ನಾ ದಿವಾಕರ್ ನೋಡಿದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’

ಮೈಸೂರಿನಲ್ಲಿ ಧ್ವನಿಸಿದ ಮಂಗಳ ಹಕ್ಕಿಯ ಇಂಚರ

ಪ್ರೊ. ಎಸ್.ಆರ್.‌ ರಮೇಶ್‌ ಅವರ “ ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು ”

ಸದಾ ಹುಡುಕಾಟದಲ್ಲೇ ಇರುವ ಮಾನವನ ಭ್ರಮೆ ಮತ್ತು ವಾಸ್ತವದ ವಿನೂತನ ರಂಗಪ್ರಯೋಗ

ನಾ ದಿವಾಕರ

ಮಾನವನ ಬದುಕು ಸದಾ ಭ್ರಮೆ ಮತ್ತು ವಾಸ್ತವದ ನಡುವೆ ಕಳೆದುಹೋಗಿರಬಹುದಾದ ಅಮೂಲ್ಯ ಕ್ಷಣಗಳನ್ನು, ಅಮೂರ್ತ ಭಾವನೆಗಳನ್ನು ಹಾಗೂ ಕೆಲವು ವಿಲಕ್ಷಣ ಘಟನೆಗಳನ್ನು ಶೋಧಿಸುವುದರಲ್ಲೇ ಕಳೆದುಹೋಗುತ್ತದೆ. “ ತನ್ನ ನೆರಳನ್ನು ತಾನೇ ನಂಬದವ “ ಎಂದು ಕೆಲವು ವ್ಯಕ್ತಿಗಳ ಬಗ್ಗೆ ಹೇಳಲಾಗುತ್ತದೆ. ಅಂದರೆ ಅದು ತನ್ನದೇ ನೆರಳು ಎಂದು ತಿಳಿದಿದ್ದರೂ ತನ್ನದಲ್ಲ ಎಂದು ಭಾವಿಸುವಷ್ಟು ಮಟ್ಟಿಗೆ ಮನುಷ್ಯ ಜೀವಿ ಆತ್ಮಪ್ರತ್ಯಯವನ್ನು ಕಳೆದುಕೊಂಡಿರುತ್ತಾನೆ.

ನೆರಳು ಬಿಂಬಿಸುವುದಾದರೂ ಏನನ್ನು ? ನಮ್ಮ ವ್ಯಕ್ತಿತ್ವವನ್ನೋ ಅಥವಾ ಬಾಹ್ಯ ಸ್ವರೂಪದ ಒಂದು ಛಾಯೆಯನ್ನೋ ? ಈ ಜಿಜ್ಞಾಸೆ ಸಾಮಾನ್ಯ ಮನುಷ್ಯರನ್ನು ಕಾಡುವಷ್ಟೇ ಗಾಢವಾಗಿ  ಜಗತ್ತಿನ ತತ್ವಶಾಸ್ತ್ರಜ್ಞರನ್ನು ಸಹ ಕಾಡುತ್ತಲೇ ಬಂದಿದೆ. ಮನುಷ್ಯ ತನ್ನ ಜೀವನದ ಹಲವು ಘಟ್ಟಗಳನ್ನು ದಾಟಿ ಒಂದು ಹಂತದಲ್ಲಿ ನಿಂತು ಹಿಂದಿರುಗಿ ನೋಡಿದಾಗ ವಿಸ್ಮೃತಿಯ ಕಣಜದಲ್ಲಿ ಶೇಖರಣೆಯಾದ ಎಲ್ಲ ಪ್ರಸಂಗಗಳೂ ಬಿಚ್ಚಿಕೊಳ್ಳಲಾರಂಭಿಸುತ್ತವೆ.

ಬೆಳಕಿನ ಆವರಣದೊಳಗೆ ನಿಂತಾಗ ಮನುಷ್ಯನಿಗೆ  ಗೋಚರಿಸುವ ತನ್ನದೇ ನೆರಳು ಗತ ಜೀವನದ ಹೆಜ್ಜೆಗಳ ಸಂಗ್ರಹಾಗಾರದಂತೆ ಕಾಣುವುದೂ ಸಹಜ. ಈ ಪರಿಕಲ್ಪನೆಯಲ್ಲೇ ಹೊರಹೊಮ್ಮುವ ದಕ್ಷಿಣ ಆಫ್ರಿಕಾದ ಒಂದು ಚಿಕ್ಕ ನಾಟಕವನ್ನು ಕನ್ನಡಕ್ಕೆ ಅಳವಡಿಸುವ ಪ್ರಯತ್ನವನ್ನು ಮೈಸೂರಿನ ಪರಿವರ್ತನ ರಂಗ ಸಮಾಜ ಯಶಸ್ವಿಯಾಗಿ ಮಾಡಿದೆ. ಅನ್ಯ ಜಗತ್ತಿನ ಒಂದು ಕಥಾ ವಸ್ತುವನ್ನು ಸ್ಥಳೀಯ ಸಮಾಜದ ಸೂಕ್ಷ್ಮತೆಗಳಿಗನುಸಾರವಾಗಿ ಅಳವಡಿಸುವ ಪ್ರಯತ್ನಗಳು ರಂಗಭೂಮಿಗೆ ಹೊಸತೇನಲ್ಲ. ಕನ್ನಡ ರಂಗಭೂಮಿಯೂ ಈ ರೀತಿಯ ಹಲವು ಪ್ರಯತ್ನಗಳನ್ನು ಮಾಡಿದೆ.

ಪರಿವರ್ತನ ಸಂಸ್ಥೆ ದಕ್ಷಿಣ ಆಫ್ರಿಕಾದ ನಾಟಕಕಾರ ಅತೊಲ್‌ ಫುಗಾರ್ಡ್‌ ಅವರ “ ದ ಶಾಡೋ ಆಫ್‌ ದ ಹಮ್ಮಿಂಗ್‌ ಬರ್ಡ್‌” ನಾಟಕವನ್ನು ಪ್ರೊ. ಎಸ್. ಆರ್‌. ರಮೇಶ್‌ ಅವರ ನಿರ್ದೇಶನದಲ್ಲಿ ಕನ್ನಡಕ್ಕೆ ತಂದಿದೆ. ತನ್ನ ಕಳೆದುಹೋದ ದಿನಗಳ ಹೆಜ್ಜೆಗಳನ್ನು, ತನ್ನ ಬದುಕಿನ ಕಠಿಣ ಹಾದಿಗಳನ್ನು, ತಾನು ಕಳೆದುಕೊಂಡ ಮನುಜ ಸಂಬಂಧಗಳನ್ನು, ಪ್ರೀತಿ-ವಾತ್ಸಲ್ಯದ ಭಾವಗಳನ್ನು ಸ್ಮೃತಿಪಟಲದಿಂದ ಹೊರಗೆಳೆದು ಪುನರಾವಲೋಕನ ಮಾಡಲು ಹಮ್ಮಿಂಗ್‌ ಬರ್ಡ್‌ ಹಕ್ಕಿಯ ನೆರಳು ಫುಗೋನನ್ನು ಪ್ರಚೋದಿಸುತ್ತದೆ.  ತನ್ನ ಬದುಕಿನ ದಿನಚರಿಯ ಪುಟಗಳನ್ನು ತಿರುವುತ್ತಾ ಹೋದಂತೆ ಕಳೆದುಹೋದ ಪ್ರೇಯಸಿಯ ನೆನಪುಗಳೂ ಸಹ ನಾಟಕಕಾರನನ್ನು ಗಾಢವಾಗಿ ಕಾಡುತ್ತದೆ. ಇವೆಲ್ಲವನ್ನೂ ಪ್ರೇರೇಪಿಸುವ ಒಂದು ನೆರಳು ಹೇಗೆ ಮನುಷ್ಯನ ವಾಸ್ತವವನ್ನು ತನ್ನದೇ ಆದ ಭ್ರಮೆಗಳಿಂದಾಚೆಗೆ ನೋಡುವಂತೆ ಮಾಡುತ್ತದೆ ಎನ್ನುವುದನ್ನು ನಾಟಕ ತೆರೆದಿಡುತ್ತದೆ.

ಪ್ಲೆಟೋನ ಕಲ್ಪಿತ ಸತ್ಯದ ಜಗತ್ತು

ಗ್ರೀಕ್‌ ತತ್ವಶಾಸ್ತ್ರಜ್ಞ ಪ್ಲೇಟೋ ತನ್ನ ಕ್ರಿಸ್ತಪೂರ್ವ ನಾಲ್ಕನೆ ಶತಮಾನದ ಮೇರು ಕೃತಿ “ ರಿಪಬ್ಲಿಕ್‌ ” ನಲ್ಲಿ ನೀಡುವ ಆಧ್ಯಾತ್ಮಿಕ ಚಿಂತನೆಗಳನ್ನು ತನ್ನ ನಾಟಕದಲ್ಲಿ ರೂಪಕವಾಗಿ ಬಳಸಿರುವ ಫುಗೋ ಬಂದಿಖಾನೆಯೊಂದರಲ್ಲಿ ಕೈದಿಗಳು ಗೋಡೆಯ ಮೇಲೆ ಕಾಣುವ ತಮ್ಮ ನೆರಳನ್ನೇ ವಾಸ್ತವ ಎಂದು ಭಾವಿಸುವುದರ ಹಿಂದಿನ ಮಾನವನ ಅಮಾಯಕ ಪ್ರಜ್ಞೆಯನ್ನು ಹೊರಗೆಡಹಲು ಯತ್ನಿಸುತ್ತಾನೆ. ಕೈದಿಯೊಬ್ಬ ಬಂಧಮುಕ್ತನಾಗಿ ಹೊರಪ್ರಪಂಚ ಬಂದ ನಂತರವಷ್ಟೇ ಆತನಿಗೆ ವಾಸ್ತವಗಳ ಅರಿವಾಗತೊಡಗುತ್ತದೆ. ನೆರಳು ಮಾನವನ ಭ್ರಮೆಯನ್ನು ಬಿಂಬಿಸುವ ಒಂದು ರೂಪಕವೇ ಹೊರತು ಅದರಿಂದಾಚೆಗೂ ಒಂದು ವಾಸ್ತವ ಜಗತ್ತು ಇದೆ  ಎಂದು ಪ್ರತಿಪಾದಿಸುವ ಪ್ಲೇಟೋ, ತನ್ನ ವಿಕಾಸದ ಹಾದಿಯಲ್ಲಿ ಮಾನವನು ತಾನು ಕಾಣುವುದಷ್ಟೇ ವಾಸ್ತವ ಎಂದು ಭಾವಿಸುವುದರ ಬದಲು ವಾಸ್ತವದ ಶೋಧದಲ್ಲಿ ತೊಡಗಬೇಕಾದ ವಿವೇಕದ ಬಗ್ಗೆ ಮಾತನಾಡುತ್ತಾನೆ. ಕತ್ತಲೆಯನ್ನು ಅಜ್ಞಾನದ ಸಂಕೇತ ಎಂದೇ ಭಾವಿಸುವ ಪ್ಲೇಟೋ, ಬಂದಿಖಾನೆಯಲ್ಲಿರುವ ಕೈದಿಗಳಿಗೆ ಕತ್ತಲೆಯ ಪರಿಚಯ ಮಾತ್ರವೇ ಇರುತ್ತದೆ, ಹಾಗಾಗಿ ಸಣ್ಣ ಬೆಳಕಿಂಡಿಯ ಮೂಲಕ ಕಾಣುವ ತಮ್ಮದೇ ನೆರಳನ್ನೇ ಅವರು ವಾಸ್ತವ ಎಂದೆಣಿಸಿರುತ್ತಾರೆ. ಈ ನೆರಳಿನಿಂದಾಚೆಗೆ ನೋಡಿದಾಗ ಅಲ್ಲಿ ತಮ್ಮದೇ ಆದ ಒಂದು ಲೌಕಿಕ ಸಂಸ್ಕೃತಿ ಜೀವಂತವಾಗಿರುವುದನ್ನು ಕಾಣಲು ಸಾಧ್ಯ. ಆದರೆ ಹೀಗೆ ತಮ್ಮದೇ ನೆರಳಿನಿಂದಾಚೆಗಿನ ಪ್ರಪಂಚವನ್ನು ವ್ಯಾಖ್ಯಾನಿಸುವವರನ್ನು ಜನಸಮೂಹ ನಂಬುವುದೂ ಕಷ್ಟ ಎಂದು ಪ್ಲೇಟೋ ಪ್ರತಿಪಾದಿಸುತ್ತಾನೆ.

ಪ್ಲೇಟೋನ ಜಗತ್ತು ಕಲ್ಪಿತ ಸತ್ಯ ಎಂಬ ತಾತ್ವಿಕತೆ, ಶಂಕರಾಚಾರ್ಯರ ಜಗತ್ತು ಒಂದು ಮಿಥ್ಯೆ ಎಂಬ ವಾದದ ನಡುವೆ ವರ್ತಮಾನದ ಜಗತ್ತನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆಯಂತೂ ಇದ್ದೇ ಇದೆ. ಅಧ್ಯಾತ್ಮ ಜಗತ್ತಿನ ಈ ಜಿಜ್ಞಾಸೆಗಳನ್ನೇ ಆಧರಿಸಿದ ದ ಶಾಡೋ ಆಫ್‌ ದ ಹಮ್ಮಿಂಗ್‌ ಬರ್ಡ್‌ ನಾಟಕವನ್ನು ಪ್ರೊ. ಎಸ್.ಆರ್.‌ ರಮೇಶ್‌ ಕನ್ನಡಕ್ಕೆ ಅಳವಡಿಸಿ “ ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು ” ಎಂಬ ಹೆಸರಿನಲ್ಲಿ ಕನ್ನಡ ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ಪ್ಲೇಟೋ ಪ್ರತಿಪಾದಿಸುವ ತಾತ್ವಿಕ ರೂಪಕವನ್ನು ಫುಗೋ ತಾನು ಕಂಡ ಹಕ್ಕಿಯ ನೆರಳಿನಲ್ಲಿ ಕಾಣುವಾಗ ಉಂಟಾದ ಜಿಜ್ಞಾಸೆ ಮತ್ತು ತಳಮಳಗಳನ್ನು ಕನ್ನಡದ ನೆಲದ ಗುಣಕ್ಕೆ ತಕ್ಕಂತೆ ಅಳವಡಿಸುವ ತಮ್ಮ ಪ್ರಯತ್ನದಲ್ಲಿ ರಮೇಶ್‌ ಯಶಸ್ವಿಯಾಗಿದ್ದಾರೆ. ಮೂಲ ಕಥಾ ಹಂದರ ಯಾವುದೇ ಭೂಪ್ರದೇಶದಲ್ಲಿ ಹರಡಿಕೊಂಡಿದ್ದರೂ ಅತನ್ನ ಸ್ಥಳೀಕರಿಸುವಾಗ ಇರಬೇಕಾದ ಬೌದ್ಧಿಕ ಜಾಗ್ರತೆ ಮತ್ತು ಸೃಜನಶೀಲ ಜಾಣ್ಮೆಯನ್ನು ಪ್ರೊ. ಎಸ್.ಆರ್.‌ ರಮೇಶ್‌ ತಮ್ಮ ನಾಟಕದ ಮೂಲಕ ತೋರಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.

 ಕಥಾ ಹಂದರದ ವಿಸ್ತರಣೆ

ಮಾನವ ಸಂಬಂಧಗಳು ಬೆಸೆದುಕೊಳ್ಳುತ್ತಾ ಹೋಗುವ ಹಾದಿಯಲ್ಲಿ ಎಷ್ಟೋ ಘಟನೆಗಳು, ಪ್ರಸಂಗಗಳು ಸಿಹಿ-ಕಹಿಗಳ ನಡುವೆ ಹರಿದು ಹಂಚಿಹೋಗುತ್ತಾ ಬದುಕಿನ ಮೆಟ್ಟಿಲುಗಳನ್ನು ಕಟ್ಟುತ್ತಾ ಹೋಗುತ್ತವೆ. ಒಂದು ಪುಸ್ತಕದ ಹಾಳೆಯ ಮೇಲಿನ ಚಿತ್ರ ಅಥವಾ ಯಾವುದೇ ವಸ್ತು ಸಾಂಕೇತಿಕವಾದರೂ ಅದು ತನ್ನದೇ ಆದ ಅಸ್ತಿತ್ವ ಹೊಂದಿರುತ್ತದೆ. ಹಾಗೆಯೇ ಆ ವಸ್ತುವನ್ನು ಮೂಡಿಸಿದ ವ್ಯಕ್ತಿಯ ಒಂದು ಅನುಭಾವದ ಅಥವಾ ಅನುಭವಾತ್ಮಕ ಚಿತ್ರಣವೂ ಆಗಿರುತ್ತದೆ. ಈ ಜಿಜ್ಞಾಸೆಯ ನಡುವೆಯೇ ಮನುಷ್ಯ ತನ್ನ ಬದುಕಿನಲ್ಲಿ ಕಳೆದುಹೋದ ಕ್ಷಣಗಳನ್ನು ಮೆಲುಕು ಹಾಕುವಾಗ ತನ್ನದೇ ನೆರಳಿನಿಂದ ಭ್ರಮಾಧೀನನಾಗುತ್ತಾ ಹೋಗುತ್ತಾನೆ. ಆ ನೆರಳಿನಲ್ಲೇ ತನ್ನ ಬದುಕಿನ ಕ್ಷಣಗಳನ್ನು ಕಂಡುಕೊಳ್ಳುತ್ತಾ ಅದರಿಂದಾಚೆಗಿನ ಬದುಕಿನ ವಾಸ್ತವಗಳಿಗೆ ಮುಖಾಮುಖಿಯಾಗುತ್ತಾ ನೆನಪಿನ ಗಣಿಯಲ್ಲಿ ಮುಳುಗಿಹೋಗುತ್ತಾನೆ. ಫುಗೋ ಅವರ ಹಮ್ಮಿಂಗ್‌ ಬರ್ಡ್‌ ನಾಟಕವನ್ನು ಕನ್ನಡಕ್ಕೆ ಅಳವಡಿಸುವಾಗ ನಿರ್ದೇಶಕರು ಪತ್ರಕರ್ತನೊಬ್ಬ ನಡೆದು ಬಂದ ಹಾದಿಯನ್ನು, ಎದುರಿಸಿದ ತಾಕಲಾಟಗಳನ್ನು, ಅನುಭವಿಸಿದ ತಲ್ಲಣ-ತಳಮಳಗಳನ್ನು ನೆನೆಯುವುದನ್ನು ಪ್ರೇಕ್ಷಕರ ಮುಂದಿಡುತ್ತಾ ಹೋಗುತ್ತಾರೆ. ಭಾರತದ ಸಂದರ್ಭದಲ್ಲಿ 1975ರ ತುರ್ತುಪರಿಸ್ಥಿತಿ ಹೇಗೆ ಪತ್ರಿಕೋದ್ಯಮದ ಪರಿಚಾರಕರನ್ನು ಗಾಢವಾಗಿ ಕಾಡಿದ್ದೇ ಅಲ್ಲದೆ, ತಮ್ಮ ವೃತ್ತಿ ಬದುಕಿನ ಹಾದಿಯನ್ನೇ ಬದಲಿಸಿದ ಚಿತ್ರಣವನ್ನು “ ಅಂಗಳದಲ್ಲಿ,,,,,” ನಾಟಕ ವಿಹಂಗಮವಾಗಿ ಚಿತ್ರಿಸುತ್ತದೆ.

ಹಕ್ಕಿ ಪ್ರಪಂಚದಲ್ಲಿ ಅತಿ ಹೆಚ್ಚಿನ ಆಸಕ್ತಿ ಹೊಂದಿರುವ ಪತ್ರಕರ್ತ ನಿಜಗುಣ ಪ್ರಸಾದ ತನ್ನ ಬದುಕಿನ ಹಾದಿಯಲ್ಲಿ ಅನುಕರಿಸುವುದು ಬೇರೆಯದೇ ಪ್ರಪಂಚವನ್ನು. ಪತ್ರಕರ್ತನ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ತನ್ನ ಅಲೆಮಾರಿ ಜೀವನಕ್ಕೆ ಒಗ್ಗಿಹೋಗುವ ನಿಜಗುಣ ಪ್ರಸಾದ ತನ್ನ ಓದು, ಅಧ್ಯಯನ ಹಾಗೂ ಸುತ್ತಲಿನ ಸಮಾಜದ ಸಕಲ ವಿದ್ಯಮಾನಗಳನ್ನೂ ವಿಶ್ಲೇಷಿಸುವ, ವ್ಯಾಖ್ಯಾನಿಸುವ, ದಾಖಲಿಸುವ ಒಂದು ವೃತ್ತಿಯಲ್ಲಿ ತನ್ನ ಹೃದಯದ ಮೂಲೆಯಲ್ಲಿ ಅಡಗಿದ್ದ ಹಕ್ಕಿ ಪ್ರಪಂಚದ ಕನಸುಗಳನ್ನೂ ಜೀವಂತವಾಗಿರಿಸಿಕೊಂಡೇ ಬದುಕು ಸವೆಸುತ್ತಾನೆ. ಈ ಬದುಕಿನ ಹಾದಿಯಲ್ಲಿ ತಾನು ಪ್ರೀತಿಸಿದ ಒಂದು ಜೀವದೊಡನೆ ಶಾಶ್ವತವಾದ ಸಂಬಂಧವನ್ನು ರೂಢಿಸಿಕೊಳ್ಳಲೂ ಸಾಧ್ಯವಾಗದ ನಿಜಗುಣ ಪ್ರಸಾದ ತಾನು ಕಳೆದುಕೊಂಡ ಪ್ರೀತಿ ವಾತ್ಸಲ್ಯಗಳ ಛಾಯೆಯನ್ನು ತನ್ನ ಅಣ್ಣನ ಮಗಳು ಸೀಮಂತಿಯ ಆಟೋಟಗಳಲ್ಲಿ, ಚಲನಶೀಲತೆಯಲ್ಲಿ, ಹುಡುಗಾಟದಲ್ಲಿ ಕಾಣತೊಡಗುತ್ತಾನೆ.

ಅಣ್ಣನ ಮಗಳೊಡಗಿನ ಒಡನಾಟದಲ್ಲಿ ನಿಜಗುಣ ಪ್ರಸಾದ ತನ್ನ ಬದುಕಿನ ಕಳೆದುಹೋದ ಕ್ಷಣಗಳನ್ನು ಮರೆತು ಹೊಸ ಬದುಕನ್ನು ಕಾಣುವತ್ತ ಸಾಗುತ್ತಾನೆ. ತನ್ನ ನೆರಳಿನಲ್ಲಿ ಕಾಣುವ ಗತ ಬದುಕಿಗಿಂತಲೂ ತನ್ನೆದುರು ಚಲನಶೀಲತೆಯಿಂದಿರುವ ಒಂದು ಪ್ರೀತಿಯ ಕುಡಿಯಲ್ಲಿ ಜೀವನದ ವಾಸ್ತವತೆಯನ್ನು ಕಾಣುವ ನಿಜಗುಣ ಪ್ರಸಾದ ತಾನು ರೂಪಿಸಿಕೊಂಡ ಭ್ರಮೆ ಹಾಗೂ ತನ್ನ ಮುಂದಿನ ವಾಸ್ತವದ ನಡುವೆ ಇರುವ ಅಂತರವನ್ನು ಹಕ್ಕಿಯ ನೆರಳಿನ ಮೂಲಕ ಗ್ರಹಿಸಲೆತ್ನಿಸುತ್ತಾನೆ. ಪತ್ರಕರ್ತನಾಗಿ, ಹಕ್ಕಿ ಪ್ರೇಮಿಯಾಗಿ ತಾನು ನೋಡಿದ ಜಗತ್ತಿನ ವಿಹಂಗಮ ನೋಟಗಳೆಲ್ಲವೂ ಕಳೆದು ಹೋದ ವಾಸ್ತವಗಳೋ ಅಥವಾ ವರ್ತಮಾನದ ಭ್ರಮೆಯೋ ಎಂಬ ಜಿಜ್ಞಾಸೆಯಲ್ಲಿ ತನ್ನ ಗತ ಬದುಕಿನ ಪುಟಗಳನ್ನು ತೆರೆದು ನೋಡುವಾಗ ನಿಜಗುಣ ಪ್ರಸಾದನಿಗೆ ತಾನು ದಾಟಿ ಬಂದ ಹಲವು ಸಂಕೀರ್ಣ ಸವಾಲುಗಳು, ಜಟಿಲ ಸಿಕ್ಕುಗಳು ಹಾಗೂ ಗಂಭೀರ ಸಮಸ್ಯೆಗಳೆಲ್ಲವೂ ನೆನಪಿನ ಸುರುಳಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತನ್ನ ನೆರಳನ್ನು ನಿಜ ಎಂದೇ ಭ್ರಮಿಸಿ ಹಿಂಬಾಲಿಸುವ ಅಂಬೆಗಾಲಿನ ಮಗುವಿನಂತೆ ಮನುಷ್ಯ ತನ್ನ ವೃದ್ಧಾಪ್ಯದಲ್ಲೂ ನೆರಳನ್ನು ನಿಜ ಎಂದೇ ಭ್ರಮಿಸುವಾಗ ಅದರ ಹಿಂದಿನ ವಾಸ್ತವಗಳು ಮನುಷ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ ವರ್ತಮಾನಕ್ಕೆ ತಂದು ನಿಲ್ಲಿಸುತ್ತವೆ.

 ರಂಗರೂಪದ ವಿಶಿಷ್ಟ ಅನಾವರಣ

ಈ ತಾಕಲಾಟಗಳನ್ನು ಪ್ರೊ. ಎಸ್.‌ ಆರ್.‌ ರಮೇಶ್‌ ತಮ್ಮ “ ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು” ನಾಟಕದಲ್ಲಿ ಮನಮುಟ್ಟುವಂತೆ ಬಿಡಿಸಿಡುತ್ತಾರೆ. ಆರಂಭದಲ್ಲಿ ಬಹುಮಟ್ಟಿಗೆ ಏಕಪಾತ್ರಾಭಿನಯದ ನಾಟಕದಂತೆ ಕಾಣುವ “ಅಂಗಳದಲ್ಲಿ,,,,,” ತದನಂತರ ಸೀಮಂತಿಯ ಲವಲವಿಕೆಯ ಪ್ರವೇಶದೊಂದಿಗೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಗತಕಾಲದ ಛಾಯೆಯಿಂದ ಹೊರಬರಲು ಮತ್ತು ಅಲ್ಲಿ ತಾನು ಕಳೆದುಕೊಂಡ ಅಮೂಲ್ಯ ಮನುಜ ಸಂಬಂಧಗಳನ್ನು ಮರಳಿಸ್ಥಾಪಿಸುವ ಒಂದು ಭವಿಷ್ಯದ ದೀಪ್ತಿಯಾಗಿ ಸೀಮಂತಿ ಅವನಿಗೆ ಕಾಣತೊಡಗುತ್ತಾಳೆ. ಅವನಲ್ಲಿ ಸುಪ್ತವಾಗಿಹೋಗಿದ್ದ ಅಥವಾ ಕಳೆದೇ ಹೋಗಿದ್ದ ಅಂತಃಕರಣ ಹಾಗೂ ಪ್ರೀತಿವಾತ್ಸಲ್ಯಗಳ ಭಾವನೆಯನ್ನು ಚಿಗುರಿಸಲು ಸೀಮಂತಿಯ ಚಡಪಡಿಕೆಯ, ಲವಲವಿಕೆಯ ಬದುಕು ಸೇತುವೆಯಾಗಿ ಪರಿಣಮಿಸುತ್ತದೆ. ವೃತ್ತಿ ಜೀವನದಲ್ಲಿ ಕಳೆದುಕೊಂಡಿದ್ದನ್ನು ವ್ಯಕ್ತಿಗತ ಬದುಕಿನಲ್ಲಿ ಮರಳಿ ಗಳಿಸಲು ಸಾಧ್ಯ ಎನ್ನುವುದನ್ನು ಗೋಡೆಯ ಮೇಲಿನ ಮಂಗಳ ಹಕ್ಕಿಯ ರೂಪದಲ್ಲಿ ನಿಜಗುಣ ಪ್ರಸಾದ್‌ ಕಾಣುತ್ತಾನೆ.

ಒಂದು ಕ್ಷಣ ಹಾದು ಹೋಗುವ ಪ್ಲೇಟೋ ಪಾತ್ರಧಾರಿಯನ್ನು ಹೊರತುಪಡಿಸಿ ಎರಡೇ ಪಾತ್ರಗಳ ಮೂಲಕ ಒಂದು ಗಂಭೀರ ಜೀವನದರ್ಶನದ ಕಥಾ ಹಂದರವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವಲ್ಲಿ ರಮೇಶ್‌ ಯಶಸ್ವಿಯಾಗಿದ್ದಾರೆ. ನಟ ರವಿಕಲಾಬ್ರಹ್ಮ ಅವರ ತನ್ಮಯತೆ ಮತ್ತು ತಲ್ಲೀನತೆಯಿಂದ ನಿಜಗುಣ ಪ್ರಸಾದ ಎಂಬ ಪತ್ರಕರ್ತನನ್ನು ರಂಗದ ಮೇಲೆ ತಂದು ನಿಲ್ಲಿಸುತ್ತಾರೆ. ಇವರ ಅದ್ಭುತ ನಟನೆಯ ಹೂರಣಕ್ಕೆ ಪೂರಕ ಸಿಹಿ ಸೇರಿಸುವಂತೆ ಸೀಮಂತಿ ಪಾತ್ರದಲ್ಲಿ ಪೂಜಾ. ಪಿ. ಅವರು ತಮ್ಮ ಸಹಜಾಭಿನಯದ ಮೂಲಕ ಮನಸೆಳೆಯುತ್ತಾರೆ. ಹೆಚ್ಚಿನ ರಂಗಸಜ್ಜಿಕೆಯ ಸವಾಲುಗಳಿಲ್ಲದೆ ಸರಳ ರೂಪದಲ್ಲಿ ಒಂದು ಗಂಭೀರ ನಾಟಕವನ್ನು ಕನ್ನಡಿಗರಿಗೆ ನೀಡುವಲ್ಲಿ ಪರಿವರ್ತನ ತಂಡ ಹಾಗೂ ಪ್ರೊ. ಎಸ್.ಆರ್.‌ ರಮೇಶ್‌ ಸಫಲರಾಗಿದ್ದಾರೆ. ಒಂದೆರಡು ಪ್ರಸಂಗಗಳಲ್ಲಿ ಏಕತಾನತೆಯ ಛಾಯೆ ಕಾಡುವುದಾದರೂ ಒಟ್ಟಾರೆ ನಾಟಕದ ಸ್ಥಾಯಿ ಭಾವಕ್ಕೆ ಚ್ಯುತಿ ಬಾರದಂತೆ ರಂಗದ ಮೇಲಿನ ನಟರು ನಿಭಾಯಿಸಿರುವುದು ಮೆಚ್ಚತಕ್ಕ ಅಂಶ.

ದಕ್ಷಿಣ ಆಫ್ರಿಕಾದ ಒಂದು ನಾಟಕವನ್ನು ಕನ್ನಡಕ್ಕೆ ಅಳವಡಿಸಿ ಸ್ಥಳೀಕರಣಗೊಳಿಸುವಾಗ ಸಮಕಾಲೀನ ಭಾರತದ ಒಂದು ಚಿತ್ರಣವನ್ನು ಪ್ರೇಕ್ಷಕರ ಮುಂದಿಡುವ ಮೂಲಕ “ ಅಂಗಳದಲ್ಲಿ,,,,,” ನಾಟಕ ವರ್ತಮಾನದ ವಾಸ್ತವಗಳಿಗೆ ತೆರೆದುಕೊಳ್ಳುತ್ತದೆ. ಭಾರತದ ಯುವ ಸಮಾಜ ವ್ಯವಸ್ಥೆಯ ಬಂದಿಗಳಾಗಿ ಕತ್ತಲಿನಲ್ಲಿರುವಾಗ, ನವ ಉದಾರವಾದದ ಸಣ್ಣ ಕಿಂಡಿಯೊಂದು ಗೋಡೆಯ ಮೇಲೆ ಮೂಡಿಸುವ ನೆರಳು ತಮ್ಮದೇ ಎಂದು ಭಾವಿಸುತ್ತಾ ಭ್ರಮಾಧೀನವಾಗುತ್ತಿರುವಾಗ, ಆ ನೆರಳಿನಿಂದಾಚೆಗಿನ ಮತ್ತೊಂದು ಮುಖದ ಭಾರತದ ಚಿತ್ರಣವನ್ನು ಜಂಗಮರೂಪದ “ ಮಂಗಳ ಹಕ್ಕಿ”ಯ ನೆರಳಿನ ರೂಪಕದ ಮೂಲಕ ನೀಡುವ ವಿಹಂಗಮ ವಿನೂತನ ಪ್ರಯೋಗವನ್ನು ಪ್ರೊ. ಎಸ್.ಆರ್.‌ ರಮೇಶ್‌ ಶ್ರದ್ಧೆಯಿಂದ ಮಾಡಿ ಕನ್ನಡ ರಂಗಭೂಮಿಗೆ ಒಂದು ಹೊಸ ಕಾಣಿಕೆಯನ್ನು ನೀಡಿದ್ದಾರೆ. ಇದನ್ನು ಮತ್ತಷ್ಟು ಸಮಕಾಲೀನಗೊಳಿಸುವತ್ತ ಯೋಚಿಸಬಹುದೇನೋ ? ಈ ಯಶಸ್ವಿ ಪ್ರಯತ್ನಕ್ಕಾಗಿ ಪ್ರೊ. ಎಸ್.ಆರ್. ರಮೇಶ್‌, ಪರಿವರ್ತನ ರಂಗ ಸಮಾಜದ ಮಾಧವಕರೆ ಮತ್ತು ನಾಟಕವನ್ನು ಪ್ರೇಕ್ಷಣೀಯವಾಗಿಸಿದ ನಟರು, ಕಲಾವಿದರು ಅಭಿನಂದನಾರ್ಹರು.‌

ರಂಗಾಸಕ್ತರನ್ನು ಸೆಳೆಯುವ “ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು” ಎಲ್ಲರೂ ನೋಡಬೇಕಾದ ವಿನೂತನ ಪ್ರಯೋಗ.

‍ಲೇಖಕರು avadhi

October 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: