ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ಕೊಟ್ಟ ಮುತ್ತುಗಳು

ಮನೆ ಖಾಲಿ ಮಾಡಬೇಕಿದೆ…

ಡಾ. ಪ್ರೇಮಲತಾ .ಬಿ.

ಮನೆ ಖಾಲಿ ಮಾಡಬೇಕಿದೆ

ಕಡು ಕಷ್ಟ ಬಿಸಾಡುವುದು

ನಿನ್ನ ವಸ್ತುಗಳವೆಷ್ಟೋ..

 

ಬೆವರ ವಾಸನೆ ಬೀರುತ್ತ ಬಿದ್ದ

ನಿನ್ನ ಕಡು ನೀಲಿ ಅಂಗಿ

ಬರಸೆಳೆದು ನೀ ಕೊಟ್ಟ ಮುತ್ತುಗಳು

ಹಚ್ಚಿದ ಮೈಯ ಗೋರಂಗಿ

ತೊಳೆದು ತಿಕ್ಕಿ ಉಜ್ಜಿದರು

ಮರುಕಳಿಸುವ ಕಲೆಗಳನು…

ಕಡುಕಷ್ಟ ತೊಳೆದುಕೊಳ್ಳುವುದು

ಜೀವಂತ  ಬದುಕಿರುವಾಗಲೇ

 

ಒಂಟಿ ಮನದಲ್ಲಿ ಮೊಳೆಸಿದ

ಆ ಮೊದಲ ಪ್ರೀತಿಯ ಜಾಡು

ಜನ್ಮಪತ್ರ ಮರಣ ಪತ್ರಗಳು

ಕುಂಚ ಕುಲಾವಿಯ ಜೊತೆಗೆ ಕಾದಿಟ್ಟ

ಹೊಕ್ಕಳ ಬಳ್ಳಿಯ ಅದುರು…

ಕಡುಕಷ್ಟ ಉರುಳಿಸುವುದು

ಕೈ ಹಿಡಿದು ನಡೆದ ನಮ್ಮ ತೇರು

ಒಡೆದ ಮನಸಿನ ಜೊಂಪಿಗೆ

ಜೋಪಾನ ಮಡಚಿಟ್ಟ ನೆನಪು

ಎಲುವು ಕೀಲುಗಳಲಿ ಹರಡಿದ

ಅಗಲಿಕೆಯ ನೋವು

ಕಳೆದುಹೋದ ಘಳಿಗೆಗಳನು ಪೋಣಿಸಿ

ಕಡುಕಷ್ಟ ಮತ್ತೆ ಹುಡುಕುವುದು

ಕಳೆದುಹೋಗಿರುವ ಪದ  ‘ನಾನು’

 

ಮೈ ಮನಗಳ ಮಡಿಕೆಗಳಲಿ ಹುಗಿದ

ನೆನಪುಗಳ ಕೊಡವಿ

ಆಳದಲಿ ಊರಿರುವ ಪ್ರೀತಿ

ಬೇರುಗಳ ಸೆಳೆದು

ಕವಲೊಡೆದ  ಕನಸುಗಳ

ಟೊಂಗೆಗಳ ಮುರಿದು

ಕಡು ಕಷ್ಟ ಎಸೆಯುವುದು

ಪ್ರೀತಿ ಹಸಿರಾಗಿರುವಾಗಲೇ

 

ಕಡುರಾತ್ರಿಯಂತದೇ ಕರಾಳ ಕಪ್ಪು

ತಳವಿಲ್ಲದ ಹಾಳು ಬಾವಿ

ವರ್ಷಗಳ ಕಾಲ ಕಾಪಿಟ್ಟ ನೋವಿಗೆ

ನಿರ್ದಯಿ ಕಾಲ ಬರೆ ಹಾಕಿದೆ

ಖಾಲಿಯಾದ ಕೋಣೆಯಲಿ

ಧೂಳು  ಪ್ರತಿ ಮೂಲೆ ಹಿಡಿದಿದೆ.

ಕಡು ಕಷ್ಟ ಮತ್ತೆ ಹೊಸತಾಗಿಸುವುದು

ಅಚ್ಚ ಪ್ರೀತಿಗೆ ವಿರಹ ಜೊತೆ ನೀಡುವ ಮತ್ತು

 

ಹೋಗೆಂದರೂ ಪೂರ್ತಿ ಬಿಡದ ವಾಸನೆ

ಮಾರಲಾಗದ ಸಾಮಗ್ರಿಗಳ ರಾಶಿ

ಹಿಡಿಶಾಪ ಹಾಕಿ ಅಟ್ಟಿದರೂ ನಗುವ

ಮರುಳು ನಂಬಿಕೆಯ ನಾಯಿ

ಹುಚ್ಚು ಪ್ರೀತಿಗೆ ಮತ್ತೆ ನಿನ್ನ ಮೆಚ್ಚಿಸುವ ಆಸೆ

ಕಡುಕಷ್ಟ ಮನ ಖಾಲಿಮಾಡುವುದು

ನೀ ಬದುಕಿರುವಾಗಲೇ…

‍ಲೇಖಕರು avadhi

27 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading