ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಕ್ಕಿದೆ ದೇವರ ವಿಳಾಸ…

ದೇವರು ತೇಜಿಯಾಗಿದ್ದಾನೆ..

  ಶ್ರೀ ತಲಗೇರಿ

ಆ ತೋಟದಲಿ ಯಾರದು

ಅಷ್ಟು ಮಿಂಚು ಹುಳುಗಳ ಬಿಟ್ಟವರು

ಲಾಂದ್ರ ಕಟ್ಟಿಹರೇನು ಬಾಲಕ್ಕೆ?!

ಒಡೆದ ಹಣತೆಗಳ ಬತ್ತಿಯ ತುಂಡೋ

ಅದೆಷ್ಟೋ ಸಾವಿರ, ಹಚ್ಚಿದವರಾರು

ಅದಕೆ ಎಣ್ಣೆ ಇಕ್ಕಿದವರಾರು

ಅದ್ಯಾರೋ ಅಂದರು ದೇವರು..

 

ಒಡೆಯಾ, ನನಗೆ ನೀವೇ ದೇವರು

ಬೀರ, ನಮ್ಮನೆಯ ಹೊಳ್ಳಿಯಲಿ ಕೂತು ಅಂದ..

ಅವನೊಡೆಯ ನನಗೆ ಅಪ್ಪ ಮಾತ್ರ..

ದೇವಸ್ಥಾನದಲಿ ಸಿಗಬಹುದೆಂದು

ವಿಳಾಸ ಕೊಟ್ಟರು ತಿಳಿದವರು..

ಅಲ್ಲಿ ಇದ್ದುದು ಬರೀ ವಿಶೇಷ ಪೂಜೆ..

ಕೈ ಮುಗಿದರೂ ಮುಖದ ಮೇಲೆ ಬೀಳದ ನೆರಳು..

ಕಾಡಿನಲಿ‌ ಕರೆದೆ ದೇವರನು, ಭುಸ್ಸೆಂದಿತು ಹಾವು

ಕೂತು ಕೂಗಿದೆ ಊರ ಮಧ್ಯದಲಿ‌

ಒಂದಿಬ್ಬರು ಕರೆದೆಯಾ ಅಂದರು

ದೇವರಾಗುವುದಿಲ್ಲವಲ್ಲಾ ಹೆಸರಿಟ್ಟುಕೊಂಡ ಮಾತ್ರಕ್ಕೆ !

ನಗರದ ಎದೆಯಲ್ಲೇನಾದರೂ ಕೂತಿರಬಹುದಾ

ನೋಡಲಿಕ್ಕೆ ಇಲ್ಲಿ‌ ಕಣ್ಣುಗಳು ಸಂಧಿಸುವುದಿಲ್ಲ..

ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ..

 

ಕಾಲವನು ಮತ್ತೆ ಜೋಡಿಸಿದೆ ಅಂಗೈಲಿಟ್ಟು

ದೇವರು ಸಿಗುವುದಿಲ್ಲ ಬಿಡು ಇಂಥ ಹುಡುಕಾಟದಲಿ

ಆತನೋ ಆಕೆಯೋ; ನಮ್ಮಂತೆಯೇ ದೇವರು?!..

ಇರಬಹುದು ಪೂರ ವಿರಾಗಿ, ಭೈರಾಗಿ

ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು

ಕಳೆದುಹೋದವ ಇದೇ ಜಂಗುಳಿಯ ಮಧ್ಯ..

ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ

ಮುಂದೇನಾಗುವರು ?!..

‍ಲೇಖಕರು avadhi

27 September, 2019

1 Comment

  1. Sarayu

    SOGASADA KAVANA

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading