ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ನಂಗೆ ಮಗ, ಮಗಳು ಮತ್ತು ಮಗು

a r manikanth

ಎ ಆರ್ ಮಣಿಕಾಂತ್ 

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ನನ್ನ ಪ್ರೀತಿಯ ಮೇಷ್ಟರಾದ ಎಚ್.ಎಲ್. ಕೇಶವಮೂರ್ತಿ ಅವರೂ ಒಬ್ಬರು.

ನನ್ನ ಪಾಲಿನ ಮಹಾಗುರು ಅನ್ನುವಷ್ಟು ದೊಡ್ಡ ವ್ಯಕ್ತಿತ್ವದ ಅವರ ಕುರಿತು ನಾಲ್ಕು ಮಾತು…
**************
H L keshavamurthyಮಂಡ್ಯದ ತುಂಬಾ ಎಚ್ಚೆಲ್ಕೆ ಎಂಬ ಹೆಸರಿಂದಲೇ ಖ್ಯಾತರಾದವರು ಎಚ್.ಎಲ್. ಕೇಶವಮೂರ್ತಿ. ಲಾಗಾಯ್ತಿನಿಂದಲೂ ಅವರು ಲಂಕೇಶರ ಅಪ್ತರಾಗಿದ್ದವರು. ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಅಧ್ಯಾಪಕರಾಗಿದ್ದವರು. ಅವರು ಸರಳದಲ್ಲಿ ಸರಳ. ಸಜ್ಜನರಲ್ಲಿ ಸಜ್ಜನ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವುದು ಅವರ ಒಳ್ಳೆಯ ಗುಣ. ಅವರ ಕೆಟ್ಟ ಗುಣವೂ ಅದೇ ಅನ್ನುವುದು ಸ್ವಾರಸ್ಯ.

ಇಂಥ ಎಚ್ಚೆಲ್ಕೆ ಅವರಿಗೆ, ಹಳ್ಳಿಯಿಂದ ಎಂಜಿನಿಯರಿಂಗ್ ಓದಲು ಬರುತ್ತಿದ್ದ ವಿದ್ಯಾರ್ಥಿಗಳ ಕಷ್ಟ ತುಂಬ ಚನ್ನಾಗಿ ಗೊತ್ತಿತ್ತು. ಎಂಜಿನಿಯರಿಂಗ್ ನ ಇಂಗ್ಲಿಷ್ ಅರ್ಥವಾಗದೆ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದವರಿಗೆಂದೇ ಅವರು ಟ್ಯೂಷನ್ ಮಾಡುತ್ತಿದ್ದರು. ಉಚಿತವಾಗಿ! ಪವಾಡ ಎಂಬಂತೆ, ಅವರಿಂದ ಟ್ಯೂಶನ್ ಹೇಳಿಸಿಕೊಂಡರೆ ಪರಮಪೆದ್ದನೂ ‘ಪಾಸ್’ ಆಗಿಬಿಡುತ್ತಿದ್ದ. ಈ ಕಾರಣದಿಂದಲೇ ಯಾರಾದ್ರೂ ಫೇಲ್ ಅದರೆ ಎಚ್ಚೆಲ್ಕೆ ಹತ್ರ ಟ್ಯೂಶನ್ಗೆ ಹೋಗೋ. ಪಾಸಾಗ್ತೀಯ ಎಂಬ ಮಾತು ಒಂದು ಕಾಲದಲ್ಲಿ ಮಂಡ್ಯದ ತುಂಬಾ ಚಾಲ್ತಿಯಲ್ಲಿತ್ತು.

pair of birdsಎಚ್ಚೆಲ್ಕೆ ಅವರಿಗಿದ್ದುದು ಒಬ್ಬನೇ ಮಗ. ಉಳಿದೆಲ್ಲ ಅಪ್ಪಂದಿರಂತೆಯೇ ಅವರಿಗೂ ಮಗನ ಮೇಲೆ ವಿಪರೀತ ಭರವಸೆಯಿತ್ತು. ಅವನೂ, ತಂದೆಗೆ ವಿಧೇಯ ಮಗನಾಗಿಯೇ ಇದ್ದ. ಇವರು ಸಡಗರದಿಂದ ಮಗನ ಮದುವೆ ಮಾಡಿದರು. ಇನ್ನು ಒಂದೇ ವರ್ಷಕ್ಕೆ ಮೊಮ್ಮಗ ಬರ್ತಾನಲ್ಲ, ಆಗ ಅವನ ಜತೆ ಆಡಿಕೊಂಡು ಬದುಕೋದು. ಅದಷ್ಟೇ ನನ್ನ ಮಹದಾಸೆ ಎಂದು ಗೆಳೆಯರಿಗೆಲ್ಲ ಹೇಳಿಕೊಂಡರು ಎಚ್ಚೆಲ್ಕೆ. ಆದರೆ, ತೀರಾ ಅನಿರೀಕ್ಷಿತವಾಗಿ, ಮದುವೆಯಾದ ಒಂದೇ ವರ್ಷಕ್ಕೆ ಅವರ ಮಗನೇ ತೀರಿಹೋದ. ಒಂದು ಕಡೆ ಪುತ್ರಶೋಕ, ಇನ್ನೊಂದೆಡೆ ಸೊಸೆಯ ದುಃಖ. ಒಳಮನೆಯಲ್ಲಿ ಹೆಂಡತಿಯ ಕಂಬನಿ ಧಾರೆಧಾರೆ.

ಈ ಆಘಾತದಿಂದ ಮೊದಲು ಚೇತರಿಸಿಕೊಂಡವರೇ ಎಚ್ಚೆಲ್ಕೆ. ತಮ್ಮ ನೋವನ್ನೆಲ್ಲ ನುಂಗಿಕೊಂಡು ಅವರು ಸೊಸೆಯ ಮುಂದೆ ಕುಳಿತರು. ಆಕೆಯ ಕಂಬನಿ ತೊಡೆದರು. ಸಮಾಧಾನ ಹೇಳಿದರು. ಇವತ್ತಿಂದ ನೀನು ನಂಗೆ ಮಗ, ಮಗಳು ಮತ್ತು ಮಗು ಅಂದರು. ಕೆಲ ದಿನಗಳ ನಂತರ ತಾವೇ ಮುಂದೆ ನಿಂತು ಆಕೆಗೆ ಇನ್ನೊಂದು ಮದುವೆ ಮಾಡಿಕೊಟ್ಟರು. ಆಗ, ಮಾತಿಗೆ ತಡವರಿಸಿ ಬಿಕ್ಕಳಿಸಿದ ಸೊಸೆಗೆ- ‘ನಾನಿನ್ನೂ ಗಟ್ಟಿಯಿರುವಾಗ ನೀನು ಅಳಬಾರ್ದು ಮಗಾ’ ಎಂದರು. ಇದನ್ನೇ ಬೆರಗಿನಿಂದ ನೋಡುತ್ತಿದ್ದ ಬಂಧುಗಳಿಗೆ- ‘ಒಂದು ವೇಳೆ ಸೊಸೇನೇ ಸತ್ತು ಹೋಗಿ, ನನ್ನ ಮಗ ಬದುಕಿದ್ದಿದ್ರೆ ಅವನಿಗೆ ಇನ್ನೊಂದು ಮದುವೆ ಮಾಡ್ತಿದ್ದೆ ಅಲ್ವಾ? ಈಗ್ಲೂ ಇವಳನ್ನೇ ಮಗ ಅಂದ್ಕೊಂಡಿದೀನಿ’ ಅಂದರು.
********
ನಾನು ದೇವರನ್ನು ನೋಡಿಲ್ಲ. ನಂಬುವುದೂ ಇಲ್ಲ. ಆದರೆ ಯಾರಾದರೂ- ದೇವರು ಎಲ್ಲಿದ್ದಾನೆ ಎಂದು ಕೇಳಿದಾಗ ತಕ್ಷಣವೇ ನನ್ನ ಪ್ರೀತಿಯ ಎಚ್ಚೆಲ್ಕೆ ಅವರತ್ತ ಬೊಟ್ಟು ಮಾಡಿ ತೋರಿಸುವ ಆಸೆಯಾಗುತ್ತದೆ

‍ಲೇಖಕರು admin

1 November, 2015

2 Comments

  1. Hanumanth Ananth Patil

    ಎ.ಆರ್‌.ಮಣಿಕಾಂತರವರಿಗೆ ವಂದನೆಗಳು
    ಹೆಚ್‌.ಎಲ್‌.ಕೆ ಒಂದು ಅಸಾಧಾರಣ ವ್ಯಕ್ತಿತ್ವ ಆಗಿನ ಲಂಕೇಶ ಪತ್ರಿಕೆಯ ಮೂಲಕಅವರು ನಮಗೆಲ್ಲ ಪರಿಚಿತರು, ಅವರ ಕುರಿತು ಚೆನ್ನಾಗಿ ಬರೆದಿದ್ದೀರಿ, ಓದಿ ಸಂತಸವಾಯಿತು.

  2. Vasanth

    He is a gem. He respect each and verybody irrespective of their age and whatever they are.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading