ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನೀವಿರುವುದು ಸಾವಿರಾರು, ಧಣಿಗಳಿರುವುದು ಹತ್ತಾರು’ – ವಿಠಲ ದಳವಾಯಿ

ನೀವಿರುವುದು ಸಾವಿರಾರು. . . .

ಕನ್ನಡಕ್ಕೆ : ವಿಠ್ಠಲ ದಳವಾಯಿ

(‘ದಿ ಮಾಸ್ಕ್ ಆಫ್ ಅನಾರ್ಕಿ’ಯಿಂದ)

ಇಂಗ್ಲೀಷ್ ಮೂಲ : ಪಿ.ಬಿ.ಶೆಲ್ಲಿ

 

1
ಸ್ವಾತಂತ್ರ್ಯವೆಂದರೇನು?
ನಂಗೊತ್ತು
ಒಳ್ಳೆಯ ಗುಲಾಮಗಿರಿಯೇ ಸ್ವಾತಂತ್ರ್ಯವೆಂದು
ನೀವು ಹೇಳುವಿರಿ
ಸ್ವಾತಂತ್ರ್ಯ ಮತ್ತು ಗುಲಾಮಗಿರಿ
ಇವೆರಡು ಪದ ನಿಮ್ಮಾಳದ ದನಿಯಾಗಿ ಬೆಳೆದಿವೆ
ನಿಮ್ಮನೂ ಮೀರಿ
 
ಅಂದಂದಿನ ಬದುಕು ಅಂದಿಗೇ ದೂಡಲು
ದೊರೆವುದು ಬಿಡಿಗಾಸು ಹೈರಾಣು ಒಡಲು
ಪಾದಗಳ ತುಸುವೂ ಮಿಸುಕಿಸಲಾಗದ ಕೋಣೆ ನಿಮ್ಮ ತೊಟ್ಟಿಲು
ಒಡೆಯರ ದೊಡ್ಡ ವಾಡೆಯ ಹೊಸಲಿಗೆ ನೀವು ಮೆಟ್ಟಿಲು
 
ನೇಯ್ಗೆಯ ಮಗ್ಗ ಕೊಡಲಿ ನೇಗಿಲು ಸಲಕೆ
ನಿಮಗಾಗಿಯೇ ಮಾಡಿಸಿ ಕಳಿಸುವರು ಹೊಲಕೆ
ಮನಸಿದೆಯೋ ಇಲ್ಲವೋ ಬಾಗಬೇಕು ನೀವೇ
ಅವರ ರಕ್ಷಣೆ ಅವರ ಸೇವೆ ನಿಮ್ಮದೇ ಹೊಣೆ
 
ನಿಮ್ಮ ಮಕ್ಕಳು ಮತ್ತವರ ತಾಯಿಯರು
ನರಳುವರು ಸಣ್ಣಗೆ ರೋಗ, ದು:ಖದ ತವರು
ಚಳಿಗಾಳಿ ಹೀಗೆ ಜೋರಾಗಿ ಬೀಸಿದರೆ
ಹೇಳಲಾರೆ, ಸಾವೇ ಅವರ ಕೊನೆಯ ಆಸರೆ

ಹಸಿವು ನೀಗುವಷ್ಟೂ ನಿಮಗೆ ಸಿಗೊದಿಲ್ಲ ಕೂಳು
ಹಣವಂತರಿಗುಂಟು ಅವರದೇ ಬಣ್ಣದ ಬಾಳು
ಧಡಿಯ ನಾಯಿಗಳ ಮುಂದಿನ ರಾಶಿ ಅನ್ನ
ತಿನ್ನದೇ ಕಣ್ಮುಂದೆಯೇ ಸೇರುತಿದೆ ಮಣ್ಣ
 
2
ಹಕ್ಕಿಗಳಿಗೆ ವಿರಾಮಕ್ಕಿದೆ ಪುಟ್ಟಗೂಡು
ರೆಕ್ಕೆ ಮುಚ್ಚಿದರೆ ರಸಮಯ ಸಂತಸದ ಹಾಡು
ಕಾಡುಮಿಗಕೆ ಕಾನನ ಗವಿಯಲಿ ತಾವು
ಕಾಡದವಕೆ ಗಾಳಿ ಮಳೆ ಬಿಸಿಲ ಕಾವು
ನಿತ್ಯವೂ ದಣಿವಂತೆ ದುಡಿದುಡಿದು ಬಂದರೂ
ಎತ್ತು ಕುದುರೆಗೆ ಕೊಟ್ಟಿಗೆ, ಲಾಯವುಂಟು ತಂಗಲು
ಎದೆ ಬಿರಿವಂತೆ ಬಿರುಗಾಳಿ ಬೀಸಿದರೂ
ಸಾಕುನಾಯಿಗೂ ಬೆಚ್ಚನೆಯ ಬಾಗಿಲಸಂದಿ ಮಲಗಲು
 
ಕತ್ತೆ ಹಂದಿಯ ಹೆಸರೂ ಅಗುಳಿನ ಮೇಲಿದೆ
ಸಿಗುವುದು ಖಚಿತ ಅವುಗಳ ಪಾಲು ತಪ್ಪದೆ
ಚರಾಚರಕೂ ಇಲ್ಲಿ ಯಾವ ಚಿಂತೆಯಿಲ್ಲ
ಓ ಗೆಳೆಯರೆ, ನಿಮ್ಮಲ್ಲಿರುವುದೇನು ಗೊತ್ತಿಲ್ಲ
 
ಗುಲಾಮಗಿರಿಯ ಗುಲಾಲಿನಲಿ ಮುಳುಗಿಹೋದವರೆ
ಖೂಳ ಪ್ರಾಣಿಯೂ ಅವಮಾನವ ತಾಳದು
ಕಾಡಿನ ಕತ್ತಲೆಯಲಿ ಬಾಳು ಕಳೆದರೂ
ನಾಗರಿಕ ವ್ಯಾಧಿಗಳನ್ನೆಂದೂ ಅರಿಯದು
 
3
ಆತುಮದಾಳದಲಿ ಗುಲಾಮನಾಗಿರುವುದು
ಯಾರ ಅಂಕೆಯಲ್ಲೂ ಇಲ್ಲ
ನಿಮ್ಮಿಚ್ಛೆಯಿಲ್ಲದೇ ಇತರರು
ನಿಮ್ಮನು ಆಳಾಗಿಸುವುದು ಸಲ್ಲ
 
ಈಗ ಮತ್ತೇ ಕುಡಿಯೊಡೆಯುವ ಸೇಡಿನ ಭಾವ
ಬಿಡದೇ ಕಾಡುವುದು ಬೆನ್ನಟ್ಟಿದಂತೆ ದಾಹ
ನೆತ್ತರಕೆ ನೆತ್ತರು, ಉತ್ತರಕೆ ಪ್ರತ್ಯುತ್ತರ
ನೀಡದಿರಿ ಬೆಳೆದಾಗ ನೀವು ಬಾನಿನೆತ್ತರ
 
4
ಏಳಿ, ನಿದ್ದೆಯಿಂದೆದ್ದ ಸಿಂಹಗಳೆ
ನುಗ್ಗಿರಿ ನೆರೆಬಂದ ನದಿಯಂತೆ
ಎರಗಿದ ಸಂಕೋಲೆಯ ಕಿತ್ತೊಗೆಯಿರಿ
ಮರೆವಿನಲಿ ಮುಸುಕಿದ ಮಂಜು ಇದು.
 
ನೀವಿರುವುದು ಸಾವಿರಾರು
ಧಣಿಗಳಿರುವುದು ಹತ್ತಾರು.
 

‍ಲೇಖಕರು G

14 October, 2014

12 Comments

  1. Rupa Hassan

    Olleya padya!Tumba sogasaagiu anuvaadisiddiri vittal.. Abhinandanegalu..Rupa

  2. T.S.Goravar

    kavite cholo ide.anuvadvu ananya.

  3. Vithal Dalawai

    Thank You Roopakka mattu goravar.

  4. Anil Talikoti

    Good one
    -Anil

  5. Anonymous

    gud one

  6. Veeranagoud Patil

    Awesome story sir….

  7. mmshaik

    nice..very nice..

  8. basava chandragiri

    awesome

  9. lalithasiddabasavaiah

    ಕವಿಯ ಆಶಯವನ್ನು ಅನುವಾದವೊಂದು ಹೇಗೆ ಮುಟ್ಟಿಸಬಹುದೆನ್ನುವುದಕ್ಕೆ ಉದಾಹರಣೆಯಂತಿದೆ ಈ ಅನುವಾದ, ಪದಕ್ಕೆ ಪದವಿಡುವ ಬದಲು ಕೊಂಚ ಪದಪಲ್ಲಟವಾದರೂ ಮೂಲದ ಸತ್ವವನ್ನು ಹೊಸಭಾಷಿಕರಿಗೆ ತಲುಪಿಸುವುದು ಮುಖ್ಯ.

  10. Vithal Dalawai

    Lalitakka avara pratikriye Khushi tantu. Ella geleyarige vandanegalu.

  11. Anonymous

    Sir super sir

  12. Anonymous

    Supper anno

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading