ದಯವಿಟ್ಟು ಅವನನ್ನು ಭೇಟಿಯಾಗ ಬೇಡ ಎಂದು ಕೇಳಿಕೊಳ್ಳುತ್ತಾನೆ. ಇಸ್ಲಾ ಅವನನ್ನು ಹಳೆಯ ಹಾಡೊಂದನ್ನು ಹಾಡುವಂತೆ ಮನವಿ ಮಾಡುತ್ತಾಳೆ. ಮೊದಲು ನಿರಾಕರಿಸಿದರೂ ಆತ ಆ ಹಾಡನ್ನು ಹಾಡುತ್ತಾನೆ. ಇಡೀ ಚಿತ್ರಕ್ಕೆ ಇರುವುದು ಅದೊಂದೇ ಹಾಡು ಮತ್ತು ಆ ಹಾಡಿನಲ್ಲಿ ಚಿತ್ರದ ಆತ್ಮವಿದೆ.

You must remember this
A kiss is just a kiss, a sigh is just a sigh.
The fundamental things apply
As time goes by.
And when two lovers woo
They still say, “I love you.”
On that you can rely
No matter what the future brings
As time goes by.

ಹಾಡಿಗೆ ಜೀವತುಂಬಿ ಅವನು ಹಾಡುತ್ತಿರುತ್ತಾನೆ, ಕೇಳುತ್ತಾ ಕೇಳುತ್ತಾ ಅವಳ ಮುಖವನ್ನು ಮ್ಲಾನತೆ ಆವರಿಸುತ್ತದೆ. ಅವಳ ಕಣ್ಣುಗಳು ತುಂಬಿಬರುತ್ತವೆ.
ಅಷ್ಟರಲ್ಲಿ ’ಈ ಹಾಡನ್ನು ಇನ್ನೆಂದೂ ಹಾಡಬೇಡ ಎಂದು ಹೇಳಿರಲಿಲ್ಲವೆ?’ ಎಂದು ಧಾವಿಸಿ ಬರುವ ರಿಕ್ ಹಾಗೇ ನಿಲ್ಲುತ್ತಾನೆ, ಅವಳನ್ನು ನೋಡುತ್ತಾನೆ. ಲಾಜ್ಲೋಗೆ ಏನೋ ವ್ಯತ್ಯಾಸವಾಗಿದೆ ಎಂದು ಗೊತ್ತಾಗುತ್ತದೆ, ಎದೆಯ ಹತ್ತಿರದಲ್ಲೇ ಇರುವವರಿಗೆ ಎದೆಬಡಿತ ವ್ಯತ್ಯಾಸವಾದದ್ದು ಗೊತ್ತಾಗದೆ ಇರುತ್ತದೆಯೆ?

ಅಲ್ಲಿಗೆ ಬಂದ ಪೋಲೀಸ್ ಅಧಿಕಾರಿ ರಿಕ್ ನನ್ನು ಪರಿಚಯ ಮಾಡಿಸುತ್ತಾನೆ. ಲಾಜ್ಲೋ, ’ನಮ್ಮ ಜೊತೆ ಕೂರಿ’ ಎನ್ನುತ್ತಾನೆ. ಪೋಲಿಸ್ ಅಧಿಕಾರಿ ’ರಿಕ್ ಹಾಗೆಲ್ಲಾ ಗಿರಾಕಿಗಳ ಜೊತೆ ಕೂರುವುದಿಲ್ಲ’ ಎಂದು ಹೇಳುತ್ತಿರುವಾಗಲೇ, ’ನಾನು ಕೂರುತ್ತೇನೆ’ ಎಂದು ರಿಕ್ ಕೂರುತ್ತಾನೆ. ಎಲ್ಲರ ಹುಬ್ಬೇರುತ್ತದೆ.

ರಾತ್ರಿ ಆಗಿದೆ, ಹೋಟೆಲ್ ಬಾಗಿಲು ಮುಚ್ಚಿದೆ, ಎಲ್ಲರೂ ಹೊರಟಿದ್ದಾರೆ, ರಿಕ್ ಒಬ್ಬನೇ ಕೂತು ಕುಡಿಯುತ್ತಿದ್ದಾನೆ. ಸ್ಯಾಮ್ ಬಂದು ಅವನನ್ನು ಹೊರಗೆಲ್ಲಾದರೂ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ’ನಾನು ಅವಳಿಗಾಗಿ ಕಾಯುತ್ತಿದ್ದೇನೆ’ ರಿಕ್ ಹೇಳುತ್ತಾನೆ. ಅವಳು ಬಂದೇ ಬರುವಳು ಎಂದು ಅವನಿಗೆ ಗೊತ್ತಿದೆ, ಅದು ಸ್ಯಾಮ್ ಗೂ ಗೊತ್ತಿದೆ. ಇದು ಏನಾಗಬಹುದು ಎಂದು ಅವನಿಗೂ ಗೊತ್ತು, ಆದರೆ ಅವನು ತಡೆಯಲಾರ, ತೊರೆದು ಹೋಗಲಾರ. ಆಗಲೇ ರಿಕ್ ಹೇಳುವುದು, ’ Of all the gin joints in all the towns in all the world she walks into mine’. ತನ್ನೆದುರಿಗಿನ ಮೇಜು ಕುಟ್ಟಿ ಮೇಜು ಕುಟ್ಟಿ ರಿಕ್ ಹೇಳುವ ಮೇಲಿನ ಮಾತು ವರ್ಷಗಳು ಉರುಳಿದರೂ ಅನುರಣಿಸುತ್ತಲೇ ಇದೆ. ಇದನ್ನು ಹೇಳುವಾಗ ಅವನ ವಿಹ್ವಲತೆ, ಅಸಹಾಯಕತೆ, ಹತಾಶೆ ನಮ್ಮನ್ನು ಅಲ್ಲಾಡಿಸಿಹಾಕುತ್ತದೆ.

’ಆ ಹಾಡು ಹಾಡು’, ಈಗ ರಿಕ್ ಕೇಳುತ್ತಾನೆ. ಸ್ಯಾಮ್ ಹಾಡುತ್ತಾನೆ, ಜಗತ್ತಿನ ಯಾವುದೋ ಆದಿಮವಾದ ದುಃಖಕ್ಕೆ ದನಿಯಾದಂತೆ, ಕತ್ತಲ ರಾತ್ರಿಯಲ್ಲಿ ಹಾಡುತ್ತಾನೆ. ಹಾಡು ಪ್ರಾರಂಭವಾಗುವ ಮೊದಲು ರಿಕ್ ನ ಗಂಟಲಿಂದ ಅವನಿಗೂ ಗೊತ್ತಿಲ್ಲದಂತೆ ಒಂದು ಹತಾಶೆಯ ಸ್ವರ ಹೊರಡುತ್ತದೆ… – ಆಗ ಅವನ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು?

ಯಾರೀಕೆ ಇಸ್ಲಾ? ಅವಳು ರಿಕ್ ನ ನಿನ್ನೆಗಳು, ಆತ ಪ್ಯಾರಿಸ್ ನಲ್ಲಿದ್ದಾಗ ಸಿಕ್ಕವಳು. ಪರಸ್ಪರ ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಹತ್ತಿರವಾದವರು, ದಿನಕಳೆದಂತೆ ಪ್ರೇಮಿಗಳಾಗುತ್ತಾರೆ. ಆಗ ಅವರಿಬ್ಬರ ಪ್ರಪಂಚವನ್ನು ತೋರಿಸುವಾಗ ಕ್ಯಾಮೆರಾ ವೈಡ್ ಆಂಗಲ್ ನಲ್ಲಿ ಚಲಿಸುತ್ತದೆ, ಅಲ್ಲಿ ದೃಶ್ಯಗಳ ಚಲನೆಗೆ ಒಂದು ಸಮಾಧಾನ ಇದೆ, ಬೇಫಿಕರ್ ತನವನ್ನು ತೋರಿಸಲು ಅವರಿಬ್ಬರ ಕೂದಲುಗಳೂ ಗಾಳಿಯಲ್ಲಿ ಹಾರಾಡುತ್ತಿರುತ್ತದೆ, ಮುಖ್ಯವಾಗಿ ಆಗ ರಿಕ್ ನ ಕಣ್ಣುಗಳು ನಗುತ್ತಿರುತ್ತವೆ. ಅವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ಸ್ಯಾಮ್ ಇದ್ದಾನೆ ಮತ್ತು ಆತ ಅದೇ ಹಾಡನ್ನು ಹಾಡುತ್ತಿರುತ್ತಾನೆ.

ನೆಮ್ಮದಿಯಲ್ಲಿದ್ದ ಅವರ ಜಗತ್ತಿಗೆ ಯುದ್ಧದ ಪ್ರವೇಶವಾಗುತ್ತದೆ. ಅಂದು ಸಂಜೆ ಪ್ಯಾರಿಸ್ ಬಿಡಲು ಅವರು ನಿರ್ಧರಿಸುತ್ತಾರೆ. ರೈಲ್ವೇ ನಿಲ್ದಾಣದ ಬಳಿ ಟಿಕೇಟುಗಳನ್ನು ಕೈಲಿ ಹಿಡಿದು ರಿಕ್ ಹುಚ್ಚನಂತೆ ಕಾಯುತ್ತಿರುತ್ತಾನೆ. ಜೋರಾದ ಮಳೆ. ಇಸ್ಲಾ ಬರುವುದಿಲ್ಲ. ರೈಲು ಇನ್ನೇನು ಹೊರಡಬೇಕು, ಇಸ್ಲಾ ಬರುವುದಿಲ್ಲ. ಅವಳನ್ನು ಹುಡುಕಲು ಹೋಗಿದ್ದ ಸ್ಯಾಮ್ ಬರುತ್ತಾನೆ. ಅವನ ಕೈಯಲ್ಲಿ ಒಂದು ಪತ್ರ. ರಿಕ್ ಪತ್ರ ಬಿಡಿಸುತ್ತಾನೆ, ’ತಾನು ಬರುವುದಿಲ್ಲ, ಇನ್ನೆಂದೂ ಸಿಗುವುದಿಲ್ಲ’ ಎಂದು ಇಸ್ಲಾ ಬರೆದ ಪತ್ರ ಅದು. ಪತ್ರದ ಮೇಲೆ ಮಳೆ ಹನಿಗಳು ಬೀಳುತ್ತಿರುತ್ತದೆ. ಅಕ್ಷರಗಳು ನೀರಿನಲ್ಲಿ ಕಲಸಿಹೋಗುತ್ತಿರುತ್ತವೆ, ಥೇಟ್ ಕ್ಷಣಭಂಗುರವಾದ ಪ್ರೀತಿಯಂತೆ.

ಟ್ರೇನು ಹತ್ತಿದ ಮೇಲೂ ಅವನ ದೃಷ್ಟಿ ಹಾದಿಯತ್ತಲೇ ನೆಟ್ಟಿರುತ್ತದೆ. ಅವನ ನಗುವನ್ನು ಪ್ಯಾರಿಸ್ ಕಿತ್ತುಕೊಂಡುಬಿಟ್ಟಿರುತ್ತದೆ.

ಭೂತದ ನೆನಪಿನಲ್ಲಿ ರಿಕ್ ಮುಳುಗಿರುವಾಗಲೇ ವಾಸ್ತವದಲ್ಲಿ ಇಸ್ಲಾ ಹೋಟೆಲ್ ಗೆ ಬರುತ್ತಾಳೆ. ಆದರೆ ಸಿಟ್ಟಿನಲ್ಲಿರುವ ರಿಕ್ ಅವಳ ಮಾತುಗಳನ್ನು ಕೇಳಲು ಸಿದ್ಧನಿಲ್ಲ. ಅವಳು ಬರಲೆಂದು ಕಾದವನು, ಬಂದಾಗ ಅವಳು ಕಣ್ಣೀರಿಟ್ಟು ಹೋಗುವಂತೆ ಮಾಡುತ್ತಾನೆ, ಆಮೇಲೆ ತಾನೇ ಕುಸಿಯುತ್ತಾನೆ. ವ್ಯಕ್ತಿಗಳನ್ನು ಪ್ರೀತಿಸುವುದು ಸುಲಭ, ಧ್ವೇಷಿಸುವುದೂ ಸುಲಭ, ಆದರೆ ಪ್ರೀತಿಸುತ್ತಾ ಧ್ವೇಷಿಸುವುದು, ಧ್ವೇಷಿಸುತ್ತಲೇ ಪ್ರೀತಿಸುವುದು ನರಕ.

ಚಿತ್ರ ಮುಂದುವರಿದಂತೆ ಅಲ್ಲಿ ಅವರಿಬ್ಬರ ಪ್ರೇಮದಾಚೆಗೂ ಇರುವ ಪ್ರಪಂಚ ಕಾಣಿಸುತ್ತದೆ. ಹಾಗಾಗಿಯೇ ಈ ಚಿತ್ರ ಒಂದೇ ಕ್ಷಣದಲ್ಲಿ ಏಕಾಂತ ಗೀತೆಯೂ, ಲೋಕ ಗೀತೆಯೂ ಆಗುತ್ತದೆ. ಕೆಲವು ಸಣ್ಣ ಸಣ್ಣ ವಿವರಗಳಲ್ಲಿ ಆ ಪಾತ್ರ ಒಂದು ನಿಮಿಷ ಬಂದರೂ ನೆನಪಿನಲ್ಲಿ ಉಳಿದುಬಿಡುತ್ತದೆ. ಜರ್ಮನ್ ಸೈನ್ಯಾಧಿಕಾರಿಗಳು ಬಂದಾಗ ಗಿಟಾರ್ ನುಡಿಸುತ್ತಿದ್ದ ಹುಡುಗಿ ತೋರಿಸುವ ಮುಖಭಾವ ಅದ್ಭುತ. ಅಷ್ಟೇ ಸೊಗಸಾಗಿ ಮೂಡಿಬಂದಿರುವುದು ಆ ಪೋಲಿಸ್ ಅಧಿಕಾರಿ, ಸ್ಯಾಮ್, ಹೋಟೆಲ್ ನ ಧಡೂತಿ ವೈಟರ್, ಅಮೇರಿಕಾಗೆ ಹೋಗಲು ಇಂಗ್ಲಿಶ್ ಕಲಿಯುತ್ತಿರುವ ಆ ದಂಪತಿಗಳು ಎಲ್ಲರೂ.

ಅಂತಹದೇ ಇನ್ನೊಂದು ದೃಶ್ಯ : ಲಾಜ್ಲೋಗೆ ಆ ರಹದಾರಿ ಪತ್ರ ರಿಕ್ ಬಳಿ ಇರುವುದು ಗೊತ್ತಾಗಿದೆ, ಅದನ್ನು ಮಾರುವಂತೆ ಕೇಳುತ್ತಾನೆ, ರಿಕ್ ಒಪ್ಪುವುದಿಲ್ಲ. ಲಾಜ್ಲೋ ಕಾರಣ ಕೇಳಿದಾಗ, ’ಹೋಗು ನಿನ್ನ ಹೆಂಡತಿಯನ್ನು ಕೇಳು’ ಎನ್ನುತ್ತಾನೆ. ಆಗ ಹೋಟೆಲ್ ನಲ್ಲಿ ನಾಜಿಗಳ ಒಂದು ಗುಂಪು ರಾಷ್ಟ್ರಗೀತೆ ಹಾಡುತ್ತಿರುತ್ತದೆ. ಲಾಜ್ಲೋ ಹೋಟೆಲ್ ನ ವಾದ್ಯಗಾರರ ಬಳಿ ಬಂದು ಫ್ರೆಂಚ್ ರಾಷ್ಟ್ರಗೀತೆ ಹಾಡಲು ಕೇಳುತ್ತಾನೆ. ರಾಷ್ಟ್ರಗೀತೆ ಪ್ರಾರಂಭವಾಗುತ್ತದೆ. ಅದುವರೆವಿಗೂ ಸೋತಂತೆ, ತಲೆತಗ್ಗಿಸಿ ಕುಳಿತಿದ್ದ ಎಲ್ಲರೂ ತಲೆ ಎತ್ತಿ ಅದಕ್ಕೆ ದನಿಸೇರಿಸುತ್ತಾರೆ, ನಾಜಿಗಳ ದನಿ ಅಡಗುವಂತೆ ಅವರ ದನಿ ಎತ್ತರವಾಗುತ್ತದೆ. ಆ ಕ್ಷಣದಲ್ಲಿ ಲಾಜ್ಲೋ ಎಂತಹ ನಾಯಕ ಎನ್ನುವುದು ರಿಕ್ ಗೆ ಅರಿವಾಗುತ್ತದೆ. ಪ್ರೇಮದಲ್ಲಿ ಆಗಲಿ, ಯುದ್ಧದಲ್ಲಿ ಆಗಲಿ ಅಲಿಪ್ತರಾಗಿ ಉಳಿಯುವುದು ಕಷ್ಟ. ಕಡೆಗೆ ರಿಕ್ ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

A scene still from “Casablanca,” the Oscar®-winning Best Picture of 1943, features Humphrey Bogart as Café Americain owner Rick Blaine with Dooley Wilson who portrayed piano player Sam. Restored by Nick & jane for Dr. Macro’s High Quality Movie Scans Website: http:www.doctormacro.com. Enjoy!

ಚಿತ್ರದಲ್ಲಿ ಒಂದು ಸ್ಪಾಟ್ ಲೈಟ್ ಬರುತ್ತದೆ. ಅದು ರಿಕ್ ನ ಹೋಟೆಲ್ ಎದುರಿನಲ್ಲಿದೆ. ಸುತ್ತಲೂ ತಿರುಗುವ ಅದು ಎಲ್ಲರಿಗೂ ’ನಾವು ನಿನ್ನನ್ನು ಗಮನಿಸುತ್ತಿದ್ದೇವೆ’ ಎನ್ನುವ ಎಚ್ಚರಿಕೆಯನ್ನು ನೀಡುತ್ತಿರುವಂತೆ ಭಾಸವಾಗುತ್ತದೆ. ಅದೊಂದು ಅಸಹನೀಯ ಸ್ಥಿತಿ. ಯುದ್ಧದ, ಆಕ್ರಮಿತ ನೆಲದ ಅಸಹಾಯಕತೆಯನ್ನು ಇದು ಅದ್ಭುತವಾಗಿ ಕಟ್ಟಿಕೊಡುತ್ತದೆ.

ಚಿತ್ರದ ಕಡೆಯಲ್ಲಿ ಇಸ್ಲಾ ಮತ್ತೆ ರಿಕ್ ಬಳಿ ಬರುತ್ತಾಳೆ, ಆ ಪತ್ರಗಳಿಗಾಗಿ ಬೇಡುತ್ತಾಳೆ, ಬೆದರಿಸುತ್ತಾಳೆ, ರಿಕ್ ಮಣಿಯುವುದಿಲ್ಲ. ಕಡೆಗೆ ಅವಳಿಗೆ ಉಳಿಯುವುದು ಒಂದೇ ದಾರಿ. ’ನಿನ್ನನ್ನು ಮರೆಯುವುದು ನನ್ನಿಂದಾಗಿಲ್ಲ, ಮತ್ತೆ ನಿನ್ನಿಂದ ದೂರ ಓಡುವ ಶಕ್ತಿ ನನಗಿಲ್ಲ, ನಿನ್ನೊಂದಿಗೆ ಇದ್ದುಬಿಡುತ್ತೇನೆ’ ಎನ್ನುತ್ತಾಳೆ. ’ಹಾಗಾದರೆ ಲಾಜ್ಲೋ?’ ರಿಕ್ ನ ಪ್ರಶ್ನೆ. ’ಅವನಿಗೆ ರಹದಾರಿ ಪತ್ರ ಕೊಟ್ಟು ಕಳಿಸಿಬಿಡು’. ರಿಕ್ ಕರಗುತ್ತಾನೆ, ಅವಳನ್ನು ಬಳಸುತ್ತಾನೆ………ಆದರೆ ನಂಬುತ್ತಾನೆಯೆ?

ಕಡೆಯ ದೃಶ್ಯ : ವಿಮಾನನಿಲ್ದಾಣದಲ್ಲಿ ವಿಮಾನ ಸಿದ್ಧವಾಗಿದೆ. ಲಾಜ್ಲೋ ಹೊರಡುತ್ತಾನೆ, ತಾನು ಇಲ್ಲಿಯೇ ಉಳಿಯುತ್ತೇನೆ ಎಂದುಕೊಂಡಿದ್ದಾ ಇಸ್ಲಾಗೆ ಆಶ್ಚರ್ಯವಾಗುವಂತೆ ರಿಕ್ ರಹದಾರಿ ಪತ್ರದಲ್ಲಿ ಅವಳ ಹೆಸರನ್ನೂ ಸೇರಿಸುತ್ತಾನೆ. ಅವಳ ಪ್ರೇಮದ ತಾಕತ್ತು ಅವನ ಮನಸ್ಸಿನಲ್ಲಿರುವ ಕಹಿಯನ್ನೆಲ್ಲಾ ತೊಳೆದುಬಿಟ್ಟಿರುತ್ತದೆ. ಕಡೆಯಲ್ಲಿ ರಿಕ್ ಇಸ್ಲಾಗೆ ಕೈ ಬೀಸುತ್ತಾ ಒಂದು ಮಾತು ಹೇಳುತ್ತಾನೆ, ’ನನಗೆ ಮತ್ತೆ ನನ್ನ ಪ್ಯಾರಿಸ್’ ಸಿಕ್ಕಿತು. ಅವನಿಗೆ ತನ್ನ ಗತಕಾಲದಿಂದ ಬಿಡುಗಡೆ ಸಿಕ್ಕಿದೆ. ಅವನು ಮತ್ತೆ ನಗಬಲ್ಲ.

ಕಡೆಗೂ ಎಲ್ಲಾ ಮುಗಿದ ಮೇಲೆ ಉಳಿಯುವುದು ಅದೆ, ಸ್ಯಾಮ್ ನ ಹಾಡಿನ ಆ ಸಾಲುಗಳು,
And when two lovers woo
They still say, “I love you.”
…………
Moonlight and love songs
Never out of date.

‍ಲೇಖಕರು avadhi

June 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

7 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ಅಳುತ್ತಳುತ್ತಲೇ ಓದಿ ಮುಗಿಸಿದೆ …ಎಂಥ ಶಕ್ತಿಶಾಲಿ ಬರಹ !!
    ಹೆಚ್ಚು ಹೇಳಬೇಕು ಅನ್ನಿಸಿದರೂ ಹೇಳಲಾಗುತ್ತಿಲ್ಲ …

    ಪ್ರತಿಕ್ರಿಯೆ
  2. Mmshaik

    ಪ್ರೀತಿಸುತ್ತಾ ದ್ವೇಷಿಸುವುದು..ದ್ವೇಷಿಸುತ್ತಾ ಪ್ರೀತಿಸುವುದು ನರಕ…ಹೃದಯಕ್ಕೆ ಮಾತಾದ ಸಾಲುಗಳು..ಮೇಡಂ ಧನ್ಯವಾದ

    ಪ್ರತಿಕ್ರಿಯೆ
  3. Neeta Rao

    ತುಂಬಾ ಚೆನ್ನಾಗಿ ಬಂದಿದೆ ರಿವ್ಯೂ. ಚಿತ್ರ ನೋಡಬೇಕೆನಿಸುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: