ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ

                                                                                                ಸತೀಶ್ ಚಪ್ಪರಿಕೆ

“ಲಂಕೇಶ್ ನಿಮ್ಮಿಬ್ಬರನ್ನೂ ಭೇಟಿ ಮಾಡಬೇಕಂತೆ”

ಹಿರಿಯರು, ಹಿತೈಷಿಗಳು, ಸಹಲೇಖಕರು, ಸ್ನೇಹಿತರೂ, ಮಾರ್ಗದರ್ಶಿಗಳು… ಎಲ್ಲವೂ ಆಗಿದ್ದ ಎ.ಎನ್. ಯಲ್ಲಪ್ಪ ರೆಡ್ಡಿ ಅವರ ಆಗಿನ ಜಯನಗರದ ಅಶೋಕ ಪಿಲ್ಲರ್ ಮನೆಯಲ್ಲಿ ಎದುರು ಕುಳಿತಿದ್ದ ಜರಗನಹಳ್ಳಿ ಶಿವಶಂಕರ್ ಹೇಳಿದಾಗ ನಂಬಲಾಗಲಿಲ್ಲ.

“ಏನು ಇದ್ದಕ್ಕಿದ್ದಂತೆ? ಏನು ವಿಷಯವಂತೆ?” ರೆಡ್ಡಿ ಅವರು ಎಂದಿನಂತೆಯೇ ನಗು-ನಗುತ್ತಲೇ ಜರಗನಹಳ್ಳಿ ಅವರನ್ನು ಪ್ರಶ್ನಿಸಿದರು. “ಏನೋ ಗೊತ್ತಿಲ್ಲ. ಇಬ್ಬರನ್ನೂ ಭೇಟಿ ಮಾಡಬೇಕು. ಕರ್ಕೊಂಡು ಬನ್ನಿ ಅಂತಾ ಹೇಳಿದ್ದಾರೆ” ಎಂದರು.

“ಏನಪ್ಪ ಇದು. ಲಂಕೇಶ್ ಕರೀತಾ ಇದಾರೆ. ಬಹಳ ಹೆದರಿಕೆ ಆಗ್ತಾ ಇದೆ” ಎಂದು ಆಗಿನ್ನೂ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ರೆಡ್ಡಿ ಅವರು ತಮಾಷೆ ಮಾಡಿದರು. ಜರಗನಹಳ್ಳಿ, “ಏನೋ ಗೊತ್ತಿಲ್ಲ ಸರ್. ಇದ್ದಕ್ಕಿದ್ದಂತೆ ನಿಮ್ಮಿಬ್ಬರನ್ನೂ ನೋಡಬೇಕು ಅಂದ್ರು” ಎಂದು ಹೇಳಿದರು.

ಪಾಳ್ಯದ ಲಂಕೇಶಪ್ಪ ಯಾನೆ ಪಿ. ಲಂಕೇಶ್ ಎಂದರೆ ನನ್ನ ಪಾಲಿಗೆ ಒಬ್ಬ ಅದ್ಭುತ ಕಥೆಗಾರ, ಕಾದಂಬರಿಕಾರ, ನಾಟಕಕಾರ, ಸಿನೆಮಾ ನಿರ್ದೇಶಕ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ನೀಡಿದ ಮಹಾನ್ ಸಂಪಾದಕ. ‘ಉಮಾಪತಿಯ ಸ್ಕಾಲರ್‍ಷಿಪ್’, ‘ಕಲ್ಲು ಕರುಗುವ ಸಮಯ’, ‘ಮುಸ್ಸಂಜೆಯ ಕಥಾ ಪ್ರಸಂಗ’ ಮತ್ತು ‘ಅಕ್ಕ’ದ ಮೂಲಕ ಎದೆಯೊಳಗೆ ಆಳವಾಗಿ ಇಳಿದಿದ್ದ ಲಂಕೇಶ್ ಅವರನ್ನು ನಾನೆಂದೂ ಭೇಟಿಯಾಗಿರಲಿಲ್ಲ. ಭೇಟಿಯಾಗಬೇಕು ಎಂಬ ಮಹದಾಸೆ ಕೂಡ ಇರಲಿಲ್ಲ.

ಅದಕ್ಕೆ ಕಾರಣಗಳು ಎರಡು. ಒಂದು ನಾನಾಗ ಸಸ್ಯವಿಜ್ಞಾನಿಯಾಗುವ ಮಹದಾಸೆ ಹೊತ್ತು ಸಂಶೋಧನೆಯಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ಒಬ್ಬ ಪತ್ರಕರ್ತನಾಗಬೇಕು ಎಂಬ ಕನಸು ಕೂಡ ಕಂಡಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಪಾಲಿಗೆ ‘ಕಲ್ಟ್ ಫಿಗರ್’ ಆಗಿದ್ದಿದ್ದು ಬಿ.ಜಿ.ಎಲ್. ಸ್ವಾಮಿ. ಅವರ ‘ಹಸುರು ಹೊನ್ನು’ ನನ್ನ ಪಾಲಿಗೆ ವೇದ, ಬೈಬಲ್ ಮತ್ತು ಕುರ್ಹಾನ್ ಎಲ್ಲವೂ ಆಗಿತ್ತು.

ಶಿವರಾಮ ಕಾರಂತ, ಕುವೆಂಪು, ಮಾಸ್ತಿ, ಭೈರಪ್ಪ, ಅನಕೃ-ತರಾಸು ಅವರನ್ನು ವ್ಯಾಪಕವಾಗಿ ಓದಿಕೊಂಡಿದ್ದ ನನ್ನ ಪಾಲಿಗೆ ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ ಮತ್ತು ಲಂಕೇಶ್ ನವ್ಯದ ಅದ್ಭುತಗಳಾಗಿದ್ದರು. ಅನಂತಮೂರ್ತಿ, ತೇಜಸ್ವಿ ಮತ್ತು ಚಿತ್ತಾಲರ ಜೊತೆ ನೇರ ಸಂಪರ್ಕ ಇದ್ದರೂ ಯಾರನ್ನೂ ವೈಯಕ್ತಿಕ ನೆಲೆಯಲ್ಲಿ ಬಹಳ ಹಚ್ಚಿಕೊಂಡವ ನಾನಲ್ಲ. ಏನಿದ್ದರೂ ಅವರ ಸಾಹಿತ್ಯ, ಅವರಂತೆಯೇ ಬರೆಯಲು ಸಾಧ್ಯವೇ? ನಾನು ಅವರಾಗಲು ಸಾಧ್ಯವೇ? ಎಂಬ ಪ್ರಶ್ನೆಗಳಲ್ಲಿ ತೊಳಲುವುದರಲ್ಲಿಯೇ ಸುಃಖ ಕಂಡ ಪಾಮರ ನಾನು.

‘ಪ್ರಜಾವಾಣಿ’ಯಲ್ಲಿ ಲಂಕೇಶ್ ಬರೆಯುತ್ತಿದ್ದ ಕಾಲಂ, ದೇವರಾಜ ಅರಸು ಸಿಟ್ಟಿಗೆದ್ದ ಕಥೆ, ಮಾಲೀಕರಾಗಿದ್ದ ಗುರುಪಾದ ಸ್ವಾಮಿ ಅವರು ಲಂಕೇಶ್ ಕಾಲಂಗೆ ನೀಡಿದ ಖೋಕ್ ನಮ್ಮ ಪಾಲಿಗೆ ಒಂದು ದಂತಕಥೆ. ಆ ಸಿಟ್ಟಿಗೆ ಲಂಕೇಶ್ ಆರಂಭ ಮಾಡಿದ ‘ಲಂಕೇಶ್ ಪತ್ರಿಕೆ’, ಆ ಮೂಲಕ ಕನ್ನಡ ಪತ್ರಿಕೋದ್ಯಮ ಹೊಸ ದಿಕ್ಕು ಹಿಡಿದಿದ್ದು ನಾನು ಬಾಲ್ಯದಲ್ಲಿದ್ದಾಗಲೇ ಇತಿಹಾಸವಾಗಿ ಹೋಗಿತ್ತು.

ಆ ಎಲ್ಲ ನೆನಪುಗಳ ಕನಸುಮೇಲೊಗರಗಳ ನಡುವೆಯೇ, ನಿಗದಿಯಾದ ದಿನ, ನಿಗದಿಯಾದ ಸಮಯ ಜರಗನಹಳ್ಳಿ ಅವರ ಜೊತೆ ರೆಡ್ಡಿ ಅವರು ಮತ್ತು ನಾನು ಬಸವನಗುಡಿಯ ‘ಲಂಕೇಶ್ ಪತ್ರಿಕೆ’ಯ ಮೊದಲ ಮಹಡಿಯ ಮೆಟ್ಟಿಲೇರಿದೆವು. ಕನ್ನಡ ಸಾಂಸ್ಕೃತಿಕ ಲೋಕದ ಆಗಿನ ಮೇಷ್ಟ್ರು, ಸಂಪಾದಕರ ಟೇಬಲ್ ಹಿಂದಿನ ಕುರ್ಚಿಯಲ್ಲಿ ವಿರಾಜಮಾನರಾಗಿದ್ದರು. ಗಟ್ಟಿ-ಮುಟ್ಟಾದ ದೇಹ. ಮೂಗಿನ ಮೇಲೊಂದು ಕನ್ನಡಕ. ತೀಕ್ಷ್ಣ ದೃಷ್ಟಿ.

ಯಲ್ಲಪ್ಪ ರೆಡ್ಡಿ ಅವರನ್ನು ಉದ್ದೇಶಿಸಿ, “ಬನ್ನಿ, ಬನ್ನಿ ಕೂತುಕೊಳ್ಳಿ” ಎಂದು ಹೇಳಿದ ಲಂಕೇಶ್, ನನ್ನತ್ತ ತಿರುಗಿ, “ನೀವೇನಾ ಸತೀಶ್ ಅಂದ್ರೆ? ಯಾವೂರು?” ಅಂದ್ರು. “ಹೌದು ನಾನೇ. ಕುಂದಾಪುರದ ಹತ್ರ ಚಪ್ಪರಿಕೆ ಅನ್ನೋ ಹಳ್ಳಿ” ಎಂದು ಸಹಜವಾಗಿಯೇ ಉತ್ತರ ನೀಡಿದೆ. ನನ್ನನ್ನೂ ಕೂತುಕೊಳ್ಳಲು ಹೇಳಿದ ಲಂಕೇಶ್, ಎದುರಿದ್ದ ಪುಸ್ತಕಗಳ ರಾಶಿಯಿಂದ ‘ಮತ್ತೊಂದು ಮೌನ ಕಣಿವೆ’ ತೆಗೆದು ಮುಂದಿಟ್ಟರು.

ಸುಮಾರು ಮೂರು ವರ್ಷಗಳ ಅವಧಿಯಲ್ಲಿ ನಾನು ಮತ್ತು ಯಲ್ಲಪ್ಪ ರೆಡ್ಡಿ ಅವರು ಜೊತೆಯಾಗಿ ಬರೆದಿದ್ದ ಪರಿಸರದ ಕುರಿತಾದ ಲೇಖನಗಳನ್ನು ಸಂಗ್ರಹ ರೂಪದಲ್ಲಿ ‘ಅಕ್ಷರ ಪ್ರಕಾಶನ’ದವರು ‘ಮತ್ತೊಂದು ಮೌನ ಕಣಿವೆ’ ಎಂಬ ಪುಸ್ತಕದ ರೂಪದಲ್ಲಿ ಪ್ರಕಟಿಸಿದ್ದರು. ಅದು ನನ್ನ ಜೀವನದ ಮೊದಲ ಪುಸ್ತಕ. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಅವರು ಪ್ರೀತಿಯಿಂದ ಪ್ರಕಟಿಸಿದ ಪುಸ್ತಕ ಅದಾಗಿತ್ತು.

ಆ ಪುಸ್ತಕ ಕಂಡ ಮೇಲೆ ನನಗೆ ಭೇಟಿಯ ಹಿಂದಿದ್ದ ಉದ್ದೇಶ ಸ್ವಲ್ಪ ಮಟ್ಟಿಗೆ ಅರ್ಥವಾಯಿತು. “ಪುಸ್ತಕ ಓದಿದೆ. ಚೆನ್ನಾಗಿದೆ. ಆದರೆ…” ಲಂಕೇಶ್ ಮಾತು ಆರಂಭಿಸಿದಾಗ ನನ್ನ ಜೀವ ಕೈಗೆ ಬಂದಿತ್ತು. “ರೆಡ್ಡಿ ಅವರೇ ನೀವಿಬ್ಬರೂ ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ ಪರಿಸರಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಅದರ ಹಿಂದಿನ ಕಾಳಜಿಯನ್ನು ನಾನು ಖಂಡಿತ ಒಪ್ಪಿಕೊಳ್ಳುತ್ತೇನೆ. ಆದರೆ, ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಎದುರೂ ಪರಿಸರದ ಸಮಸ್ಯೆಯ ಗೋಡೆ ಕಟ್ಟುವುದು ಎಷ್ಟು ಸಮಂಜಸ. ಅದೂ ನೀವೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದು ಅದೆಷ್ಟು ಸರಿ?” ಎಂದು ಕಟುವಾಗಿಯೇ ಪ್ರಶ್ನಿಸಿದರು.

ನಾನು ಗಾಬರಿಯಾಗಿದ್ದೆ. ಆದರೆ, ಯಲ್ಲಪ್ಪ ರೆಡ್ಡಿ ಅವರು ನಗು-ನಗುತ್ತಲೇ, “ಏನು ಸ್ವಾಮಿ ನೀವೂ ಹೀಗೆ ಹೇಳಿದ್ರೆ ಹೇಗೆ? ಪರಿಸರ ಮುಖ್ಯಾನೋ ಅಥವಾ ಅರ್ಥ ಇಲ್ಲದ ರಾಜಕಾರಣಿಗಳು-ಕಂಟ್ರಾಕ್ಟರುಗಳು-ಉದ್ದಿಮೆದಾರರ ಹೊಟ್ಟೆ ತುಂಬಿಸೋ ಈ ಯೋಜನೆಗಳು ಮುಖ್ಯಾನೋ? ಒಬ್ಬ ಸರ್ಕಾರಿ ಅಧಿಕಾರಿಯಾಗಿ ಅದೂ ಅರಣ್ಯ ಅಧಿಕಾರಿಯಾಗಿ ನನ್ನ ಕೆಲಸವೇನೆಂದರೆ ಪರಿಸರಕ್ಕೆ, ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಹಾನಿಯಾಗುವ ಯಾವುದೇ ಯೋಜನೆ ಜಾರಿಗೆ ಪ್ರಯತ್ನ ನಡೆದರೂ ಅದನ್ನು ವಿರೋಧಿಸುವುದು. ಆ ಯೋಜನೆ ಜಾರಿಯಾಗದಂತೆ ನೋಡಿಕೊಳ್ಳುವುದು. ನಾನು ನನ್ನ ಕರ್ತವ್ಯ ಮಾಡ್ತಾ ಇದೀನಿ” ಎಂದು ಸ್ಪಷ್ಟವಾಗಿಯೇ ಹೇಳಿದರು.

ಲಂಕೇಶ್- ಯಲ್ಲಪ್ಡ ರೆಡ್ಡಿ ಅವರ ವಾದ-ವಿವಾದ ಸುಮಾರು ಒಂದು ಗಂಟೆ ನಡೆಯಿತು. ಒಂದು ಕಡೆ ಮುದುರಿ ಕೂತಿದ್ದ ನಾನು. ಇನ್ನೊಂದೆಡೆ ನಮ್ಮನ್ನು ಕರೆದುಕೊಂಡು ಹೋಗಿದ್ದ ಜರಗನಹಳ್ಳಿ ಶಿವಶಂಕರ್. ಕೊನೆಗೆ ಒಂದು ಹಂತದಲ್ಲಿ ಲಂಕೇಶ್ ನಗು-ನಗುತ್ತಲೇ ‘ಸೋಲು’ ಒಪ್ಪಿಕೊಂಡು “ಪರ್ವಾಗಿಲ್ಲ ನಮ್ಮ ಕರ್ನಾಟಕದಲ್ಲಿ ನಿಮ್ಮಂತಹ ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರಲ್ಲಾ” ಎಂದು ನಕ್ಕು, “ವಿದ್ಯಾರ್ಥಿ ಭವನದ ಮಸಾಲೆ ದೋಸೆ ತಿನ್ನೋಣ” ಎಂದರು.
ದೋಸೆ ಬಂತು. ಘಮ-ಘಮಿಸುತ್ತಿದ್ದ ಕಾಫಿಯೂ ಬಂತು. ಮಾತುಗಳು ರಾಜಕೀಯ ಕಡೆಗೆ ಹೊರಳಿತು. ‘ಬೃಹತ್ ಯೋಜನೆಗಳ’ ಅಂಟು ರೋಗದಿಂದ ಮುಕ್ತವಾಗುವುದು ಹೇಗೆ ಎಂಬ ಚರ್ಚೆ ನಡೆಯಿತು. ಇಬ್ಬರು ಹಿರಿಯರು, ಘಟಾನುಘಟಿಗಳು ಮಾತು ಕೇಳುತ್ತಲೇ ನಾನು ಜೀವನದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ಸವಿಯುಂಡೆ.

ವಿದಾಯದ ಸಂದರ್ಭ. ಮೇಷ್ಟ್ರಿಗೆ ನಮಸ್ಕಾರ ಹೇಳಿ ನಾವು ಮೂವರು ಎದ್ದು ನಿಂತೆವು. ಏನನ್ನಿಸಿತೋ ಏನೋ, ಲಂಕೇಶ್, “ಕಥೆ ಬರಿತೀಯಾ?” ಎಂದು ನನ್ನನ್ನು ಪ್ರಶ್ನಿಸಿದರು. ಅಷ್ಟರಲ್ಲಾಗಲೇ ಎರಡು ಕಾದಂಬರಿಗಳನ್ನು ಬರೆದು, ಸ್ವಯಂ ವಿಮರ್ಶೆ ಮಾಡಿ, ಸುಟ್ಟು ಹಾಕಿದ್ದವ ನಾನು. “ಹೌದು. ಕಥೆ ಬರಿತೀನಿ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿ ಕೂಡ ಬಂದಿದೆ” ಎಂದೆ. “ಈ ಪುಸ್ತಕ ಓದಿದಾಗಲೇ ನನಗೆ ಅನ್ನಿಸಿತ್ತು. ಭಾಷೆ ಚೆನ್ನಾಗಿದೆ. ಹಿಡಿತ ಇದೆ. ಇನ್ನೂ ಹುರಿಗಟ್ಟಬೇಕು. ತುಂಬಾ ಓದಬೇಕು. ನಿಮ್ಮ ಸಮಸ್ಯೆ ಏನೆಂದ್ರೆ ಲೇಖನ ಕೂಡ ಕಥೆ ತರಹ ಬರೆಯೋ ಯತ್ನ ಮಾಡ್ತೀರಾ. ಕಥೆ ಬೇರೆ. ಲೇಖನಗಳು ಬೇರೆ. ಅಷ್ಟೊಂದು ಭಾವನಾತ್ಮಕವಾಗಿ ಲೇಖನಗಳನ್ನು ಬರೆಯಬೇಡಿ” ಎಂದು ಪ್ರೀತಿಯಿಂದಲೇ ಮೇಷ್ಟ್ರು ಪಾಠ ಮಾಡಿದರು. ನಾವು ಮೂವರು ಮಹಡಿಯಿಂದ ಕೆಳಗಿಳಿದೆವು.

ಮರು ವಾರ. ‘ಲಂಕೇಶ್ ಪತ್ರಿಕೆ’ಯಲ್ಲಿ ‘ಮತ್ತೊಂದು ಮೌನಕಣಿವೆ’ಯ ವಿಮರ್ಶೆ ಪ್ರಕಟವಾಗಿತ್ತು. ಅದೂ ಲಂಕೇಶ್ ಅವರೇ ಸ್ವತಃ ಬರೆದ ವಿಮರ್ಶೆ. ಒಂದಿಷ್ಟು ಹೊಗಳುತ್ತಲೇ ಚೆನ್ನಾಗಿಯೇ ಜಾಡಿಸಿದ್ದರು. ಆ ಜಾಡಿಸಿಕೊಂಡಿದ್ದರ ಹಿಂದೆಯೂ ಒಂಥರಾ ಸುಖವಿತ್ತು. ವಿಶ್ವಾಸವಿತ್ತು. ಪಾಠವಿತ್ತು. ಪ್ರೀತಿಯಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ಸಂಬಂಧದ ಸ್ಪಷ್ಟ ಕುರುಹಿತ್ತು. ಮತ್ತೆಂದೂ ನಾನು ಲಂಕೇಶ್ ಅವರನ್ನು ಭೌತಿಕವಾಗಿ ಭೇಟಿಯಾಗಲಿಲ್ಲ. ಆದರೆ, ಮನೆಯ ಕಪಾಟುಗಳಲ್ಲಿ ಸಿಗುವ ಮೇಷ್ಟ್ರನ್ನು ದಿನನಿತ್ಯ ಭೇಟಿಯಾಗುತ್ತಲೇ ಇರುತ್ತೇನೆ.

‍ಲೇಖಕರು admin

May 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Anonymous

    ನನ್ನ ಇಷ್ಟದ ಬರಹಗಾರರಲ್ಲೊಬ್ಬರಾದ ಸತೀಶ್ ಅವರನ್ನು ಅವಧಿಯಲ್ಲಿ ಓದುವ ಅವಕಾಶ – ಥ್ಯಾಂಕ್ಸ್ ಅವಧಿ!- Rajaram Tallur

    ಪ್ರತಿಕ್ರಿಯೆ
  2. Chi na hally kirana

    Nanna, manasika guru galaada Lankeshara samakshamada, nimma e lekhana , manasannu cheto haarigolisitu entha ennastu anbhavagaladavaru avadhi yalli baredare…..
    suttastu kasavu,, nondastu hoo hannu makkaloddare avala anganga pulaka….
    Mestru , bareda e Avva kavanada salugalante, edegavichi kollutteve….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: