ನಾ ದಿವಾಕರ್ ಓದಿದ ‘Donʼt Forward that Text!’

ಸುಳ್ಳುಗಳ ಸಂತೆಯಲ್ಲಿ ಸತ್ಯಶೋಧನೆಯ ಪ್ರಯತ್ನ

ನಾ ದಿವಾಕರ್

ಚಾರಿತ್ರಿಕ ಸತ್ಯ ಮತ್ತು ಮಿಥ್ಯೆಗಳ ನಡುವೆ ಕಲ್ಪಿತ ಚರಿತ್ರೆಯ ದಾಳಿಗೆ ಉತ್ತರ “ Donʼt Forward that Text ”

21ನೆಯ ಶತಮಾನದ ಮೂರನೆಯ ದಶಕದಲ್ಲಿರುವ ನವ ಭಾರತ ಬೌದ್ಧಿಕವಾಗಿ ಪ್ರೌಢಿಮೆಯನ್ನು ಬೆಳೆಸಿಕೊಂಡ ಒಂದು ದೇಶವಾಗಿ ಕಾಣಬೇಕಿತ್ತು. ಶತಮಾನಗಳಿಂದಲೂ ಅಧ್ಯಯನ, ಸಂಶೋಧನೆ ಮತ್ತು ಬೌದ್ಧಿಕ ಅವಿಷ್ಕಾರಗಳಿಗೆ ಹೆಸರಾದ ಭಾರತ ಈ ಹುಡುಕಾಟಗಳ ಮೂಲಕವೇ ವಿಶ್ವ ಶ್ರೇಷ್ಠ ಸಾಹಿತ್ಯವನ್ನೂ ಸೃಷ್ಟಿಸಿದೆ. ವರ್ತಮಾನದ ಚೌಕಟ್ಟಿನಲ್ಲಿ ನಿಂತು ಗತ ಶತಮಾನಗಳ ಸಾಹಿತ್ಯಕ ಅಭಿವ್ಯಕ್ತಿಗಳನ್ನು ಪರಾಮರ್ಶಿಸುವಾಗ ಸಹಜವಾಗಿಯೇ ನಮ್ಮ ಅಭಿಪ್ರಾಯಗಳು ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ವಿದ್ಯಮಾನಗಳಿಂದ ಪ್ರಭಾವಿಸಲ್ಪಡುತ್ತವೆ. ವೇದ, ಉಪನಿಷತ್ತು, ಜಾತಕ ಕತೆಗಳು, ಪಂಚತಂತ್ರ ಕತೆಗಳು, ರಾಮಾಯಣ, ಮಹಾಭಾರತ, ಅರ್ಥಶಾಸ್ತ್ರ, ಮನುಸ್ಮೃತಿ ಮತ್ತು ಮಧ್ಯಕಾಲೀನ ಭಾರತದಲ್ಲಿ ಸೃಷ್ಟಿಯಾದ ಗ್ರಂಥಗಳು ಭಾರತೀಯ ಸಮಾಜವನ್ನು ಯಾವುದೋ ಒಂದು ರೀತಿಯಲ್ಲಿ ಪ್ರಭಾವಿಸುತ್ತಲೇ ಬಂದಿದೆ.

ಈ ಗ್ರಂಥಗಳಲ್ಲಿನ ಸತ್ಯಾಸತ್ಯತೆಗಳನ್ನು ಶೋಧಿಸಿದಾಗ ದೊರೆಯುವಂತಹ ಒಳಸುಳಿಗಳನ್ನೂ ಸಹ ಅನೇಕ ವಿದ್ವಾಂಸರು ತೆರೆದಿಟ್ಟಿದ್ದಾರೆ. ಹಾಗೆಯೇ ಈ ಗ್ರಂಥಗಳಲ್ಲಿ ಕಾಣಬಹುದಾದ ವಿಭಿನ್ನ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನೂ ಹಾಗೂ ಇವುಗಳಿಂದ ಪ್ರಭಾವಿತವಾಗುವ ವರ್ತಮಾನದ ಸಮಾಜದ ವಿಭಿನ್ನ ಮಜಲುಗಳನ್ನೂ ಅಂಬೇಡ್ಕರಾದಿಯಾಗಿ ಹಲವಾರು ಚಿಂತಕರು ಮರುನಿರ್ವಚಿಸಿದ್ದಾರೆ. ಇದರೊಟ್ಟಿಗೆ ಭಾರತ ನಡೆದುಬಂದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸುವಾಗ ನಮಗೆ ಎದುರಾಗುವ ಹಲವಾರು ಸಿಕ್ಕುಗಳು ಮತ್ತು ಕಾಣುವ ಒಳಬಿರುಕುಗಳು ಸಮಕಾಲೀನ ಸಮಾಜಕ್ಕೆ ಮಾರ್ಗಸೂಚಿಯಾಗಿ, ದಿಕ್ಸೂಚಿಯಾಗಿಯೂ ಪರಿಣಮಿಸುತ್ತವೆ. ಭಾರತದ ಬೌದ್ಧಿಕ ಜಗತ್ತು ಈ ಸಿಕ್ಕುಗಳನ್ನು ಮತ್ತು ಒಳಬಿರುಕುಗಳನ್ನು ಮರುಶೋಧಿಸುತ್ತಲೇ ಗತ ಶತಮಾನಗಳಲ್ಲಿ ಸಂಭವಿಸಿದಂತಹ ಘಟನೆಗಳನ್ನು ಮರು ವಿಶ್ಲೇಷಣೆಗೊಳಪಡಿಸಿ, ಈ ಹೊತ್ತಿನ ಸಮಾಜದ ಅವಶ್ಯಕತೆಗಳಿಗನುಗುಣವಾಗಿ ಕೆಡವಿ-ಕಟ್ಟುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿದೆ.

ಚರಿತ್ರೆ ಮತ್ತು ಪುರಾಣದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಒಂದರೊಳಗೊಂದು ಬೆಸೆದುಕೊಳ್ಳುವಂತೆ ಮಾಡುವ ಮೂಲಕ ಪುರಾಣದ ಮಿಥ್ಯೆಗಳಿಗೆ ಚಾರಿತ್ರಿಕ ಸ್ಪರ್ಶ ನೀಡುವ ಪ್ರಯತ್ನಗಳು ಒಂದೆಡೆಯಾದರೆ ಮತ್ತೊಂದೆಡೆ ಚರಿತ್ರೆಯಲ್ಲಿ ಘಟಿಸಿದಂತಹ ವಿದ್ಯಮಾನಗಳನ್ನು ಸೃಷ್ಟಿಸಲ್ಪಟ್ಟ ಮಿಥ್ಯೆಗಳು ಎಂದು ಬಿಂಬಿಸುವ ಪ್ರಯತ್ನಗಳೂ ನಮ್ಮ ನಡುವೆ ನಡೆಯುತ್ತಿದೆ. ಅಧ್ಯಯನ, ಮರು ಅಧ್ಯಯನ ಮತ್ತು ಸಂಶೋಧನೆಯ ಬೌದ್ಧಿಕ ವಿಸ್ತರಣೆಯ ಮಾರ್ಗದಲ್ಲಿ ಈ ಮೂರೂ ಚೌಕಟ್ಟುಗಳಿಂದಾಚೆಗಿನ ಬೌದ್ಧಿಕ ಪ್ರಕ್ರಿಯೆಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿರುವುದು ಭಾರತದ ಬೌದ್ಧಿಕ ಜಗತ್ತಿನಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ. ಹಾಗಾಗಿಯೇ ಪೌರಾಣಿಕ ಮಿಥ್ಯೆಗಳನ್ನು ಚರಿತ್ರೆಯ ಒಂದು ಭಾಗವಾಗಿ ಪರಿಭಾವಿಸಲಾಗುತ್ತಿದ್ದು, ದಾಖಲಿತ ಚರಿತ್ರೆಯಲ್ಲಿ ಘಟಿಸಿದ ವಿದ್ಯಮಾನಗಳನ್ನು ನಿರಾಕರಿಸಲಾಗುತ್ತಿದೆ. ಬೌದ್ಧಿಕವಾಗಿ ಇನ್ನೂ ಅಪಾಯಕಾರಿಯಾದ ಸಂಗತಿ ಎಂದರೆ ಇವೆಲ್ಲವೂ ನಡೆಯುತ್ತಿರುವುದು ಬೌದ್ಧಿಕ ಕೇಂದ್ರಗಳಲ್ಲಿ ಅಲ್ಲ ಬದಲಾಗಿ ರಾಜಕೀಯ ಅಖಾಡಾಗಳಲ್ಲಿ.

ಇತಿಹಾಸವನ್ನು ಮುರಿದು ಕಟ್ಟುವುದು ಯಾವುದೇ ಸಮಾಜದಲ್ಲಿ ನಡೆಯುವಂತಹ ಸ್ವಾಭಾವಿಕ ಪ್ರಕ್ರಿಯೆ. ಮಾನವ ಸಮಾಜದ ಅಭ್ಯುದಯದಲ್ಲಿ ಈ ಪ್ರಕ್ರಿಯೆಗೆ ತನ್ನದೇ ಆದ ಸ್ಥಾನವೂ ಇದೆ. ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ ಪ್ರಾಬಲ್ಯ ಸಾಧಿಸುವ, ಆರ್ಥಿಕವಾಗಿ ಸುಭದ್ರ ತಳಪಾಯವನ್ನು ಹೊಂದುವ ಸಮಾಜದ ಒಂದು ವರ್ಗ ಈ ಮುರಿದು ಕಟ್ಟುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತದ ಸಂದರ್ಭದಲ್ಲಿ ಈ ಪ್ರಕ್ರಿಯೆಯನ್ನು ಶ್ರೇಣೀಕೃತ ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲೇ ಗಮನಿಸಬಹುದು. ಬ್ರಿಟೀಷ್‌ ವಸಾಹತುಶಾಹಿಯ ಕಾಲದಲ್ಲಿ ಚರಿತ್ರೆಯನ್ನು ಐರೋಪ್ಯ ರಾಷ್ಟ್ರಗಳ ಹಿತಾಸಕ್ತಿಗಳಿಗೆ ತಕ್ಕಂತೆ ಮರು ನಿರ್ವಚನೆಗೊಳಪಡಿಸುವ ಪ್ರಕ್ರಿಯೆ ನಡೆದಂತೆಯೇ, ಜಾತಿ ವ್ಯವಸ್ಥೆಯ ಮೂಲ ತಳಹದಿಯನ್ನು ಭಂಗಗೊಳಿಸದೆ ಯಥಾಸ್ಥಿತಿಯಲ್ಲಿರಿಸುವ ಸಲುವಾಗಿ, ಚರಿತ್ರೆಯನ್ನು ಮುರಿದು ಕಟ್ಟುವ ಪ್ರಯತ್ನಗಳನ್ನು ಭಾರತದ ಬೌದ್ಧಿಕ ಜಗತ್ತು ಸಹ ಮಾಡಿದೆ.

ಡಾ. ಬಿ.ಆರ್.‌ ಅಂಬೇಡ್ಕರ್‌ ಈ ಪ್ರಯತ್ನಗಳನ್ನು ಭಂಜಿಸುವ ನಿಟ್ಟಿನಲ್ಲಿ ಭಾರತದ ಶತಮಾನಗಳ ಚರಿತ್ರೆಯನ್ನು ಮುರಿದು ಕಟ್ಟುವ ಮಹತ್ಕಾರ್ಯವನ್ನು ಮಾಡಿರುವುದನ್ನು ಮಾನ್ಯ ಮಾಡಲೇಬೇಕಿದೆ. ಬಹುಶಃ ಅಂಬೇಡ್ಕರ್‌ ಈ ಸಾಹಸಕ್ಕೆ ಕೈಹಾಕದೆ ಹೋಗಿದ್ದಲ್ಲಿ, ಭಾರತದ ಚರಿತ್ರೆಯ ಒಳಬಿರುಕುಗಳು ಮತ್ತು ಈ ಚರಿತ್ರೆಯ ಗರ್ಭದಲ್ಲಿ ಅಡಗಿದ್ದ ಮತ್ತೊಂದು ಕರಾಳ ವಿಶ್ವದ ದರ್ಶನ ವರ್ತಮಾನದ ಸಮಾಜಕ್ಕೆ ಲಭ್ಯವಾಗುತ್ತಿರಲಿಲ್ಲ. 19ನೆಯ ಶತಮಾನದ ಕೊನೆಯ ದಶಕಗಳು ಮತ್ತು 20ನೆಯ ಶತಮಾನದುದ್ದಕ್ಕೂ ಭಾರತದ ಬೌದ್ಧಿಕ ಚಿಂತನೆ ಮತ್ತು ಆಲೋಚನೆಗಳ ಪಯಣವನ್ನು ಗಮನಿಸಿದರೆ, ಚರಿತ್ರೆಯನ್ನು ಮುರಿದು ಕಟ್ಟುವ ಈ ಪ್ರಕ್ರಿಯೆ ಒಂದು ಹೊಸ ಆಯಾಮವನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದರೂ ವರ್ತಮಾನದ ಭಾರತೀಯ ಸಮಾಜ ಈ ಅಧ್ಯಯನಗಳಿಗೆ ಮತ್ತು ಸಂಶೋಧನೆಗೆ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿಲ್ಲ.

21ನೆಯ ಶತಮಾನದ ನವ ಪೀಳಿಗೆ ಅಧ್ಯಯನಶೀಲತೆಯಿಂದ ವಿಮುಖವಾಗುತ್ತಿರುವ ಸಂದರ್ಭದಲ್ಲಿ, ಚರಿತ್ರೆಯ ಮೂಲ ಆಕರಗಳನ್ನೂ ನಿರ್ಲಕ್ಷಿಸಿ ಹೊಸ ಚಾರಿತ್ರಿಕ ಕಥನಗಳನ್ನು ಸೃಷ್ಟಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯೂ ಆಗಿದೆ. ಇಂತಹ ವಿಷಗಳಿಗೆಯಲ್ಲಿ ಚರಿತ್ರೆಯ ಸತ್ಯ-ಮಿಥ್ಯೆಗಳನ್ನು ಶೋಧಿಸಿ, ವಾಸ್ತವ ಚರಿತ್ರೆಯನ್ನು ಕಾಲ್ಪನಿಕ ಚರಿತ್ರೆಯಿಂದ ಬೇರ್ಪಡಿಸುವ ಜವಾಬ್ದಾರಿ ಬೌದ್ಧಿಕ ಸಮಾಜದ ಮೇಲಿದೆ. ಚಾರಿತ್ರಿಕ ಸತ್ಯವನ್ನೂ ಅಪಭ್ರಂಶಗೊಳಿಸುವ ಹಾಗೂ ಕಲ್ಪಿತ ಮಿಥ್ಯೆಗಳನ್ನು ಸಾರ್ವತ್ರಿಕಗೊಳಿಸುವ ಬೌದ್ಧಿಕ ಪ್ರಕ್ರಿಯೆ ಸಾಹಿತ್ಯದ ಅಕ್ಷರ ಲೋಕದಿಂದ ಈಗ ರಂಗಭೂಮಿಯವರೆಗೂ ವ್ಯಾಪಿಸಿರುವುದನ್ನು ಕರ್ನಾಟಕದಲ್ಲೇ ನೋಡುತ್ತಿದ್ದೇವೆ. ಚಾರಿತ್ರಿಕ ಘಟನೆಗಳನ್ನು ವಿಭಿನ್ನವಾಗಿ ನೋಡುವ, ವಿಡಂಬನೆ ಮಾಡುವ ಮತ್ತು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಮರು ನಿರ್ವಚಿಸಿಕೊಳ್ಳುವ ಒಂದು ಸ್ವಾಯತ್ತ ಬೌದ್ಧಿಕ ಸ್ವಾತಂತ್ರ್ಯ ರಂಗಭೂಮಿಗೆ ಇದೆ ಹೌದಾದರೂ, ಚರಿತ್ರೆಯಲ್ಲಿ ಇಲ್ಲವಾಗಿರುವುದನ್ನು ಮರುಸೃಷ್ಟಿಸಿ, ಇಲ್ಲದಿರುವುದನ್ನು ಹೊಸದಾಗಿ ಸೃಷ್ಟಿಸುವ ಅಭಿವ್ಯಕ್ತಿಗೆ ಬಹುಶಃ ರಂಗಭೂಮಿ ವೇದಿಕೆಯಾಗಲಾರದು. ಆದರೂ ಇದು ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ದೇಶದಲ್ಲಿ ಬದಲಾಗುತ್ತಿರುವ ಸಾಂಸ್ಕೃತಿಕ ವಾತಾವರಣ ಮತ್ತು ಪೂರಕವಾದ ಸಾಂಸ್ಕೃತಿಕ ರಾಜಕಾರಣ.

ಅತ್ಯವಶ್ಯವಾದ ಮಾರ್ಗದರ್ಶಿ ಕೃತಿ

ಚರಿತ್ರೆಯನ್ನು ವಿಕೃತಗೊಳಿಸುವ ಈ ಎಲ್ಲ ಸಮಕಾಲೀನ ಅಪಭ್ರಂಶಗಳ ಮೂಲ ಇರುವುದು ಯಾವುದೇ ಅಧ್ಯಯನ-ಸಂಶೋಧನೆ-ಅವಿಷ್ಕಾರ ಮತ್ತು ಆಲೋಚನಾ ವಿಧಾನಗಳಿಲ್ಲದ ವಾಟ್ಸಾಪ್‌ ವಿಶ್ವವಿದ್ಯಾಲಯ ಎಂಬ ಬೌದ್ಧಿಕ ವಾಹಿನಿಯಲ್ಲಿ. ತಮಗೆ ವಾಟ್ಸಾಪ್‌ ಮೂಲಕ ಬಂದ ವಿಕೃತಗೊಳಿಸಿದ ಚರಿತ್ರೆಯ ಕಥನಗಳನ್ನು ಓದದೆಯೂ ಫಾರ್ವರ್ಡ್‌ ಮಾಡುವ ಒಂದು ಚಾಳಿ ಕ್ರಮೇಣ ಬೌದ್ಧಿಕ ವ್ಯಸನವಾಗಿ ಮಾರ್ಪಡುತ್ತಿದ್ದು, ದೇಶದ ಒಂದು ಬೃಹತ್‌ ಯುವ ಸಮೂಹ ಈ ಕಲ್ಪಿತ ಚರಿತ್ರೆಯ ಶಿಕ್ಷಣಾರ್ಥಿಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಅಮಿತ್‌ ಶಾಂಡಿಲ್ಯ ಅವರ “ Donʼt Forward That Text ! ” ಎಂಬ ಕೃತಿ ಉಪಯುಕ್ತವಾಗುತ್ತದೆ. ನೈಜ ಇತಿಹಾಸವನ್ನು ಬಲ್ಲವರೂ ಸಹ ಕೆಲವೊಮ್ಮೆ ತಮ್ಮ ಆಕರಗಳನ್ನು ಆಧರಿಸಿ ತಪ್ಪಾಗಿ ವ್ಯಾಖ್ಯಾನಿಸುವ ಸಾಧ್ಯತೆಗಳು ಇರುವುದನ್ನು ಈ ಕೃತಿಯ ಓದಿನ ನಂತರ ಗ್ರಹಿಸಬಹುದು. ಚರಿತ್ರೆಯ ಅಧ್ಯಯನದ ವಿಧಾನವನ್ನೇ ಧಿಕ್ಕರಿಸಿ ಇತಿಹಾಸದಲ್ಲಿ ಇಲ್ಲದಿರುವುದನ್ನು ಉತ್ಖನನ ಮಾಡುತ್ತಿರುವ ಸಂದರ್ಭದಲ್ಲಿ, ಆಕರ ಗ್ರಂಥಗಳ ಮೂಲಕ, ಶಾಸನ-ನಾಣ್ಯ-ಕಥನಗಳ ಮೂಲಕ ಹೇಗೆ ಇತಿಹಾಸವನ್ನು ಗ್ರಹಿಸಬೇಕು ಎನ್ನುವುದನ್ನು ಈ ಕೃತಿ ಸ್ಥೂಲವಾಗಿ ಪರಿಚಯಿಸುತ್ತದೆ.

Donʼt Forward That Text ಕೃತಿಯ ಮುಖಪುಟದಲ್ಲೇ ಲೇಖಕ ಅಮಿತ್‌ ಶಾಂಡಿಲ್ಯ ಅವರು “ಸಾಮಾಜಿಕ ಮಾಧ್ಯಮಗಳಲ್ಲಿ ಮಿಥ್ಯೆಯನ್ನು ಚರಿತ್ರೆಯಿಂದ ಬೇರ್ಪಡಿಸುವ” ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಮಿಥ್ಯೆ-ಪುರಾಣ-ಐತಿಹ್ಯ ಮತ್ತು ದಾಖಲಿತ ಇತಿಹಾಸ ಇವುಗಳ ನಡುವಿನ ವ್ಯತ್ಯಾಸವನ್ನು ವಿಭಿನ್ನ ಕಾಲಘಟ್ಟಗಳ ಚಾರಿತ್ರಿಕ ಘಟನೆಗಳ ಹಿನ್ನೆಲೆಯಲ್ಲಿ‌, ಮಾನವನ ಅಭ್ಯುದಯದಲ್ಲಿ ಕಂಡುಬರುವ ಅನೇಕ ಸಂಶೋಧನೆ, ಅವಿಷ್ಕಾರಗಳ ಹಿನ್ನೆಲೆಯಲ್ಲಿ ಲೇಖಕ ಅಮಿತ್‌ ಶಾಂಡಿಲ್ಯ ಅವರು ನೈಜ ಇತಿಹಾಸವನ್ನು ಅನಾವರಣಗೊಳಿಸುತ್ತಾರೆ. ಈ ಕೃತಿಯಲ್ಲಿನ ಚರಿತ್ರೆ ಕೇವಲ ಆಳ್ವಿಕೆಗೆ ಸಂಬಂಧಿಸಿದ್ದಲ್ಲ ಬದಲಾಗಿ ಮಾನವನ ಅಭ್ಯುದಯದ ಹಾದಿಯಲ್ಲಿ ಕಂಡುಕೊಂಡ ಅನೇಕ ಅವಿಷ್ಕಾರಗಳನ್ನು ಕುರಿತು ಸಹ ಚರ್ಚಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಮಾರುಕಟ್ಟೆ ಸರಕುಗಳ ಮೂಲ, ಜನರ ನಿತ್ಯ ಜೀವನದಲ್ಲಿ ಬಳಕೆಯಾಗುವ ಮೂಲ ಸೌಕರ್ಯಗಳ ಮೂಲ ಇಂತಹ ಹಲವು ವಿದ್ಯಮಾನಗಳನ್ನು ಶಾಂಡಿಲ್ಯ ಅವರು ಈ ಕೃತಿಯಲ್ಲಿ ಚರ್ಚೆಗೊಳಪಡಿಸುತ್ತಾರೆ.

ಇಂದು ನಾವು ವ್ಯಾಪಕವಾಗಿ ಬಳಸುತ್ತಿರುವ ಉಕ್ಕು, ಸಕ್ಕರೆ, ಬಿರಿಯಾನಿ ಮತ್ತು ರೇಷ್ಮೆ ಮುಂತಾದ ವಸ್ತುಗಳ ಮೂಲವನ್ನು ಶೋಧಿಸುವ ಲೇಖಕರು, ಮತ್ತೊಂದು ಬದಿಯಲ್ಲಿ ಶೌಚಾಲಯದ ಕಲ್ಪನೆಯ ಮೂಲವನ್ನೂ ಶೋಧಿಸುತ್ತಾರೆ. ಭಾರತಕ್ಕೆ ಆರ್ಯರ ಆಗಮನ, ಐರೋಪ್ಯರ ಆಕ್ರಮಣ, ರಜಪೂತರ ಜನಾಂಗೀಯ ಮೂಲ, ಸರಸ್ವತಿ ನದಿಯ ಸುತ್ತಲಿನ ಕಲ್ಪನೆಗಳು, ಭಾರತದ ವಸಾಹತೀಕರಣ ಮತ್ತು ವಿವಿಧ ವಸಾಹತುಶಾಹಿಗಳ ಆಕ್ರಮಣದ ಕಾಲಘಟ್ಟ, ಅಖಂಡ ಭಾರತದ ಪರಿಕಲ್ಪನೆ, ಟಿಪ್ಪು ಸುಲ್ತಾನನ ಸುತ್ತ ಬೆಳೆದಿರುವ ಅಪನಂಬಿಕೆಗಳು, ರಜಪೂತರು ಮತ್ತು ಔರಂಗಜೇಬ್‌ ನಡುವಿನ ಸಂಬಂಧಗಳು, ದೇವಾಲಯಗಳ ಮೇಲಿನ ದಾಳಿಗಳ ಇತಿಹಾಸ, ಭಾರತಕ್ಕೆ ಇಸ್ಲಾಂ ಮತದ ಆಗಮನ ಹೀಗೆ ಚರಿತ್ರೆಯ ವಿವಿಧ ಆಕರಗಳನ್ನು ಮರುಶೋಧನೆಗೊಳಪಡಿಸುವ ಲೇಖಕರು ಈ ವಿಚಾರಗಳಲ್ಲಿ ನಮ್ಮ ನಡುವೆ ಹರಿದಾಡುತ್ತಿರುವ ಕಲ್ಪಿತ ಚರಿತ್ರೆ ಮತ್ತು ವಾಸ್ತವ ಚರಿತ್ರೆಯನ್ನು ತುಲನಾತ್ಮಕವಾಗಿ ವಿಶ್ಲೇಷಿಸಿ, ಸೂಕ್ತ ಆಕರಗಳ ಮೂಲಕ ವಾಸ್ತವವನ್ನು ತೆರೆದಿಡುತ್ತಾರೆ.

ಮತ್ತೊಂದು ಬದಿಯಲ್ಲಿ, ಸೊನ್ನೆ ಅಥವಾ ಶೂನ್ಯದ ಪರಿಕಲ್ಪನೆಯ ಮೂಲ, ವಿಶ್ವದ ಪ್ರಪ್ರಥಮ ವಿಶ್ವವಿದ್ಯಾಲಯ, ಹಿಂದೂ ಧರ್ಮದಲ್ಲಿ ದೇವಾಲಯ ಕಲ್ಪನೆಯ ಉಗಮ, ಬೀಜಗಣಿತ (Algebra)ದ ಉಗಮ ಮತ್ತು ಬೆಳವಣಿಗೆ, ಸಮಯ ಅಥವಾ ಟೈಂ ಎನ್ನುವುದರ ಅವಿಷ್ಕಾರ, ನಮ್ಮ ಲಿಪಿಗಳ ಉಗಮ ಮತ್ತು ಅಭಿವೃದ್ಧಿ, ಸ್ವಸ್ತಿಕ ಚಿಹ್ನೆಯ ಉಗಮ ಮತ್ತು ವಿಸ್ತರಣೆ ಹೀಗೆ ಹಲವು ಬೌದ್ಧಿಕ, ವೈಜ್ಞಾನಿಕ ಅವಿಷ್ಕಾರ ಮತ್ತು ಸಂಶೋಧನೆಗಳ ಕುರಿತಾಗಿಯೂ ನಮ್ಮ ನಡುವೆ ಇರುವ ತಪ್ಪು ಕಲ್ಪನೆಗಳು, ಅಪನಂಬಿಕೆಗಳು ಅಥವಾ ಅತಿಯಾದ ನಂಬಿಕೆಗಳನ್ನು ಒರೆಹಚ್ಚಿ ನೋಡುವ ಅಮಿತ್‌ ಶಾಂಡಿಲ್ಯ ಅವರು, ಈ ವಿಚಾರಗಳಲ್ಲಿ ಚರಿತ್ರೆಯ ವಿದ್ಯಾರ್ಥಿಗಳಲ್ಲೇ ಮೂಡಬಹುದಾದ ಜಿಜ್ಞಾಸೆಗಳಿಗೆ ಉತ್ತರಗಳನ್ನು ಶೋಧಿಸಲು ಯತ್ನಿಸಿದ್ದಾರೆ. ವಾಟ್ಸಾಪ್‌ ವಿಶ್ವವಿದ್ಯಾಲಯದ ಜ್ಞಾನಾರ್ಥಿಗಳಿಗೆ ಈ ಸಂಶೋಧನಾತ್ಮಕ ಪ್ರತಿಪಾದನೆಗಳು ಕಣ್ತೆರೆಸುವಂತಿವೆ. ಚರಿತ್ರೆಯ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನ ವಿಸ್ತರಣೆಗೆ ನೆರವಾಗುವಂತಿವೆ.

ಪ್ರಸಿದ್ಧ ಸಂಸ್ಕೃತಿ ಚಿಂತಕ ಮತ್ತು ವಿದ್ವಾಂಸ ದೇವದತ್ತ ಪಟ್ಟನಾಯಕ್‌ ತಮ್ಮ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ “ ನಾವು ಭಾರತದ ನೈಜ ಹಾಗೂ ಕಲ್ಪಿತ ಚರಿತ್ರೆಯ ಮೇಲೆ ಬೆಳಕು ಚೆಲ್ಲಬೇಕಿದೆ. ಪ್ರಾಚೀನ ಕವಿಗಳಿಗೆ ಕಿವಿಗೊಡಬೇಕಿದೆ. ಜನಸಾಮಾನ್ಯರ ಅಭದ್ರತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗೆಯೇ ನಾವು ಚರಿತ್ರಕಾರರ ಮಾತುಗಳಿಗೆ ಕಿವಿಗೊಡುವ ಮೂಲಕ ವಾಸ್ತವಗಳನ್ನು ಕಲ್ಪನೆಗಳಿಂದ ಪ್ರತ್ಯೇಕಿಸಬೇಕಿದೆ. ಅಭಿಪ್ರಾಯಗಳನ್ನು ಮಾಹಿತಿ ದತ್ತಾಂಶಗಳಿಂದ ಬೇರ್ಪಡಿಸಬೇಕಿದೆ.,,,,,”. ಈ ಮುನ್ನುಡಿಯ ದಿಕ್ಸೂಚಿಯೊಂದಿಗೇ Donʼt Forward That Text ಪುಸ್ತಕವನ್ನು ಓದುತ್ತಾ ಹೋದಂತೆ ನಮ್ಮೊಳಗಿರಬಹುದಾದ ತಪ್ಪು ಗ್ರಹಿಕೆಗಳನ್ನು, ಅಪನಂಬಿಕೆಗಳನ್ನು ಮತ್ತು ವಾಟ್ಸಾಪ್‌ ವಿಶ್ವವಿದ್ಯಾಲಯಗಳ ಉತ್ಖನನಗಳ ಮೂಲಕ ಹರಡಲಾಗುತ್ತಿರುವ ಕಲ್ಪಿತ ಇತಿಹಾಸವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಇತಿಹಾಸ ಎನ್ನುವ ಆಳವಾದ ಕಣಜದಲ್ಲಿ ಏನೆಲ್ಲಾ ಅಮೂಲ್ಯ ಆಕರಗಳು ಲಭ್ಯವಾಗಬಹುದು ಎನ್ನುವುದನ್ನು ಈ ಕೃತಿ ನಮ್ಮ ಮುಂದೆ ತೆರೆದಿಡುತ್ತದೆ.

ಇತಿಹಾಸ ಬಲ್ಲವರು, ಬಲ್ಲೆ ಎಂದು ತಿಳಿದಿರುವವರು, ಅರಿಯದವರು ಮತ್ತು ತಿರುಚಿದ ಇತಿಹಾಸವನ್ನೇ ನೈಜ ಇತಿಹಾಸ ಎಂದು ನಂಬುವ ವಾಟ್ಸಾಪ್‌ ವಿಶ್ವವಿದ್ಯಾಲಯದ ಯುವ ಸಮೂಹ, ಎಲ್ಲರಿಗೂ ಆಪ್ತವಾಗುವ ಈ ಕೃತಿ ಅಧ್ಯಯನ ಯೋಗ್ಯವಷ್ಟೇ ಅಲ್ಲ ಸಂಗ್ರಹಯೋಗ್ಯವೂ ಹೌದು. ಒಮ್ಮೆ ಓದಿ ನೋಡಿ.

‍ಲೇಖಕರು avadhi

March 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: