ನಾನೀಗ ನನ್ನೊಳಗಿನ ನನ್ನನ್ನೇ ಹುಡುಕುತ್ತಿದ್ದೇನೆ..

ದೀಕ್ಷಿತಾ ಆಚಾರ್ಯ

ಹೌದು.. ನಾನು ನನ್ನನ್ನೇ ಹುಡುಕುತ್ತಿದ್ದೇನೆ.. ಕಾರಣ ನಾನು ನನ್ನನ್ನು ಕಳೆದುಕೊಂಡಿದ್ದೇನೆ.. ನಾನು ನನ್ನತನವೆಂಬ ಸ್ವಂತಿಕೆ ಎಲ್ಲೋ ಮರೆ ಆಗಿ ಒಂದಷ್ಟು ಸಮಯವಾಗಿದೆ. ಅವರಿಗಾಗಿ, ಇವರಿಗಾಗಿ, ಮತ್ತೊಬ್ಬರಿಗಾಗಿ ಹೀಗೆ ಏನೇನೋ ಮಾಡುತ್ತಿದ್ದೇನೆ, ನನಗಾಗಿ ನಾನೇನೂ ಮಾಡದೇ ನನ್ನನ್ನೇ ಕಳೆದುಕೊಳ್ಳುತ್ತಿದ್ದೇನೆ.. 

ದಿನ ಬೆಳಗಾದರೆ ಏಳುತ್ತೇನೆ, ನಿನ್ನೆ ಮಾಡಿದ ಕೆಲಸವನ್ನೇ ಇವತ್ತೂ ಮಾಡುತ್ತೇನೆ.. ನಾಳೆಯು ಮಾಡುತ್ತೇನೆ,ದಿನವೂ ಮಾಡುತ್ತೇನೆ.. ಎಲ್ಲರಿಗೆ ಅದು ಅವಳ ತುಂಬಾ ಸುಲಭದ ದಿನಚರಿ.. ಆದರೆ ನನಗೋ ಇದೇ ಬದುಕು.. 

ಕೆಲವೊಮ್ಮೆ ಬದಲಾವಣೆ ಬೇಕೆಂದು ಹಪಹಪಿಸುತ್ತೇನೆ.. ಎಲ್ಲೋ ಮೂಲೆಯಲ್ಲಡಗಿದ ನನ್ನತನ ಒಮ್ಮೊಮ್ಮೆ ಕಾಡುವಾಗ ತೀರಾ ಮೌನಿಯಾಗಿ ಬಿಡುತ್ತೇನೆ… ಕನಸುಗಳ ಬೆನ್ನೇರದೇ ರೆಕ್ಕೆ ಮುರಿದ ಹಕ್ಕಿಯಂತೆ ಮೌನದಲ್ಲೇ ಅಳುತ್ತೇನೆ, ಒಂದಿಷ್ಟೂ ಸ್ವರ ಬಾರದಂತೆ.. ಹತ್ತಿರವೆಷ್ಟೇ ಇದ್ದರೂ ಅವರಿವರಿಗೆ ಕೇಳದಂತೆ.. 

ಕೆಲವೊಮ್ಮೆ ಅತಿಯಾಗಿ ಕೋಪಿಸಿಕೊಳ್ಳುತ್ತೇನೆ.. ಕೋಪಿಸಬಾರದೆಂದರು ಕೋಪವು ತನ್ನಿಂತಾನೇ ನನ್ನೊಳಗೆ ಕಿಡಿಯಾಡಿ ನನ್ನನ್ನೇ ನಾನು ಮರೆತುಬಿಡುತ್ತೇನೆ.. ಅದು ಅವರಿವರ ಮೇಲಿನ ಕೋಪವೇನೂ ಅಲ್ಲಾ.. ನನಗೇ ನನ್ನ ಮೇಲಿರುವ ಕೋಪ.. ಮನ ತುಂಬಿ ಅಳಲೂ ,ನಗಲೂ ಆಗದೇ ನಿಸ್ಸಾಯಕಳಾದ ನನ್ನ ಮೇಲೆ ನನಗಿರುವ ಕೋಪ.. ಮತ್ತೆ ನಾನೇ ನನಗೊಂದಿಷ್ಟು ಸಮಾಧಾನ ತಂದುಕೊಳ್ಳುತ್ತೇನಾದರೂ ,ನನ್ನೊಳಗಿನ ‘ಆ’ ನಾನು ದಿನ ಕಳೆದಂತೆ ಮರೆಯಾಗಿ ಬಿಡುತ್ತೇನೆ.. 

ಕೆಲವೊಮ್ಮೆ ನಾನು ಸಹ ನಗುತ್ತೇನೆ.. ಅಂಗಳದಲ್ಲರಳಿದ ಹೂವಿಗೆ ನೀರೆರೆಯುತ್ತಾ ನಗುತ್ತೇನೆ.. ಅವುಗಳೂ ನನ್ನ ನೋಡಿ ನಗುವಂತೆ ನನ್ನಷ್ಟಕ್ಕೆ ನಾನೆ ಅಂದುಕೊಳ್ಳುತ್ತೇನೆ.. ಒಮ್ಮೊಮ್ಮೆ ಅವುಗಳೊಂದಿಗೆ ಮಾತನ್ನೂ ಆಡುತ್ತೇನೆ…

ಒಮ್ಮೊಮ್ಮೆ ಹಳೆ ಫೋಟೋಗಳನ್ನು ತೆಗೆದು ನೋಡಿ, ನನ್ನ ಹಳೆಯ ನಗುವನ್ನು ನೋಡಿ ಮತ್ತೆ ನಗುತ್ತೇನೆ.. ಆ ನಗುವಿಗೂ ಈ ನಗುವಿಗೂ ವ್ಯತ್ಯಾಸ ಅದೆಷ್ಟಿದೆ ಅಂತ ಕಲ್ಪಿಸಿ ನಗುತ್ತೇನೆ.. ಹಳೆ ರೇಡಿಯೋ ಹಾಕಿ ಹಾಡು ಕೇಳುತ್ತ ನಗುತ್ತೇನೆ.. ಪುಟ್ಟ ಪುಟ್ಟ ವಿಷ್ಯಗಳಲ್ಲೂ ಈಗೀಗ ನಗು ಕಂಡುಕೊಳ್ಳಲು ನೋಡುತ್ತೇನೆ.. ಅಳು ಬಂದರೂ, ಕೋಪ ಗೊಂಡರೂ, ದುಃಖವಾದರೂ, ಚೀರಾಡಬೇಕೆಂದರೂ ಮೊದಲು ನಗುತ್ತೇನೆ.ನಗುತ್ತಲೇ ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತೇನೆ.. 

ನನ್ನಂತೆ ಮನೆಯೊಳಗೇ ಇರುವ ಅದೆಷ್ಟೋ “ಅವಳನ್ನು” ದಿನವೂ ಕಾಣುತ್ತೇನೆ.. ಅವಳೊಂದಿಗೂ ನಗುತ್ತೇನೆ.. ಅವಳೂ ನನ್ನಂತೆ ನಗುತ್ತಲೇ.. ಸತ್ಯವನ್ನು ಮುಚ್ಚುತ್ತಾ ಅಸತ್ಯದಲ್ಲೇ ನಾವು ನಗುತ್ತೇವೆ.. 

ಕೆಲವೊಮ್ಮೆ ಸಹಿಸುತ್ತೇನೆ.. ಹೇಳಲೂ ಆಗದೆ, ಕೇಳಲೂ ಆಗದೆ ಉಳಿದಂತ ಮಾತುಗಳು, ಆಸೆಗಳು, ನನ್ನೊಳಗೆ ಬಚ್ಚಿಟ್ಟ ಕತೆಗಳು, ವ್ಯಥೆಗಳು ಎಲ್ಲವನ್ನು ನಾನೇ ಸಹಿಸಿಕೊಳ್ಳುತ್ತೇನೆ.. ಅವರಿವರ  ಮಾತು, ಕೋಪ, ಅಸಹನೆ ಎಲ್ಲವನ್ನೂ ನನ್ನದೇ ಎಂದು ಸಹಿಸಿಕೊಳ್ಳುತ್ತೇನೆ.. ಎಲ್ಲವೂ ಆಗಿ ಏನೂ ಆಗಿಲ್ಲವೆಂಬಂತೆ ಮತ್ತದೇ ಕೆಲಸದಲ್ಲಿ ತೊಡಗುತ್ತೇನೆ.. 

ಏಳುತ್ತೇನೆ, ಎಲ್ಲರಿಗು ಮೆಚ್ಚುವ ಅಡುಗೆಯವಳಾಗುತ್ತೇನೆ.. ಮಕ್ಕಳು ಮೆಚ್ಚುವ ಆಟ, ಪಾಠಗಳನ್ನು ಹೇಳಿ ಕೊಡುವವಳಾಗುತ್ತೇನೆ.. ಮನೆಯವರು ಮೆಚ್ಚುವ ಸೊಸೆಯಾಗುತ್ತೇನೆ.. ಅವರು ಮೆಚ್ಚುವ ಆರೈಕೆಯಲ್ಲೂ ತೊಡಗುತ್ತೇನೆ.. ಬಿಡುವಿಲ್ಲದ ದಿನದಲ್ಲೂ ಯಾರಿಗೂ ನೋವಾಗದಂತೆ, ತೊಂದರೆಯಾಗಬಾರದೆಂಬಂತೆ ದೇವರಿಗೆ ನಿತ್ಯ ದೀಪ ಹಚ್ಚುತ್ತೇನೆ.. ಎಲ್ಲರಿಗು ಮೆಚ್ಚುವಂತೆ ನಡೆದುಕೊಳ್ಳುತ್ತಾ  ಇವೆಲ್ಲದರ ನಡುವೆ

ನಾನು ನನ್ನೊಳಗಿನ  ನನ್ನನ್ನೇ ಮರೆಯುತ್ತಿದ್ದೇನೆ.. 
ನಾನು ನನ್ನೊಳಗಿನ ನನ್ನನ್ನೇ ಹುಡುಕುತ್ತಿದ್ದೇನೆ..

‍ಲೇಖಕರು Admin

January 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: