ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಪಾದಗಳನ್ನು ನೋಡಿದೆ, ಬಲು ಚಲುವಾಗಿವೆ..

ಮೀನಾಕುಮಾರಿ – ನೀನೊಂದು ಪ್ರಶ್ನೆ

lakshmikanth-itnal-1ಲಕ್ಷ್ಮೀಕಾಂತ ಇಟ್ನಾಳ

ಬದುಕಿನ ರೀತಿ ಚಲಿಸಿತ್ತು, ತನ್ನದೇ ರೀತಿ,
ಸುಂಟರಗಾಳಿಯ ಮೋಡದ ರೀತಿ
ಕ್ಷಣ ಕ್ಷಣವೂ ಒಂದೊಂದು ರೀತಿ,
ಪರದೆಯ ಬಣ್ಣದಲಿ ಮಿಂದ ಮಿಥ್ಯೆಗಳೇ
ಸತ್ಯಗಳಾಗಿ… ಹೆಪ್ಪುಗಟ್ಟಿದ ರೀತಿ.

sheಬದುಕಿನ ಹೆಜ್ಜೆಗಳಷ್ಟು ಮೂಡಿವೆ, ಕೆಲವು,
ಮೈಲಿಗೆಯಾಗಿವೆ,
‘ನಿನ್ನ ಪಾದಗಳನ್ನು ನೋಡಿದೆ, ಬಲು ಚಲುವಾಗಿವೆ,
ನೆಲದ ಮೇಲೂರಬೇಡ ಅವನ್ನು, ಮೈಲಿಗೆಯಾಗುತ್ತವೆ’
ಎಂದರೂ… ಕೇಳಲಿಲ್ಲ ನೀನು!

ಹಿಮದ ರಾಶಿಯಲಿ ಕುಳಿತ ಕನಸುಗನ್ಯೆ
ಏನು ಕನಸದು?
ಶೇರ್, ಶಾಯರಿಯೋ,
‘ಅರ್ಜ ಕಿಯಾ ಹೈ’ ( ವಿಜ್ಞಾಪಣೆ)
‘ಇರ್ಶಾದ್ ಇರ್ಶಾದ್’ (ಹೇಳು, ಹೇಳು)
ದು:ಖ, ಶೋಕ, ವಿರಹ, ಏಕಾಂತಗಳೇ
ಮೈದಾಳಿ, ಹಿಮದಂತೆ ನಿನ್ನ ಆವರಿಸಿ ಕೆನೆಗಟ್ಟಿಹವಲ್ಲ,
ನಿನ್ನ ಕವನಗಳಲ್ಲೂ! ನಿನ್ನ ದನಿಯಲ್ಲೂ!
ಜಡವಾಗುತ್ತಿರುವ ಸಂಬಂಧಗಳೇ?

ತೆಳು ಮೋಡಗಳ
ಎಳೆಗಳಲ್ಲಿ ನೇಯ್ದ ಶೋಕ ಮೂರ್ತಿಯೇ,
ಚುಕ್ಕೆಗಳ ಹೆಜ್ಜೆಗಳಲ್ಲಿ,
ಅದೇನೋ ಹಾಡುತ್ತಿದ್ದೆಯೆಲ್ಲಾ?
‘ಪ್ರಣಯಮತ್ತ ಹೊತ್ತಿದು
ಎಲೆ ಮನಸೆ ಅವನೀ ಜಗಕೆ ಹೇಗಾದರೂ ಹುಡುಕಿತಾರೆ
ಹೇಳವಗೆ, ತಾರುಣ್ಯದಲಿದೆ ಕಾಲ, ವಿರಹ ಬುಗ್ಗೆಯಲಿಹೆ ನಾನು
ಕಾರ್ಮೋಡದಾ ನೆರಳು ವಿರಹಿಣಿಗೆ ಕುಟುಕುತಿಹುದು
ಸಾಯುವಂತಹ ಭೀತಿ ಒಳಗೆ, ಭರವಸೆ ಇದೆಯೆ ಮಳೆಗೆ’.

ದಂತಕಥೆಯಂತವಳು, ಯಾರು ನೀನು?
ಗಂಗೆಯಾಗಿ ಮನದ ಮಂಥನದಲ್ಲಿ
ಮಿಂದೇಳುವಾಗ ತಂದಿದ್ದು ಅದೇನು?
ಮಧುಬಟ್ಟಲು!
ಇದನ್ನೇ ಹಿಡಿದು ಹಾಡಿದ್ದೆಯಲ್ಲವೇ
‘ಛೋಟಿ ಬಹು’ರೂಪವಾಗಿ,
‘ಹೋಗದಿರು ಇನಿಯಾ, ಮುಂಗೈ ಕೊಸರಿ
ನಿನ್ನಾಣೆ ಗೆಳೆಯಾ, ನಾನತ್ತು ಬಿಡುವೆ,
ಕನಲಿ ಬಳಲಿದೆ ತಾಳಿ, ವಿರಹಿ ಸಿಂಧೂರ,
ನೀನಿಲ್ಲದೇ ನಾನಿಲ್ಲಿ ಹೇಗಿರಲಿ? ದೊರೆಯೇ…’

ಕೊಸರಿಕೊಂಡೇ ಬಿಟ್ಟ…. ನಿನ್ನ ಚಂದನ್!

ಮತ್ತೆ, ಇನ್ನಾರೋ ಇಲ್ಲಿ ನಿನಗಾಗಿ
ರೋಜಾ ಉಪವಾಸ ಕೈಗೊಂಡಿರುವರಲ್ಲಾ
ಶ್ವೇತ ತಪಸ್ವಿ!
ಸದಿಗಳವರೆಗೆ,…. ಇನ್ನೂವರೆಗೆ!
ಗುಂಗುರು ಗೂದಲುಗಳ
ಇಳಿಬಿಟ್ಟ ಜಟಾಧಾರಿಯೇ,
ನಿಜ ಹೇಳು, ಯಾರು ನೀನು! ಏನು ಗುಟ್ಟು ನೀನು!

ಇದೇ ತಪಸ್ವಿಯ ಗೋಡೆಗೆ ತಗುಲುವ ಸುಖದಲ್ಲಿ
‘ಅಚರೇಕರ್’ ರಿಂದ ಬರೆಯಿಸಿ,
ನೀನೇ ಕೈಯಾರೆ ನೀಡಿದ್ದೆಯಲ್ಲವೇ,
ಇಲ್ಲಿಯೇ ಇವರ ಬಳಿ ಇರಲು ಬಯಸಿ,
ತೈಲಚಿತ್ರದಲಾದರೂ, ಸಂಗದಲ್ಲಿರುವ ಪ್ರೀತಿಯೇ!
ಆ ಮನೆ ತೊರೆದು, ಈ ಮನೆಗೇಕೋ!
ಈ ಮನೆಯಾಕೆ ಮನೆಯಲ್ಲಿಲ್ಲವೆಂದೇ!
ಈ ಮನೆ ಖಾಲಿ ಇದೆಯೆಂದೇ!

‘ಬದುಕುವ ರೀತಿಗಿಂತ ಬದುಕಿನ ದಾರಿ ಮುಖ್ಯ’
ಅನಿಸುವುದಿಲ್ಲವೇ ….ಮೀನಾಕುಮಾರಿ!

‍ಲೇಖಕರು Admin

5 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading