ಶ್ರೀಮತಿ ಹೆಗಡೆ
ಅಂಬ್ಯುಲೆನ್ಸಿನ ಸದ್ದಿಗೆ
ಸುಖವೆಲ್ಲಿದೆ ನಿದ್ದೆಗೆ
ಹಸುಗೂಸು ಅಳುತಿದೆ
ಕಿಟಕಿ ಮುಚ್ಚಿದರೂ ಕೇಳುತಿದೆ
ನಂಟು ಇಲ್ಲದಿದ್ದರೂ
ಅಂಟಿಕೊಂಡಿದೆ ಸೂರು
ಎದುರುಮನೆ ಅಮ್ಮನಿಗೆ ಚಿಂತೆ
ರಾತ್ರಿ ಪಾಳಿಯ ಮಗ ಬಂದಿಲ್ಲವಂತೆ
ಮುಡಿದಿಹಳು ಹೂವು ಆ ಮನೆಯ ಹುಡುಗಿ

ಪತಿ ಬರುವ ಮುನ್ನ ಹೋಯಿತು ಒಣಗಿ
ನಡುಮನೆಯ ಒಡೆಯನಿಗೆ ಏರಿದೆ ಅಮಲು
ಸುತ್ತಲಿನ ಜನಕೆಲ್ಲ ಇರುಳೆಲ್ಲ ಹಗಲು
ಮುಕ್ಕಾಲು ರಾತ್ರಿಯಲಿ ಕುಕ್ಕರಿನ ಕೂಗು
ಹಸಿವಿನೆದುರಲ್ಲಿ ಕತ್ತಲೆಯೂ ಬೆಳಗು
ನನಗೆಲ್ಲಿ ಜಾಗ ಇಹುದು ಇಲ್ಲಿ
ನಿಶೆ ಬಿಕ್ಕುತಿಹಳು ನಗರದಲ್ಲಿ






ಕವನ ಚೆನ್ನಾಗಿದೆ. “ನಂಟು ಇಲ್ಲದಿದ್ದರೂ /ಅಂಟಿಕೊಂಡಿದೆ ಸೂರು” ಉತ್ತಮ ಸಾಲು. ಆದರೆ ಕವನದ ಭಾಷೆ ನಾವು ಆಡುವಂತಿರಬೇಕು ಅಂದರೆ ಇಂದಿನ ಭಾಷೆ. ಆಂಬುಲೆನ್ಸ್ , ಕುಕ್ಕರ್ ಎಂದು ಇವತ್ತಿನ ಭಾಷೆ ಬಳಸಿದ ಮೇಲೆ ಮತ್ತೆ “ಮುಡಿದಿಹಳು, ಬಿಕ್ಕುತಿಹಳು, ಇಹುದು” ಇತ್ಯಾದಿ ನಡುಗನ್ನಡದ ಪ್ರಯೋಗಗಳನ್ನು ಬೆರಕೆ ಮಾಡಬಾರದು. ಅದರ ಬದಲು “ನನಗೆಲ್ಲಿದೆ ಜಾಗ ಇಲ್ಲಿ / ನಿಶೆ ಬಿಕ್ಕುತ್ತಿದ್ದಾಳೆ ನಗರದಲ್ಲಿ” ಎಂದು ಬರೆಯಬಹುದಿತ್ತು. ನನಗನ್ನಿಸಿದ ಪ್ರತಿಕ್ರಿಯೆ ಹೇಳಿದ್ದೇನೆ ಅನ್ಯಥಾ ಭಾವಿಸಬೇಡಿ.
ಪ್ರತಿಭಾ ನಂದಕುಮಾರ್