ಖಾಲಿದಣ್ಣ ಮತ್ತು ಓತಿಕೇತದ ತಿಥಿ…

ಝುಬೈರ್ ಹಿಮಮಿ ಪರಪ್ಪು

ಅಜ್ಜಿ ಮನೆಯೆಂದ ಕೂಡಲೇ ವಿಶೇಷ ಹುರುಪೊಂದು ಆವರಿಸಿಕೊಂಡು‌ ಬಿಡುತ್ತಿದ್ದ, ದೊಡ್ಡ ಶಾಲೆಗೆ ಪುಸ್ತಕದೆಡೆಯಲ್ಲಿ ನವಿಲುಗರಿಯಿಟ್ಟು ಮರಿ ಹಾಕಿತೆಂಬ ಕುತೂಹಲದಲ್ಲೇ ಕಾಲ ಕಳೆಯುತ್ತಿದ್ದ ಮೋಹಕ ಬಾಲ್ಯವದು. ಉಚ್ಚೆ ಹೊಯ್ದು ಗಂಟೆಯು ಸದ್ದು ಮಾಡಿದರೆ ಗಣಿತದ ಮೇಷ್ಟ್ರು ಬಂದಾರೆಂಬ ಗಡಿಬಿಡಿಯಲ್ಲಿ ಜಿಪ್ಪು ಎಳೆಯುವಾಗ ‘ಅದು’ ಸಿಕ್ಕಿಕೊಂಡು ಬಿಡಿಸಲು ಒದ್ದಾಡಿ ಕೊನೆಗೆ ಕಣ್ಣು ಮುಚ್ಚಿಕೊಂಡು ಅವುಡುಗಚ್ಚಿ ಸರಕ್ಕನೆ ಕೆಳಕ್ಕೆಳೆದರೆ ಅದು ಕೊಡುತ್ತಿದ್ದ ಅವರ್ಣನೀಯ ನೋವು ನೆನೆದರೆ ಆಗೆಲ್ಲ ಅಮ್ಮ ಶರಾಯಿಯ ಒಳಗಡೆ ಏನನ್ನೂ ಹಾಕದೆ ಯಾಕೆ ಕಳುಹಿಸುತ್ತಿದ್ದಳು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಇಂಥಹಾ ನೂರಾರು ಪ್ರಶ್ನೆಗಳೆಡೆಗೆ ನಮ್ಮ ಚಿತ್ತವನ್ನು ಹರಿಯಬಿಡದಂತೆ ಬೆಚ್ಚಗೆ ಕಾವುಕೊಟ್ಟು ಬೆಳೆಸಿದ ಊರಾದ ಮಲೆಬೆಟ್ಟಿಗೆ ಮುಗಿಯದ ಶ್ರೇಷ್ಠತೆಯಿದೆ. ನನ್ನ ಎರಡೆರಡು ಅಜ್ಜ ಮತ್ತು ಅಜ್ಜಿಯನ್ನು ತನ್ನೊಡಲಲ್ಲಿ ತುಂಬಿಕೊಂಡು ಬಿಸಿಲಾದರೆ ಸ್ವಲ್ಪವೇ ಬಿಸಿಲು, ಚಳಿ ಬಂದಾಗ ಕಾಯಲು ತರೆಗೆಲೆಯನ್ನು ಅಂಗಳಕ್ಕೆ ಸುರಿದಿಡುವ, ಮಳೆಗಾಲವಿಡೀ ದೊಡ್ಡ ಹನಿಗಳ ಅಡ್ಡ ಮಳೆಯನ್ನು ಮತ್ತೆ ಮತ್ತೆ ಸುರಿಸುತ್ತಾ ನಮ್ಮ ಪೇಪರು ಬೈಂಡಿನ ಪುಸ್ತಕದ ಅಂಚನ್ನು ಸ್ವಾಹ ಮಾಡುವ ಊರದು.

ದಿನಕ್ಕೆ ಐದಾರು ಬಾರಿ ಅತ್ತಲಿಂದಿತ್ತ ಓಡುವ ಬಸ್ಸಿನಲ್ಲಿ ಅಕ್ಷರವನ್ನು ನುಂಗಿನುಂಗಿ ನಮ್ಮ ಊರಿನ ಕನ್ನಡವನ್ನು ಸ್ವಲ್ಪವೇ ಹೋಲುವ ದಡಬಡ ಮಾತನಾಡುವ ಕಂಡೆಕ್ಟರ್, ಮತ್ತೆಮತ್ತೆ ಮರೆತು ಹೋಗುವ ಅವನ ಊರಿನ ಹೆಸರು. ಆತನ ಗೆಳೆತನ ಮಾಡಿ ಹೆಣ್ಣಾಗುವ ಹೊಸ್ತಿಲಲ್ಲಿರುವ ಹುಡುಗಿಯರನ್ನು ಮೆಚ್ಚಿಸಲೆಂದು ಪ್ರಯತ್ನಪಟ್ಟು ಸೋತ ಚಿಗುರು ಮೀಸೆಯ ಯುವಕರು. ಮನೆಗೆ ಬಂದ ನೆಂಟರನ್ನು ಒಲ್ಲದ ಮನಸ್ಸಿನಿಂದ ಓಲಾಡುತ್ತಾ ಬರುವ ಬಸ್ಸು ಹತ್ತಿಸಿ ಕೈಬೀಸಿ ಕೊನೆಯ ತಿರುವಿನವರೆಗೂ ಕಣ್ಣಿಟ್ಟು ನೋಡುವ ಆತಿಥೇಯರು. ಒಣಹಾಕಿದ ಬಟ್ಟೆಗಳ ರಾಶಿಯಲ್ಲಿ ಹೋದ ನೆಂಟರ ಮಗುವಿನ ಸಣ್ಣ ಫ್ರಾಕೊಂದು ಇಣುಕುವುದು ಕಂಡರೆ ಚಡಪಡಿಸಿ ಅವರ ಪಕ್ಕದ ಮನೆಯ ಲ್ಯಾಂಡಿಗೆ ಫೋನು ಹಾಯಿಸಿ ವಿಷಯ ಮುಟ್ಟಿಸುವ ಮನೆಯೊಡತಿ.

ಹೀಗೆ ನೂರಾರು ನೆನಪುಗಳನ್ನು ಮೊಗೆದು ಕೊಡುತ್ತಿದ್ದ ಆ ಊರಿನಲ್ಲೇ ಎರಡು ಅಜ್ಜಿಮನೆಗಳು ಒಂದಕ್ಕೊಂದು ಅಂಟಿಕೊಂಡಂತೆ ಇದ್ದು ಬಿಟ್ಟರೆ ನಮ್ಮ ಕಾಲುಗಳಿಗೆ ಅಲ್ಲಿಂದಿಲ್ಲಿಗೆ ಟ್ರಿಪ್ಪು ಹೊಡೆಯುವುದೇ ಕಾಯಕ. ಎಲ್ಲಿ ಬೇಕೋ ಅಲ್ಲಿ ಉಂಡು ಮತ್ತೆಲ್ಲೋ ಬಿದ್ದುಕೊಂಡರೆ ಮುಂಜಾನೆಯ ಬಾಂಗಿನ ಕರೆಗೆ ಕಣ್ಣುಜ್ಜಿಕೊಂಡು ತೀರಾ ನಿನ್ನೆಯಂಥಹದ್ದೆ ಮತ್ತೊಂದು ದಿನ ಪ್ರಾರಂಭಗೊಳ್ಳುತ್ತಿತ್ತು.

ನಮ್ಮ ಈ ಮಹಾ ಸೌಭಾಗ್ಯಕ್ಕೆ ಕಾರಣೀಭೂತರು ನಮ್ಮ ಅಮ್ಮನ ಮನೆಯಲ್ಲಿಯೇ ಆಟದ ನೆಪಹೇಳಿ ಬರುತ್ತಿದ್ದ ಅಪ್ಪನೆಂದು ಹಿರಿಯರ ಬಾಯಿಯಿಂದ ಕೇಳಿದ್ದ ನಾವು ಇತ್ತೀಚೆಗೆ ಧೈರ್ಯ ತಂದುಕೊಂಡು ಸುಮ್ಮನೆ ಕುಳಿತು ಊರ ಉಸಾಬರಿ ಮಾಡುವಾಗ ಸಣ್ಣ ಬಾಣವೊಂದನ್ನು ಎಸೆದರೆ ಆ ಹಳೆಯ ಪ್ರೇಮಿಗಳಿಬ್ಬರು ಹೊಸ ರಾಜಕಾರಣಿಗಳಂತೆ ತಕ್ಷಣ ಸಭಾತ್ಯಾಗ ಮಾಡುತ್ತಾರೆ. ನಾವು ಮಕ್ಕಳು ಮನಸ್ಸಿನಲ್ಲಿಯೇ ಆ ಪ್ರೇಮಿಗಳಿಗಾಗಿ ಪ್ರಾರ್ಥಿಸುತ್ತೇವೆ.. 

ಎರಡು ಮನೆಗಳಲ್ಲಿ ಅಮ್ಮನ ಮನೆಯೆಂದರೆ ಸ್ವಲ್ಪ ಹೆಚ್ಚೇ ಒಲವು. ಅಲ್ಲಿ ನಮ್ಮ ಓರಗೆಯ ಒಂದಿಬ್ಬರಾದರೂ ಎಲ್ಲಾ ಅಧಿಕಪ್ರಸಂಗಿತನಕ್ಕೆ ಹೆಗಲಾಗುತ್ತಿದ್ದರು. ನಮ್ಮ ಬಾಲ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಶ್ರೇಷ್ಠರ ಪಟ್ಟಿಯಲ್ಲಿ ಯಾವ ಆಯಾಮದಲ್ಲಿ ನೋಡಿದರೂ ಮೊದಲ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಒಬ್ಬನಿದ್ದರೆ ಅದು ‘ಖಾಲಿದ್’.

ನಾವು ಹೆಸರಿಡಿದೇ ಕರೆಯುತ್ತಿದ್ದೆವಾದರೂ ಅಣ್ಣನಾಗಬೇಕಾದವನು. ಅವನ ತಾಯಿಗೆ ಅಕ್ಕಿ ತಿನ್ನುವ ಹವ್ಯಾಸವಿತ್ತಂತೆ. ಜಗಿಯುವುದು ಕಷ್ಟವಾದರೆ ನೆನೆಯಲು ಹಾಕಿ ತಿನ್ನುತ್ತಿದ್ದರಂತೆ ‘ಯಾಕೆ ಮಾರಾಯ್ತಿ ಈ ರೀತಿ ಅಕ್ಕಿ ತಿನ್ನುತ್ತೀ’ಯೆಂದು ಪ್ರೀತಿಯ ನಾದಿನಿಗೆ ಅಮ್ಮ ಬುದ್ಧಿವಾದ ಹೇಳುತ್ತಿದ್ದರೆ. ‘ಒಂದು ಹಿಡಿ ಅಕ್ಕಿ ತಿಂದರೆ ಕಿರುಚಾಡುವ ನೀವು ಹೊಟ್ಟೆ ತುಂಬಾ ಉಂಡರೆ ಏನು ಮಾಡಿಯಾರೆಂದು ಪ್ರಶ್ನಿಸುತ್ತಿದ್ದರಂತೆ. ಕ್ರಮೇಣ ಹೊಟ್ಟೆಯಲ್ಲೊಂದು ಗೆಡ್ಡೆ ಬೆಳೆದು ಅದು ಊರ್ಜಿತಗೊಂಡು ಖಾಲಿದನನ್ನು ಬಿಟ್ಟು ಆ ತಾಯಿ ಹೊರಟು ಹೋದಳು.

ಈ ಕಾರಣಕ್ಕಾಗಿಯೇ ಮನೆತುಂಬಾ ಜನರು ತುಂಬಿಕೊಂಡಿದ್ದ ಆ ದೊಡ್ಡ  ಮನೆಯಲ್ಲಿ ಖಾಲಿದನಿಗೆ ವಿಶೇಷ ಹಾರೈಕೆ, ಉಪಚಾರ, ಸಿಗುತ್ತಿತ್ತು. ಸವಲತ್ತುಗಳೆಲ್ಲವನ್ನೂ ಪಡೆಯುವ ಅರ್ಹತೆಯನ್ನು ತನ್ನದಾಗಿಸಿಕೊಂಡಿದ್ದ ಅಣ್ಣ ಖಾಲಿದ್ ನಮಗೆಲ್ಲರಿಗೂ ಹಿರಿಯರೆಡೆಯಲ್ಲಿ ಒಬ್ಬ ನಾಯಕನಂತೆ ಇರುತ್ತಿದ್ದವ. ನಾವೂ ಅಷ್ಟೇ ಅವನ ಕಿಂಕರರಂತೆ ಹೋದೆಲ್ಲೆಡೆಗೆ ಹೋಗುವುದು ಅವನ ಸರ್ವ ಕುತಂತ್ರ, ಕುಚೇಷ್ಟೆಗೆ ಜೊತೆಯಾಗಿ ನಿಲ್ಲುತ್ತಿದ್ದೆವು.

ಯಾವುದೇ ಸವಾಲುಗಳಿಗೆ ಎದೆಗುಂದದೆ ಮುನ್ನುಗ್ಗುವ ಪಾಠವನ್ನು ಯಾವ ನಿಪುಣ ಅಧ್ಯಾಪಕನಿಗೂ ಕಡಿಮೆಯಿಲ್ಲವೆಂಬಂತೆ ತಪ್ಪುಗಳನ್ನು ಮಾಡಿ ಆರೋಪಿಗಳಾಗಿ ಕಟೆಕಟೆಯಲ್ಲಿ ನಿಂತಾಗಲೂ ಕುಸುಕುಸು ಮಾಡಿ ಹೇಳುತ್ತಿದ್ದ. ನಾವು ಶಿರಸಾವಹಿಸಿ ಬಾಳಿ ಬದುಕಿ ಒಂದೊಳ್ಳೆಯ ಬಾಲ್ಯವನ್ನು ಕಳೆದೆವು. ಖಾಲಿದಣ್ಣ ಇಲ್ಲದಿರುತ್ತಿದ್ದರೆ ನಮ್ಮ ಬಾಲ್ಯ ಖಂಡಿತವಾಗಿಯೂ ನೀರಸವಾಗಿರುತ್ತಿತ್ತು. ತನ್ನ ತಾಯಿಯನ್ನು ಒಂದು ನೋಟ ನೋಡುವ ಅವಕಾಶ ಅವನಿಗೆ ಬಾಕಿಯಾಗಿರಲಿಲ್ಲ.ಕೆಲವೊಮ್ಮೆ ಅಮ್ಮನ ಖಬರ್ಸ್ಥಾನ ನೆನಪಾಗಿ ಕಲ್ಲಿನಂತ ಖಾಲಿದನೂ ಕರಗಿಹೋಗುವುದು ಕಾಣುವಾಗ ಕಣ್ಣು ತೇವಗೊಳ್ಳುತ್ತದೆ.

ಅಜ್ಜಿಯ ಮಕ್ಕಳೆಲ್ಲರೂ ದೊಡ್ಡವರಾಗುತ್ತಿದ್ದರೆ ತುಂಟಾಟವನ್ನು ತನ್ನ ಒಡಲಲ್ಲಿ ಇಟ್ಟುಕೊಂಡೇ ಬಂದವನು ಖಾಲಿದ್. ಹತ್ತು ಮಕ್ಕಳನ್ನು ಹೆತ್ತು,ಹೊತ್ತು, ಸಾಕಿ ಸಲಹಿದ ಅಜ್ಜಿಯಲ್ಲಿದ್ದ ಮಕ್ಕಳ ಬೆಳೆಸುವ ಕಲೆ ತನಗೆ ಅಂತರ್ಗತವಾಗಿದೆಯೆಂಬ ನಂಬಿಕೆಗೆ ಸೆಡ್ಡು ಹೊಡೆಯುತ್ತಾ ಬೆಳೆದವನು. ಅಜ್ಜಿ ಎಲ್ಲೆಲ್ಲಿಂದಲೋ ತಂದು ಮಣ್ಣು ಹದಮಾಡಿ ಮುಳ್ಳುಸೌತೆ, ತೊಂಡೆಕಾಯಿ, ಅಳಸಂಡೆ ಬೀಜಬಿತ್ತಿ, ಹೊತ್ತೊತ್ತಿಗೆ ನೀರುಣಿಸಿ, ಗೊಬ್ಬರ-ಗಿಬ್ಬರವೆಲ್ಲಾ ಹಾಕಿ ಬೆಳೆಗಾಗಿ ಕಾದು ಕುಳಿತುಕೊಳ್ಳುತ್ತಿದ್ದರೆ ಇವನು ಅದರ ನೆನೆಯನ್ನೇ ಒಂದೂ ಬಿಡದಂತೆ ನುಂಗಿಹಾಕುತ್ತಿದ್ದ.

ತೆಂಗಿನಕಾಯಿ ಕೀಳಲು ತೆಂಗೇರಿದರೆ ಅಲ್ಲೇ ನಾಲ್ಕೈದು ಸೀಯಾಳವನ್ನು ಹೊಟ್ಟೆಗೆ ತುಂಬಿಸದೆ ಕೆಳಗಿಳಿದರೆ ಆ ಮರದಲ್ಲಿ ಕೆಂಜಿರುವೆ ಇದೆಯೆಂದು ನೀವು ಖಾತರಿಪಡಿಸಿಕೊಳ್ಳಬೇಕು. ನಮಗಿಂತಲೂ ನಮ್ಮ ಅಜ್ಜನಿಗೆ ಹೆಚ್ಚು ಒಡನಾಟವಿರುವ ಅಲ್ಲಲ್ಲಿ ಹೆಮ್ಮರವಾಗಿ ಬೆಳೆದ ಮಾವಿನ ಮರಗಳು ಯಾವ ಗಾಳಿಗೆ ಎಷ್ಟು ಹಣ್ಣು ಉದುರಿಸಬಹುದೆಂಬ ಲೆಕ್ಕಪತ್ರ ತನ್ನ ಸ್ಮತಿಪಟಲದಲ್ಲಿ ಜೋಪಾನವಾಗಿಟ್ಟ ಗುಮಾಸ್ತ ಖಾಲಿದ್.

ಅಡುಗೆ ಕೋಣೆಯಲ್ಲಿ ಯಾರೂ ಇಲ್ಲವೆಂಬುವುದನ್ನು ಖಾತ್ರಿಪಡಿಸಿ ಸಕ್ಕರೆಯನ್ನು ಬಾಯಿತುಂಬಾ ಸುರುವಿಕೊಳ್ಳುವುದು, ಬೆಲ್ಲದ ತುಂಡೊಂದನ್ನು ಜೇಬಿಗಿಳಿಸುವುದು, ಉಪ್ಪಿನಕಾಯಿ ಭರಣಿಗೆ ಕೈಹಾಕಿ ರಪಕ್ಕನೆ ಕೋಣೆಯಿಂದ ಕಾಲ್ಕಿಳುವುದು ಮೊದಲ ಪ್ರಯತ್ನ ಸಮ್ಮಾನಿಸಿದ ಧೈರ್ಯದಿಂದ ಮತ್ತೊಮ್ಮೆ ಆ ಮಹತ್ಕಾರ್ಯಕ್ಕೆ ಮುನ್ನುಗ್ಗುವುದು ಕೈಯ್ಯಲ್ಲಿಡಿದ ಉಪ್ಪಿನಕಾಯಿಯೊಂದಿಗೆ ಸಿಕ್ಕಿಬೀಳುವುದು ಅತಿಯಾಸೆ ಒಳ್ಳೆಯದಲ್ಲವೆಂದು ಟೀಚರ್ ಕಲಿಸಿದ ಪಾಠ ನೆನಪಾಗುವುದು.ಮಂಗನ ಹೃದಯ ತಿನ್ನುವ ಅತಿ ಆಸೆ ಪಟ್ಟ ಮೊಸಳೆಯ ಕಥೆ ಕಣ್ಣ ಮುಂದೆ ತೇಲಿ ಬರುತ್ತಿದ್ದ ನಿಮಿಷವದು..

ನಾವು ಅಜ್ಜಿಯ ಮನೆಯಲ್ಲಿರುವ ದಿನಗಳಲ್ಲಿ ಊರಿನಲ್ಲಿ ಸಾಲದ ಪುಸ್ತಕವಿದ್ದ ಒಂದೇ ಒಂದು ಕಿರಾಣಿ ಅಂಗಡಿಯೆಂದರೆ ಬಾವಂಞಿ ಕಾಕರದ್ದು. ಸಣ್ಣಪುಟ್ಟ ಸಾಮಾನು ತರುವುದು ನಮಗೊಂದು ದೊಡ್ಡ ಖುಷಿಯ ಕೆಲಸವಾಗಿತ್ತು. ಅಂಗಡಿಯಲ್ಲಿ ಇಂತಿಂತಾ ಸಾಮಾನುಬೇಕೆಂದು ಒಂದೊಂದಾಗಿ ಹೇಳುವಾಗ ಮೂಲೆಯಲ್ಲೆಲ್ಲಾದರೂ ತನ್ನ ಸರದಿಗಾಗಿ ಕಾದು ಕುಳಿತಿರುವ ಸಾಮಾನುಗಳು ಮೇಜಿನಮೇಲೆ ಪಟ್ಟನೆ ಪ್ರತ್ಯಕ್ಷವಾಗಿ ಬಿಡುವುದು ಮೋಜೆನಿಸುತ್ತಿತ್ತು. ಅದನ್ನು ಕೊಡುತ್ತಿದ್ದ ಅಂಗಡಿಯವನು ವಿಶೇಷ ಮಾಂತ್ರಿಕ ಶಕ್ತಿಯಿರುವ ಗಾರುಡಿಗನಂತೆ ಕಾಣುತ್ತಿದ್ದನು. ಈ ಮನುಷ್ಯನಿಗೆ ಎಷ್ಟು ಸಾಧ್ಯವೋ ಅಷ್ಟು ಚಾಕಲೇಟು, ಜೇನುಗೂಡು, ಕಡ್ಲೆ, ಪೇಡ, ಚಕ್ಕುಲಿ ತಿನ್ನಬಹುದಲ್ಲವೇ ಎಂದೆನಿಸಿ ಅವರ ಮೇಲೆ ಅಪಾರ ಮೆಚ್ಚಿಗೆಯು ಮೂಡುತ್ತಿದ್ದ ಮುಗ್ಧ ಮನಸ್ಸು ನಮ್ಮದಾಗಿತ್ತು .

 ಮನೆಯಿಂದ ಸ್ವಲ್ಪ ದೂರವಿರುವ ಅಂಗಡಿಗೆ ದೊಡ್ಡವರು ನಮ್ಮನ್ನು ಕಳುಹಿಸಿದರೆ ಮನದಾಳದಿಂದ ಒಂದೋ ಎರಡೋ ರೂಪಾಯಿ ಚಿಲ್ಲರೆಯಾಗಿ ಬಾಕಿಯಾದರೆ ಸಾಕೆಂಬ ಭಕ್ತಿತುಂಬಿದ ಪ್ರಾರ್ಥನೆ ಸಲ್ಲಿಸುತ್ತಾ ಅಂಗಡಿ ತಲುಪುತ್ತಿದ್ದೆವು. ಒಂದೆರಡು ರೂಪಾಯಿಯ ರೂಪದಲ್ಲಿ ಚಿಲ್ಲರೆ ದೊರೆತರೆ ಇದು ನಿನಗಿರಲೆಂದು ಆ ಮಿನುಗುವ ನಾಣ್ಯ ನಮ್ಮ ಪಾಲಾಗುತ್ತಿತ್ತು. ಬೇರೆ ಆಯ್ಕೆಗಳಿಗೆ ಚಿಂತಿಸದೆ ಬಂದ ದಾರಿಯಲ್ಲಿ ಹಿಂದುರುಗಿ ಹೆಚ್ಚು ಸಿಗುತ್ತಿದ್ದ ಬಟಾಣಿ ಕಡಲೆಯನ್ನು ಜೇಬಿಗೆ ಸುರುವಿಕೊಂಡು ಒಂದೊಂದಾಗಿ ಮೆಲ್ಲುತ್ತಾ ಮನೆ ಸೇರುತ್ತಿದ್ದೆವು.

ಕೆಲವೊಮ್ಮೆ ಅಚಾನಕ್ಕಾಗಿ ಚಡ್ಡಿಯ ಕಿಸೆಗೆ ಕೈ ಹೋದರೆ ಎಂದೋ ತಿಂದ, ನಮ್ಮ ಕಣ್ಣುತಪ್ಪಿಸಿ ಬಾಕಿಯಾಗಿರುವ ಎರಡು ಕಡಲೆ ಮತ್ತು ಒಂದೆರಡು ಸಿಪ್ಪೆಗಳು ಕೈಗೆ ತಡಕಾಡಿದರೆ ಇದು ಎಷ್ಟು ದಿನಗಳ ಹಿಂದಿನದಾಗಿರಬಹುದೆಂಬ ಗೊಂದಲ ಹುಟ್ಟಿ ಅಮ್ಮ ಸಾಬೂನು ಹಾಕಿ ತೊಳೆದ ಬಳಿಕವೂ ಅದು ಹೇಗೆ ಉಳಿಯಿತೆಂಬ ಯಕ್ಷಪ್ರಶ್ನೆ ಕೊನೆಗೆ ಇದು ತಿನ್ನುವುದೋ ಬೇಡವೋ ಎಂಬ ಹುಯಿಲೆಬ್ಬಿಸಿ ಬಿಡುತ್ತಿದ್ದವು.

ಮಲೆಬೆಟ್ಟಿನ ಕಾಡಿಗೂ ಅಜ್ಜಿಮನೆಗೂ ಒಂದು ಡಾಮಾರು ರಸ್ತೆಯ ಅಂತರ ಮಾತ್ರವಿರುವುದು. ನಮ್ಮ ಅಜ್ಜನ ಯೌವನದ ಅವಧಿಯಲ್ಲಿ ಅವರು ಶಿಕಾರಿಗೆ ಹೋಗುತ್ತಿದ್ದರಂತೆ. ಅಮ್ಮಂದಿರು ಕುಂಟೆಬಿಲ್ಲೆ ಆಡುತ್ತಿದ್ದರೆ ಜಿಂಕೆಗಳು ಇವರ ಅಂಗಳಕ್ಕೆ ಬಂದು ಓಡಿಹೋಗುತ್ತಿದ್ದವಂತೆ. ಎಷ್ಟೋ ಸಲ ಬಸ್ಸುಗಳಿಗೆ ಬೃಹತ್ ಕಾಡುಕೋಣಗಳು ಇದಿರಾಗುತ್ತಿತಂತೆ. 

ನಾವು ಚಿಕ್ಕವರಿದ್ದಾಗ ರಸ್ತೆಗೆ ತಾಗಿಕೊಂಡು ಅಥವಾ ಸ್ವಲ್ಪವೇ ಮೇಲೆ ಗಾಳಿಮರಗಳ ಮನುಷ್ಯ ನಿರ್ಮಿತ ಕಾಡು ಬೆಳೆದುಕೊಂಡಿತ್ತು. ಅದು ಉದುರಿಸುವ ಚೂಪಾದ ಎಲೆಗಳಿಂದ ತುಂಬಿಕೊಂಡಿದ್ದ ಪ್ರದೇಶ ನವಿರಾದ ನೆಲದ ಹಾಸಿನಂತಿತ್ತು. ಸುತ್ತಲೂ ನೋಡಿದರೆ ನೆಲದ ಪದರವನ್ನು ಪೂರ್ಣವಾಗಿ ಮುಚ್ಚಿಕೊಂಡಿರುವ ಚಾಪೆಯಂತೆ ಅದು ಹರವಿಕೊಂಡಿರುತ್ತಿದ್ದವು.

ದೊಡ್ಡ ದೊಡ್ಡ  ಗಾಳಿಮರಗಳ ಬುಡದಲ್ಲಿ ರಾಶಿರಾಶಿ ಬಿದ್ದುಕೊಂಡಿರುವ ಎಲೆಗಳನ್ನು ಮತ್ತು ಅದರ ಉದುರಿರುವ ಕಾಯಿಗಳನ್ನು ಕವೆಗೋಲಿನಿಂದ ಒಂದೆಡೆ ಸಂಗ್ರಹಿಸುವುದು ನಂತರ ಗೋಣಿಯನ್ನು ಇಬ್ಬದಿಯಲ್ಲಿಡಿದುಕೊಂಡರೆ ಉಳಿದೊಬ್ಬ ಗುದ್ದಿಗುದ್ದಿ ತುಂಬುವುದು, ಅದರ ಬಾಯಿಯನ್ನು ಅಜ್ಜಿ ಸೀಳಿಕೊಟ್ಟ ಬಳ್ಳಿಯಿಂದ ಬಿಗಿದು ಕಟ್ಟುವುದು ಇದು ನಮ್ಮ ರಜಾದಿನಗಳಲ್ಲಿ  ಶ್ರದ್ಧೆಯಿಂದ ಮಾಡುತ್ತಿದ್ದ ಮುಖ್ಯ ಕಸುಬುಗಳಲ್ಲೊಂದು.ಅತೀ ಹೆಚ್ಚು ಗೋಣಿ ಚೀಲ ಯಾರು ತುಂಬುತ್ತಾರೆಂಬ ಪೈಪೋಟಿ ಇರುತ್ತಿದ್ದ ಕಾರಣದಿಂದ ಆಯಾಸ ಅನುಭವವಾಗುತ್ತಿರಲಿಲ್ಲ.

ಒಮ್ಮೆ ನಾನು ಮತ್ತು ಖಾಲಿದ್ ಮಾತ್ರವಿರುವ ಸನ್ನಿವೇಶ ಒದಗಿತು. ನನ್ನ ಖಾಸ ಅಣ್ಣ ಏನೋ ಕೆಲಸದ ನಿಮಿತ್ತ ಅಪ್ಪನೊಂದಿಗೆ ಪೇಟೆಗೆ ಹೋಗಿದ್ದ. ಆ ಸಮಯಕ್ಕೆ ಸರಿಯಾಗಿ ಖಾಲಿದ್ ನನ್ನಲ್ಲಿ ಒಂದು ಮಾಂತ್ರಿಕ ಎಲೆಯಿದೆಯೆಂದೂ ಅದು ತೊಗಲಿಗೆ ಸ್ಪರ್ಶಿಸಿದ ಕಡೆಯೆಲ್ಲಾ ತಂಪುತಂಪಾಗುತ್ತದೆಯೆಂದು ನನ್ನನ್ನು ಬಳಿಕರೆದು ಮೆಲು ಧ್ವನಿಯಲ್ಲಿ ಹೇಳಿದ. ನನಗೆ ಆ ಎಲೆಯನ್ನು ಕಾಣುವ ಆಸೆಯಿದೆಯೆಂದು ಖಾಲಿದನಲ್ಲಿ ಹೇಳಿದೆ. ಇದು ನಮ್ಮಿಬ್ಬರಿಗೆ ಮಾತ್ರವೇ ಗೊತ್ತಿರಬೇಕೆಂದೂ ಹಾರಿಸನಿಗೆ ಹೇಳಬಾರದೆಂದು ಜಾಮೀನು ಪಡೆದುಕೊಂಡು ನನ್ನನ್ನು ಸ್ವಲ್ಪ ದೂರ ಕೊಂಡೊಯ್ದು ತೋರಿಸಿದ. ನಿನ್ನ ಬಟ್ಟೆಯನ್ನು ಬಿಚ್ಚಬೇಕು ನಾನು ಬೆನ್ನಿಗೆ ಸವರುತ್ತೇನೆ ಆಗದೇ ಎಂದ.

ನಾನು ಉತ್ಸಾಹದಿಂದ ತಲೆಯಾಡಿಸಿದೆನಾದರೂ ಯಾವತ್ತೂ ತೋರದ ವಿಶೇಷ ಪ್ರೀತಿಯ ಕುರಿತು ಸಂಶಯವಾದರೂ ಬೆನ್ನು ತೋರಿಸುತ್ತಾ ಕುಳಿತೆ. ಎಲೆಯನ್ನು ಸವರಿ ಒಂದೈದು ನಿಮಿಷ ಆಗೂವುದರೆಡೆಗೆ ನನ್ನ ಬೆನ್ನು ಉರಿತದಲ್ಲಿ ಬೇಯುವಂತಾಗಿ ಹಿಂದೆ ತಿರುಗಿ ನೋಡುತ್ತೇನೆ ಖಾಲಿದ್ ಬಾಯಿಗೆ ಕೈಹಿಡಿದು ನಗುತ್ತಿದ್ದಾನೆ. ನಾನೂ ಸೀದಾ ಅಜ್ಜಿಯ ಬಳಿಗೆ ಓಡಿದೆ. ಬಿಕ್ಕಳಿಸುತ್ತಾ ನಡೆದ ಪ್ರಸಂಗವನ್ನು ಹೇಳಿದೆ.

ನನ್ನ ಬೆನ್ನಿನ ಬಾವುಗಳನ್ನು ನೋಡಿದ ಅಜ್ಜಿ ನಾಲ್ಕು ಭಯಂಕರವಾದ ಬೈಗುಳವನ್ನೆರೆದು ‘ನನ್ನ ಮಗುವನ್ನು ಕೊಂದ ಅವಿವೇಕಿಯೆಂದಳು’ ಆ ದಿನ ಊಟಕ್ಕೂ ಬರದೆ ಖಾಲಿದ್ ಕಾಡಲ್ಲೇ ಕುಳಿತ. ಸಂಜೆ ಹೊತ್ತಿಗೆ ಬಂದವನನ್ನು ಅಜ್ಜಿ ಇಡೀ ಊರೂರು ಓಡಿಸಿ ಹೊಡೆದಿದ್ದಳು. ಅಂದು ಅವನ ಹಚ್ಚಿದ್ದು ತುರುಚೇಗಿಡದ ಎಲೆಯೆಂದು ನಂತರ ಗೊತ್ತಾಯಿತು.

ನಾವು ತುಂಬಿದ ಗಾಳಿಯೆಲೆಯನ್ನು ಒಲೆ ಉರಿಸಲು ಸೀಮೆಯೆಣ್ಣೆಗೆ ಪರ್ಯಾಯವಾಗಿ ಉಪಯೋಗಿಸಲಾಗುತ್ತಿತ್ತು. ನಾವು ಬಹಳ ಉತ್ಸುಕತೆಯಿಂದ ಈ ಕಾರ್ಯದಲ್ಲಿ  ತಲ್ಲೀನರಾಗಿರುತ್ತಿದ್ದರೆ ಆಕಸ್ಮಾತ್ ಕೆಲವೊಮ್ಮೆ ಓತಿಕೇತಗಳು ಮರದಲ್ಲಿ ಕಾಣಸಿಗುತ್ತಿತ್ತು. ಹಾಗೆ ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳುತ್ತಿದ್ದ ಖಾಲಿದ್ ನಮಗೆಲ್ಲರಿಗೂ ಹೊಕ್ಕುಳಿನ ಸುತ್ತಲೂ ಉಗುಳನ್ನು ಹಚ್ಚಿಕೊಳ್ಳಬೇಕೆಂದೂ ಹಾಗೆ ಮಾಡದಿದ್ದರೆ ಆ ಊಸರವಳ್ಳಿ ನಮ್ಮ ರಕ್ತಹೀರುತ್ತದೆಂದು ಫರ್ಮಾನು ಹೊರಡಿಸುತ್ತಿದ್ದ. ಸುಮ್ಮನೆ ರಕ್ತದಾನ ಮಾಡುವ ಮನಸ್ಸಿಲ್ಲದ ನಾವು ಅದರಂತೆಯೇ ಮಾಡುತ್ತಿದ್ದೆವು.

ಕಣ್ಣಿಗೆ ಗೋಚರಿಸಿದ ಓತಿಕೇತವನ್ನು ಕಲ್ಲೊಡೆದು ಬೀಳಿಸುವುದು ನಮ್ಮ ಮುಂದಿನ ಗುರಿಯಾಗಿರುತ್ತಿತ್ತು. ಅದು ಎಷ್ಟೇ ಎತ್ತರಕ್ಕೇರಿದರೂ ಬಿಡುತ್ತಿರಲಿಲ್ಲ. ಪ್ರದಕ್ಷಿಣೆ ಹಾಕುತ್ತಾ ಮೇಲೇರುವ ಓತಿಕೇತದ ಸ್ವಭಾವ ಅದರ ಜೀವಕ್ಕೆ ಕುತ್ತು ತರುತ್ತಿತ್ತು. ಆ ಮರದ ಸುತ್ತಲೂ ಕಲ್ಲಿಡಿದುಕೊಂಡು ನಾವು ತಯಾರಾಗುತ್ತಿದ್ದೆವು. ಒಂದೆಡೆ ತಪ್ಪಿಸಿದರೆ ಮತ್ತೊಂದು ಕಡೆಯಿಂದ ಕಲ್ಲು ಬೀಳುತ್ತಿತ್ತು. ಹಾಗೆ ಓತಿಕೇತ ನೆಲಕ್ಕುರುಳಿದರೆ ಅನಂತರ ಖಾಲಿದ್ ಸಂತನಂತೆ ಮಾತು ಪ್ರಾರಂಭಿಸುತ್ತಿದ್ದ.ಕೈಯಲ್ಲಿರುವ ಕವೆಗೋಲಿನಿಂದ ಅದರ ದೇಹಕ್ಕೆ ಚುಚ್ಚಿ ಪ್ರಾಣಹೋಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದೆವು.

ಓತಿಕೇತ ಪ್ರಾಣ ಕಳೆದುಕೊಂಡ ಅದೇ ಮರದಡಿಯಲ್ಲಿ ಕತ್ತಿಯಿಂದ ಸಣ್ಣ ಗುಂಡಿಯನ್ನು ತೋಡುತ್ತಿದ್ದೆವು. ಅದರ ದೇಹವನ್ನು ಹತ್ತಿರವಿರುವ ಎಲೆಯಲ್ಲಿ ಸುತ್ತಿ ದಫನ ಕಾರ್ಯವನ್ನು ನೆರೆವೇರಿಸಿ ಗುರುತಿಗೆಂದು ನಾಲ್ಕು ಕಲ್ಲುಗಳನ್ನು ಇರಿಸುತ್ತಿದ್ದೆವು.ಸರಿಯಾಗಿ ಮೂರು ದಿನದ ಬಳಿಕ ಅಂಗನವಾಡಿಯಲ್ಲಿ ಸಿಗುತ್ತಿದ್ದ ಸಜ್ಜಿಗೆ ಹುಡಿಯನ್ನು ಹಿಡಿದುಕೊಂಡು ಅದರ ಗೋರಿಯ ಮೇಲ್ಭಾಗದಲ್ಲೆಲ್ಲಾ ಅಲ್ಪಲ್ಪವೇ ಸುರಿದು ನಾವೂ ಹಂಚಿ ತಿಂದು ತಿಥಿ ಕಾರ್ಯವನ್ನು ಬಹಳ ಭಕ್ತಿಯಿಂದ ಮುಗಿಸುತ್ತಿದ್ದೆವು. ನಾವು ಓತಿಕೇತವನ್ನು ಕೊಂದ ಪಾಪವನ್ನು ದೇವರು ಮಾಫ್ ಮಾಡಬೇಕಾದರೆ ಅದರ ಹೆಸರಿನಲ್ಲಿ ಆಹಾರ ಧಾನಮಾಡಬೇಕೆಂದೂ ಹೊರತು ಪರಲೋಕದಲ್ಲಿ ಪ್ರತಿಯೊಂದು ಪಾಪಕ್ಕೂ ಉತ್ತರಿಸಬೇಕೆಂದು ಆಧ್ಯಾತ್ಮಿಕ ಪಾಠಗಳನ್ನು ಭೋದಿಸುತ್ತಿದ್ದ ಖಾಲಿದ್ ನಮ್ಮೊಳಗೊಂದು ಪಶ್ಚಾತ್ತಾಪದ ಕಿಡಿಯನ್ನು ಹೊತ್ತಿಸಿ ಬಿಡುತ್ತಿದ್ದ.

ನಾವು ಮಾಡುತ್ತಿದ್ದ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ, ಸುಧಾರಿಸಿಕೊಂಡು ಬದುಕಬೇಕೆಂಬ ಬಹುದೊಡ್ಡ ಜೀವನ ಮೌಲ್ಯವನ್ನು ಅನುಭವಗಳ ಮೂಲಕ ತೋರಿಸಿಕೊಟ್ಟ ಬದುಕಿಗೆ ಶರಣಾಗಬೇಕು. ಪಕ್ಕದ ಜಯರಾಜರ ಗೇರುಮರದಿಂದ ಗೇರುಬೀಜವನ್ನು ಲಪಟಾಯಿಸಿ ಅವರದೇ ಅಂಗಡಿಗೆ ಮಾರಿ ನಾವೇ ಪರಮಬುದ್ಧಿವಂತರೆಂದು ಇರುತ್ತಿದ್ದ ದಿನಗಳವು. ಒಮ್ಮೆ ರಮಳಾನಿನ ತರಾವೀಹ್ ನಮಾಝಿನ ಬಳಿಕ ಮತಪ್ರವಚನಕ್ಕೆಂದು ಬಂದ ಉಸ್ತಾದರೊಬ್ಬರು ‘ಅನ್ಯನ ಹಕ್ಕು ನಮ್ಮ ಹೊಟ್ಟೆಸೇರಿದರೆ ನಾವು ಮಾಡುವ ಪ್ರಾರ್ಥನೆಗಳು ಸ್ವೀಕಾರಾರ್ಹವಲ್ಲವೆಂದೂ ಪೂರ್ವಿಕ ಮಹಾತ್ಮರ ಚರಿತ್ರೆಯನ್ನು ವಿವರಿಸಿದರು. ಅದು ಒಂದು ಗೇರು ಬೀಜವಾದರೂ ಸರೀಯೇ’ ಎಂದಾಗ ನಮ್ಮ ಹೃದಯದಲ್ಲಿ ಒಂದು ಕಂಪನ ಪ್ರಾರಂಭವಾಗಿತ್ತು.

ಮಾರನೇ ದಿನ ಅಣ್ಣ,ಮತ್ತು ನಾನು ಜಯರಾಜರಲ್ಲಿ ನಾವು ನಿಮ್ಮ ತೋಟದಿಂದ ಗೇರುಬೀಜ ಕದ್ದಿರುತ್ತೇವೆಂದೂ ನೀವು ಮಾಫ್ ಮಾಡಬೇಕೆಂದೂ ಕೇಳಿಕೊಂಡೆವು. ಇಷ್ಟಗಲ ಮುಖ ಅರಳಿಸಿದ ಅವರು ‘ನೀವು ಸಣ್ಣ ಮಕ್ಕಳು, ಇದೆಲ್ಲಾ ಸಹಜ, ಆದರೂ ನೀವೂ ಕ್ಷಮೆ ಕೇಳಿದಿರಿ ತಾನೇ. ಅದು ನನಗೆ ತುಂಬಾ ಹಿಡಿಸಿತು, ದೇವರು ಒಳ್ಳೆಯದು ಮಾಡಲಿ’ ಎಂದಿದ್ದರು.ಹಿಂದಿರುಗಿದಾಗ ನಮ್ಮ ಮನದಾಳದಲ್ಲಿ ದೊಡ್ಡ ಭಾರವೊಂದನ್ನು ಕಳಚಿಕೊಂಡ ಖುಷಿ.

ಹೀಗೆ ಬದುಕಿಗೆ ಬೇಕಾಗುವ ಮೌಲ್ಯವನ್ನು ಆಟದೊಂದಿಗೆ ಬೆರೆಸಿ ಪುಟಾಣಿ ಹೃದಯದಲ್ಲಿ ಅಚ್ಚೊತ್ತುವಂತೆ ಮಾಡಿದ ನೂರು ನೆನಪುಗಳು ನಮ್ಮನ್ನೆಲ್ಲಾ ಮಿಡಿಯುವ, ತುಡಿಯುವ, ಕರಗುವ, ಆರ್ದ್ರವಾಗುವ, ತಕ್ಷಣವೇ ಗಟ್ಟಿಗೊಳ್ಳುವ, ಮೆಟ್ಟಿನಿಲ್ಲುವ, ಮುಂದೆಸಾಗುವ ಸ್ಥೈರ್ಯವನ್ನು ತುಂಬಿ ಕಳುಹಿಸಿಕೊಟ್ಟಿದೆ. ಆದರೂ ಬದುಕು ಕಲಿಸಿದ ಗೆಳೆಯರು, ತಿದ್ದಿತೀಡಿದ ಹಿರಿಯರು, ಮುದ್ದುಮಾಡಿದ ಊರು, ಮೊದಲಿನಂತೆ ನಮ್ಮನ್ನು ಹಚ್ಚಿಕೊಳ್ಳುವುದೇ ಇಲ್ಲ.

‍ಲೇಖಕರು Avadhi

May 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: