ಕಣ್ಣಂಚಿನ ಬಿಂಬ
ಸರೋಜಿನಿ ಪಡಸಲಗಿ
ಕಣ್ಣಂಚಿನ ಕಂಬನಿಯಲಿ ಬಿಂಬನೊಂದ ಕಂಡೆ
ತಡೆಯದಾದೆ ಆ ಧಾರೆ ಅದು ನೀನು ಎಂದು ಕೊಂಡೆ.
ಹರಿವ ನೀರಲೊಂದು ಕೋಲ್ಮಿಂಚು ಹೊಳಪ ಕಂಡೆ
ನೆನಪಿನಂಗಳ ತುಂಬ ಬೆಳ್ಳಿ ಬೆಳಕ ತುಂಬಿ ಕೊಂಡೆ
ಆ ಹುಲ್ಲು ಹಾಸಿನಲಿ ನಿನ್ನ ಕಣ್ಣ ಹೊಂಬೆಳಕಿನಲಿ
ನೂರೆಂಟು ಕನಸು ನನ್ನ ಮನದಿ ಹೆಣೆದುಕೊಂಡೆ.
ನನ್ನೊಳಗೆ ನೀನೆಂಬೆ ನಿನ್ನೊಳಗೆ ನಾನೆಂಬೆ
ಆ ಮಧುರ ಭಾವಲೊಂದು ಸುಖವ ಕಂಡುಕೊಂಬೆ
ಮುಗಿಯದಿರಲಿ ಆ ಗಳಿಗೆ ಎಂದು ಕೈಯ ಹಿಡಕೊಂಬೆ
ಜಾರದಿರಲಿ ಸಮಯವೆಂದು ಕಣ್ಮುಚ್ಚಿಕೊಂಬೆ
ಮುಗಿಯದಿರಲೆಂದ ಗಳಿಗೆ ತಿಳಿಯದೇ ಮುಗಿಯಿತು
ಕಣ್ಮುಚ್ಚಿಕೊಂಡರೂ ಸಮಯ ಜಾರಿಯೇ ಹೋಯ್ತು
ಉಕ್ಕಿ ಬಂದ ಧಾರೆಯಾ ಅರಿಯದೇ ಕೈ ತಡೆಯಿತು
ಕಣ್ಣಂಚಿನ ಬಿಂಬ ಎದೆಯ ಗೂಡು ಸೇರಿ ನಿಂದಿತು.





0 Comments