ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಹೊಸ ಕವಿತೆ- ಯೋಧ ಮತ್ತು ಯೋಗಿ…

ಡಾ ನಾ ಮೊಗಸಾಲೆ

ಯೋಧನಾಗುವ ಬಯಕೆ ಇದ್ದವನು ಬಂದನು ಯೋಗಿ
ಇದ್ದ ಕಡೆ ಬಹಳ ಆತಂಕದಲ್ಲಿ
ಬಾಗಿ ಹೇಳಿದ ‘ಮನೆಮಂದಿ ಒಪ್ಪುವುದಿಲ್ಲ ನಿರ್ಧಾರ
ಯಾಕೆ ಸರಿಯಲ್ಲ ಇದು, ನೀವು ಹೇಳಿ?’

ಯೋಗಿ ನೋಡಿದನವನ ಕಟ್ಟು ಮಸ್ತಾಳು
ಹುರಿಮೀಸೆ ನೆಗೆದಿತ್ತವನ ಮುಖದಲ್ಲಿ
ಅವನ ಎದೆಯೊಳಗೆ ಇದ್ದೀತು ವೈರಿನಾಶಕ ಗುಂಡು
ಅದಕೆ ಸರಿ ಇವನೆಂದುಕೊಂಡ ಮನದಲ್ಲಿ

ಕರೆದು ಕೂರಿಸಿದ ಬಳಿಯಲ್ಲಿ ಮೈದಡವಿ
ಖಾಲಿ ಮಡಿಕೆಯನೊಂದು ಅವನ ಮುಂದಿಟ್ಟು
ಪ್ರಶ್ನಿಸಿದ ‘ಇದರೊಳಗೆ ಏನಿದೆ? ಎಂದು
ಹೇಳಿದರೆ, ಹೇಳುವೆನು ನನ್ನ ನಿಲುವನ್ನು!’

ಆತ ‘ಖಾಲಿ ಇದೆ ಸ್ವಾಮಿ, ಕಾಣೆನು ಇನ್ನೇನನ್ನು!’
ಎಂದಾಗ ನಕ್ಕನು ಯೋಗಿ ‘ಇಷ್ಟೆಯೇ ತಮ್ಮ ?
ಆಕಾಶವಿಲ್ಲವೆ ಅದರೊಳಗೆ? ನಿನ್ನೆದುರು ಇರುವುದೂ ಅದೇ!
ಬೇಡವೆನ್ನಲು ನಾನು ಯಾರು ನಿನ್ನ?

ತುಂಬು ಇದರಲ್ಲೊಂದು ತಂಬಿಗೆ ನೀರು, ಆಮೇಲೆ
ಪುಟ್ಟ ಕಲ್ಲನು ಬಡಿದು ಮಾಡು ತೂತು
ಸೋರುವುದಿಲ್ಲವೆ ಆಗ ಮಡಿಕೆ? ಹಾಗೆ ನಮ್ಮೀ ಬದುಕು
ಇಹವೆನ್ನುವುದು ಮಡಿಕೆಯೊಳಗಿರುವ ನೀರು!’

ಇಷ್ಟು ಹೇಳಿದ ಯೋಗಿ ಮತ್ತೆ ಮೌನಕೆ ಸರಿದು
ತನ್ನ ಮೇಲ್ಗಡೆ ಇರುವ ಮರದ ತೆರವಾದ
ಇವನ ಮನದಲಿ ಬುದ್ಧನು ಬಂದ. ಯೋಗಿಯ ಪಾದ
ದಲಿ ತಲೆ ಇಟ್ಟು ಹೊರಡಲು ಅಪ್ಪಣೆ ಬೇಡಿದ

ಯೋಗಿ ಹಿಡಿದೆತ್ತಿದ ಅವನ. ಆಮೇಲೆ ಪಿಸುಮಾತಲ್ಲಿ
ಎಂದ ‘ಕಲಿಯೂ ಕವಿಯೂ ಒಂದೆ ಎನ್ನುವರು
ಯೋಗಿಯೂ ಅವರ ಜೊತೆಗಿರಲಿ, ಈ ಮೂವರಲಿ
ಮೂರನೆ ಕಣ್ಣಿರುವಂತೆ ಬರಲಿ ಅದು ನಿನಗೂ!’

‍ಲೇಖಕರು Admin

27 March, 2022

2 Comments

  1. km vasundhara

    ಚೆಂದದ ಕವಿತೆ

  2. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading