ಎಂ ಆರ್ ಗಿರಿಜಾ ಪ್ರವಾಸ ಕಥನ : ಪ್ರಜ್ಙೆಯ ಬಳ್ಳಿಯಲ್ಲಿ ಅರಳಿದ ಹೂ ಬುದ್ಧ

(ಇಲ್ಲಿಯವರೆಗೆ..)

ಭೂತಾನಿನ ರಾಜಧಾನಿ ಟಿಂಪು ಪುಟ್ಟ ಸೌಮ್ಯವಾದ ಪಟ್ಟಣ. ಹೊರಗೆ ಹೊರಡುವ ಮೊದಲು ಇಮಿಗ್ರೇಷನ್ ಕಚೇರಿಗೆ ಹೋಗಿ ರೋಡ್ ಪರ್ಮಿಟ್ ತೆಗೆದುಕೊಂಡೆ. ಇದು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಅಂತ ತಿಳಿದುಕೊಂಡಿದ್ದೆ. ಆದರೆ ಬಹುಬೇಗ ಹಾಗು ಯಾವ ತೊಂದರೆಗಳಿಲ್ಲದೆ ಮುಗಿಯಿತು.
ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಟಿಂಪು ನೋಡಲು ಹೊರಟೆ. ಭೂತಾನಿನ ರಾಜಧಾನಿ ಟಿಂಪು ಪುಟ್ಟ ಸೌಮ್ಯವಾದ ಪಟ್ಟಣ. ಡ್ರೈವರ್ ಟಾಂಡಿನ್ ಮುದ್ದಾದ ಭೂತಾನಿ ಹುಡುಗ. ಹಿಂದಿ ಮಾತನಾಡುತ್ತಿದ್ದ ಇಲ್ಲಿನ ಬಹುಪಾಲು ಜನರು ಹಿಂದಿ ಮಾತನಾಡುತ್ತಾರೆ. ಬಾಲಿವುಡ್ ಮೋಡಿ ಜಾಸ್ತೀನೇ. ನಾನು ಇಂಗ್ಲಿಷ್ ಮಾತಾನಾಡಿದ್ರೆ ಅವನು ಹಿಂದಿಯಲ್ಲಿ ಉತ್ತರ ಕೊಡ್ತಿದ್ದ. ನಂಗೆ ಹಿಂದಿ ಮಾತಾಡೋಕೆ ಇಷ್ಟ ಅಂತಿದ್ದ. ಅಲ್ಲಿಯ ಸಿನೆಮಾ ಮಂದಿರಗಳಲ್ಲಿ ಹಿಂದಿ ಸಿನೆಮಾಗಳನ್ನು ಹಾಕದಿದ್ದರೂ ಟಿವಿಯಲ್ಲಿ ದಿನವೂ ಅದನ್ನೇ ನೋಡೋದು ಅಂದ.
ಭೂತಾನ್ ಎಂದೊಡನೆ ಮಾನೆಸ್ಟರಿಗಳು, ಮರೂನ್ ಬಣ್ಣದ ಕಾವಿ ಹೊದ್ದ ಸನ್ಯಾಸಿಗಳು, ಪ್ರೇಯರ್ ವೀಲ್ಸ್, ಜಪಮಣಿಗಳು, ಗೋಂಪಾಗಳು, ಚಾರ್ಟನ್ಸ್ (ಸ್ತೂಪ), ಲಾಖಾಂಗ್(ದೇವಾಲಯ),ಝಾಂಗ್ ಗಳು(ಕೋಟೆಗಳು), ಬುದ್ಧ, ಬೌದ್ಧಧರ್ಮ ಇವೆಲ್ಲವುಗಳ ಸುತ್ತ ಹಬ್ಬಿದ ಬಣ್ಣದ ಕತೆಗಳು.
ಇದು ಬೌದ್ಧ ದೇಶ. ಕ್ರಿಶ್ಚಿಯನ್ನರು ಇದ್ದರೂ ಇಲ್ಲಿ ಯಾವುದೇ ಚರ್ಚ್ ಗಳು ಇಲ್ಲ. ಅವರು ಪ್ರಾರ್ಥನೆಯನ್ನು ಮನೆಗಳಲ್ಲಿ ಮಾಡುತ್ತಾರೆ. ಏಕೆಂದರೆ ಕ್ರೈಸ್ತ ಧರ್ಮ ಇಲ್ಲಿ ಅಧಿಕೃತ ಧರ್ಮವಲ್ಲ. ಅಲ್ಲಿ ಮುಸ್ಲಿಮರು ಇಲ್ಲವೇ ಇಲ್ಲ ಎಂದಾಗ ಆಶ್ಚರ್ಯವಾಯಿತು. ಏಷ್ಯಾದ ಒಂದು ದೇಶದಲ್ಲಿ ಮುಸ್ಲಿಮರೇ ಇಲ್ಲ ಅನ್ನೋದು ಸ್ವಲ್ಪ ಆಶ್ಚರ್ಯ ಉಂಟುಮಾಡ್ತು. ಇನ್ನು ಕಟ್ಟುತ್ತಿರುವ ಹಂತದಲ್ಲಿರೋ ಒಂದು ಕಟ್ಟಡ ತೋರಿಸಿ ಇದು ಮೊದಲ ಹಿಂದು ದೇವಾಲಯ ಅಂತ ಹೇಳಿದ. ಇಲ್ಲಿರುವ ಬಹುತೇಕ ಹಿಂದುಗಳು ನೇಪಾಳದಿಂದ ಬಂದು ನೆಲೆ ನಿಂತಿರುವವರು.
ಟಿಂಪುವಿನ ಬಹುತೇಕ ಭಾಗಗಳಿಂದ ಮಿಸ್ ಮಾಡೋಕೆ ಆಗದ ಚಿತ್ರ ಟಿಂಪುವಿಗೆ ಅಂಟಿಕೊಂಡಂತಿರುವ ಗುಡ್ಡದ ಮೇಲಿನ ಬುದ್ಧ. ಟಿಂಪುವಿನಲ್ಲಿ ಎಲ್ಲಿ ಅಲೆದರೂ ಆ ನೋಟವನ್ನು ತಪ್ಪಿಸೋಕಾಗಲ್ಲ. ಅದು ಬುದ್ಧ ಪಾಯಿಂಟ್.
ಸುತ್ತ ಕಾಡು ಇರುವುದರಿಂದ ಹಾಗೂ ಗುಡ್ಡದ ಮೇಲಾದ್ದರಿಂದ ಸುಯ್ಯನೆ ಬೀಸುತ್ತಿದ್ದ ಚಳಿಗಾಳಿಗೆ ಮೊದಲು ಹಾಕಿಕೊಂಡಿದ್ದ ಸ್ವೆಟರ್ ಮೇಲೆ ಇನ್ನೊಂದು ಸ್ವೆಟರ್ ಹಾಕಿಕೊಂಡೇ ಕಾರಿನಿಂದ ಇಳಿಯಬೇಕಾಯ್ತು. ನಾನು ಅಲ್ಲಿಗೆ ಹೋದಾಗ ಸೂರ್ಯ ಇನ್ನೂ ನೆತ್ತಿ ಮೇಲೆ ಇರಲಿಲ್ಲ. ಬೇರೆ ಯಾರೂ ಪ್ರವಾಸಿಗರೂ ಇರಲಿಲ್ಲ. 51 ಮೀಟರ್ ಉದ್ದದ ಈ ಮೂರ್ತಿ ಪ್ರಪಂಚದ ಅತಿ ಎತ್ತರದ ಕುಳಿತ ಭಂಗಿಯ ಬುದ್ಧನ ವಿಗ್ರಹ. ಬುದ್ಧ ಮೂರ್ತಿಯ ಒಳಭಾಗದಲ್ಲಿ ಸಾವಿರಾರು ಸಣ್ಣ ಸಣ್ಣ ಬುದ್ಧ ಮೂರ್ತಿಗಳಿವೆಯಂತೆ. ಕೆಳಭಾಗದಲ್ಲಿ ದೊಡ್ಡ ಧ್ಯಾನದ ಹಾಲ್ ಇದೆ. ಅದರ ಕಾಮಗಾರಿ ಕೆಲಸ ಇನ್ನೂ ನಡೀತಾ ಇತ್ತು. ಇದರ ನಿರ್ಮಾಣಕ್ಕೆ ಜಪಾನ್ ಸಹಾಯ ಮಾಡಿದೆ ಅಂತ ಕೇಳಿದೆ. ಸ್ವಲ್ಪ ಕಾಲ ಬುದ್ದನನ್ನೇ ನೋಡುತ್ತಾ ನಿಂತಿದ್ದೆ. ಬುದ್ಧನೇ ಹಾಗೆ ಎಷ್ಟು ನೋಡಿದರೂ ನೋಡಬೇಕು ಅನಿಸುತ್ತೆ. ಬುದ್ಧ ಮನುಷ್ಯನ ಮನಸ್ಸು ಕಲ್ಪಿಸಿಕೊಳ್ಳಬಹುದಾದ ಪ್ರಜ್ಙೆಯ ಅತಿ ಸುಂದರ ರೂಪಕ. ಬುದ್ಧನು ಬೋಧಿಸಿದ ಆಸೆಯ ಮೇಲಿನ ಕಡಿವಾಣ ಮತ್ತು ನೆಮ್ಮದಿ ಇವುಗಳನ್ನು ಆರ್ಥಿಕ, ಸಾಮಾಜಿಕ ಮುಖಗಳಲ್ಲಿ ಸ್ವಲ್ಪವಾದರೂ ಸಾಧಿಸಲು ನೋಡುತ್ತಿರುವ ದೇಶ ಭೂತಾನ್ ಅಂತ ಅನ್ನಿಸಿತು.

ಇಲ್ಲಿಂದ ಕಾಣುವ ಟಿಂಪು ಕಣಿವೆ ಕೂಡ ಮನೋಹರವಾಗಿದೆ. ನನ್ನ ಕನ್ ಸಟ್ರಕ್ಷನ್ ಮನಸ್ಸು ಕಾಡು ಕಡಿದು ಹೇಗೆ ಈ ನೆಲಾನ ಸಪಾಟು ಮಾಡಿದಾರೆ. ಹೇಗೆ ಅಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪನೆ ಮಾಡಿದಾರೆ? ಜಪಾನಿನ ತಂತ್ರಜ್ಞಾನ ಇರಬೇಕು ಅಂತ ಲೆಕ್ಕಾಚಾರ ಹಾಕುತ್ತಿತ್ತು. ಬುದ್ಧ ಪಾಯಿಂಟ್ ನೋಡಿಕೊಂಡು ಕೆಳಗಿಳಿದು ಬಂದು ಅಲ್ಲಿಯ ಕೆಲವು ದೇವಾಲಯಗಳನ್ನು ನೋಡಿದೆ.

 
ಇಲ್ಲೊಂದು ದೇವಾಲಯ ಇದೆ. ಚಾಂಗ್ಖಾ ಲಾಖಾಂಗ್ ಅಂತ ಅದರ ಹೆಸರು. ಇದೂ ಕೂಡ ಸಣ್ಣ ಗುಡ್ಡದ ಮೇಲಿದೆ. ಇಲ್ಲಿನ. ಶಿಶುಗಳ ಒಳಿತಿಗಾಗಿ ಈ ದೇವಾಲಯವಿದೆ. ಸುತ್ತಲಿನ ಜನರು ಹುಟ್ಟಿದ ಮಕ್ಕಳನ್ನು ಇಲ್ಲಿ ತಂದು ಆಶೀರ್ವಾದ ತಗೋತಾರೆ. ಅನೇಕರು ಕೈಗೂಸುಗಳನ್ನು ಎತ್ತಿಕೊಂಡು ಬಂದಿದ್ದರು. ಅವರು ಮಕ್ಕಳಿಗೆ ಹೆಸರಿಡೋ ಪದ್ದತಿ ಚೆನ್ನಾಗಿದೆ. ಅಲ್ಲೊಂದು ಡಬ್ಬ ಇತ್ತು. ಅದರ ತುಂಬಾ ಹೆಸರುಗಳನ್ನು ಚೀಟಿಯಲ್ಲಿ ಬರೆದು ಇಟ್ಟಿರ್ತಾರಂತೆ. ಮಗುವಿನ ಅಪ್ಪ ಅಮ್ಮ ಎತ್ತುವ ಚೀಟಿಯಲ್ಲಿರುವ ಹೆಸರು ಮಗುವಿನ ಹೆಸರಾಗುತ್ತೆ. ಇದಲ್ಲದೆ ಅಪ್ಪ ಅಮ್ಮ ಇನ್ನೊಂದು ಹೆಸರಿಡತಾರಂತೆ. ಎಲ್ಲರಿಗೂ ಎರಡು ಹೆಸರು.
ಇಲ್ಲಿ ಕೂತಿರುವಾಗ ಲಡಾಖ್ ನಿಂದ ಬಂದ ಒಂದು ಕುಟುಂಬದವರ ಪರಿಚಯ ಆಯ್ತು. ನನಗಂತೂ ಅವರಿಗೂ ಭುತಾನಿಯರಿಗೂ ಮುಖದಲ್ಲಿ ಏನೂ ವ್ಯತ್ಯಾಸ ಕಾಣಲಿಲ್ಲ. ಅವರು ಭೂತಾನ್ ಎಷ್ಟು ಹಸಿರಾಗಿದೆ, ಎಂಥಾ ಚೆನ್ನ. ನಮ್ಮೂರಲ್ಲಿ ಬರೀ ಬೋಳು ಬೋಳು ಅಂತ ಹೊಗಳ್ತಾ ಇದ್ದರು. ನಾನು ನಮ್ಮದು ಹಚ್ಚ ಹಸಿರು ಇನ್ನೂ ಉಳಿದಿರುವ ಪಶ್ಚಿಮಘಟ್ಟದ ಸಮೀಪದ ಊರು, ನಿಮ್ಮೂರಿನ ಬೋಳು ಗುಡ್ಡಗಳನ್ನು ನೊಡಲು ಹಂಬಲಿಸಿ ಹಂಬಲಿಸಿ ಬರುತ್ತೇವೆ ಅಂತ ಹೇಳಿದೆ. ಸಾವಿರ ಕೈಗಳಿರುವ, ಬುದ್ಧನ ಒಂದು ರೂಪವಾದ ಅವಲೋಕಿತೇಶ್ವರನ ಮೂರ್ತಿ ಇಲ್ಲಿದೆ. ಅದು 12 ನೇ ಶತಮಾನಕ್ಕೆ ಸೇರಿದ್ದು.
3ನೇ ರಾಜನ ನೆನೆಪಿಗೆ ಕಟ್ಟಿಸಿರುವ ಸ್ತೂಪ ಮೆಮೊರಿಯಲ್ ಚೋರ್ಟೆನ್. ರಾತ್ರಿ 3-4 ಗಂಟೆಗಳ ಹೊರತು ಸದಾ ತೆರೆದಿರುವ ಈ ಸ್ತೂಪದ ಸುತ್ತ ಜನ ಪ್ರದಕ್ಷಿಣೆ ಮಾಡುತ್ತಲೇ ಇರುತ್ತಾರೆ. ಒಂದೆಡೆ ಹಿರಿಯ ಜೀವಗಳು ಹಲಗೆಗಳ ಮೇಲೆ ನಮಸ್ಕರಿಸುತ್ತಲೇ ಇರುತ್ತಾರೆ. ನಾನು ಅಲ್ಲಿ ಕುಳಿತ ಒಂದು ಗಂಟೆಗೂ ಮಿಕ್ಕ ಅವಧಿಯವರೆಗೆ ಒಬ್ಬಾಕೆ ನಮಸ್ಕರಿಸುತ್ತಲೇ ಇರೋದು ನೋಡಿದೆ. ಈ ಸ್ತೂಪವನ್ನು ನಾಲ್ಕು ಬದಿಯಲ್ಲಿ ಲೋಹದ ಹಗ್ಗದಿಂದ ಕಟ್ಟಿದ್ದಾರೆ. ಅದಕ್ಕೆ ನನ್ನ ಡ್ರೈವರ್ ಕೊಟ್ಟ ವಿವರಣೆ ತಮಾಷೆಯಾಗಿತ್ತು. ಈ ಸ್ತೂಪ ಸ್ವರ್ಗ ಕ್ಕೆ ಸೇರಿದ್ದಂತೆ. ಅದು ಹಾರಿ ಹೋಗ್ಬಾರದು ಅಂತ ಹೀಗೆ ನಾಲ್ಕೂ ಕಡೆ ಕಟ್ಟಿಹಾಕಿದಾರಂತೆ. ಪ್ರಳಯದ ದಿನ ಇದು ವಾಪಸ್ ಸ್ವರ್ಗ ಕ್ಕೇ ಹೋಗುತ್ತಂತೆ!!. ಬೌದ್ಧ ವಿಹಾರಗಳಲ್ಲಿ ಸಾಮಾನ್ಯವಾಗಿ ಕಾಣಬರುವುದು ಬಟರ್ ಲ್ಯಾಂಪ್ ರೂಂ. ಅಲ್ಲಿ ಹರಕೆಯ ದೀಪ ಹಚ್ಚುತ್ತಾರೆ. ನಾನು 20 ರೂ. ಕೊಟ್ಟು ಒಂದೆರಡು ದೀಪ ಹಚ್ಚಿ, ಅದರ ಮುಂದೆ ಪೋಟೋ ಕ್ಲಿಕ್ಕಿಸಿ ಬಂದೆ.

ಇದರ ನಂತರ ಟಿಂಪುವಿನ ಆರ್ಟ್ಸ್ ಅಂಡ್ ಕ್ರಾಫ್ಟ್ ಸ್ ಸ್ಕೂಲ್ ಗೆ ಹೋದೆ. ಇಲ್ಲಿ ಪೇಂಟಿಂಗ್, ಸ್ಕಲ್ಪ್ ಚರ್, ಟೈಲರಿಂಗ್ ಹೀಗೆ ಹತ್ತಾರು ತರಗತಿಗಳಿದ್ದವು. ಕಲಿಯಲು ಬರುವವರಿಗೆ ವಸತಿಯ ವ್ಯವಸ್ಥೆಯೂ ಇದೆ. ಕಂಪ್ಯೂಟರ್ ತರಗತಿ ಕೂಡ ಈ ಕಲಾ ಶಾಲೆಯಲ್ಲಿ ಇತ್ತು. ಬಹುಶಃ ಅದು ಈಚೆಗೆ ಶುರುವಾಗಿರಬೇಕು. ಈ ಶಾಲೆಯಲ್ಲಿ ಅಂಥಾ ಖಾಸ್ ಆಗಿ ಏನೂ ಕಾಣದೆ ಅಲ್ಲಿಂದ ಬೇಗ ಹೊರಟು ಹೆರಿಟೇಜ್ ಮ್ಯೂಸಿಯಂ ನೋಡಲು ಹೋದೆ. ಇದೊಂತರ ಹಳೆಹಳೆಯ ವಸ್ತುಗಳ ಪ್ರದರ್ಶನಾಲಯ. ಒಂದು ಅಟ್ಟದಿಂದ ಇನ್ನೊಂದು ಅಟ್ಟಕ್ಕೆ ಹೋದಂತೆ ಹಿಂದೆ ಅವರು ಉಪಯೋಗಿಸುತ್ತಿದ್ದ ಪಾತ್ರೆ ಪಗಡಿ, ಬಾನಿಗಳು, ಬಟ್ಟೆಗಳು, ಒರಳು ಕಲ್ಲು, ಒಲೆ ಇತ್ಯಾದಿ ಇತ್ಯಾದಿ. ತುಂಬಾ ನಾಸ್ಟಾಲ್ಜಿಕ್ ಆಗಿತ್ತು ಈ ಜಾಗ. ನಾನು ಬೆಳೆದ ನನ್ನ ಹಳ್ಳಿಯ ನೆನಪನ್ನು ತಂದಿಟ್ಟಿತು. ಥೇಟ್ ನಮ್ಮ ಹಳ್ಳಿಯ ಅಟ್ಟ ಹತ್ತಿದ ಹಾಗಾಯ್ತು. ಫೋಟೋ ತೆಗೆಯೋ ಹಾಗಿರಲಿಲ್ಲ. ಹಾಗಾಗಿ ಕಣ್ಣಲ್ಲೇ ತುಂಬಿಕೊಂಡು ಬಂದೆ.

ಇನ್ನೂ ಬೇಕಾದಷ್ಟು ದೇವಾಲಯಗಳಿದ್ದರೂ ನನಗೆ ಒಂದರಿಂದ ಒಂದಕ್ಕೆ ಹಾರೋದರಲ್ಲಿ ಮಜಾ ಇಲ್ಲ. ಹೀಗಾಗಿ ಡ್ರೈವರ್ಗೆ ದೇವಾಲಯಗಳಲ್ಲದೆ ಮತ್ತೇನಾದರೂ ಇದೆಯ ಅಂತ ಕೇಳಿದೆ. ಅವನು ಟಕೀನ್ ನ್ಯಾಷನಲ್ ಪಾರ್ಕ್ ಗೆ ಗೆ ಕರೆದುಕೊಂಡು ಹೋದ. ಟಕೀನ್ ಭೂತಾನಿನ ರಾಷ್ತ್ರೀಯ ಪ್ರಾಣಿ. ಇದು ಒಂದು ತರಹ ವಿಚಿತ್ರ ಪ್ರಾಣಿ. ಮೇಕೆ ಮುಖಕ್ಕೆ ಹಸುವಿನ ದೇಹ ಸೇರಿಸಿದ ಹಾಗಿದೆ. ಆ ಪಾರ್ಕ್ ನಲ್ಲಿ ಕೆಲವು ಟಕೀನ್ ಗಳು ಹಾಗು ಒಂದೆರಡು ಜಿಂಕೆಗಳು ಮಾತ್ರ ಇದ್ದವು. ಟಕೀನ್ ಹಿಂದೆ ಕೂಡ ಒಂದು ಕತೆ ಇದೆ. ಇದನ್ನು ದ್ರುಪ ಕಿಲೆ ಎಂಬ ಯೋಗಿ ಸೃಷ್ಟಿಸಿದ ಅಂತಾರೆ.
(ಮುಂದುವರಿಯುವುದು…)

‍ಲೇಖಕರು avadhi

May 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಹೋಗಬೇಕೆನ್ನುವ ಆತಂಕ ಇಲ್ಲ, ಇರಬೇಕೆನ್ನುವ ಬಯಕೆ ಇಲ್ಲ « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಹೋಗಬೇಕೆನ್ನುವ ಆತಂಕ ಇಲ್ಲ, ಇರಬೇಕೆನ್ನುವ ಬಯಕೆ ಇಲ್ಲ May 12, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: