ನಾಗರಾಜನಾಯಕ. ಡಿ

ಅಬ್ಬಾ ಅಂತೂ ಇಂತೂ ನಾನು ಕನ್ನಡ ಸಿನಿಮಾ ನೋಡಿದೆ. ಅದೆಂಥ ಪ್ರಯತ್ನ ಅಂತೀರಾ ಒಂದಲ್ಲ,ಎರಡಲ್ಲ ಯಶಸ್ವಿ ನಾಲ್ಕನೇ ಬಾರಿಗೆ ನೋಡಿದ್ದು. ತಪ್ಪು ತಿಳಿಯಬೇಡಿ ನಾಲ್ಕು ಬಾರಿ ಅಂದರೆ ಚಿತ್ರ ವೀಕ್ಷಣೆಗೆ ಹೋದಾಗಲೆಲ್ಲ ಪ್ರೇಕ್ಷಕರಿಲ್ಲದೆ ಪ್ರದರ್ಶನ ರದ್ದು ಮಾಡಿದ್ದು ಎರಡು ಬಾರಿಯಾದರೆ, ಸ್ಯಾಟಲೈಟ್ ಲೈಸನ್ಸ್ ಇಲ್ಲ ಅಂಥ ಮಗದೊಮ್ಮೆ ಚಿತ್ರ ಪ್ರದರ್ಶನ ಕಾಣದೆ ಮೂರುಬಾರಿ ಚಿತ್ರಮಂದಿರವನ್ನಷ್ಟೇ ನೋಡಿ, ಸಿನಿಮಾ ವೀಕ್ಷಿಸದೆ ಮರಳಿ ಬಂದ ನತದೃಷ್ಟ
ಕನ್ನಡ ಪ್ರೇಕ್ಷಕ ನಾನು. ಹೀಗಾಗುವುದು ಇದೇ ಮೊದಲಲ್ಲ. ಸಾಕಷ್ಟು ಬಾರಿ ಚಲನ ಚಿತ್ರಗಳನ್ನು ನೋಡಲು ಹೋಗಿ ನಿರಾಸೆಯಿಂದ ಹಿಂತಿರುಗಿ ಬಂದಿದ್ದೇನೆ. ಬೇರೆಯವರ ಮಸಾಲೆ ಹಾಕಿ ರುಬ್ಬಿದ ರಿಮೇಕ್ ಚಿತ್ರಗಳು, ಸ್ಟಾರ್ ಗಳ ಅಬ್ಬರದಲ್ಲಿ ಅಪರೂಪಕ್ಕೆಂಬತೆ ಬರುವ ಸದಬಿರುಚಿಯ ಚಿತ್ರಗಳಿಗೆ ಚಿತ್ರಮಂದಿರಗಳ ಕೊರತೆ ಕಾಣುತ್ತದೆ. ಯಶಸ್ವಿ ನಾಲ್ಕನೇ ಬಾರಿಗೆ ನೋಡಿದ ಚಿತ್ರಗಳು ಅಂತಹ ವರ್ಗಕ್ಕೆ ಸೇರುತ್ತವೆ. ಯಡವಟ್ಟಾದರೆ ಸ್ಟಾರ್ ಚಿತ್ರಗಳು ವಾರದಲ್ಲಿ ಚಿತ್ರಮಂದಿರದಿಂದ ಚಿತ್ರಮಂದಿರಕ್ಕೆ ಓಡುತ್ತಿವೆ.
ಕೆಲ ವರ್ಷಗಳ ಹಿಂದೆ ನಾವು ಆರು ಗೆಳೆಯರು ಸೇರಿ ‘ಉಳಿದವರು ಕಂಡಂತೆ’ ಚಿತ್ರ ವೀಕ್ಷಿಸಲು ಟಾಕೀಸ್ ಗೆ ಹೋದಾಗ ನಮಗೆ ಸಿಕ್ಕಿದ್ದು, ‘ಸರ್ ಈ ಫಿಲಂ ಅರ್ಥ ಆಗೋಲ್ಲಾ, ಆ ಸಿನಿಮಾಗೆ ಹೋಗಿ ಸರ್ ಅನ್ನುವ ಸಲಹೆ. ಕರ್ನಾಟಕದಲ್ಲಿ ಸಿನಿ ರಸಿಕರ ಮೆಚ್ಚುಗೆಯ ಮಾತುಗಳನ್ನು ಕೇಳಿದ್ದ, ಚಿತ್ರಕ್ಕೆ ಸಿಕ್ಕ ಬೆಲೆ ಇದು.
ಇಷ್ಟಕ್ಕೆ ನಿಲ್ಲದ ನಮಗೆ ಎದುರಾದದ್ದು ‘ದೇವರ ನಾಡಲ್ಲಿ’ ಎಂಬ ಚಿತ್ರ. ನಮ್ಮೂರಿನಲ್ಲಿ ಒಂದು ವಾರ ಕಾಲವೂ ಇರದ ಚಿತ್ರ, ನೋಡಲು ನಾಲ್ಕೈದು ಬಾರಿ ಪ್ರಯತ್ನಿಸಿದರು ಸಿನಿಮಾ ನೋಡಲಾಗಲಿಲ್ಲ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವು ಹೀಗೆ ಬಂದು ಹಾಗೆ ಹೋಗಿತ್ತು. ಇನ್ನು ನಮಗೆ ಪಿ. ಶೇಷಾದ್ರಿ, ಬರಗೂರ ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳು ಹಗಲುವೇಷ, ಗುಲಾಬಿ ಟಾಕೀಸ್, ಭಾರತ್ ಸ್ಟೋರ್ಸ್, ಕನಸೆಂಬೋ ಕುದುರೆಯನೇರಿ, ದ್ವೀಪ, ನಾಯಿ ನೆರಳು, ಮುನ್ನುಡಿ.. ಹೀಗೆ ಕಥೆಗಳು ಉತ್ತಮವಾಗಿದ್ದರು, ಈ ಮೇಲಿನ ಚಲನಚಿತ್ರಗಳೆಲ್ಲ ಜನರನ್ನು ತಲುಪುತ್ತಿಲ್ಲ.
ಇನ್ನೊಂದೆಡೆ ಸ್ಟಾರ್ ನಟರೆಲ್ಲಾ ರಿಮೇಕ್ ದಾಸರಾಗಿದ್ದಾರೆ. ತೆಲುಗಿನಲ್ಲಿ ಜ್ಯೂ ಎನ್.ಟಿ.ಆರ್ ಮಾಡಿದ್ದ ಬೃಂದಾವನಂ ಚಿತ್ರವನ್ನು ಕನ್ನಡದಲ್ಲಿ ನಟ ದರ್ಶನ್ ಮಾಡಿದರು. ಮಹೇಶಬಾಬು ನಟನೆಯ ಒಕ್ಕಡು ಚಿತ್ರವನ್ನು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿನಯದಲ್ಲಿ ಅಜಯ್ ತೆರೆಗೆ ಬಂದಿತ್ತು. ತೆಲುಗಿನ ಮಿರ್ಚಿ ಕನ್ನಡದಲ್ಲಿ ಮಾಣಿಕ್ಯ ಅಂತ ಸುದೀಪ್, ರವಿಚಂದ್ರನ್ ಅವರ ಕಾಂಬಿನೇಷನಲ್ಲಿ ತೆರೆಕಂಡ ಚಿತ್ರ.
ಹಿಂದಿಯಲ್ಲಿ ಓ ಮೈ ಗಾಡ್ ಚಿತ್ರವನ್ನು ಕನ್ನಡದಲ್ಲಿ ನಟರಾದ ಉಪೇಂದ್ರ, ಸುದೀಪ್ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದ ಚಿತ್ರ. ಈ ರೀತಿ ಉದಾಹರಣೆ ಕೊಡುತ್ತಾ ಹೋದರೆ ಸಾಕಷ್ಟು ಚಿತ್ರಗಳು ಈ ಪಟ್ಟಿಗೆ ಸೇರುತ್ತವೆ. ಸ್ಟಾರ್ ಗಳಾದವರು ಅಭಿಮಾನಿಗಳಿಗೋಸ್ಕರ ಈ ತರಹದ ಚಿತ್ರ ಮಾಡಲಿ. ಆದರೆ ಕನಿಷ್ಟ ನಾಲ್ಕೈದು ಚಿತ್ರಗಳಾದ ಮೇಲಾದರೂ ಉತ್ತಮ ಕಥೆ ಅಥವಾ ಕಾದಂಬರಿ ಆಧಾರಿತ ಚಿತ್ರವೊಂದನ್ನು ಸ್ಟಾರ್ ನಟರು ಮಾಡಿದರೆ ಕನ್ನಡ ಸಾಹಿತ್ಯವು ಬೆಳ್ಳಿತೆರೆಮೇಲೆ ಕಾಣಿಸಿಕೊಳ್ಳುವುದು ಖಚಿತ.
ಇತ್ತೀಚೆಗೆ ತೆರೆಕಂಡು ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಪಡೆದ ಚಿತ್ರ, ಸ.ಹಿ.ಮಾ.ಪ್ರಾಥಮಿಕ ಶಾಲೆ ಕಾಸರಗೋಡು. ಈ ಚಿತ್ರವನ್ನು ನಾನು ನೋಡಲೆಬೇಕೆಂದು ಪ್ರಯತ್ನ ಪಟ್ಟಿದ್ದ ಯಶಸ್ಸಿನ ಫಲವಾಗಿ ನಾಲ್ಕನೇ ಬಾರಿಗೆ ಚಿತ್ರಮಂದಿರದಲ್ಲಿ ಕುಳಿತೆ. ನಿಜಕ್ಕೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಉತ್ತಮವಾಗಿ ಮೂಡಿಬಂದಿದೆ.
ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ವೈಶಿಷ್ಟ್ಯದಿಂದ ಕೂಡಿದೆ. ಉಪಾಧ್ಯ, ಆ ಶಾಲೆಯ ಮಕ್ಕಳು, ಶಿಕ್ಷಕರು, ಅನಂತನಾಗ್, ತಿಂಡಿಪೋತ (ಭುಜಂಗ) ಹೀಗೆ ಹತ್ತು ಹಲವು ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಅದರಲ್ಲೂ ಮಧ್ಯಂತರದ ನಂತರ ಬರುವ ಅನಂತನಾಗ್, ರಮೇಶ್ ಭಟ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡ ನಿರ್ದೇಶಕರು ಅಬ್ಬಾ ಎಷ್ಟು ಚೆಂದ ಅಲ್ವಾ.
ಮಧ್ಯಂತರದವರೆಗೂ ಶಾಲೆಯ ಮಕ್ಕಳು, ಉಪಾಧ್ಯ, ಮೇಷ್ಟ್ರು, ಪಣ್ಣಿಕರ್, ತಿಂಡಿಪೋತ, ಕುಡುಕ ಚಿತ್ರವನ್ನು ಆವರಿಸಿದರೆ. ನಂತರ ಬರುವ ಅನಂತನಾಗ್ ಇಡೀ ಚಿತ್ರವನ್ನು ಆವರಿಸಿಬಿಡುತ್ತಾರೆ. ಅಪರಾಧ ಶಾಸ್ತ್ರ ಪದವೀಧರನ ಪಾತ್ರದಲ್ಲಿ ಅನಂತನಾಗ್ ಬಹು ಸೊಗಸಾಗಿ ಅಭಿನಯಿಸಿದ್ದಾರೆ. ಮಕ್ಕಳೊಂದಿಗೆ ಆಟವಾಡುತ್ತಲೇ ತನ್ನ ಕೆಲಸವನ್ನು ಮಾಡುವ, ಜಾಲಿ ಜಾಲಿಯಾಗಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣುವ ನಿರ್ದೇಶಕ ರಿಷಬ್ ಶೆಟ್ಟಿಯವರು ಒಂದೆರಡು ದೃಶ್ಯಗಳಲ್ಲಿ ಬಂದರೂ ನೆನಪಿನಲ್ಲಿ ಉಳಿಯುವಂತಾ ಪಾತ್ರ ಅವರದು. ನಿಜಕ್ಕೂ ಚಿತ್ರತಂಡಕ್ಕೊಂದು ಹ್ಯಾಟ್ಸಾಫ್.
ಉತ್ತಮ ಚಿತ್ರಗಳಿಗೆ ಕನ್ನಡಿಗರಷ್ಟೇ ಅಲ್ಲ ಸಹೃದಯ ಪ್ರೇಕ್ಷಕರೆಲ್ಲರೂ ತೆಲೆಬಾಗಿದ್ದಾರೆ, ತೆಲೆಬಾಗಿರುವ ಉದಾಹರಣೆಯು ಸಾಕಷ್ಟಿವೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುವುದಿಲ್ಲ ಅನ್ನುವುದನ್ನು ಸುಳ್ಳಾಗಿಸಿದ ಮುಂಗಾರುಮಳೆ, ದುನಿಯಾ, ಜಾಕಿ, ಟಗರು, ಜನುಮದಜೋಡಿ, ಯಜಮಾನ, ಕಿರಿಕ್ ಪಾರ್ಟಿ,ತಮಸ್ಸು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮೇರಿಕಾ ಅಮೇರಿಕಾ, ಚಿಗುರಿದ ಕನಸು, ಎದೆಗಾರಿಕೆ, ಕಳ್ಳರ ಸಂತೆ, ಹೀಗೆ ಹತ್ತು ಹಲವು ಉತ್ತಮ ಕಥಾ ಹಂದರವುಳ್ಳ ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸಿದ್ದು ಸುಳ್ಳಲ್ಲ.
ಡಾ ರಾಜಕುಮಾರ್, ಡಾ ವಿಷ್ಣುವರ್ಧನ್ ಅವರು ಉತ್ತಮ ಕಥೆ, ಕಾದಂಬರಿಗಳನ್ನು ತೆರೆಗೆ ತಂದಿದ್ದರು. ಈಗಲೂ ಅಲ್ಲೊಂದು ಇಲ್ಲೊಂದು ಕಾದಂಬರಿ ಆಧಾರಿತ ಚಿತ್ರಗಳು ಬರುತ್ತಿವೆ. ಶಿವರಾಮ ಕಾರಂತರ ಚಿಗುರಿದ ಕನಸು ಶಿವರಾಜಕುಮಾರ ನಟನೆಯಲ್ಲಿ ಬಂದಿತ್ತು. ನಿರ್ದೇಶಕಿ ಸುಮನ್ ಕಿತ್ತೂರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಿರಗೂರಿನ ಗಯ್ಯಾಳಿಗಳು, ತಮಸ್ಸು, ಎದೆಗಾರಿಕೆ, ಕಾದಂಬರಿ ಆಧಾರಿತ ಚಿತ್ರಗಳು.
ಒಂದೆಡೆ ಸಧಬಿರುಚಿಯ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ಇನ್ನೊಂದೆಡೆ ಉತ್ತಮ ಚಿತ್ರಗಳು ಬರುತ್ತಿಲ್ಲ ಎನ್ನುವ ಕೂಗು ಸಿನಿ ರಸಿಕರದ್ದು. ಸ್ಟಾರ್ ಗಳಾದವರು ಈಗಲಾದರೂ ಸಾಹಿತ್ಯ ಅಧ್ಯಯನ ಮಾಡಿ ಪ್ರಭಾವಶಾಲಿಯಾದ ಚಿತ್ರಗಳಿಂದ ಸಾಹಿತ್ಯವನ್ನು ಬಳಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತ ಕಲೆ ಕಾಪಾಡಿಕೊಳ್ಳಲಿ. ಇಲ್ಲದಿದ್ದರೆ ಪ್ರೇಕ್ಷಕರಿಲ್ಲ ಅಂತ ಪ್ರದರ್ಶನ ರದ್ದು ಮಾಡುತ್ತಿರುವುದರಿಂದ ಇರುವ ಪ್ರೇಕ್ಷಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಸ್ಟಾರ್ ನಟರನ್ನು ಅನುಕರಿಸುವ ಅಭಿಮಾನಿಗಳಿದ್ದಾರೆ. ನಟರು ಉತ್ತಮವಾದುದನ್ನು ಕೊಡುವ ಶಕ್ತಿ ಹೊಂದಿದ್ದಾರೆ. ಚಲನಚಿತ್ರಗಳಲ್ಲಿ ಸಾಹಿತ್ಯ ಬಳಸಿಕೊಂಡು ಬೆಳ್ಳಿತೆರೆಯಲ್ಲಿ ರಾರಾಜಿಸಲಿ ಎನ್ನುವುದು ಕನ್ನಡಿಗರ ಆಶಯವಾಗಿದೆ.






The author either forgot to mention in which city the incident of cancelling the shows due to lack of audience happened, or I missed it!
But on a serious note, there should be some screens in decent multiplexes run by city corporations or Kannada development authority or some such organization which show award winning, non-commercial ventures on a regular basis with modest ticket prices in prime locations, people will definitely watch them.
There are many people who want to who want to watch good movies and there are many good movies, but the biggest problem is connecting both of them.
There should be few screens in every city/towns which are dedicated to showing good movies..