ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಜದ ನಾನು

ರಾಜೇಶ್ ಹೆಬ್ಬಾರ್

ಅಧೀರನಾದ ರಾತ್ರಿಗಳಲಿ
ಒಬ್ಬನಾದರೂ ಕೇಳಲಿಲ್ಲ
ಬದುಕಿದ್ದೀಯ ಗೆಳೆಯ ಎಂದು
ಬೆನ್ನು ಸವರಲಿಲ್ಲ ಕೈಕುಲಕಲಿಲ್ಲ
ಹಸಿವೆಯೊ ಬಾಯಾಡಿಕೆಯೋ
ನೋವೋ ನಲಿವೋ
ಸೋಲೋ ಗೆಲುವೋ?
ಒಬ್ಬನಾದರೂ ಗೆಳಯ ಕೇಳಲಿಲ್ಲ
ಸೌಜನ್ಯಕ್ಕೂ ಹೇಗಿದ್ದೀಯೆಂದು?

ಬೇಕಿದ್ದುದು ಒಂದೆ ಎಲ್ಲರಿಗೂ
ಬಸಿದುಕೊಳ್ಳುವುದು ಹಿಂಡುವುದು
ನಮ್ಮೊಳಗಿರುವುದೆಲ್ಲವನ್ನು
ಸೋಸಿ ಬಸಿದು ಕಬ್ಬಿನ ರಸವಾಗಿಸುವುದು
ಸೌಜನ್ಯಕ್ಕೂ ಗಾಣದ ಮನೆಯಲ್ಲಿ
ಕಬ್ಬಿನ ಜೊಲ್ಲೆಗೆ ಜನ ಮೂಸುವುದಿಲ್ಲ
ಇಡೀ ಊರಲ್ಲಿ ಕಬ್ಬಿನ ಜೊಲ್ಲೆಗೆ
ಕೊಳೆತ ಮಾಂಸಕ್ಕೆ,
ಮುತ್ತುವುದು ನೊಣಗಳೊಂದೇ !

ಕೇಳಲಿ ಬಿಡಲಿ
ಸಫಲತೆ ವಿಫಲತೆ ಒತ್ತಟ್ಟಿಗಿರಲಿ
ಗರಿ ಗರಿ ಜುಬ್ಬಾ ಪಂಚೆ ಶಲ್ಯ
ಬೆಲ್ಲದ ನುಡಿಗಳ ನಾಲಿಗೆಗೆ ತೊಟ್ಟು
ಹಬ್ಬದ ದಿನ
ಹೊರಡುತ್ತೇನೆ ನೋಡಿ
ಎಲ್ಲರದ್ದೂ ಉಘೇ ಉಘೇ
ಕಂಟಾ ಘೋಷ
ಈಗಲೂ ಕೇಳುವುದಿಲ್ಲ
ಗೆಳಯ ನೀನು ನಿಜವಾಗಿಯೂ
ಬದುಕಿದ್ದೀಯಾ ಎಂದು?

ಯಾರಿಗೂ ಬೇಕಿದ್ದಿಲ್ಲ ಇಲ್ಲಿ
ನಿಜದ ಬದುಕು ನಿಜದ ಇರುವು
ತೊಟ್ಟ ಮುಖವಾಡಗಳೇ
ಬಲುಬೇಡಿಕೆಗೆ ಬಿಕರಿಯಾಗುವ
ಮಾಲುಗಳು…
ತೋರುಗಾಣುವ ಊರುಗಾಣುವ
ಮಂದಿಗಾಣುವ ನಾನು ನಾನೇ?
ನಿಜದ ನಾನೇ?

‍ಲೇಖಕರು Avadhi

2 May, 2021

1 Comment

  1. ಗೀತಾ ಎನ್ ಸ್ವಾಮಿ

    ತುಂಬಾ ಚೆನ್ನಾಗಿದೆ ರಾಜೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading