
ರಾಘವೇಂದ್ರ ಹೆಗಡೇಕರ್
ಅದೊಂದು ದೊಡ್ಡ ದಿನಸಿ ಅಂಗಡಿ
ಲಂಗ ದಾವಣಿಯುಟ್ಟ ಹುಡುಗಿಯರು
ಸಾಮಾನು ಕಟ್ಟಿ ಕೊಡುವ ಹುಡುಗರು
ಪ್ರೀತಿ ಅರಳಲೇ ಬೇಕಾದ ಕಾಲದಲ್ಲಿ
ಮಸಾಲೆ ಪದಾರ್ಥಗಳಿಗೆ ಬಲು ಬೇಡಿಕೆ
ನೀರು ನುಂಗಿ ಬಿರಿದ ಮೊಳಕೆ ಕಾಳುಗಳನ್ನು
ಕಟ್ಟುತ್ತಿದ್ದ ಹುಡುಗಿ ನೀನು
ಅರ್ಧದಲ್ಲೇ ಕೆಲಸ ಬಿಟ್ಟೆ
ಬಿಲ್ಲು ಮಾಡುವ ಮೊದಲೇ
ಸಾಮಾನು ಪಟ್ಟಿ ಕಳೆದು ಹೋದ ಹಾಗೆ..
ಯಾವುದೋ ಮಾಲ್ ನಲ್ಲಿ
ಕರಿ ಪ್ಯಾಂಟು ಶರ್ಟು ತೊಟ್ಟು
ಮುಗುಳು ನಗೆಯನ್ನು ಮಾರಾಟಕ್ಕಿಟ್ಟೆ
ಯಾವುದೋ ದೇಶದ ಕಂಪನಿ
ತುಂಬಾ ದಿನ ಹಸಿ ಸುಳ್ಳುಗಳು
ಚಲಾವಣೆಯಲ್ಲಿರುವುದಿಲ್ಲ
ಅದರಂತೆ ನಗೆ ಕೂಡ ಸವಕಲು
ಗಂಟು ಮೂಟೆ ಕಟ್ಟಿದ ಸುದ್ದಿ ಬಂದಿದೆ.
ಅಂತ ವಿಶೇಷವೇನಿಲ್ಲ
ನಿನ್ನ ಹೆಸರಲ್ಲೇ ಒಂದು ದಿನಸಿ ಅಂಗಡಿ
ಪ್ರೀತಿ ಜನರಲ್ ಸ್ಟೋರ್ಸ್
ಇಲ್ಲೂ ಹುಡುಗ ಹುಡುಗಿಯರು
ಎಲ್ಲರ ಕೈಯಲ್ಲಿ ಮೊಬೈಲ್ ಗಳು
ಮೊಳಕೆ ಕಟ್ಟುವ ಕೆಲಸ ಖಾಲಿ ಇದೆ
ಹಾಗೆ ನೀನು ಒದ್ದು ಹೋದ ಖುರ್ಚಿಯು
ಈಗಲೂ ಆಯ್ಕೆ ಎನ್ನುವುದು ನಿನ್ನದೇ..





ಮಸ್ತ್
Wonderful hegdekar