ಡಾ ನಾ ಮೊಗಸಾಲೆ
ಕಾಲು ಕೆಂಡದ ಮೇಲೆ ಕಣ್ಣು ಚಂದ್ರನ ಕಡೆಗೆ
ಎನ್ನುವಂತಿದ್ದಳು ಅಹಲ್ಯೆ ಋಷಿಯಾಶ್ರಮದಲಿ
ಗಂಡ ಗೌತಮನಿದ್ದ ಹೆಂಡತಿಯನರ್ಥೈಸಿಕೊಳ
ದವನಾಗಿ, ಜಪತಪದ ನಿಷ್ಠೆಯಲ್ಲಿ
ಒಳಗೊಳಗೆ ಕುದಿಎಸರು ಸುಡುತ್ತಿತ್ತು ಅವಳ ಮೈ
ಮನಸುಗಳ ಕೊಳದಲ್ಲಿ ಇರದೆ ತೂಬು
ಬದುಕುತಿದ್ದಳು ಒಬ್ಬಂಟಿಯಂತೆಯೆ ಪೂರ್ಣ
ಚಂದ್ರ ದಾಂಪತ್ಯಕ್ಕೆ ಕಾಲಿಡದ ಹಾಗಿದ್ದು
ಗೌತಮನು ಇರುತ್ತಿದ್ದ ತಾನು ಮಹಾಮರವೆಂಬ
ಭ್ರಮೆಯಲ್ಲಿ ಕಡೆಗಣಿಸಿ ಅಹಲ್ಯೆಯನ್ನು
ಹೂ ಹಣ್ಣುಗಳು ಕುಕ್ಕಿದರವನ ಕಣ್ಣನ್ನು
ಕಾಣಲೇ ಇಲ್ಲ ಅವಳಲ್ಲವುಗಳನ್ನು

ಒಮ್ಮೆ ದೇವೇಂದ್ರನು ಕಂಡನವಳ ಲಾವಣ್ಯದತಿ
ಶಯದ ಕೊಳ. ಅದರಲ್ಲಿ ಮಿಂದು ಈಜಾಡಿ
ಇರದಿದ್ದರೇತಕೆ ಇಂದ್ರಪದವಿ ಎಂದುಕೊಂಡನು ತನ್ನ
ಬಯಕೆ ತೀರಿಸಲಿಕ್ಕೆ ಸಂಚು ಹೂಡಿ
ಆಕಾಶ ಭೂಮಿಯೊಂದಾಗಿ ಭೂಶಿಖರವಾದಂತೆ
ದೇವೇAದ್ರನಿಳಿದನು ಸ್ವರ್ಗದಿಂದ ಧರೆಗೆ
ತಾನೆ ಗೌತಮನೆಂದು ಕೂಡಿದನು ಸತಿಯನ್ನು
ಪಿಂತಿAಥ ಸುಖ ಎಲ್ಲಿ? ಎಂಬ ಬಗೆಗೆ
ನದಿಸ್ನಾನದಲ್ಲಿದ್ದ ಋಷಿ ಮರಳಿದನು ಮನೆಗೆ
ತೆರದಿದ್ದ ಬಾಗಿಲು ಯಾಕೆ ಮುಚ್ಚಿ ಇದೆಯೆಂದು
ಕಿವಿಗೊಡಲು ಕೇಳಿಸಿತೊಳಗೆ ರತಿ ಸುಖದ ಬಿಸಿಯುಸಿರು
ಕೋಪಾವೇಶದಲ್ಲಿ ತುಳಿದ ಬಾಗಿಲನು

ನೋಡಿದರೆ ಒಳಗಲ್ಲಿ ಸುರಪನೊಂದಿಗಹಲ್ಯೆ!
ಕೂಡಿದನೆ ಈ ಪಾಪಿ ತನ್ನವಳನೆಂದು
ಶಾಪಕೊಟ್ಟನು ಸುರೇಂದ್ರನಿಗೆ ಆಮೇಲೆ
ಕಲ್ಲಾಗಿ ಹೋಗೆಂದ ಅಹಲ್ಯೆಯನು ತುಳಿದು
ಕಲ್ಲಾಗಿ ಬಿದ್ದರು ಅಹಲ್ಯೆ ಮನೋಶರೀರಕೆ ಬಂದು
ಕೀಳರಿಮೆಗೊಳಗಾಗದಿದ್ದಳು ಹೆಣ್ತನಕ್ಕೆ
ಕ್ಷಮಯಾ ಧರಿತ್ರಿಯೂ ಕ್ಷಮಿಸದಾದಳು ಋಷಿಯ
ಮುಗ್ದೆಗಿದೆಂತ ಶಿಕ್ಷೆಯ ಕೊಟ್ಟೆ ಎನುವಂತೆ
ಕೊರಗಿದನು ತನ್ನೊಳಗೆ ಗೌತಮನು ತನ್ನೆದುರು
ಕಲ್ಲಾಗಿ ಬಿದ್ದಿರುವೆ ಅಹಲ್ಯೆಯನು ನೋಡಿ
ತನ್ನ ಹುರಿಶಾಪಕ್ಕೆ ಕಾಲಬಾರದೆ ಬೇಗ
ಎಂದು ಕಾದನು ಆ ಪುರುಷೋತ್ತಮನ ಹಾದಿ






ಕಥನ ಕಾವ್ಯ