ಚಂದ್ರಪ್ರಭ ಕಠಾರಿ ನೋಡಿದ- ಜವಾನ್

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ – ಜವಾನ್.

ಚಂದ್ರಪ್ರಭ ಕಠಾರಿ

—-

ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ ಪ್ರದರ್ಶನಗೊಂಡು ನೂರಾರು ಕೋಟಿಗಳ ಲಾಭವನ್ನು ಗಳಿಸಿದವು. ಮಿಸ್ಸಾಯ(messiah) ಅಥವಾ ಸರ್ವರ ಸಕಲ ಸಂಕಷ್ಟಗಳಿಗೆ ಏಕೈಕ ನಿವಾರಕನಾಗಿ ರೂಪಿತವಾಗಿರುವ ಇಂತಹ ಸಿನಿಮಾಗಳಲ್ಲಿ ಹಿಂಸೆ, ರಕ್ತಪಾತ ಕಣ್ಣಿಗೆ ರಾಚುವಷ್ಟು ಅತಿಯಾಗಿ ಕಂಡು ಬಂದಿದ್ದರೂ ಪ್ರೇಕ್ಷಕರು ಅದನ್ನೇ ಮನೋರಂಜನೆಯಾಗಿ ಸಂಭ್ರಮಸಿದ್ದು ಸಮಾಜೊ ಮನೋವಿಜ್ಞಾನ ಅಧ್ಯಯನಕ್ಕೆ ಒಳಪಡುವಂಥ ವಿಷಯ.

ದುಡ್ಡು ಮಾಡಲೆಂದೇ ತಯಾರಾಗುವ ಇಂತಹ ಜನಪ್ರಿಯ, ಮೇನ್‌ ಸ್ಟ್ರೀಮ್‌ ಅಥವಾ ವ್ಯಾಪಾರಿ ಸಿನಿಮಾಗಳಲ್ಲಿ ಕಥಾವಸ್ತುಗಳು ಪ್ರೇಕ್ಷಕರಿಗೆ ರುಚಿಸುವಂತಾದ್ದೇ ಆಗಿರುತ್ತದೆ. ಅವುಗಳು ಕಪೋಲಕಲ್ಪಿತ, ಅವಾಸ್ತವಿಕ ಕತೆಯೆನ್ನಿಸಿದರೂ ಆಳದಲ್ಲಿ ಅವು ಆ ಕಾಲದ ಜನಮಾನಸದಿಂದಲೇ ಹೆಕ್ಕಿ ತೆಗೆದವೇ ಆಗಿರುತ್ತದೆ. 

ಹಣ ಗಳಿಕೆಗಾಗಿಯೇ ಮಾಡಿದ ಇಂತಹ ಪಕ್ಕಾ ವ್ಯಾಪಾರಿ ಸಿನಿಮಾವನ್ನೂ ಕೇವಲ 

ಮನರಂಜನೆಯಾಗಿ ಮಾತ್ರವಲ್ಲದೆ ಕಲೆಯಾಗಿ ನೋಡುತ್ತ ಅದರಿಂದ ಹೊರಹೊಮ್ಮುವ ಸಾಮಾಜಿಕ, ರಾಜಕೀಯ ನೆಲೆಗಟ್ಟನ್ನು ವಿಶ್ಲೇಷಿಸುವ, ಸಿನಿಮಾವನ್ನು ತೀವ್ರವಾಗಿ ಪ್ರೀತಿಸುವ ಸಿನಿಮಾ ಅಧ್ಯಯನಕಾರರು, ಅಂತಹ ಸಿನಿಮಾಗಳ ಬಗ್ಗೆ “ಬಹು ಮತ ಪಡೆದು ಅಧಿಕಾರ ಹಿಡಿದ ಆಳುವ ಪ್ರಭುತ್ವದ ಮನೋಧೋರಣೆಗಳನ್ನು ಆಧರಿಸಿ ಚಿತ್ರಕತೆಯನ್ನು ಹೊಸೆದು, ಅತಿಯಾಗಿ ಉತ್ರೇಕ್ಷಿಸಿದ ದೃಶ್ಯಕಟ್ಟುಗಳನ್ನು ಜೋಡಿಸಿ ಮಾಡಿದ ಸಿನಿಮಾಗಳು ಜನ ಮೆಚ್ಚುಗೆಯನ್ನು ಗಳಿಸುವುದಲ್ಲದೆ, ಹಾಕಿದ ಬಂಡವಾಳಕ್ಕಿಂತ ಹಲವು ಪಟ್ಟು ಹಣವನ್ನು ದುಡಿಯುತ್ತವೆ ಎನ್ನುವುದನ್ನು ಮನದಲ್ಲಿಟ್ಟು ನಿರ್ಮಾಪಕರು ಇಂತಹ ಬಿಗ್‌ ಬಜೆಟ್‌ ಸಿನಿಮಾಗಳನ್ನು ತಯಾರಿಸುತ್ತಾರೆ ” ಎನ್ನುತ್ತಾರೆ.

ಹಾಗೆಯೇ, ಆಳುವ ಪ್ರಭುತ್ವದ ನಾಡಿ ಮಿಡಿತವನ್ನು ಲೆಕ್ಕಾಚಾರವಾಗಿಸಿ ಮಾಡಿದ ಸಿನಿಮಾಗಳು ಒಂದೆಡೆಯಾದರೆ, ಪ್ರಭುತ್ವದ ಜನವಿರೋಧಿ ನಡೆಗಳಿಂದ ರೋಸೆದ್ದು ಮನದಲ್ಲಿಯೇ ಸಿಟ್ಟು, ಆಕ್ರೋಶ, ಜಿಗುಪ್ಸೆಗಳನ್ನು ಒಟ್ಟಿಕೊಂಡು ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಸಂವೇದನೆಯ ಪ್ರೇಕ್ಷಕರನ್ನು ಮನದಲ್ಲಿಟ್ಟು, ಆ ಕಾಲಘಟ್ಟದಲ್ಲಿ ಸರಕಾರದ ತಪ್ಪುನಡೆಗಳಿಂದ ಆದ ಅವಾಂತರಗಳನ್ನು ಚಿತ್ರಕತೆಯಲ್ಲಿ ಸೇರಿಸಿ ಹಲವು ಪಟ್ಟು ಲಾಭ ಮಾಡುವ ಉದ್ದೇಶದಿಂದ ಸಿನಿಮಾ ತಯಾರಿಸುವ ಇನ್ನೊಂದು ಕ್ರಮವು ಇದೆ.

ಇಂತಹ ಸಿನಿಮಾ ನಿರ್ಮಾಣದಲ್ಲಿ ಸಮಸ್ಯೆಗಳಿಗೆ ವಾಸ್ತವದಲ್ಲಿ ಅನುಷ್ಠಾನಗೊಳಿಸಬಹುದಾದ,  ಜನಪರವಾದ ಯಾವ  ಪರಿಹಾರಗಳು, ಸೂಕ್ಷ್ಮ ಸಂವೇದನೆಗಳು ಇರುವುದಿಲ್ಲ. ಬದಲಿಗೆ ಚಿತ್ರಮಂದಿರದಲ್ಲಿದ್ದಷ್ಟು ಕಾಲ, ಬೆಳ್ಳಿ ಪರದೆಯ ಮೇಲೆ ಬೆಳಕಿನಾಟದ ತಾಂತ್ರಿಕತೆ ಮೆರೆದಾಟದಲ್ಲಿ ದೇಶದ ಬವಣೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಂತೆ ಭಾವವನ್ನು ಉಂಟು ಮಾಡಿ, ಸಿನಿಮಾ ದುಡ್ಡು ಮಾಡುವುದೇ ಮುಖ್ಯ ಗುರಿಯಾಗಿರುತ್ತದೆ.

ಸರ್ವಾಧಿಕಾರಿ, ಪುರುಷ ಅಹಂಕಾರವನ್ನು ಮೆರೆಯುವ ಪೆಟ್ರಿಆರ್ಕಿ ಸಮಾಜವನ್ನು ವೈಭವೀಕರಿಸುವ ಮೊದಲ ಮ್ಯಾಚೊ ಮಾದರಿ ಸಿನಿಮಾ, ಸಮಾಜದ ಮೇಲೆ ಉಂಟು ಮಾಡುವ ದುಷ್ಪರಿಣಾಮಕ್ಕಿಂತ ಎರಡನೇ ಮಾದರಿ ಸಿನಿಮಾಗಳು ಸಮಾಜಮುಖಿ, ಜನರ ಅಂತರಂಗವನ್ನು ತಟ್ಟುವ ಜನಪ್ರಿಯ ಸಿನಿಮಾಗಳಾಗಿ ಸಮಾಜಕ್ಕೆ ಎಷ್ಟೋ ಪಾಲು  ಆರೋಗ್ಯಕರವಾದವು.

ಇಂತಹ ಸಿನಿಮಾ ಸಾಲಿಗೆ ಸೇರುವ ಪ್ರಸ್ತುತ ಬಿಡುಗಡೆಯಾಗಿರುವ, ತಮಿಳು ಚಿತ್ರರಂಗದ ಅಟ್ಲೀ ಕುಮಾರ್‌ ನಿರ್ದೇಶನದ ʼಜವಾನ್‌ʼ ಸಿನಿಮಾವು ಸೇರುತ್ತದೆ.  

ಜನರ ಬೆಂಬಲದಿಂದ ಗದ್ದುಗೆ ಹಿಡಿದ ಭ್ರಷ್ಟ ರಾಜಕಾರಣಿಗಳನ್ನು ಮತ್ತು ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ ಬಂಡವಾಳಶಾಹಿಗಳನ್ನು ತನ್ನದೇ ತಂತ್ರದಲ್ಲಿ ಎದುರಿಸಿ, ಬೆದರಿಕೆ ಹುಟ್ಟುಹಾಕಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವ ರಾಬಿನ್‌ ಹುಡ್‌ ಮಾದರಿ ಕತೆಯುಳ್ಳ ಸಿನಿಮಾ ʼಜವಾನ್ʼ.

ಸಿನಿಮಾದ ಆರಂಭದಲ್ಲಿ ನಾಯಕ ಮೆಟ್ರೊ ರೈಲನ್ನು ಹೈಜಾಕ್‌ ಮಾಡಿ,  ಅಲ್ಲಿರುವ ಪ್ರಯಾಣಿಕರ ಪ್ರಾಣಹರಣ ಮಾಡುವ ಬೆದರಿಕೆಯನ್ನು ಆಳುವ ಸರಕಾರದ ಮಂತ್ರಿಗೆ ಒಡ್ಡುತ್ತಾನೆ.  ಕಾರಣ –        ಬಂಡವಾಳಶಾಹಿಗಳು ಮಾಡಿದ್ದ ಸಾವಿರಾರು ಕೋಟಿ ಬ್ಯಾಂಕ್‌ ಸಾಲವನ್ನು ಮನ್ನಾ ಮಾಡಿದ್ದ̈ ಸರ್ಕಾರ, ಬಡರೈತನೊಬ್ಬ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಬಾರದೆ  ಕೇವಲ ಸಾವಿರ ರೂಪಾಯಿಗಳಷ್ಟು ಸಾಲವನ್ನು ಮರುಪಾವತಿ ಮಾಡಲು ಸೋತಾಗ ಅವನ ಟ್ರಾಕ್ಟರ್‌ ಅನ್ನು ನಿರ್ದಾಕ್ಷಿಣ್ಯವಾಗಿ ಜಪ್ತಿ ಮಾಡಿರುತ್ತದೆ. ಅಂಥ ರೈತರುಗಳ ಸಾಲವನ್ನು ಕೂಡಲೇ ಮನ್ನಾ ಮಾಡಲು ಬೇಡಿಕೆ ಇಡುತ್ತಾನೆ. ಈ ದೃಶ್ಯಗಳು ಇಂದು ನಮ್ಮ ದೇಶದಲ್ಲಿ ವ್ಯಾಪಾರ ಮಾಡುತ್ತ, ಸಾರ್ವಜನಿಕ ಬ್ಯಾಂಕುಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಾಲ ತೆಗೆದು ಅದನ್ನು ಮರು ಪಾವತಿಸದೆ ದೇಶದಿಂದ ಕಾಲ್ಕತ್ತಿರುವ ಉದ್ಯಮಿಗಳನ್ನು ಕುರಿತಂತೆ ಭಾಸವಾಗುತ್ತದೆ.

ಮತ್ತೊಂದು ದೃಶ್ಯ ವಿಡಂಬನಾತ್ಮಕವಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಅತ್ಯಾಧುನಿಕಗೊಳಿಸಿದ್ದೇನೆ ಎಂದು ಬುರುಡೆ ಭಾಷಣ ಮಾಡುತ್ತಿದ್ದ ಆರೋಗ್ಯಮಂತ್ರಿಯ ಎದೆಗೆ ಗುಂಡು ಹೊಡೆದು, ಅವನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದನ್ನು ತಡೆದು, ಯಾವುದೇ ಸೌಕರ್ಯವಿರದ ಸರ್ಕಾರಿ ಆಸ್ಪತ್ರೆಗೆ ನಾಯಕ ಕರೆತರುತ್ತಾನೆ. ತುರ್ತು ಚಿಕಿತ್ಸೆಗೆ ಬೇಕಾದ ಕನಿಷ್ಟ ಆಕ್ಸಿಜೆನ್‌ ಸೌಲಭ್ಯವಿರದ ಆಸ್ಪತ್ರೆಯಲ್ಲಿ ತನ್ನ ಪ್ರಾಣ ಉಳಿಸಿಕೊಳ್ಳಲು ಮಂತ್ರಿ ಗೋಗೆರೆಯುವ ಸನ್ನಿವೇಶವನ್ನು ಸೃಷ್ಟಿಸಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಆಧುನಿಕಗೊಳಿಸುವಂತೆ ಬೇಡಿಕೆಯಿಡುತ್ತಾನೆ.

ಈ ಬಡ ಸರ್ಕಾರಿ ಆಸ್ಪತ್ರೆಯ ದೃಶ್ಯಗಳು ನೋಡುಗರಿಗೆ ಕಳೆದ ವರ್ಷ ಉತ್ತರಪ್ರದೇಶದ ಗೊರಕ್‌ ಪುರ್‌ ನ ಬಿಡಿಎಸ್‌ ಆಸ್ಪತ್ರೆಯಲ್ಲಿ ಆಕ್ಸಿಜೆನ್‌ ಇಲ್ಲದೆ 63 ಮಕ್ಕಳು ಸೇರಿದಂತೆ 81 ಜನರು ಮೃತಪಟ್ಟಿದ್ದು ಹಾಗೆಯೇ ಚಾಮರಾಜನಗರದಲ್ಲಿ 23 ಮಂದಿ ಸತ್ತದ್ದು, ಕೊರೊನಾ ಕಾಲದಲ್ಲಿ ದೇಶದಲ್ಲಿ ಸಾವಿರಾರು ಜನ ಆಕ್ಸಿಜೆನ್‌ ಸಿಗದೆ ಶವವಾಗಿದ್ದು ನೆನಪಿಗೆ ತರುತ್ತದೆ. ಆಸ್ಪತ್ರೆಯಲ್ಲಿ ಆಕ್ಸಿಜೆನ್‌ ಇಲ್ಲದೆ ರೋಗಿಗಳನ್ನು ಬದುಕಿಸಲು ಹೆಣಗಾಡುವ ಮಹಿಳೆಯ ವೈದ್ಯೆಯ ಪಾತ್ರ, ಗೊರಕ್‌ ಪುರ್ನ  ಡಾ.ಕಫೀಲ್‌ಖಾನ್‌ ರೋಗಿಗಳ ಪ್ರಾಣವನ್ನು ಉಳಿಸಲು ಪಟ್ಟಪಾಡಿನ ವಿಡಂಬನೆಯಂತಿದೆ. ಆಕ್ಸಿಜೆನ್‌ ಒದಗಿಸಲು ಹೋರಾಡಿದ್ದಕ್ಕೆ ಯೋಗಿ ಸರ್ಕಾರ ಡಾ. ಖಾನರನ್ನು ಪುರಸ್ಕೃರ ಮಾಡುವ ಬದಲಿಗೆ, ಸರ್ಕಾರಿ ಆಸ್ಪತ್ರೆಯಲ್ಲಿನ ಅಸೌಲಭ್ಯಗಳನ್ನು ಬಹಿರಂಗ ಮಾಡಿದನೆಂದು ಆಕ್ರೋಶಗೊಂಡು, ಸುಳ್ಳು ಆಪಾದನೆ ಹೊರಿಸಿ ಜೈಲಿಗೆ ತಳ್ಳಿದ್ದನ್ನು  ನೆನಪಿಸುತ್ತದೆ.

ಆಳುವ ಸರ್ಕಾರದ ಜನವಿರೋಧಿ, ಬೇಜವಾಬ್ದಾರಿಗಳನ್ನು ಪ್ರಶ್ನಿಸುವ ನಾಯಕ ಕೊನೆಯ ಒಂದು ದೃಶ್ಯದಲ್ಲಿ ಜನರನ್ನೂ ಪ್ರಶ್ನಿಸುತ್ತಾನೆ. ಬಂಡವಾಳಶಾಹಿಯೇ ಅಧಿಕಾರ ಹಿಡಿಯಲು ಚುನಾವಣೆಗೆ ನಿಂತಾಗ ಮತಯಂತ್ರಗಳನ್ನೇ ಕದ್ದು ಬಚ್ಚಿಟ್ಟು ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಾನೆ. ಕ್ಲೋಸ್‌ ಶಾಟಿನ ಆ ದೃಶ್ಯಕಟ್ಟಲ್ಲಿ ತೋರು ಬೆರಳನ್ನು ಪ್ರೇಕ್ಷಕರಿಗೆ ತೋರುತ್ತ ಆಡುವ ಮಾತುಗಳು – ಪ್ರಜಾಪ್ರಭುತ್ವ ದೇಶದ ಚುನಾವಣೆಗಳಲ್ಲಿ ಅಧಿಕಾರ ಹಿಡಿಯಲು ರಾಜಕಾರಣಿಗಳು ಹಿಡಿದ ವಾಮಮಾರ್ಗಗಳ ಬಗ್ಗೆ ಜನರಿಗೆ ಇರಬೇಕಾದ ಎಚ್ಚರಿಕೆಯನ್ನು ಮನದಟ್ಟು ಮಾಡಿಸುತ್ತದೆ. ಆ ಸಂಭಾಷಣೆ ಇಂತಿದೆ.

“ಮನೆಗೆ ಕೊಳ್ಳುವ ಎಲ್ಲಾ ವಸ್ತುಗಳು ಸರಿಯಾಗಿ ಕೆಲಸ ಮಾಡುತ್ತದೋ…ಇಲ್ಲವೋ…ಎಂದು ಕೊಳ್ಳುವ ಮುಂಚೆ ಮೂವತ್ತಾರು ಪ್ರಶ್ನೆಗಳನ್ನು ಕೇಳುತ್ತೀರ? ನಾಲ್ಕು ಗಂಟೆ ಉರಿಯುವ ಒಂದು ಸೊಳ್ಳೆಬತ್ತಿ ಬಗ್ಗೆ ಕೂಡ ಪ್ರಶ್ನೆಯನ್ನು ಕೇಳುತ್ತೀರ? ಆದರೆ…ನಿಮ್ಮನ್ನು ಆಳಲು ರಾಜಕಾರಣಿಗಳನ್ನು ಐದು ವರುಷಗಳಿಗೆ ಚುನಾಯಿಸಿ, ಒಮ್ಮೆಯೂ ಪ್ರಶ್ನಿಸದೆ ತೆಪ್ಪಗಿರುತ್ತೀರಿ? ಯಾಕೆ? ಆಳುವ ಪ್ರಭುತ್ವ ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಶ್ನಿಸಿ….ನಿಮ್ಮ ತೋರು ಬೆರಳನ್ನು ಬದಲಾವಣೆಗಾಗಿ ಬಳಸಿ”

“ಭಯ, ಹಣ, ಜಾತಿಧರ್ಮ, ಸಂಪ್ರದಾಯಗಳಿಗೆ ಓಟು ನೀಡುವ ಬದಲು, ಯಾರು ಓಟು ಕೇಳಿ ನಿಮ್ಮಲ್ಲಿಗೆ ಬರುತ್ತಾರೊ ಅವರಿಗೆ ಸವಾಲು ಹಾಕಿ. ಮುಂದಿನ ಐದು ವರ್ಷ ನಮಗಾಗಿ ಏನು ಮಾಡುತ್ತೀಯ? ಪರಿವಾರದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರ ಚಿಕಿತ್ಸೆಗಾಗಿ ಏನು ಮಾಡುತ್ತೀಯ? ನಮಗೆ ದುಡಿಯಲು ಉದೋಗ್ಯಕ್ಕಾಗಿ ಏನು ಮಾಡುವೆ? ದೇಶವನ್ನು ಮುಂದೆ ತರಲು ಏನು ಮಾಡುವೆ? ಎಂದು ಪ್ರಶ್ನಿಸಿ” ಎನ್ನುತ್ತಾನೆ.

ಚುನಾವಣೆ ಸಮಯದಲ್ಲಿ ಓಟು ಹಾಕಿ, ಮಿಕ್ಕಂತೆ ರಾಜಕೀಯ ನಮಗೇಕೆ ಎಂದು ಉದಾಸೀನ ಭಾವ ತೋರುವ ಜನರಿಗೆ ಈ ದೃಶ್ಯ ಸದಾ ಸರ್ಕಾರದ ನಡವಳಿಕೆ ಬಗ್ಗೆ ನಿಗಾ ಇರಿಸಿ, ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ, ಜವಾಬ್ದಾರಿ ನಾಗರೀಕರಾಗಿ ಪಾಲಿಸಬೇಕಾದ ಕರ್ತವ್ಯವನ್ನು ನೆನಪಿಸುತ್ತದೆ.

ಈ  ಮೊದಲೇ  ಚರ್ಚಿಸಿದಂತೆ ʼಜವಾನ್‌ʼ ಪಕ್ಕಾ ವ್ಯಾಪಾರಿ ಸಿನಿಮಾವಾದ್ದರಿಂದ ಪ್ರತಿ ಫ್ರೇಮ್‌ ಕೂಡ ಅದ್ದೂರಿಯಾಗಿ ಚಿತ್ರಿತವಾಗಿದೆ. ತಾರಾಗಣವಂತೂ ಶಾರೂಕ್‌ ಖಾನ್‌ ಸೇರಿದಂತೆ ದೀಪಿಕಾ ಪಡುಕೋಣೆ, ಸಂಜಯ್‌ ದತ್‌ ಸ್ಟಾರ್‌ ನಟರೊಂದಿಗೆ ನರೇಶ್‌ ಘೋಷ್‌, ಸನ್ಯಾ ಮಲೋತ್ರ, ಗಿರಿಜಾ ಓಕ್‌, ಸಂಗೀತಾ ಬಟ್ಟಾಚಾರ್ಯರಂಥ ಪ್ರತಿಭಾವಂತರ ದಂಡೇ ಇದೆ. ನಯನ ತಾರಾ, ವಿಜಯ್‌ ಸೇತುಪತಿ, ಪ್ರಿಯಾಮಣಿರಂತ ಖ್ಯಾತ ದಕ್ಷಿಣ ಭಾರತದ ನಟವರ್ಗ ಇರುವುದು ಈ ಸಿನಿಮಾದ ವಿಶೇಷ. ಒಂದು ಕಾಲಕ್ಕೆ ʼಮದ್ರಾಸಿʼ ಎಂದು ಹೀಗೆಳೆಯುತ್ತಿದ್ದ ಬಾಲಿವುಡ್‌, ದಕ್ಷಿಣಭಾರತದಲ್ಲಿ ಈಗ ತಯಾರಾಗುತ್ತಿರುವ ಸಿನಿಮಾಗಳ ವಸ್ತು ಆಯ್ಕೆ, ಗುಣಮಟ್ಟ,ದ ಬಗ್ಗೆ ತನ್ನಗಿದ್ದ ಮೇಲರಿಮೆಯ ಪೂರ್ವಗ್ರಹವನ್ನು ನಿಗ್ರಹಿಸಿಕೊಂಡಂತೆ ತೋರುತ್ತದೆ.

ಸಿನಿಮಾದ ಚಿತ್ರಕತೆಯನ್ನು ನಿರ್ದೇಶಕ ಅಟ್ಲೀ ಜೊತೆ ರಾಮನಗಿರಿ ವಾಸನ್‌ ಹೆಣೆದಿದ್ದಾರೆ.  ಅನಿರುದ್ದ್‌ ರವಿಚಂದರ್‌ ಅವರ ಸಂಗೀತವಿದೆ. ಸಿನಿಮಾಟೋಗ್ರಾಫಿಯನ್ನು ಜಿಕೆ ವಿಷ್ಣು ಮಾಡಿದ್ದಾರೆ. ಸುಮೀತ್‌ ಅರೊರಾ ಸಂಭಾಷಣೆ ಇದೆ.

ಸಿನಿಮಾವನ್ನು ಗೌರಿ ಖಾನ್‌ ಅವರು ರೆಡ್‌ ಚಿಲ್ಲಿಸ್‌ ಎಂಟರ್‌ ಟೈನ್‌ ಮೆಂಟ್‌ ಲಾಂಛನದಡಿ ನಿರ್ಮಿಸಿದ್ದು ಅವರ  ಧೈರ್ಯವಂತಿಕೆಯನ್ನು ಎರಡು ಕಾರಣಗಳಿಗೆ ಮೆಚ್ಚಲೇ ಬೇಕು. ಒಂದು‌ – ಇತ್ತೀಚಿನ ವರ್ಷಗಳಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಸಿನಿಮಾ ಬಿಡುಗಡೆಯಾದಾಗ ಅದು  ಬಾಕ್ಸ ಆಫೀಸಲ್ಲಿ ಸೋಲುವಂತೆ  ಬಾಯ್ಕಾಟ್ ಅಂದೋಲನವನ್ನು ಆರಂಭಿಸಿ ಅಪಪ್ರಚಾರ ಮಾಡುವ ಮತಾಂಧತೆಯ ಪರಿಪಾಟವಿರುವಾಗ ಮುಸ್ಲಿಮ್‌ ಧರ್ಮೀಯನಾಗಿ, ಕೋಟಿಗಟ್ಟಲೆ ಹಣ ಸುರಿದು ಆಗಬಹುದಾದ ನಷ್ಟವನ್ನು ಲೆಕ್ಕಿಸದೆ ಶಾರೂಕ್‌ ಖಾನ್‌ ತಾನೇ ನಿರ್ಮಾಣ ಮಾಡಿರುವುದು. ಮತ್ತೊಂದು – ಆಳುವ ಸರ್ಕಾರದ ಜನವಿರೋಧಿ ನೀತಿಗಳನ್ನು ಜಾಣತನದಿಂದ ಸಿನಿಮಾದಲ್ಲಿ ಆಳವಡಿಸಿರುವುದು. ಇದು ನಿಜಕ್ಕೂ ಶ್ಲಾಘನೀಯ.

‍ಲೇಖಕರು avadhi

October 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗವಿಸಿದ್ಧ ಹೊಸಮನಿ

    ಅತ್ಯುತ್ತಮವಾದ ವಿಶ್ಲೇಷಣೆ

    ಅಭಿನಂದನೆಗಳು

    ಪ್ರತಿಕ್ರಿಯೆ
    • ಚಂದ್ರಪ್ರಭ ಕಠಾರಿ

      #ಗವಿಸಿದ್ಧ ಹೊಸಮನಿ
      ಧನ್ಯವಾದಗಳು.. ಸರ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: