ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮೊಗಸಾಲೆ ಹೊಸ ಕವಿತೆ – ಪ್ರವಾಹ…

ಡಾ ನಾ ಮೊಗಸಾಲೆ

ಪ್ರವಾಹ
ನೋಡಿದಷ್ಟೂ ಸಲ ದಂಡೆಯಲ್ಲಿ ಕುಳಿತು
ಹೊಳೆಗೆ ಇಳಿಸಬೇಕು ಕಾಲು
ಎನ್ನುವಂತಿದೆ ಆ ಹೊಳೆ.

ಫಳ ಫಳ ಹೊಳೆಯುವುದೇನು ?
ಜಲ ಜಲ ಹರಿಯುವುದೇನು ?
ಕಾಲಿಳಿಸಿ ಕುಳಿತನೆಂದರೆ
ಮೈಮನವೆ ನದಿಯಾಗಿ !

ಮೊನ್ನೆ ಒಣ ಬೇಸಗೆಯಲ್ಲಿ ಹೋಗಿ ನೋಡಿದರೆ ನದಿಯ,
ಸುಕ್ಕುಗಟ್ಟಿದ ಮುಖ ಆಳಕ್ಕಿಳಿದ ಕಣ್ಣು
ಸಾಯುವ ಮೊದಲ ದಿನ ಇದ್ದ ಹಾಗೆ ಅಮ್ಮ.

ದಂಡೆಯಿಂದ ಕೆಳಗಿಳಿದು ದೂರ ನಡೆದೆ
ಅಲ್ಲೊಂದು ಕುಳಿ. ಕುಳಿಯಲ್ಲಿ ನೀರು
ಎತ್ತಿ ಮುಖ ತೊಳೆದುಕೊಳ್ಳಲೆ ಎಂದರೆ, ಅಯ್ಯೋ ಪಾಪ !
ಎಷ್ಟು ಜನರಿಗೆ ನೀರುಣಿಸುತ್ತದೆಯೋ ಆ ಕಾಮಧೇನು !

ಮರಳಿ ಬಂದವನು ಹೆಂಡತಿಗೆ ಹೇಳಿದೆ
‘ಹೊಳೆ ಪೂರ್ತಿ ಆರಿ ಹೋಗಿದೆ
ನೀನು ಬಂದಿದ್ದರೆ ಖಂಡಿತ ದುಃಖಿಸುತ್ತಿದ್ದೆ
ಹೀಗೆ ಯಾಕೆ ಈ ಸಲ, ತಿಳಿಯೆ !’

ಸುಮ್ಮನಿದ್ದು ಆಮೇಲೆ ಹೇಳಿದಳು
‘ಸಣ್ಣವಳಿದ್ದಾಗ ನಾನು ಕಾಗದದ ದೋಣಿ
ಯಲ್ಲಿ ಹೋದದ್ದಿದೆ ನೀರಿಲ್ಲದೆ. ಚಾವಡಿಯಲ್ಲಿ
ಅಪ್ಪಯ್ಯನೂ ಇದ್ದರು ನನ್ನ ಜೊತೆ ತಮಾಷೆಯಾಗಿ’

ಮಾತು ಸಾಗಿತು ಹೀಗೆ : ಇಬ್ಬರೂ ದೋಣಿ ಏರಿದುವು
ಹುಟ್ಟು ಹಾಕಿದವರಾರೋ ತಿಳಿಯಲಿಲ್ಲ.
ಮರ ಇಳಿಸಿದ ಹಾಗೆ ಬೇರು, ಮಣ್ಣಿಂದ ಒಸರಿದ ಹಾಗೆ ನೀರು
ನದಿ ತುಂಬಿ ಬಂತು. ದೋಣಿ ಏರಿದ ನಾವು ಇಳಿಯದಿದ್ದೆವು !.

‍ಲೇಖಕರು Admin

30 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading