ಡೈಲಿ ಬುಕ್ : ಚಕ್ರವರ್ತಿ ಚಂದ್ರಚೂಡ್ ಅವರ ’ಖಾಲಿ ಶಿಲುಬೆ’

ಇತ್ತೀಚಿಗೆ ಬಿಡುಗಡೆಯಾದ ಚಕ್ರವರ್ತಿ ಚಂದ್ರಚೂಡ್ ಅವರ ’ಖಾಲಿ ಶಿಲುಬೆ’ ಪುಸ್ತಕದ ಮುಖಪುಟ ಮತ್ತು ಚಂದ್ರಚೂಡ್ ಅವರ ಮಾತು ನಿಮಗಾಗಿ

***

ಭಗವದ್ಗೀತೆಯ

ಬೈಬಲಿನ ಪ್ರಮಾಣ ವಚನವೂ,

ಕನ್ಫೆಶನ್ ಬಾಕ್ಸ್ನ ಹಂಗೂ ಇಲ್ಲದೆ……..


ಆಗಸ್ಟ್ ೧೫, ೧೯೭೭ರ ತಾರೀಖು ಆರಂಭದ ಒಂದು ಅರ್ಧ ರಾತ್ರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ದೇವನೂರಿನಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಜೈಮಿನಿ ಭಾರತದ ಕರ್ತೃ ಲಕ್ಷ್ಮೀಶ ಕವಿ ಬರೆಯುತ್ತಿದ್ದ ಎನ್ನಲಾದ ಮಂಟಪದ ಬಳಿ ಪಿ.ಸುಶೀಲ ಎಂಬ ತಾಯಿಯ ಒಡಲಿಂದ ಜನನ.
…ರಾಗಿ ಹೊಲದಲ್ಲಿ ಕದ್ದು ಬೀಡಿ ಸೇದುತ್ತಿದ್ದ ನನ್ನ ಅವಳು ಹುಡುಕಿ ಬಂದಿದ್ದಳು. ’ಇವತ್ತು ರಾತ್ರಿ ನನ್ನ ಪ್ರಸ್ತ. ನಾ ಓಡಿಹೋಗಬೇಕು, ಕರಕೊಂಡು ಹೋಗ್ತೀಯಾ’ ಅಂದಳು. ಆ ಮದುಮಗಳ ಜೊತೆ ಅತಿ ದೂರದ ಊರು ಅಂದುಕೊಂಡಿದ್ದ ಚೆನ್ನೈಗೆ ಓಡಿಹೋಗುವ ಕೇವಲ ಮೂರು ದಿನಗಳ ಹಿಂದೆ ಎಸ್ಎಸ್ಎಲ್ಸಿ ರಿಸಲ್ಟ್ ಬಂದಿತ್ತು. ಸಿಕ್ಕಾಪಟ್ಟೆ ಅಂಕಗಳನ್ನು ತೆಗೆದ ಖುಷಿಗೆ ನನ್ನ ಮಗ ನೂರಕ್ಕೆ ಹತ್ತಿರತ್ತಿರ ಇದ್ದಾನೆ ಅಂತ ನಮ್ಮವ್ವ ಬೂಂದಿ ಕಾಳು ಹಂಚಿದ್ದಳು.
ಚೆನ್ನೈನಿಂದ ಆರಂಭವಾದ ಪ್ರಯಾಣ ವಾರಣಾಸಿ, ಜಮ್ಮು, ಚಂಡೀಗಢ್, ಬಿಹಾರ್ನ ತೇಜ್ಪುರ್, ಕಲ್ಕತ್ತಾ, ಭುವನೇಶ್ವರ, ಕನ್ಯಾಕುಮಾರಿ, ಇಂದೋರ್ ಸಮೀಪದ ಉಜ್ಜಯಿನಿ, ತಿರುಚಿ ಸೇರಿದಂತೆ ಸತತ ಎರಡೂವರೆ ವರ್ಷ ಭಾರತದಾದ್ಯಂತ ನಡೆಯಿತು.
ಮಧ್ಯಪ್ರದೇಶದ ಉಜ್ಜೈನಿಯ ಓಂಕಾರೇಶ್ವರ ದೇವಾಲಯದ ಪ್ರಸಾದರೂಪಿ ಭಾಂಗ್ ಸೇವನೆ ಸಾಧುಗಳ ಜೊತೆ ಶುರುವಾಯ್ತು. ಅಲ್ಲಿಂದ ಸ್ನೇಕ್ಬೈಟ್ವರೆಗೆ, ಗಾಂಜಾ ಅಫೀಮಿನ ತನಕ ವ್ಯಸನಯಾನ… ಈ ನಡುವೆ ಹದಿನೈದು ದಿನ ನನ್ನೊಂದಿಗಿದ್ದ ಪ್ರಸ್ಥ ತಪ್ಪಿಸಿಕೊಳ್ಳಲು ಓಡಿಬಂದಿದ್ದ ಮದುಮಗಳ ಜೊತೆ ಒಂದೇ ಒಂದು ಬಾರಿಯಾದರೂ ಕಾಮ ಸಂಭವಿಸಲಿಲ್ಲವೇಕೆ? ಆ ಹುಡುಗಿಯನ್ನು ಪ್ರೀತಿಸುವುದಿರಲಿ, ಆಕೆ ನನ್ನನ್ನು ಆಕರ್ಷಿಸಲೂ ಇಲ್ಲ. ಆದರೂ ಯಾಕೆ ಹಾಗೆ ಓಡಿಹೋದೆ… ಕಾಡುತ್ತಿರುವ ಪ್ರಶ್ನೆಗಳು.
ಈ ವಿಷಯದಲ್ಲಿ ಅಮ್ಮನ ಬಂಧನ; ಬಿಡುಗಡೆ. ಮುಂದೆ ಇದೇ ಪ್ರಕರಣದಲ್ಲಿ ನನಗೆ ಅಮ್ಮ ಕೊಟ್ಟ ಮೊದಲ ಜಾಮೀನು.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದ ಸತ್ಯಾಗ್ರಹದಲ್ಲಿ ಮೂರುದಿನಗಳ ಕಾಲ ಜ್ವರದಿಂದ ನರಳುತ್ತಾ ಇದ್ದಾಗ ಮತ್ತೆ ಅಮ್ಮ ಬಂದಳು. ಅಪ್ಪ ಬೆಂಗಳೂರಿನ ಕೂಡ್ಲುಗೇಟಿನ ಬಲ್ಬ್ ಫ್ಯಾಕ್ಟರಿಯೊಂದಕ್ಕೆ ದಿನಗೂಲಿಗೆ ಸೇರಿಸಿದರು. ಅಮ್ಮ ಹಠ ಮಾಡಿ ಹೊಳೆನರಸೀಪುರದಲ್ಲಿ ಪ್ರಥಮ ಪಿಯುಸಿಗೆ ಸೇರಿಸುವ ಮೂಲಕ ಬಲ್ಬ್ ಫ್ಯಾಕ್ಟರಿಯಿಂದ ಬೆಳಕಿನೆಡೆಗೆ ನಡೆಸಿದಳು.
ಹೊಳೆನರಸೀಪುರ, ಅರಕಲಗೂಡು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ. ಹೊಳೆನರಸೀಪುರದ ನೆಂಟ- ಚಿಕ್ಕಪ್ಪ ನನ್ನ ಮೇಲೆ ಚಿನ್ನದ ಉಂಗುರ ಕದ್ದ ಸುಳ್ಳು ಆರೋಪ ಹೊರೆಸಿದ. (ಅವನು ಜತನದಿಂದ ಕಾಪಾಡಿಕೊಂಡಿದ್ದ ಹಾದರದವಳಿಗೆ ಅವನ ಉಂಗುರ ಗುಟ್ಟಾಗಿ ಕೊಟ್ಟಿದ್ದು). ಸಿಟ್ಟಿಗೆದ್ದು ಸತತ ಮೂರು ತಿಂಗಳ ಕಾಲ ಚಿಕ್ಕಪ್ಪನ ಕೊಲೆಗೆ ಸಂಚು ನಡೆಸಿದ್ದು. ಕೊಲೆ ಮಾಡಲು ಧೈರ್ಯವಾಗದೆ ಅರಕಲಗೂಡಿಗೆ ಮತ್ತೋರ್ವ ಮಾವನ ಮನೆಗೆ…
ಅಲ್ಲಿ ಅತ್ತೆ ಜೊತೆ ರಾಶಿಗಟ್ಟಲೆ ಕನಕಾಂಬರ ಹೂವು ಕಟ್ಟೋದು, ಕಾಲೇಜಿಗೆ ಹೋಗೋದು. ಇಡೀ ರಾತ್ರಿ ಹೂ ಕಟ್ಟುತ್ತ ವಿಲಕ್ಷಣವಾಗಿ ಹಾಡುತ್ತ ಕೂರುತ್ತಿದ್ದ ಮಗನನ್ನು ಅಮ್ಮ ತಿಪಟೂರಿಗೆ ವರ್ಗಾಯಿಸಿದಳು. ನನ್ನೂರು ಅರಸೀಕರೆ, ಬಾಣಾವರ, ದೇವನೂರ ಕಾಲೇಜುಗಳಿಗೆ ಹೋದರೆ ಪ್ರಸ್ಥವಾಗದ ಮದುಮಗಳ ಕಡೆಯವರು ನನ್ನನ್ನು ಕೊಲ್ಲುತ್ತಾರೆಂದು ಅಮ್ಮ ಹೆದರಿದ್ದಳು.
ತಿಪಟೂರಿನ ಆ ಹುಡುಗಿಯ ಹೆಸರು ಲೂರ್ಧಮೇರಿ ದೇವಮಣಿ. ಬಾಲ್ಯದಿಂದಲೂ ಏಸುಕ್ರಿಸ್ತನ ಥರಹ ಬಟ್ಟೆ ಹಾಕಬೇಕು, ಕುರಿ ಕಾಯಬೇಕು, ಗಡ್ಡ ಬಿಡಬೇಕು, ಶಿಲುಬೆಯ ಮೇಲೆ ನೇತಾಡಬೇಕು ಮೊಳೆ ಹೊಡೆಸಿಕೊಂಡು ಅಂತ ಕನಸುತ್ತಿದ್ದ ನನಗೆ ಯೇಸುವಿನ ಬಗೆಗಿನ ನಿಜಗಳನು ತಿಳಿಸಿಕೊಟ್ಟವಳು. ಅದೇಕೋ ದೇವಮಣಿ ಕೂಡ ಓಡಿಹೋಗಿ ಮದುವೆಯಾಗೋಣ ಅಂದಳು. ನಾನು ವಿನಾಕಾರಣ ಓಡಿಹೋಗಿ ಮೂರು ವರುಷ ಭಾರತ ಸುತ್ತಿದ್ದನ್ನೆಲ್ಲ ಹೇಳಿದೆ. ಮತ್ತೆ ಓಡಿಹೋಗೋದರಲ್ಲಿ ಆಸಕ್ತಿ ಇಲ್ಲ ಅಂತ ನನ್ನ ಪಾಡಿಗೆ ನಾನಿದ್ದೆ. ಮೂರು ತಿಂಗಳಾದ ನಂತರ ದೇವಮಣಿ ತನ್ನ ಮದುವೆಯೆಂದೂ – ಒಂದು ಭಾನುವಾರದ ಮಧ್ಯಾಹ್ನ ಮೂರು ಗಂಟೆಗೆ ಬರಬೇಕೆಂದೂ ಸಾಬೀರ್ ಕೈಲಿ ಹೇಳಿಕಳಿಸಿದಳು. ಊಟಕ್ಕೆ ಕರೆದಿರಬೇಕೆಂದು ನಾನೂ ಸಾಬೀರ್ ಹೋದೆವು. ಆದರೆ ದೇವಮಣಿ `ನನ್’ ಆಗಿದ್ದಳು. ಸನ್ಯಾಸದ ದೀಕ್ಷೆ ತೆಗೆದುಕೊಂಡಿದ್ದಳು. ಯೇಸುವಿಲ್ಲದ ಖಾಲಿ ಶಿಲುಬೆಯನ್ನು ತಾಳಿಯಂತೆ ತೋರಿಸಿ ಮದುವೆ ಆಯ್ತು ಅಂದಳು. ವಿಚಿತ್ರವಾಗಿದ್ದ ಬಿಳಿ ಬಟ್ಟೆ ಹಾಕಿಕೊಂಡಿದ್ದ ದೇವಮಣಿ ತಿಪಟೂರಿನ ಕಲ್ಪತರು ಸೈನ್ಸ್ ಕಾಲೇಜಿನ ಹಿಂಭಾಗದ ಚರ್ಚ್ನಲ್ಲಿ ಕುಳಿತು ಅವಳಿಗೆ ನನ್ನ ಜೊತೆಯೇ ಯಾಕೆ ತುರ್ತಾಗಿ ಓಡಿಹೋಗಬೇಕಿತ್ತು, ಮತ್ತು ಈ ಮೂರು ತಿಂಗಳ ಅವಧಿಯಲ್ಲಿ ಯಾಕೆ ಸನ್ಯಾಸಿ ಆದಳು ಎಂಬುದನ್ನು ವಿವರಿಸಿದಳು. ಬಾ, ಈಗ ಓಡಿಹೋಗೋಣ ಅಂದೆ. ಈಗವಳು ಯೇಸು ಶಿಲುಬೆಯಿಂದ ತಪ್ಪಿಸಿಕೊಂಡು ಓಡಿಹೋಗಲು ಸಾಧ್ಯವಿಲ್ಲವೆಂದು ಎದ್ದು ಹೋದಳು. ಅವತ್ತಿನಿಂದ ನನ್ನ ಅಳು ಆರಂಭವಾಯಿತು.
ಈ ಪುಸ್ತಕ ಅಚ್ಚಿಗೆ ಹೋಗುತ್ತಿರುವ ಸಂದರ್ಭದಲ್ಲಿ ನನ್ನ ಸ್ನೇಹಿತರಿಂದ ಮೇಲ್ ಐಡಿ ಕಲೆಕ್ಟ್ ಮಾಡಿಕೊಂಡು ಪತ್ರ ಬರೆದಿದ್ದಳು. ಫೋಟೋ ಕಳಿಸಿದ್ದಾಳೆ. ಯುಗೋಸ್ಲೋವಿಯಾದಲ್ಲಿ ಕ್ರೈಸ್ತ ಸನ್ಯಾಸಿನಿಯಾಗಿ ಅದೆಂಥದೋ ವಿಚಿತ್ರ ಹೆಸರಿನ ಸಂಸ್ಥೆಗೆ ಕೆಲಸ ಮಾಡುತ್ತಿದ್ದಾಳೆ. ದೇವಮಣಿಯ ಬದುಕನ್ನು ಬಲಿಕೊಟ್ಟು ಓದಿದ್ದರಿಂದ ದ್ವಿತೀಯ ಪಿಯುಸಿಯಲ್ಲಿ, ಸಿಇಟಿಯಲ್ಲಿ ಒಳ್ಳೆಯ ಮಾರ್ಕ್ಸ್ ಬಂದಿತ್ತು. ಬೆಳಗಾಂವ್ನ ಜವಾಹರ್ ಲಾಲ್ ನೆಹರೂ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಕಾಂಪೌಂಡರ್ ಮಗ ಡಾಕ್ಟರ್ರೇ ಆದ ಅಂತ ಅಮ್ಮ ಸಂಭ್ರಮಿಸಿದಳು. ಒಂದು ತಿಂಗಳು ಹದಿಮೂರನೆ ದಿನಕ್ಕೆ ಎಂಬಿಬಿಎಸ್ ಓದಲಾಗದೆ ಮನೆಗೆ ಬಂದಾಗಲೂ ಸಿಇಟಿ ರ್ಯಾಂಕಿಂಗ್ನಲ್ಲಿ ಇಂಜಿನಿಯರಿಂಗ್ ಸೀಟು ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಕ್ಕಿತ್ತು. ಜೆಸಿ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಕೆಲಸ ಸಿಕ್ಕಿದರೂ ಸ್ನಾತಕೋತ್ತರ ಪದವಿಗೆ ಸೇರಿದ್ದಾಯ್ತು.
ಇಷ್ಟು ಹೊತ್ತಿಗೆ ಜರ್ನಲಿಸಂ ಕೈಹಿಡಿದಿತ್ತು. ಅಕ್ಷರ ದುಡಿಮೆ, ಪತ್ರಿಕೆಯಲ್ಲಿ ನನ್ನ ಚಿತ್ರವಿಚಿತ್ರ ಹೆಸರುಗಳನ್ನು ನೋಡುವ, ಜನ ಗುರುತಿಸುವ, ಅದೇನೋ ಈಗೋ ತೃಪ್ತಿಯಾಗುತ್ತಿತ್ತು. ಕ್ರಮೇಣ ಪತ್ರಿಕೋದ್ಯಮದ ನಿಜವಾದ ಜವಾಬ್ದಾರಿ ಅರ್ಥವಾಯ್ತು.
ಈಗಾಗಲೇ ಹದಿನಾರು ಹೆಸರುಗಳಿವೆ ನನಗೆ. ಅದೇಕೋ ಮತ್ತೆಮತ್ತೆ ಹೆಸರು ಬದಲಾಯಿಸಿಕೊಳ್ಳಬೇಕು ಅನ್ನಿಸುತ್ತದೆ.
ಈ ನಡುವೆ ಅರಸೀಕೆರೆಯಿಂದ ಪುಣೆಗೆ ಓಡಿಹೋಗಿದ್ದ ಹುಡುಗಿಯ ಜೊತೆ ಸಹಜೀವನ ಆರಂಭ. ಪ್ರಸ್ತವಾಗದ ಮದುಮಗಳು, ದೇವಮಣಿ ಸೇರಿದಂತೆ ಇಷ್ಟುಹೊತ್ತಿಗಾಗಲೇ ಪ್ರೀತಿಸಿದ ಅಸಂಖ್ಯಾತ ಹುಡುಗಿಯರ ಜೊತೆ ಮಾಡದೆ ಇದ್ದು ಪಶ್ಚಾತ್ತಾಪ ಪಟ್ಟಿದ್ದನ್ನು ಪುನರಾವರ್ತಿಸಲಾರದೆ ಹೋದೆ. ಚುಕ್ಕಿ ಹುಟ್ಟಿದಳು. ನನ್ನಿಂದ ಯಾವುದೇ ಹೆಣ್ಣಿಗೆ ಬದ್ಧನಾಗಿರಲಾಗದು ಅನ್ನಿಸತೊಡಗಿತ್ತು. ಸಂಬಂಧ ನಾನಾ ವೈಯಕ್ತಿಕ ಕಾರಣಗಳಿಗೆ ಮುರಿದು ಬಿತ್ತು. ಮತ್ತೊಮ್ಮೆ ಓಡಿಹೋಗಿ ಸಹಜೀವನ ನಡೆಸಲು ಯತ್ನಿಸಿ ಅದೊಂದು ದಾಂಪತ್ಯವನ್ನೂ ಅರಗಿಸಿಕೊಳ್ಳಲಾಗದೆ ಸೋತೆ.
ಹಾಸನದ ಚನ್ನಪಟ್ಟಣದ ಕೆರೆ ಹೋರಾಟಕ್ಕೆ ಕೈಹಾಕಿದಾಗ ಮಹಾರಾಷ್ಟ್ರದ ಅಣ್ಣಾ ಹಜಾರೆ, ರಾಜಸ್ಥಾನದ ರಾಜೇಂದ್ರಸಿಂಗ್ರೆಡೆಗೆ ಹೋದೆ. ಜನ – ಜಲ ಕ್ರಾಂತಿ ಅಂತ ಇಬ್ಬರ ಬಗ್ಗೆಯೂ ಪುಸ್ತಕ ಬರೆದೆ. ಜಲ್ಬಿರಾದ್ರಿ ಯಾತ್ರೆಗೆ ಕರ್ನಾಟಕಕ್ಕೆ ಬಂದ ರಾಜೇಂದ್ರ ಸಿಂಗ್ ಹಾಸನಕ್ಕೆ ಬಂದು ಪುಸ್ತಕ ಬಿಡುಗಡೆ ಮಾಡಿದರು. ಅನಂತರ ನಾನೂ ರಾಜೇಂದ್ರಸಿಂಗ್ ದಾರಿಯಲ್ಲಿ ನಡೆಯುತ್ತೇನೆಂದು ಹಾಸನದಲ್ಲಿ ಯುವಭಾರತ ಸಂಘ ಕಟ್ಟಿದೆ. ಹೊಯ್ಸಳ ಖಡ್ಗ ಅನ್ನೋ ವಾರಪತ್ರಿಕೆ ನಡೆಸಲು ಹೋಗಿ ಅದರ ಸೈಡ್ ಎಫೆಕ್ಟ್ ಎಂಬಂತೆ ಕೇಸುಗಳನ್ನು ಜಡಿಸಿಕೊಂಡೆ. ಯುವಭಾರತ ಸಂಘದಿಂದ ಅಧ್ಯಕ್ಷನನ್ನೇ ಉಚ್ಛಾಟಿಸಲಾಯ್ತು. ಈಗ ಆ ಹಳೆಯ ಸ್ನೇಹಿತರು ಎದುರಿಗೆ ಸಿಕ್ಕಾಗ ಪಶ್ಚಾತ್ತಾಪ ಪಡುತ್ತಾರೆ.
ಆನೇಕಲ್ ಬಾಲಣ್ಣ ನನಗೆ ಚಿತ್ರ ನಿರ್ದೇಶನ ಮಾಡಲು ಅವಕಾಶ ಕೊಟ್ಟರು. `ರಾಕ್ಷಸನ ಥರ ಕೆಲಸ ಮಾಡ್ತೀಯ ಅಂದರು. ಅದ್ಯಾಕೋ ನನ್ನ ಪ್ರಥಮ ನಿರ್ದೇಶನದ `ಜನ್ಮ’ ಸಿನಿಮಾ ಆರು ವರುಷ ಕಾಯಬೇಕಾಯ್ತು ರಿಲೀಸಿಗೆ. ಬಾಲಣ್ಣನಿಗೆ ಒಂದು ಕೋಟಿ ಹತ್ತು ಲಕ್ಷ ಲಾಸಾಗಿರಬಹುದು. ನನಗಂತೂ ಆರು ವರುಷದ ಜೀವಿತಾವಧಿ ಕಳೆದುಹೋಗಿತ್ತು.
ಏನಾದರೂ ಎಡವಟ್ಟು ಮಾಡಿಕೊಂಡಾಗೆಲ್ಲ ಪತ್ರಿಕೆಗೆ ಕರೆದು ಕೆಲಸ ಕೊಡೋದು ಇಂದ್ರಜಿತ್ ಲಂಕೇಶ್. ಬಹುಶಃ ಇಷ್ಟರೊಳಗೆ ನನ್ನನ್ನು ಆದರಿಸೋದು ತಪ್ಪೆಂದು ಅವರಿಗೂ ಮನವರಿಕೆಯಾಗಿರಬಹುದು.
ಕಾಣದ ಕಡಲಿಗೆ ಹಂಬಲಿಸುತ್ತದೆ ಮನ. ಆ ಹಂಬಲದಲ್ಲೆ ಇದ್ದುಬಿಡಬೇಕು. ನನ್ನಂಥವರು ಕಡಲನ್ನು ಕಾಣಬಾರದು. ನನ್ನ ಮೊದಲ ಪ್ರೀತಿ ಪಾರೋ. ಅವರನ್ನು ಈ ಜಗತ್ತು `ಶೃತಿ’ ಎಂದು ಕರೆಯುತ್ತದೆ. ದೇವರು ಬರೆದ ಜೀವಕಾವ್ಯವದು. ನನ್ನಂಥವನನ್ನು ಪ್ರೀತಿಸಿ ಇರದುದರೆಡೆಗೆ ತುಡಿವುದೇ ಜೀವನ ಅಂತ ನಂಬಿದ ಅವರು ಕಡೆಗೂ ನನ್ನಂಥವನನ್ನು ಸಹಿಸಲಾರದೆ ಹೋದರು. ಶೃತಿ ನಾನು ಕಂಡ ಶ್ರೇಷ್ಠ ಜೀವ. ಸಾವಿರ ಸಾವಿರ ಹೃದಯದ ಹೆಣ್ಣುಮಗಳು. ವೈಯಕ್ತಿಕ ಜೀವನವನ್ನು ಅತ್ಯಂತ ಕೆಟ್ಟದಾಗಿಟ್ಟುಕೊಂಡಿದ್ದ ನಾನು ಈಗ ಕಾಲಕಾಲಕ್ಕೆ ಹಸಿವು, ಸುಡುವ ಸಿಗರೇಟುಗಳು, ಕುಡಿತ… ಎಲ್ಲದರಿಂದ ಆಸಕ್ತಿ ಕಳೆದುಕೊಂಡಿದ್ದೇನೆ.
ಹಸಿವಲ್ಲೂ ಅನ್ನ ರುಚಿಸದ ಹೀನಾಯ ಸ್ಥಿತಿ.
ನನ್ನೊಂದಿಗೆ ಓಡಿಹೋದ ಪ್ರಸ್ಥವಾಗದ ಹೆಣ್ಣುಮಗಳನ್ನು ಆಕೆಯ ಗಂಡ ಉದಾತ್ತತೆಯಿಂದ ಕ್ಷಮಿಸಿಕೊಂಡು ಬಾಳಿಸುತ್ತಿದ್ದಾನೆ. ನನಗೆ ಇವಳಿಗಿಂತ ಚಂದ್ರೂವಿನ ಮೇಲೆ ನಂಬಿಕೆ ಅನ್ನುತ್ತಾನೆ. ಇನ್ನು ಓಡಿಹೋಗಲು ಬಯಸಿದ್ದ ದೇವಮಣಿ ಅವಳಿರುವ ದೇಶಕ್ಕೆ ನನ್ನನ್ನು ಕರೆಯುತ್ತಿದ್ದಾಳೆ. ಅವಳು ಶಿಲುಬೆ ತೂಗುತ್ತಿರುವವಳು ನನ್ನನ್ನು ಬ್ರದರ್ ಅನ್ನಬೇಕು, ಡಿಯರ್ ಅನ್ನುತ್ತಾಳೆ. ಮತ್ತೆ ಓಡಿಹೋಗುವ ಮನಸಿಲ್ಲದೆ, ಓಡಿಹೋಗುವಿಕೆಯಿಂದ ಸುಸ್ತಾದ ನಾನು ಇಲ್ಲೇ ನಿಮ್ಮ ನಡುವೆ `ಪ್ರಾಮಾಣಿಕ’ವಾಗಿ ನನ್ನತನಗಳೊಂದಿಗೆ ಸತ್ತುಹೋಗಬೇಕು ಅಂತ ತೀರ್ಮಾನಿಸಿದ್ದೇನೆ.
ಇನ್ನು ಪುಣೆಗೆ ಓಡಿಹೋಗಿ, ಮಗಳು ಚುಕ್ಕಿಯ ಹುಟ್ಟಿಗೆ ಕಾರಣರಾದವರು ನನ್ನ ಮೇಲೆ ನಾಲ್ಕು ಕೇಸುಗಳನ್ನು ದಾಖಲಿಸಿದ್ದಾರೆ. ಮತ್ತೆ ಮನೆಗೆ ವಾಪಸಾಗೋದು, ತಿಂಗಳಿಗೆ ಒಂಬತ್ತು ಸಾವಿರ ಕೊಡೋದು… ಜೊತೆಯಲ್ಲಿ ಇರಲು ಸಾಧ್ಯವಾಗದೆ ಇದ್ದರೆ ಮೂರು ಕೋಟಿ ಕೊಡೋದು… ಈಗ ನನ್ನ ಚುಕ್ಕಿಗೆ ಕೊಡಬೇಕಾಗಿರುವುದನ್ನೂ ಕೊಡದೆ ಇರದ ನಾನು ನ್ಯಾಯಾಲಯ ಹೇಳಿದಂತೆ ೯ ಸಾವಿರ ತಿಂಗಳಿಗೆ ಮತ್ತು ಮಗಳ ಅಗತ್ಯತೆಗಾದರೂ ದುಡಿಯಲೇಬೇಕೆಂದು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಡಿ. ಅದೆಲ್ಲ ಈಗ ಮುಗಿದ ಕಥೆ…
ನನ್ನ ಮಗಳು ಚುಕ್ಕಿ ಏನಾದರೂ ಅಪ್ಪ, ನಿನ್ನನ್ನು ಕ್ಷಮಿಸಿದ್ದೇನೆ, ನಿನ್ನಿಷ್ಟದಂತೆ ಬದುಕು ಅಂದರೆ ನನ್ನ ಬಳಿ ಇರುವುದೆಲ್ಲವನ್ನೂ ಆಶೀರ್ವಾದಗಳೊಂದಿಗೆ ಕೊಟ್ಟು ಹಿಮಾಚಲಪ್ರದೇಶದ ಪಾರೋ ಎಂಬ ಜಿಲ್ಲೆಯ ಧ್ಯಾನಕೇಂದ್ರಕ್ಕೆ ಶಾಶ್ವತವಾಗಿ ಹೋಗಲು ತಯಾರಾಗಿದ್ದೇನೆ.
ಇನ್ನು ಶೃತಿಯವರು ಧೈರ್ಯ – ದಿಟ್ಟತೆಯಿಂದ ಇದ್ದಾರೆ. ನಾನವರ ಪಾಲಿಗೆ ಚಲಿಸದ ಮೋಡವಾಗಿದ್ದೇನೆ. ಅವರನ್ನು ಪ್ರೀತಿಸುವ ನಿಜದ ಕಾರಣಕ್ಕೆ ಅವರಿಂದ ಈಗಾಗಲೇ ಏಳು ಸಮುದ್ರದಾಚೆ ದೂರಕ್ಕೆ (ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರೂ) ಹೋಗಿದ್ದೇನೆ. ಈ ಹೊತ್ತಿನ ನಂತರ ಅವರ ಹೆಸರನ್ನೂ ನಾನು ಪ್ರಸ್ತಾಪಿಸಬಾರದೆಂದು ತೀರ್ಮಾನಿಸಿದ್ದೇನೆ.
ಅಪ್ರಜ್ಞಾಪೂರ್ವಕವಾಗಿ ಗೆಳೆಯರಿಗೆ ಮಾಡಿರುವ ನೋವುಗಳು, ಸಣ್ಣಸಣ್ಣ ಸುಳ್ಳುಗಳು, ದೇವಮಣಿ, ಪ್ರಸ್ತವಾಗದ ಮದುಮಗಳು, ಮಗಳು ಚುಕ್ಕಿ, ಮತ್ತು ದೇವರಂತೆ ಹಣೆಬರಹ ಬದಲಾಯಿಸಲು ಬಂದ ಶೃತಿ, ಇವೆಲ್ಲಕ್ಕೂ ಮಿಗಿಲಾಗಿ ನನಗೋಸ್ಕರ ಭೂಮಿಯೇ ಆಗುವ ಪಶ್ಚಿಮವಿಲ್ಲದ ಸದಾ ಉರಿವ ಸೂರ್ಯನಂತಹ ನನ್ನವ್ವ, ಕನಸುಗಳನ್ನೆಲ್ಲ ಬಲಿಕೊಟ್ಟುಕೊಂಡ ನನ್ನ ಸಾಕುತಂದೆ…
ಚೆನ್ನೈನ ಎಗ್ಮೋರ್ನ ಬೇಬಿ ಹಾಸ್ಪಿಟಲ್ ಪಕ್ಕವೇ ಇರುವ ವಿಜಯಲಲಿತಾ ಎಂಬಾಕೆ ನಡೆಸುವ ವೇಶ್ಯೆಯರ ಮನೆಯಲ್ಲಿ ಕೆಲಸಕ್ಕಿದ್ದಾಗ ಪೊಲೀಸರ ರೇಡಾಯ್ತು. ಪೊಲೀಸ್ ಪೇದೆ ಕರುಣಾಕರ ತಳ್ಳಿದ್ದರಿಂದ ಅಕಸ್ಮಾತ್ ಆಗಿ ಪೂವಂ ಬ್ರಿಜ್ ಕೆಳಗೆ ಹರಿಯುವ ಕೊಳಕು ನದಿಗೆ ಬಿದ್ದುಬಿಟ್ಟೆ. ಪೊಲೀಸ್ ಕರುಣಾಕರ ಉದ್ದೇಶಪೂರ್ವಕವಾಗಿ ಕೊಲ್ಲಲು ತಳ್ಳಿದ ಅಂತ ಐಜಿಪಿಗೆ ಸುಳ್ಳು ಹೇಳಿ ವಿಜಯಲಲಿತಾಳನ್ನು ಕಾಪಾಡಿದ್ದು – ಯಾವತ್ತಿಗೂ ಕೊರೆಯುವ ಮಹಾಪರಾಧ. ಸಸ್ಪೆಂಡ್ ಆದ ಕರುಣಾಕರನ ಅಸಹಾಯಕ ಮುಖ ಪದೇಪದೇ ನೆನಪಾಗಿ ಕೊಲ್ಲುತ್ತದೆ.
ಲಕ್ಷ್ಮಣ್ ಝೂಲಾ ಬ್ರಿಜ್ ಮೇಲಿಂದ ಕೆಳಗೆ ಹಾರಿ ಅವಳೊಬ್ಬಳು ಸುಮಾರು ಮೂವತ್ತೈದರ ಹರೆಯದ ಅಪರಿಚಿತ ಹೆಂಗಸು ಆತ್ಮಹತ್ಯೆ ಮಾಡಿಕೊಂಡಳು. ನಾನು ಸ್ವಲ್ಪ ಪ್ರಯತ್ನಪಟ್ಟಿದ್ದರೆ ಆಕೆಯನ್ನು ಬದುಕಿಸಬಹುದಿತ್ತು. ನನ್ನ ಅವತ್ತಿನ ಅಸಹಾಯಕತೆ ಇನ್ನೂ ಎದೆಯಿಂದ ಅಳಿಯುತ್ತಿಲ್ಲ.
ಚಿಕ್ಕಂದಿನಲ್ಲಿ ದೇವಸ್ಥಾನಕ್ಕೆ ಹೋಗಿ ಹಿಂದಿ ಟೀಚರ್ ರೇವತಿ ಮತ್ತು ನಮ್ಮೂರ ಫಾದರ್ ಜೋಸೆಫ್ ಬೇಗ ಸತ್ತುಬಿಡಲಿ ಅಂತ ಪ್ರಾರ್ಥಿಸುತ್ತಿದ್ದೆ. ಇದು ನಾನು ಪದೇಪದೇ ಕೊಲೆಗಳನ್ನೇ ಮಾಡಿದಂತಿದೆ. ಈಗ ಇವರಿಬ್ಬರೂ ಮದುವೆಯಾಗಿ ಚೆನ್ನಾಗಿದ್ದಾರೆ. ಹೋದಾಗಲೆಲ್ಲ ಊಟ ಹಾಕುತ್ತಾರೆ.
ಸರಸ್ವತಿ ಪೂಜೆಯ ದಿನ ಅರಕಲಗೂಡಿನ ಇಂದಿರಾ ಟೀಚರ್, ದೇವನೂರಿನ ಗೀತಾ ಟೀಚರ್ ಕಾಲಿಗೆ ಬೀಳುತ್ತಿದ್ದೆ. ಆದರೆ ಈ ಇಬ್ಬರನ್ನು ಇರುಳಲ್ಲಿ ಪದೇಪದೇ ಸಂಭೋಗಿಸುತ್ತಿದ್ದೆ – ಕನಸು ಕಲ್ಪನೆಗಳಲ್ಲಿ. ಈ ಕನಸು ಕಲ್ಪನೆಯ ಸಂಭೋಗದಲ್ಲಿ ಎಂದೂ ನೇರವಾಗಿ ನೋಡದ ನಟಿ ಸ್ಮಿತಾ ಪಾಟೀಲ್ ಕೂಡ ಇದ್ದರು. ಇದು ನನ್ನನ್ನು ಬಹಳ ಪಶ್ಚಾತ್ತಾಪದಿಂದ ಕಾಡಿಸಿತ್ತು. ಈಗ ಮೈಸೂರಿನ ಓಶೋ ಅಲ್ಲಮ ಧ್ಯಾನ ಸನ್ನಿಧಿಯ ಗುರು ವೇಣು ಬಿಎಸ್ಕೆ ಹೇಳಿಕೊಟ್ಟಂತೆ ಡೈನಮಿಕ್ ಯೋಗ… ಹಹಹಹಹ!
…ರಾಜಸ್ಥಾನದ ಆ ಆಲ್ವಾರ್ನ ಸೋರ್ಡ್ ಮ್ಯೂಸಿಯಮ್ (ಖಡ್ಗಗಳ ಮ್ಯೂಸಿಯಮ್)ನಲ್ಲಿ ಕತ್ತಿಗಳನ್ನೊರೆಸುವ – ಕಾಯುವ ಕೆಲಸ ಮಾಡುತ್ತಿದ್ದಾಗ ಆಲ್ವಾರ್ನ ಸೇಬ್ ಕಾ ಗಲಿಯ ಕೋಠಾವಾಲಿ ಶಮ್ಮಾ ಒಂದೂವರೆ ಸಾವಿರ ರೂಪಾಯಿ ಸಾಲ ಕೊಟ್ಟಿದ್ದಳು. ಹದಿನೈದು ವರ್ಷಗಳ ಹಿಂದೆ ಅದನ್ನು ವಾಪಸ್ಸು ಕೊಡಲು ಹುಡುಕಿ ಹೋಗುವ ಹೊತ್ತಿಗೆ ಅವಳು ಸತ್ತುಹೋಗಿದ್ದಳು. ಅವಳ ಮೆಹಫಿಲ್ ಹಾಡಿನ, ಬೆವರಿನ ದುಡ್ಡು. ಅದಿನ್ನೂ ನನ್ನ ಬಳಿಯೇ ಇದೆ. ತಲೆಮೇಲೆ ಕೋಠೆವಾಲೆಯ ಕೋಟಲೆಗಳನ್ನೇ ಹೊತ್ತುಕೊಂಡಂತೆ ಭಾರ ಭಾರ…
ವಾರಣಾಸಿಯಲ್ಲಿ ಗಂಗೆಯೊಡಲಿಗೆ ಹೆಣದ ಬೂದಿಯನ್ನು ಬಿಡುವ ಕೆಲಸದಿಂದ ಹಿಡಿದು ನೂರಾರು ಥರದ ಕೆಲಸ ಮಾಡಿದ್ದೇನೆ. ಇಲ್ಲೆಲ್ಲ ಗೋಡೆಗೊಂದು ಗೋಡೆಯಂತೆ ಮುಯ್ಯಿ ಕೇಡು ಮಾಡಿದವನು ನಾನು. ಇಲ್ಲಿಯವರೆಗಿನ ಕೇಡುಗಳನ್ನು ಇನ್ನೂ ವಿಸ್ತಾರವಾಗಿ ಎಂದಾದರೂ ಒಪ್ಪಿಕೊಂಡುಬಿಡಬೇಕು.
ಮತ್ತು ನನ್ನಂಥವನಿಂದ ಏನೇನೂ ಬೆಳಕು ಪಡೆಯದ ಈ ಲೋಕ, ಸಮುದಾಯಗಳಿಗೆ ನನ್ನಿಂದಾದ ಮೋಸ – ದ್ರೋಹಗಳನ್ನೆಲ್ಲ ಲೆಕ್ಕ ಹಾಕಿದರೆ, ಜೀವಜಗತ್ತಿನ ಯಾವುದೇ ಕ್ರೂರ ಶಿಕ್ಷೆಗೂ ನಾನು ಅರ್ಹ. ಸಾವಿಗೆ ಈ ಕ್ಷಣ ಅರ್ಹವಾಗಿರುವ ವ್ಯಕ್ತಿ ನಾನು. ಇದನ್ನೆಲ್ಲ ಯಕೆ ಬರೆಯುತ್ತಿದ್ದೇನೆಂದರೆ, ಈ ಎಲ್ಲ ಕಾರಣಗಳಿಂದಲೇ ಸಾವಿರಾರು ಪದ್ಯಗಳು ಹುಟ್ಟುತ್ತಲೇ ಇರುವುದು. ನನ್ನ ಸಂಕಟದ ಹೊತ್ತಿನಲ್ಲಿ ಬರೆಯುತ್ತ ಹೋದ ತಳಮಳಗಳೇ ಇಲ್ಲಿರುವುದು. ಸುಮಾರು ಒಂದುಸಾವಿರದ ಆರುನೂರು ಪದ್ಯಗಳನ್ನು ಬರೆದಿಟ್ಟುಕೊಂಡು ಆದಷ್ಟು ಕಡಿಮೆ ಬೆತ್ತಲೆ ಇರುವ ಪದ್ಯಗಳನ್ನು ಇಲ್ಲಿ ಪ್ರಕಟಿಸುತ್ತಿರುವೆ.
ಇಷ್ಟೆಲ್ಲ ಓದಿದ ಮೇಲೆಯೂ ನೀವು ಫ್ಯಾಷನ್ಗಾಗಿ ಬುಕ್ರಾಕ್ನಲ್ಲಿ ಪುಸ್ತಕ ಜೋಡಿಸಿಡದೆ ನಿಜಕ್ಕೂ ಮೊದಲಕ್ಷರದಿಂದ ಕಾವ್ಯ ಓದುವಷ್ಟು ಆಸಕ್ತರಾದರೆ, ನನ್ನ ಪದ್ಯಗಳ ಮೂಲಕ ಸಂಕಟ – ತಳಮಳ – ತಲ್ಲಣಗಳು ನಿಮ್ಮನ್ನು ಮುಟ್ಟಬಹುದು.
ಇದರ ಮೇಲೆ ನಿಮ್ಮಿಷ್ಟ.
ಸದ್ಯಕ್ಕೆ ನನಗಿರುವ-
ನಿಮಗೆ ಗೊತ್ತಿರುವ
ಚಕ್ರವರ್ತಿ ಚಂದ್ರ ಚೂಡ್ ಎಂಬ ಹೆಸರಿನವನಾದ ನಾನು…
 

‍ಲೇಖಕರು G

May 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. jagadishkoppa@gmail.com

    ನಿಮ್ಮೊಳಗಿನ ಪ್ರಾಮಾಣಿಕತೆ ನನಗಿಷ್ಟವಾಯಿತು. ಇಂತಹದ್ದೇ ಬದುಕನ್ನು ಬದುಕಿದ ನನ್ನೊಬ್ಬ ಗೆಳೆಯ ಇದ್ದಾನೆ. ಅವನು ರವಿಬೆಳೆಗೆರೆ. ನಿಮ್ಮ ಈ ಬರಹ ಓದಿದಾಗ ಅವನು ನೆನಪಾದ.ಬಡತನ, ಹಸಿವು, ಅಪಮಾನ ಇಂತಹ ಅಗ್ನಿಕುಂಡಗಳನ್ನು ಹಾಯ್ದವನಿಗೆ ಮಾತ್ರ ಬದುಕು ಅಂದರೆ ಏನೆಂಬುದು ಅರ್ಥವಾಗಬಲ್ಲದು ಎಂದು ನಂಬಿರುವವರಲ್ಲಿ ನಾನೂ ಒಬ್ಬ.
    ಜಗದೀಶ್ ಕೊಪ್ಪ, ಧಾರವಾಡ.

    ಪ್ರತಿಕ್ರಿಯೆ
  2. D.Ravivarma

    ನಿಮ್ಮ ಬರಹ ಮನಮುಟ್ಟು ವಂತಿದೆ .ಽಸ್ತೆ ಕಾಡುತ್ತದೆ ಕುದ… ಬಹಳ ಕಾಲದ ನಂತರ ನನ್ನನ್ನು ಘಾದವಾಗಿ ಕಾಡಿದ ಬರಹ… ಇಡಿ ಪುಸ್ತಿಕೆ ಓದಬೇಕೆನಿಸುತ್ತಿದೆ ..tarisikolluve

    ಪ್ರತಿಕ್ರಿಯೆ
  3. Shivakumar Chennappanavar

    Nimma barahadalliruva nera nirupane nanagistavayitu Bari Mukhavadavanne hotta jagattinalli Pramanikavagiruva nimma baraha tumba hidisitu pustaka padeyuva bage entu tilisuvira…………..?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: