ಅಮ್ಮ
ನಾ ದಿವಾಕರ
ಮರುಕಳಿಸದೇ
ಸ್ಮೃತಿ ಪಟಲದೊಳು
ಮಗೂ ಎಂಬ ನಿನ್ನೊಲುಮೆಯ
ಕರೆ ? ಎದೆ ಬತ್ತಿದಾಗ
ಮಿದುಳು ಚೀರಿದಾಗ
ಮನ ವಿಚಲಿತಗೊಂಡಾಗ !
ಶತಮಾನ ಕಳೆದಂತಿದೆ ನೀ
ಅಗಲಿ ; ಸವೆದಿದೆ ಅರೆಬಾಳು
ತೂಗುಯ್ಯಾಲೆಯಲಿ ;
ಪಾಪಿ ಮುಂಡೇ ಮಕ್ಳ ಎಂಬ
ನಿನ್ನ ಬೈಗಳೂ ಕಿವಿ-
ಗಿಂಪಾದ ಕಾಲವದು
ಗತ ರಜತ ಯುಗವಹುದು !

ಬೆಂದ ಉದರ ನೊಂದ
ಹೃದಯ ಮನೆಯೊಳೂ
ಪರಕೀಯ
ನಿರ್ಲಿಪ್ತ ಕಾಯ ;
ಸ್ವಾಭಿಮಾನದ ಮೇರೆಯಲಿ
ಅಡ ಇಟ್ಟ ತಾಳಿ
ರಕ್ಷಿಸಲಿಲ್ಲ ಒಡೆಯನ
ಶಿಕ್ಷಿಸಲಿಲ್ಲ ಮನ ಒಡೆದವನ !
ಅಜ್ಞಾತವಾಸಗಳೆನಿತೋ
ನಿಂದಕರ ಸಖ್ಯದಿ
ಸವ್ಯ ಸಾಚಿಗಳೆಷ್ಟೋ
ಪಾತಾಳ ಗರಡಿಯಲಿ ;
ಕಲ್ಲಲ್ಲವೇ ನಿನ್ನೆದೆ-
ಯೊಳಗವಿತಿದ್ದುದು ?
ಬಂಡೆಗಳಪ್ಪಳಿಕೆಗೂ
ಕುಂದದ ಎದೆ !
ಹುಲಿಯ ಹಾಲಿನ ಮೇವಂತೆ
ನೀ ಉಣಿಸಿದ್ದು ಕಲ್ಲೆದೆಯ
ಹಾಲಲ್ಲವೇ? ಕಲ್ಲಾಗಿದೆ
ಬಿಡು ಅಂತರಾಳ !
ಸುನಾಮಿಗಳಪ್ಪಳಿಸುತ್ತಲೇ
ಇರುತ್ತವೆ ನಿರಂತರವಾಗಿ
ಚಿರಂತನವಾಗಿ !
ಋಣ ಋಣಾನುಬಂಧ-
ಗಳೇನೇ ಇರಲಿ ;
ಮನ ನೊಂದಾಗ
ಆಂತರ್ಯ ಬೆಂದಾಗ
ನಿನ್ನ ನೆನಪು
ಅಶ್ರು ಬಿಂದುಗಳಾಗುತ್ತವೆ !
ನೀ ಉಳಿಸಿಹೋದ
ಬಳುವಳಿಯಾಗಿ
ಪಡೆದು ಹೋದ
ಉಡುಗೊರೆಯಾಗಿ !
ನಾ ದಿವಾಕರ






oLLeya kavite..ammandira dinada shubhashayagaLondige..