ಅವಳಿಗೇ ಚಳಿಯಾದಂತೆನ್ನಿಸಿ ಅವನನ್ನು ಬಿಗಿದಳು..

                                                                        

                                                                                              ಭಾರತಿ ಬಿ ವಿ

ಅವಳು ಊರು ತಲುಪುವುದನ್ನೇ ಕಾಯುತ್ತ ನಿಂತವ ಐದೈದು ನಿಮಿಷಕ್ಕೊಮ್ಮೆ ‘ಎಲ್ಲಿದ್ದೀಯಾ’ ಎಂದು ಮೆಸೇಜು ಮಾಡುತ್ತಿದ್ದ.

ಇವಳೂ ಚಡಪಡಿಕೆಯಲ್ಲಿ ‘ಈಗ, ಇದೀಗ, ಇನ್ನೇನು ಬಂದೆ, ಬಂದೇಬಿಟ್ಟೆ’ ಎಂದು ಮೆಸೇಜು ಹಾಕುತ್ತ ಕುಳಿತಿದ್ದಳು.
ಬೆಟ್ಟದ ತಪ್ಪಲಿನ ಆ ಊರಿನಲ್ಲಿ ಕೊನೆಗೂ ಇಬ್ಬರೂ ಎದುರಾಗಿ, ಮನೆ ಸೇರಿ ಉತ್ಕಟವಾಗಿ ಮುದ್ದಿಸಿಕೊಂಡು ಇರುವಾಗಲೇ ಇಬ್ಬರಿಗೂ ಆ ಮುದುಕಿಯ ನೆನಪಾಗಿದ್ದು! ಒಂದರೆಕ್ಷಣ ಯೋಚಿಸದೇ ಒಟ್ಟಾಗಿ ಇಬ್ಬರೂ ‘ಹೋಗೋಣವಾ’ ಅಂದರು ಮತ್ತು ಹಾಗೆ ಅಂದ ಐದು ನಿಮಿಷಗಳಲ್ಲಿ ಸಿದ್ದರಾಗಿ ಬೈಕ್ ಏರಿದ್ದರು.

ನಸುಗತ್ತಲಾಗುತ್ತಿತ್ತು.
ಮರೆತಿದ್ದ ಮುದುಕಿಯ ಮನೆಯ ತಿರುವುಗಳನ್ನು ನೆನಪಿಸಿಕೊಳ್ಳುತ್ತಾ ಒಂದಿಷ್ಟು ಅಡ್ಡಾಡಿದ ನಂತರ ಅಂತೂ ಅದು ಸಿಕ್ಕಿತು. ಆಲಸ್ಯದಲ್ಲಿ ಮಲಗಿದ್ದ ಮುದುಕಿ ಎದ್ದು ಕುಳಿತು ‘ಯಾರೂ’ ಅಂದಿತು. ‘ನಾನು ನಾರಾಯ್ಣ’ ಅಂತ ತನ್ನದಲ್ಲದ ಹೆಸರನ್ನು ಹೇಳಿದಾಗ ಆ ಮುದುಕಿಗೆ ನೆನಪು ಹತ್ತಿ ಸಂಭ್ರಮದಿಂದ ಹೊರಬಂತು.

ಅವನು, ಅವಳು ಮನೆಯ ಮುಂದಿನ ಜಗಲಿಯಲ್ಲಿ ಕುಳಿತರು
ಅದೊಂದು ವಿಚಿತ್ರ ಕತೆಯ ಮುದುಕಿ. ಇವನು ಅಸಾಧ್ಯ ತುಂಟ. ಮಾತು ಬೆಟ್ಟದ ಅಂಕುಡೊಂಕಿನ ಹಾದಿಯಂತೆಯೇ ಎಲ್ಲೆಲ್ಲಿಗೋ ಸಾಗಿತು. ಹಳೆಯ ಕತೆಗಳನ್ನೆಲ್ಲ ಮಾತಾಡುತ್ತ ಕೂತ ಮುದುಕಿ ಆಗ ಅವಳನ್ನು ಕಂಡವಳಂತೆ ‘ಇವರ ಹೆಸ್ರೇನು ನಾರಾಯ್ಣ’ ಎಂದಿತು.

ಅವನು ಕಣ್ಣ ಪೂರ್ತಿ ನಗು ತುಳುಕಿಸುತ್ತಾ ‘ಲಕ್ಷ್ಮಿ’ ಅಂದ!
ಬರೇ ಸುಳ್ಳ! ಇವನ ಹೊಸ ನಾಮಕರಣಕ್ಕೆ ಅವಳು ನಗು ಕಷ್ಟಪಟ್ಟು ಅದುಮಿಟ್ಟಳು. ಅವನು ಗಹಗಹಿಸಿ ನಗುತ್ತಾ ಅವಳನ್ನೇ ನೋಡಿದ … ಭಂಡ!

ಆ ಅಜ್ಜಿಯ ಗಂಡ ಊರಿಗೆ ಹೋಗಿಬಿಟ್ಟಿದ್ದ ಈಕೆಯೊಬ್ಬಳನ್ನೇ ಬಿಟ್ಟು. ಈ ಹಿಂದೆಯೂ ಹಾಗೆ ಹೋದವ ಮತ್ತೆ ಬಂದಿದ್ದ. ಹಾಗಾಗಿ ಅಜ್ಜಿಗೆ ಕಾಯುವುದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಆದರೆ ದಿನದ ಬದುಕಿನ ಖರ್ಚು, ಸಮಸ್ಯೆ ಎಲ್ಲವೂ ಅವತ್ತವತ್ತೇ ನೀಗಬೇಕಾದ್ದರಿಂದ ಇವನೆದುರು ಎಲ್ಲ ಹೇಳಿಕೊಳ್ಳುತ್ತ ಕುಳಿತಿತು.

ಅವನು ಸ್ವಲ್ಪ ವಿಷಯ ತಮಾಷೆಯಲ್ಲಿ ತೇಲಿಸುತ್ತಾ, ಸ್ವಲ್ಪ ಸಾಂತ್ವನ ನೀಡುತ್ತಾ ಕುಳಿತ
ಒಂದಿಷ್ಟು ಹೊತ್ತಿನ ನಂತರ ಮುದುಕಿ ಆಗ ಅವಳ ಇರುವು ನೆನಪಾದಂತೆ ‘ನಾರಾಯ್ಣ ಇವ್ರು ಯಾರು’ ಅಂದಿತು

‘ನನ್ನ ಗೆಳೆಯನ ಹೆಂಡತಿ’ ಎಂದ ಮುಖದಲ್ಲಿದ್ದ ಜಗತ್ತಿನ ತುಂಟತನವನ್ನೆಲ್ಲ ಅಡಗಿಸಿಟ್ಟುಕೊಳ್ಳುತ್ತಾ…
ಮುದುಕಿ ಮುಗ್ಧಳಾಗಿ ‘ಆಯಪ್ಪ ನಿನ್ನ ನಂಬಿ ಒಬ್ಳನ್ನೇ ಕಳ್ಸಿದೆ ಅಂದ್ರೆ ನೀನೆಷ್ಟು ಒಳ್ಳೆಯವ್ನಿರ್ಬೇಕು, ಎಷ್ಟು ನಂಬಿಕೆ ಉಳ್ಸಿಕೊಂಡಿರಬೇಕು ನೋಡು
ಅವನ ತರಲೆ ಮಾತಿಗೆ ಅವಳ ಕಣ್ಣು, ತುಟಿ, ಇಡೀ ಮೊಗದಲ್ಲೇ ನಗುವಿನ ಕಡಲು …

ಮುದುಕಿ ಯಾವುದರ ಪರಿವೆಯಿಲ್ಲದಂತೆ ಮಾತು ಮುಂದುವರೆಸಿತು. ಕತ್ತಲು ದಟ್ಟವಾಗುತ್ತಾ ಹೋಯಿತು. ಅವನು ಅದನ್ನು ಗಮನಿಸಿ ‘ಹೊರಡೋಣವಾ’ ಅಂದ.
ಎದುರಿದ್ದ ಮುದುಕಿ ಆಗ ಗಡಿಬಿಡಿಗೊಳ್ಳುತ್ತಾ ‘ಅಯ್ಯೋ ನಿಮ್ಗೆ ಏನೂ ಕೊಡ್ನೇ ಇಲ್ಲ ತಿನ್ನಕ್ಕೆ’ ಎಂದಿತು

ಅವ ‘ಪರವಾಗಿಲ್ಲ’ ಎಂದ
ಅಜ್ಜಿ ಕೇಳಿಸದಂತೆ ಮನೆಯಲ್ಲಿ ಇರುವುದನ್ನೆಲ್ಲ ಆಫರ್ ಮಾಡಲು ಶುರು ಮಾಡಿತು …
‘ವಸಿ ಸಾರು ಕೊಡ್ಲಾ’
ಬೇಡವೆಂದ
‘ಒಂದು ಕಿತ್ಲೆ ಹಣ್ಣದೆ ಇರು’ ಅಂದಿತು
ತನಗೆ ಸೇರುವುದಿಲ್ಲವೆಂದ … ಆ ಮುದುಕಿಯಲ್ಲಿದ್ದ ಒಂದೇ ಹಣ್ಣನ್ನು ತಿನ್ನಲು ಅವನ ಮನಸ್ಸು ಒಪ್ಪುವುದಿಲ್ಲ ಎಂದು ಅವಳಿಗೆ ಗೊತ್ತಿತ್ತು
ಇದ್ದಕ್ಕಿದ್ದಂತೆ ಒಳ ಓಡಿ ಹೊರಬಂದವರ ಕೈಲೊಂದು ಜಾಡಿಯಿತ್ತು ‘ಇಕಾ ವಸಿ ಆಗಲಕಾಯಿ ಗೊಜ್ಜದೆ’ ಅಂತ ಇಬ್ಬರ ಕೈ ಮೇಲೂ ಒಂದು ಸ್ಪೂನ್ ಹಾಕಿತು. ಬರಿಯ ಹಾಗಲಕಾಯಿ ಗೊಜ್ಜು ತಿನ್ನುವುದು ಹೇಗೆ ಅರ್ಥವಾಗದೇ ಅವಳು ಮನಸಿನಲ್ಲೇ ಸಾರಿ ಹೇಳಿ ನೆಲಕ್ಕೆ ಜಾರಿಸಿದಳು
ಅವನು ಬಾಯಿಗೆ ಹಾಕಿಕೊಂಡು ಬೈಕ್ ಏರಿದ

ಹತ್ತು ಮೀಟರ್ ಹೋಗುವುದರಲ್ಲಿ ಕೆಟ್ಟ ದನಿಯಲ್ಲಿ ‘ಯಪ್ಪಾ ಕಹಿ’ ಎಂದ
ಹಾಗಲಕಾಯಿ ಕಹಿ ಅನ್ನುವುದು ಗೊತ್ತಿದ್ದೂ ಆ ಮುದುಕಿಗೋಸ್ಕರ ತಿಂದಿರುತ್ತಾನೆ, ಇದೆಲ್ಲ ಬರಿಯ ಬಡಿವಾರ ಅನ್ನುವುದು ಅವಳಿಗೆ ಗೊತ್ತಿಲ್ಲದ್ದಾ? ನಗುತ್ತಾ ಕೂತಳು …

ಜನವರಿ ತಿಂಗಳ ಚಳಿಯಲ್ಲಿ ತನ್ನ ಜಾಕೆಟ್ ಮತ್ತು ವುಲನ್ ಟೋಪಿ ಅವಳಿಗೆ ಕೊಟ್ಟು ಬರಿಯ ಶರಟೊಂದರಲ್ಲಿ ಗಾಡಿ ಓಡಿಸುತ್ತಿದ್ದನವ … ಅವಳಿಗೇ ಚಳಿಯಾದಂತೆನ್ನಿಸಿ ಅವನನ್ನು ಬಿಗಿದಳು
ಥೇಟ್ ಅವರಷ್ಟೇ unpredictable ಆದ ಅಂಕುಡೊಂಕಿನ ಹಾದಿ, ತಿರುವುಗಳಲ್ಲಿ ಬೈಕ್ ಸಾಗಿತು
ಜೊತೆಗಿದ್ದದ್ದು ಒಂದಿಷ್ಟೂ ಬೆಳಕಿಲ್ಲದ, ಸದ್ದಿಲ್ಲದ, ಸಮನಿಲ್ಲದ ರಸ್ತೆಯ ಹಾದಿ ಮತ್ತು ಉದ್ದಾನುದ್ದ ಹರಡಿದ್ದ ಆಕಾಶವಷ್ಟೇ …
ಈ ಪಯಣ ಯಾವತ್ತೂ ಮುಗಿಯದಿರಲಿ ಎಂದುಕೊಂಡಳು …

‍ಲೇಖಕರು admin

May 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

    • ಭಾರತಿ ಬಿ ವಿ

      ಅರ್ಥವಾಗಲಿಲ್ಲ ಏನು ಹೇಳ್ತಿದೀರಾ ಅಂತ

      ಪ್ರತಿಕ್ರಿಯೆ
  1. Mallappa

    ಭಾರತಿ ಬಿವಿಯವರೆ,
    ಕಥೆಯ ಕೊನೆಯಲ್ಲಿ ಮನೆಗೆ ಬಂದವರಿಗೆ ಬರಿಗೈಲೆ ಕಳಿಸಬಾರದು ಎಂದುಅಂಥಹ ದಟ್ಟ ದರಿದ್ರ ಬಡತನದಲ್ಲೂ ಮನಸ್ಸಿನ ಶ್ರೀಮಂತಿಕೆ ತುಂಬಿದ ಆ ಮುದುಕಿ ತಾನು ತಿನ್ನಲು ಇಟ್ಟಿದ್ದ ಹಾಗಲಕಾಯಿಯ ಗೊಜ್ಜು ಒಂದು ಚಮಚದಷ್ಟು ತಿನ್ನಲು ಕೊಟ್ಟದ್ದನ್ನು ಮನಸ್ಸಿನಲ್ಲಿಯೇ ಸ್ವಾರಿ ಹೇಳಿ ನೆಲಕ್ಕೆ ಜಾರಿಸಿದ್ದು, ಆ ಮುದುಕಿ ನೋಡಿದರೆ ಎಷ್ಟು ನೋವು ಅನುಭವಿಸುತ್ತೆ ಎನ್ನುವ ಕಲ್ಪನೆ ಕೂಡಾ ಇಲ್ಲದ ನಾಯಕಿ ಬಗ್ಗೆ ಬೇಸರವಾಯಿತು. ಕೆಲ ಪ್ರಶ್ನೆಗಳು : 1 ಕಾಯುತ್ತ ಕುಳಿತ ಮುದುಕಿಗೂ ಈ ಜೋಡಿಗಳಿಗೂ ಏನು ಸಂಬಂಧ ತಿಳಿಸಿಲ್ಲ. 2 ಮುದುಕಿಯ ಭೆಟ್ಟಿಯ ಅರ್ಜಂಟ ಏನಿತ್ತು? 3 ಅಮಾಯಕ ಮುದುಕಿಯ, ತುಂಟಾಟ ಗ್ರಹಿಸದೆ ಮುದುಕಿಯ ಜೊತೆ ತುಂಟಾಟದ ಮಾತಾಡುತ್ತಾ ನಾಯಕ ಯಾವ ಖುಷಿ ಅನುಭವಿಸಿದ? ಒಟ್ಟು ಕಥೆಯ ತಾತ್ಪರ್ಯ ಏನು? ದಯವಿಟ್ಟು ತಿಳಿಸಿರಿ.

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಸರ್ ನಿಮಗೆ ಇಷ್ಟ ಬಂದ ಅರ್ಥ ಕೊಟ್ಟುಕೊಳ್ಳುವ ಸ್ವಾತಂತ್ರ್ಯ ನಿಮಗಿದೆ 🙂

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: