ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಜಕ್ಕೂ ಚಪ್ಪಾಳೆ ತಟ್ಟುತ್ತೇವೆ..

ಬಿದಲೋಟಿ ರಂಗನಾಥ್

ಚಪ್ಪಾಳೆ ತಟ್ಟುತ್ತೇವೆ
ಜಾತಿಯೆಂಬ ಸೋಂಕಿಗೆ
ಮದ್ದನ್ನು ಶೋಧಿಸಿಕೊಟ್ಟಾಗ
ಗುಡಿಸಿಲೊಳಗಿನ ಕಣ್ಣೀರನು ಒರೆಸಿ
ಐದು ಸುತ್ತಿನ ಸೈಜುಗಲ್ಲಿನ ಪಾಯ
ಮನೆಕಟ್ಟಲು ಹಾಕಿದಾಗ

ಚಪ್ಪಾಳೆ ತಟ್ಟುತ್ತೇವೆ
ಮನುಷ್ಯತ್ವದ ದುರ್ಬಿನು ಹಾಕಿ
ಹೃದಯಬಡಿತವ ಆಲಿಸಿದಾಗ
ಶೋಕಿ ಮಾಡುವ ಸೂಟಿನ ಬದಲಿಗೆ
ಖಾದಿ ಧರಿಸಿ ಸರಳತೆ ಮೆರೆದಾಗ

ಚಪ್ಪಾಳೆ ತಟ್ಟುತ್ತೇವೆ
ಹರಿದ ಕರುಳನು
ಮರ್ಯಾದೆಯ ಕಣ್ಣನು ಧರಿಸಿ ನೋಡಿದಾಗ
ಕತ್ತಲು ತುಂಬಿದ ಕಣ್ಣುಗಳಿಗೆ
ಬೆಳಕನು ತುಂಬಿ ಜಗದ ಕೊಳಕು ತೊಳೆದಾಗ

ಚಪ್ಪಾಳೆ ತಟ್ಟುತ್ತೇವೆ
ಎದುರಿಗೆ ನೋಡುವ ಕಣ್ಣುಗಳಿಗೆ
ಜಾತಿಯೇ ಕಾಣದಿದ್ದಾಗ
ದೇಶವನೇ ಆಳುವ ಮನಸು ನಮ್ಮದು ಆಗಿ
ಉರಿಯುವ ಬದುಕಿಗೆ ತಣ್ಣನೆಯ ನೀರು ಸುರಿದಾಗ

ಚಪ್ಪಾಳೆ ತಟ್ಟುತ್ತೇವೆ
ಕಣ್ಣು ಕರುಳಿಲ್ಲದ ದೇವರ ಹೆಸರಿನಲ್ಲಿ ಸುಲಿಗೆ ಮಾಡುವ ಮನಸುಗಳಲ್ಲಿ
ಬುದ್ಧ ಬಸವ ಅಂಬೇಡ್ಕರರು ಬಂದು ಕುಳಿತಾಗ..
ಹರಿಯುವ ರೈತನ ಬೆವರಿಗೆ ಬೆಲೆ ಬಂದು
ನಗುವ ಮುಖದ ಕಡಲಿನ ಮೇಲೆ ಚಿತ್ತಾರ ಬಿಡಿಸಿದಾಗ…

ಚಪ್ಪಾಳೆ ತಟ್ಟುತ್ತೇವೆ
ಬಿಕ್ಷುಕರಿಲ್ಲದ ಭಾರತ ಉಸಿರಾಡಿ
ಬಡವ ಸಿರಿವಂತರೆಂಬ ತಾರತಮ್ಯಕೆ
ತಿಲಾಂಜಲಿ ಇಟ್ಟು
ನ್ಯಾಯದ ಕಣ್ಣಿನ ಪೊರೆ ಅಳಿಸಿದಾಗ
ಬಿರಿವ ನೆಲ ಬಿಕ್ಕಳಿಸುವ ಮನಸುಗಳು
ಗೆಲುವಿನ ಭಾವುಟ ಹಾರಿಸಿದಾಗ…

ಚಪ್ಪಾಳೆ ತಟ್ಟುತ್ತೇವೆ
ಅಪ್ಪನ ಅಂಗೈ ಬೊಬ್ಬೆಗಳು ಮತ್ತೆ ಬಾರದೆ
ಅವ್ವಳ ಸೀರಿಗೆ ಸೂಜಿ ತಾಕದೆ
ಒಡಲ ಕನಸುಗಳು ಸಾಕಾರಗೊಂಡಾಗ
ಅಳುವ ತುಟಿಗಳಲ್ಲಿ ನಗುವು ಮೆತ್ತಿಕೊಂಡಾಗ

ನಿಜಕ್ಕೂ ಚಪ್ಪಾಳೆ ತಟ್ಟುತ್ತೇವೆ
ಧರ್ಮಾಂಧತೆಯ ಮುಖಗಳಲ್ಲಿ
ದೇಶದ ಭಾವೈಕ್ಯತೆ ಉಸಿರಾಡಿ
ಕೀಳು ಮೇಲೆಂಬ ಎಳೆದ ಗೆರೆ
ಶಾಶ್ವತವಾಗಿ ಅಳಿಸಿದಾಗ.!

 

‍ಲೇಖಕರು avadhi

21 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading