ಖಾಲಿ ಪತ್ರಗಳ ಖಾಸಗಿ ವಿಷಯ…


ಅದು ಆಕೆಗೆ ಬಂದ ಐದನೆಯ ಅನಾಮಧೇಯ ಪತ್ರ! ಅನಾಮಧೇಯತೆಯೊಂದೇ ಅದರ ವೈಚಿತ್ರವಾಗಿದ್ದರೆ ಆಕೆ ಅದನ್ನು ತಾತ್ಸಾರದಿಂದ ನೋಡಿರುತ್ತಿದ್ದಳೇನೋ. ಆದರೆ ಆ ಪತ್ರದ ವಿಲಕ್ಷಣ ಸ್ವಭಾವ ಆಕೆಯನ್ನು ಚಿಂತೆಗೀಡುಮಾಡಿತ್ತು. ಇದುವರೆಗೆ ಬಂದ ನಾಲ್ಕು ಪತ್ರಗಳಂತೆ ಇದೂ ಕೂಡ ಖಾಲಿ ಹಾಳೆಗಳ ಪತ್ರವೇ ಆಗಿತ್ತು. ಒಂದಕ್ಷರವನ್ನೂ ಬರೆಯದ ಈ ಹಾಳೆಗಳನ್ನು ಸಮನಾಗಿ ಮಡಚಿ ಲಕೋಟೆಯೊಳಗೆ ಇಟ್ಟು ಅವಳ ವಿಳಾಸಕ್ಕೆ ಪೋಸ್ಟ್ ಮಾಡುತ್ತಿದ್ದವರಾದರೂ ಯಾರು ಎಂಬ ಚಿದಂಬರ ರಹಸ್ಯ ಭೇದಿಸಲು ಅವಳಿಗಿನ್ನೂ ಸಾಧ್ಯವೇ ಆಗಿರಲಿಲ್ಲ.

ಮೊದಲನೇ ಪತ್ರ ಕೇವಲ ಒಂದು ಹಾಳೆಯದ್ದಾಗಿದ್ದರೆ ,ಎರಡನೆಯದು ಎರಡು , ಮೂರನೆಯದು ಮೂರು ಹಾಳೆಗಳದ್ದಾಗಿತ್ತು. ಈ ವಿಚಿತ್ರ ವಿದ್ಯಮಾನದ ಬಗ್ಗೆ ತನ್ನ ಗಂಡನೊಂದಿಗೆ ಹೇಳಿಕೊಳ್ಳೋಣ ಎಂದು ಎಷ್ಟೋ ಬಾರಿ ಅನ್ನಿಸಿದರೂ ಧೈರ್ಯ ಸಾಕಾಗಲಿಲ್ಲ. ಈಗ ಐದನೆಯ ಪತ್ರ ಬಂದಾಗ ಆಕೆ ಈ ಬಗ್ಗೆ ತೀವ್ರ ಅಸಮಾಧಾನಗೊಂಡಳು.

ಈ ವಿಷಯವನ್ನು ಹೀಗೇ ಬಿಡಲಾಗದು ಎಂಬ ದೃಢವಾದ ಅಲೋಚನೆಯೊಂದಿಗೆ ಪೋಸ್ಟ್ ಮನ್ ಬರುವ ದಾರಿ ಕಾದಳು. ಹಾಗೆ ಕಾದಾಗಲೆಲ್ಲ ಯಾವ ಪತ್ರವೂ ಬರಲಿಲ್ಲ. ನಿಯಮಿತವಾಗಿ ಇಂತಿಷ್ಟೇ ದಿನಕ್ಕೆ ಆ ಪತ್ರಗಳು ಬರುತ್ತಿರಲಿಲ್ಲವಾದ್ದರಿಂದ ಇವಳ ಕಾಯುವಿಕೆ ನಿರರ್ಥಕವಾಯಿತು. ಯಾವಾಗಲೋ ಒಂದು ದಿನ ಇವಳ ಗಮನಕ್ಕೆ ಬಾರದಂತೆ ಮನೆಯ ಗೇಟ್ ನಲ್ಲಿದ್ದ ಪೋಸ್ಟ್ ಬಾಕ್ಸ್ ನಲ್ಲಿ ಪೋಸ್ಟ್ ಮನ್ ಪತ್ರ ಹಾಕಿ ಹೋಗಿಬಿಡುತ್ತಿದ್ದ. ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಆದರೆ ವಿಳಾಸದಾರರ ಸಹಿ ಪಡೆದು ಪತ್ರ ತಲುಪಿಸುತ್ತಾರೆ ಆರ್ಡಿನರಿ ಪತ್ರಗಳನ್ನು ಬಾಕ್ಸ್ ಗಳಲ್ಲೇ ಹಾಕಿ ಹೋಗುತ್ತಾರೆ. ಹಾಗಾಗಿ ಪೋಸ್ಟ್ ಮನ್ ನಿಂದ ಅವಳಿಗೆ ಅಂಥ ಸಹಾಯವೇನೂ ಆಗಲಿಲ್ಲ.

“ಪ್ರತಿ ಪತ್ರವೂ ಉತ್ತರವನ್ನು ಬಯಸುತ್ತದೆ. ಅದು ಬರೆದವನ(ಳ) ಹಕ್ಕು” ಎಂಬುದನ್ನು ಎಲ್ಲೋ ಓದಿದ್ದ ನೆನಪು ಅವಳಿಗಿದ್ದರೂ ಈ ಪತ್ರಗಳಿಗೆ ಏನೆಂದು ಉತ್ತರ ಬರೆಯೋದು ? ಯಾರಿಗೆ ? ಯಾವ ವಿಳಾಸಕ್ಕೆ ಬರೆಯೋದು? ಎಂಬ ಗೊಂದಲದಲ್ಲಿದ್ದ ಅವಳಿಗೆ ಈ ಖಾಲಿ ಪತ್ರಗಳ ಬಗ್ಗೆ ವಿಶೇಷ ಆಸಕ್ತಿ, ಆತಂಕ, ಆಪ್ತತೆ , ಭಯ , ಅನುಮಾನ ಮತ್ತು ಅಭಿಮಾನ ಎಲ್ಲವೂ ಒಟ್ಟೊಟ್ಟಿಗೆ ಆಗತೊಡಗಿದವು.

ಈ ನಡುವೆಯೇ ಅವಳ ಪತಿ ಒಂದು ವಿಶೇಷವಾದ ಸಿನಿಮಾಕ್ಕೆ ಆಕೆಯನ್ನು ಕರೆದೊಯ್ದರು. ಆ ಸಿನಿಮಾದಲ್ಲಿ ತಮ್ಮ ಕಾಲೇಜ್ ಸಹಪಾಠಿಗಳೆಲ್ಲರೂ ವಾಟ್ಸಪ್ ಗ್ರೂಪ್ ಮೂಲಕ ಸಂಪರ್ಕಕ್ಕೆ ಬಂದು ಒಂದು ಗೆಟ್ ಟುಗೆದರ್ ಮಾಡಲು ಸೇರುವುದು, ಆಗ ಅದರಲ್ಲಿದ್ದ ಹಳೆಯ ಪ್ಲಟಾನಿಕ್ ಲವ್ (ನಿಷ್ಕಾಮ ಪ್ರೀತಿ) ಜೋಡಿಯೊಂದು ಒಬ್ಬರಿಗೆ ಮದುವೆಯಾಗಿದ್ದರೂ ವಿಶೇಷವಾಗಿ ವರ್ತಿಸುವುದು ,ತಮ್ಮ ಶಾಲಾ ದಿನಗಳಲ್ಲಿ ಹೇಳಿಕೊಳ್ಳಲಾಗದ ಪ್ರೀತಿಗಾಗಿ ಇಬ್ಬರೂ ತನ್ಮಯತೆಯಿಂದ ಹಪಹಪಿಸುವಂತೆ ,ಆದರೆ ಎಲ್ಲಿಯೂ ತಮ್ಮ ಪ್ರೀತಿಯನ್ನು ತೋರ್ಪಡಿಸದೆ, ಕೇವಲ ಭಾವನಾತ್ಮಕವಾಗಿ ಅದನ್ನು ವ್ಯಕ್ತಪಡಿಸುವಂತೆ ಇದ್ದ ಆ ಸಿನಿಮಾ ನೋಡಿ ಬಂದಮೇಲೆ ಆಕೆಗೆ ಆ ಪತ್ರಗಳಲ್ಲಿ ವಿಶೇಷ ಆಸಕ್ತಿ ಮೂಡಿತು.

ಮರುದಿನವೇ ಮತ್ತೊಂದು ಪತ್ರ ಬಂತು. ಅದರಲ್ಲಿ ಏನೂ ಬರೆದಿರಲಾರದು ಎಂಬ ಖಚಿತತೆಯಿದ್ದರೂ ಅವಸರದಲ್ಲಿಯೇ ಅದನ್ನು ತೆಗೆದು ಓದಿದಳಾಕೆ. ಏನು ಓದುತ್ತಾಳೆ ? ಆರು ಖಾಲಿ ಹಾಳೆಗಳನ್ನು ತಿರುವಿ ಹಾಕುವುದು ಓದುವಷ್ಟೇ ಸಮಯ ತೆಗೆದುಕೊಂಡದ್ದಾದರೂ ಏಕೆ ? ಕೇವಲ ಖಾಲಿ ಹಾಳೆಗಳಂತೆ ಕಾಣುತ್ತಿದ್ದ ಈ ಹಿಂದಿನ ಎಲ್ಲಾ ಪತ್ರಗಳನ್ನೂ ತೆಗೆದು ಒಂದೊಂದನ್ನೇ ಓದತೊಡಗಿದಳು. ಎಲ್ಲ ಖಾಲಿ ಹಾಳೆಗಳಲ್ಲೂ ಅಸ್ಪಷ್ಟ ಚಿತ್ರವೊಂದು ಮೂಡುತ್ತಲೇ ಇತ್ತು. ಅವಳು ಮನಸ್ಸು ಮಾಡಿದರೆ ಆ ಚಿತ್ರ ಸ್ಪಷ್ಟವಾಗಬಲ್ಲದು.

ಆದರೆ ಆಕೆ‌ಗೆ ಆ ಖಾಲಿತನವೇ ಬೇಕಿತ್ತು. ಏನೂ ಇಲ್ಲದ ಆ ಪತ್ರಗಳಲ್ಲಿ ಏನೇನೋ ಇದೆ ಅನ್ನಿಸತೊಡಗಿತು. ಮೊದಲೆಲ್ಲ ಆ ಪತ್ರಗಳು ಬಂದರೆ ಭಯದಿಂದಲೇ ಅವುಗಳನ್ನು ಮನೆಯೊಳಗೆ ತರುತ್ತಿದ್ದವಳು ಈಗ ತಾನೇ ಪತ್ರಕ್ಕಾಗಿ ಕಾಯತೊಡಗಿದಳು. ಗಂಡನಿಗೆ ಗೊತ್ತಾಗದಂತೆ ಆ ಪತ್ರಗಳನ್ನು ಜೋಪಾನ ಮಾಡಿಟ್ಟಳು ‘ವಾರಕ್ಕೋ, ಹದಿನೈದು ದಿನಕ್ಕೋ ಬರುವ ಈ ಪತ್ರಗಳು ಪ್ರತಿನಿತ್ಯ ಯಾಕೆ ಬರಬಾರದು ?’ ಎಂದುಕೊಳ್ಳುತ್ತಾ, ಯಾವುದೇ ಪತ್ರ ಬರದಿದ್ದಾಗ ತನ್ನ ಬಳಿಯಿದ್ದ ಹಳೆಯ ಪತ್ರಗಳನ್ನೇ ಓದಲು ಶುರು ಮಾಡಿಕೊಂಡಳು. ಅಕ್ಷರಗಳೇ ಇಲ್ಲದ ಖಾಲಿ ಹಾಳೆಗಳು ಹೊಸತಾದರೇನು, ಹಳೆಯದಾದರೇನು ? ಅವುಗಳನ್ನು ಓದುವುದು ತನಗೆ ಮಾತ್ರ ಸಿದ್ದಿಸಿದ ಕಲೆಯೇನೋ ಎಂಬ ಹೆಮ್ಮೆ ಅವಳಲ್ಲಿ ಮೂಡಿತು.

* * * *

ಆ ಖಾಲಿ ಹಾಳೆಗಳಲ್ಲಿ ಅವಳು ಓದಿಕೊಂಡ ಕೆಲವು ವಾಕ್ಯಗಳು ಹೀಗಿದ್ದವು ;

‘ಎಲ್ಲ ಬರೆದು ಬರಿದಾಗುವುದರ ಬದಲು, ಏನೂ ಬರೆಯದೆ ಬಯಲಾಗಲು ಹೊರಟವನು ನಾನು…’

‘ಕೊನೆಯದಾಗಿ ನಾವು ಭೇಟಿಯಾದ ನಂತರ ಹೇಳಲಾಗದ್ದನ್ನು ಈಗ ಬರೆಯುತ್ತಿದ್ದೇನೆ…’

‘ ಬರೆದದ್ದು Factual, ಆದರೆ ಬರೆಯದೇ ಉಳಿದದ್ದು Eternal…’

‘ Heard melodies are sweet ; but those unheard are sweeter…’

‘ ಏನೆಲ್ಲ ಹೇಳಬೇಕೆಂದಿದ್ದರೂ ನೀ ಸಿಕ್ಕಾಗ ಮಾಯವಾಗುತ್ತಿತ್ತಲ್ಲ , ಹಾಗೆ ಮಾಯವಾಗುತ್ತಿದ್ದುದನ್ನೇ ಈ ಹಾಳೆಗಳಲ್ಲಿ ಬರೆದಿಟ್ಟು ಕಳಿಸುತ್ತಿದ್ದೇನೆ. ಈಗಲೂ ಆ ಅಕ್ಷರಗಳು ಮಾಯವಾದರೆ ನನ್ನನ್ನು ದೂರಬೇಡ…’

* * * * *

ಹೀಗೆ ತನ್ನದೇ ಮನಸ್ಸಿನ ಭಾವನೆಗಳನ್ನು ಆ ಖಾಲಿ ಕಾಗದಗಳಲ್ಲಿ ಹುಡುಕುವುದು ಅವಳಿಗೆ ಅಭ್ಯಾಸವಾಗಿ ಹೋಯ್ತು. ಈಗ ಬರುತ್ತಿರುವ ಪತ್ರಗಳಲ್ಲಿ ಅಕ್ಷರಗಳಿರುವುದಿಲ್ಲ ಎಂಬುದು ಅವಳ ಗಮನಕ್ಕೂ ಬರುತ್ತಿರಲಿಲ್ಲ. ಆ ಪತ್ರಗಳ ವಸ್ತು ವಿಷಯಗಳನ್ನು ಅವಳ ಮನಸ್ಸು ಆಗಲೇ ಲೆಕ್ಕಾಚಾರ ಹಾಕಿಬಿಟ್ಟಿರುತ್ತಿತ್ತು.

ಮೊದಲೆಲ್ಲ ಪತ್ರ ಬರೆದದ್ದು ಯಾರಿರಬಹುದೆಂಬ ಅನಿಶ್ಚಿತತೆ ಅವಳಲ್ಲಿರುತ್ತಿತ್ತು. ಪತ್ರ ಬಂದಾಗ ಕಳುಹಿಸಿದವರ ವಿಳಾಸ ಹುಡುಕುತ್ತಿದ್ದಳು . ಆದರೆ ಈಗ ಅದ್ಯಾವುದೋ ಒಂದು ಖಾಯಂ ವಿಳಾಸ ಅವಳ ತಲೆಯಲ್ಲಿ ಹೊಕ್ಕಾಗಿತ್ತು.

ಹೀಗೊಂದು ಅಬಚೂರಿನ ಪೋಸ್ಟಾಫೀಸಿನ ಕತೆ ನಡೆಯುತ್ತಿರುವಾಗಲೇ ಅವಳು ಊರಲಿಲ್ಲದ ದಿನ ಒಂದು ಮೂವತ್ತನೆಯದೋ, ನಲವತ್ತನೆಯದೋ ಪತ್ರ ಬಂತು. ಸಂಜೆ ಆಫೀಸಿನಿಂದ ಬಂದ ಆಕೆಯ ಗಂಡ ಬಾಕ್ಸಿನಿಂದ ಆ ಪತ್ರವನ್ನು ತೆಗೆದುಕೊಂಡು ಹೋಗುವಾಗ ಅದರ ಅಡ್ರೆಸ್ ನಲ್ಲಿದ್ದ “ಶ್ರೀಮತಿ” ಎಂಬ ಶಿರೋನಾಮೆ ಜೊತೆ ತನ್ನವಳ ಹೆಸರು ಕಂಡು ನಸುನಕ್ಕ.

ರಾತ್ರಿ ಮಲಗುವ ಮುನ್ನ ಹೆಂಡತಿ ತವರಿನಿಂದ ಕಾಲ್ ಮಾಡಿದಾಗ ಆ ಪತ್ರ ಬಂದ ವಿಷಯ ಹೇಳಿದ್ದರೆ ಅದೇನು ಅನಾಹುತವಾಗಿಬಿಡುತ್ತಿತ್ತೋ ? ಆದರೆ ಅವನು ಆ ವಿಷಯವನ್ನೇ ಪ್ರಸ್ತಾಪಿಸಿರಲಿಲ್ಲ. ಕಾಲ್ ಕಟ್ ಮಾಡಿದವನು ಬೆಡ್ ರೂಂ ಗೆ ಬಂದು ಗಾದ್ರೆಜ್ ನಲ್ಲಿದ್ದ ಸೀಕ್ರೆಟ್ ಲಾಕ್ ಓಪನ್ ಮಾಡಿದವನು ಪುಳಕಿತನಾದ. ಸರಿಸುಮಾರು ನಲವತ್ತರಷ್ಟು ಲಕೋಟೆಗಳು ಅಲ್ಲಿದ್ದವು.

ಕೆಲವನ್ನು ತೆಗೆದು ನೋಡಿದ. ಅವುಗಳೆಲ್ಲ ಖಾಲಿ ಹಾಳೆಗಳಾಗಿದ್ದವು. ಎಲ್ಲವನ್ನೂ ತೆಗೆದುಕೊಂಡು ಹಾಸಿಗೆ ಮೇಲೆ ಹರಡಿಕೊಂಡ. ಪ್ರತಿ ಲಕೋಟೆಯ ಪತ್ರವನ್ನೂ ತೆಗೆದು ನೋಡಿದ. ಎಲ್ಲ ಲಕೋಟೆಗಳಲ್ಲಿದ್ದ ಹಾಳೆಗಳ ಸಂಖ್ಯೆಗಳನ್ನು ಎಣಿಸಿಡತೊಡಗಿದ. ಎಲ್ಲ ಲಕೋಟೆಗಳನ್ನು ಅವುಗಳಲ್ಲಿರುವ ಹಾಳೆಗಳ ಸಂಖ್ಯೆಗೆ ಅನುಗುಣವಾಗಿ ಜೋಡಿಸಿಟ್ಟ ನಂತರ ಮಧ್ಯದಲ್ಲಿ ಯಾವುದೋ ಒಂದು ನಂಬರಿನ ಹಾಳೆಗಳಿರಬಹುದಾದ ಲಕೋಟೆ ಸಿಗಲಿಲ್ಲ. ಆ ಜಾಗವನ್ನು ಹಾಗೆಯೇ ಬಿಟ್ಟು ಉಳಿದೆಲ್ಲ ಪತ್ರಗಳಲ್ಲಿಯೂ ಇದ್ದ ಒಂದು ಸರ್ವೇ ಸಾಮಾನ್ಯವಾದ ವಾಕ್ಯ ಗಮನಿಸಿದ. ಅದು ತನ್ನ ಹೆಂಡತಿಯದೇ ಕೈಬರಹ ಎಂಬುದರಲ್ಲಿ ಅವನಿಗೆ ಅನುಮಾನವೇ ಇರಲಿಲ್ಲ. ಆ ಸಾಲು ಹೀಗಿತ್ತು:
” ಈ ಪತ್ರ ಓದಿದೆ. ಮುಂದಿನ ಪತ್ರದ ನಿರೀಕ್ಷೆಯಲ್ಲಿರುತ್ತೇನೆ…”

ಎಲ್ಲ ಪತ್ರಗಳಲ್ಲೂ ಆ ಸಾಲು ಓದಿದವ ಆ ದಿನ ಬಂದಿದ್ದ ಹೊಸ ಪತ್ರಕ್ಕೂ ತನ್ನ ಕೈ ಬರಹದಲ್ಲಿ , “ಈ ಪತ್ರ ಓದಿದೆ. ಮುಂದಿನ ಪತ್ರದ ನಿರೀಕ್ಷೆಯಲ್ಲಿರುತ್ತೇನೆ…” ಎಂದು ಬರೆದು ಆ ಪತ್ರಗಳ ಸಮೂಹಕ್ಕೆ ಇದೂ ಒಂದು ಪತ್ರ ಸೇರಿಸಿ ಅವುಗಳ ಮೂಲಸ್ಥಾನದಲ್ಲಿ ಭದ್ರವಾಗಿಟ್ಟ. ರಾತ್ರಿಯಿಡೀ ನೆಮ್ಮದಿಯ ನಿದ್ದೆ ಮಾಡಿದ.

* * * *

ಮರುದಿನ ಬೆಳಗ್ಗೆ ಹಾಫ್ ಡೇ ರಜ ಹಾಕಿ ಪೋಸ್ಟ್ ಆಫೀಸಿನ ಬಳಿ ಹೋಗಿ ಆ ಪೋಸ್ಟ್ ಮನ್ ನ್ನು ಭೇಟಿಯಾದವನು ಹೇಳಿದ್ದೇನೆಂದರೆ :

“ಅದ್ಯಾಕೆ ಒಂದು ಪತ್ರವನ್ನು ನೀವು ತಲುಪಿಸಿಲ್ಲ ? ಎಲ್ಲಿ ಮಿಸ್ ಮಾಡಕೊಂಡ್ರಿ ? ಇನ್ಮೇಲೆ ಹೀಗೆ ಮಾಡಬೇಡಿ. ಅವಳನ್ನು ನಾನು ಅದೆಷ್ಟು ಪ್ರೀತಿಸುತ್ತೇನೆಂಬುದನ್ನು ಎಷ್ಟು ಹೇಳಿದರೂ ನಾಟಕೀಯ ಅನ್ನಿಸಿಬಿಡುತ್ತದೆ. ಆದರೆ ಈ ಪತ್ರಗಳ ಬಗ್ಗೆ ಅವಳಿಗೆ ಅದೆಂಥ ಆಸಕ್ತಿ , ಪ್ರೀತಿ‌, ವ್ಯಾಮೋಹ ಹುಟ್ಟಿದೆಯೆಂದರೆ ಅವಳೇ ಪತ್ರಗಳಿಗಾಗಿ ಕಾಯುವಷ್ಟರ ಮಟ್ಟಿಗೆ ಅವಳೀಗ ನನ್ನ ಪತ್ರಗಳನ್ನು ಹಚ್ಚಿಕೊಂಡಿದ್ದಾಳೆ. ಹಾಗಾಗಿ ಅವಳನ್ನು ಹೀಗೆ ಮತ್ತೆ ಮತ್ತೆ ಕಾಡುವಂತೆ ಮಾಡುತ್ತಲೇ ಇರಬೇಕು ಎಂಬುದು ನನ್ನಾಸೆ. ಇದಕ್ಕಾಗಿಯೇ ನಾನು ಆರ್ಡಿನರಿ ಪೋಸ್ಟ್ ನಲ್ಲಿ ಪತ್ರಗಳನ್ನು ಕಳಿಸುತ್ತಿದ್ದೇನೆ ಮತ್ತು ಇದಕ್ಕಾಗಿ ನಿಮ್ಮ ಸಹಾಯವನ್ನೂ ಕೋರಿದ್ದೆ. ನೀವು ಪತ್ರ ಕೊಡುವುದು ಒಂದೆರೆಡು ದಿನ ತಡವಾದರೂ ಪರವಾಗಿಲ್ಲ ಆದರೆ ಇನ್ಮುಂದೆ ಒಂದೇ ಒಂದು ಪತ್ರವೂ ತಪ್ಪಿಸಿಕೊಳ್ಳಬಾರದು. ಅವಳು ಈ ಪತ್ರಗಳಿಗಾಗಿ ಕಾಯುತ್ತಾಳೆ ಎಂಬ ವಿಷಯ ನನಗೆ ನೀಡುವ ಸಂತೋಷವನ್ನು ನಾನು ಸರಳವಾದ ಪದಗಳಲ್ಲಿ ಹೇಳಲಾರೆ. ಆ ಸಂತೋಷವನ್ನು ಸ್ಥಿರವಾಗಿಡಲು ನಾನವಳಿಗೆ ಪತ್ರ ಬರೆಯುತ್ತಲೇ ಇರುತ್ತೇನೆ. ಅವಳು ಅವುಗಳನ್ನು ರಹಸ್ಯವೆಂಬಂತೆ ಓದುತ್ತಲೇ ಇರಲಿ.” ಎನ್ನುತ್ತಾ ತನ್ನ ಕೈಯಲ್ಲಿದ್ದ ಮತ್ತೊಂದು ಪತ್ರದ ಲಕೋಟೆ ಪೋಸ್ಟ್ ಮ್ಯಾನ್ ಕೈಗಿತ್ತ. ಅದರಲ್ಲಿದ್ದ ‘ ಶ್ರೀಮತಿ’ ಶಿರೋನಾಮೆ ನೋಡಿ, ಅದನ್ನು ನೇವರಿಸಿ ನಸುನಕ್ಕ.

* * * *

ತವರಿನಿಂದ ಬಂದ ಆಕೆ ಬಾಕ್ಸ್ ನಲ್ಲಿದ್ದ ಪತ್ರ ತಗೆದು ಯಥಾ ಪ್ರಕಾರ ಓದಿ, ಗಂಡನಿಲ್ಲದ ಹೊತ್ತಲ್ಲಿ ಸೀಕ್ರೆಟ್ ಲಾಕ್ ತೆಗೆದು ನೋಡಿ ಆ ಪತ್ರಗಳನ್ನೆಲ್ಲ ನೇವರಿಸಿ ನಸುನಕ್ಕಳು. ಪ್ರತಿ ಲಕೋಟೆಯ ವಿಳಾಸದ ಜೊತೆಯಲ್ಲಿದ್ದ ” ಶ್ರೀಮತಿ”ಎಂಬ ಪದ ಅವಳಿಗೆ ಕೇವಲ ಶಿರೋನಾಮೆಯಾಗಷ್ಟೇ ಕಂಡಂತೆ ಆ ದಿನವೂ ಕಂಡಿತಷ್ಟೇ. ಮಲಗುವ ಸಮಯದಲ್ಲಿ ಆತ ತೀರ ಸಹಜವೆಂಬಂತೆ ‘ ಯಾವುದಾದರೂ ಪತ್ರ ಬಂದಿತ್ತ?’ ಎಂದು ಆಕೆಯನ್ನು ಕೇಳಿದ. ” ಇಲ್ಲ ” ಎಂಬುದನ್ನು “ಹೌದು” ಎಂಬಷ್ಟೇ ಖುಷಿಯಿಂದ ಹೇಳಿದ್ದಳಾಕೆ.

ಆಗ ಅವನಲ್ಲಾದ ಆನಂದ ಆಕೆಗೆ ಕಾಣಲಿಲ್ಲ…
ಆಕೆಯಲ್ಲಾದ ಪುಳಕ ಅವನರಿವಿಗೆ ಬಾರಲಿಲ್ಲ…

ಈ ಅವಳು ಕಾಯುವುದು ‘ಅವನ’ ಪತ್ರಗಳಿಗಾಗಿ ಅಲ್ಲ. ಖಾಲಿ ಹಾಳೆಗಳಲ್ಲಿ ಮೂಡುವುದು ‘ಅವನ’ ಚಿತ್ರವಲ್ಲ ಎಂಬುದು ಅವನಿಗೆ ಗೊತ್ತಾದ ದಿನ, ಅವನ ‘ಆನಂದ’ ಮತ್ತು ಅವಳ ‘ಪುಳಕ’ ಎರಡೂ ಕಣ್ಮರೆಯಾಗಬಹುದು.

ಆದರೆ, ಈ ಖಾಲಿ ಕಾಗದಗಳು ತಮ್ಮ ಖಾಸಗಿ ವಿಷಯವನ್ನು ಎಂದೂ ಜಗಜ್ಜಾಹೀರು ಮಾಡಲಾರವು ಎಂಬ ನಂಬಿಕೆ ಅವಳದ್ದು ಮತ್ತು ಅವನದ್ದೂ ಕೂಡ !

ಆ ಖಾಲಿ ಹಾಳೆಗಳಲ್ಲಿ ಮೂಡುತ್ತಿದ್ದ ಅಸ್ಪಷ್ಟ ಚಿತ್ರ ಮಾತ್ರ ಅವಳನ್ನು ಜೀವಂತಿಕೆಯಿಂದ ಇಡಬಲ್ಲದು. ಹಾಗೆಯೇ, ” ಈ ಪತ್ರ ಓದಿದೆ. ಮುಂದಿನ ಪತ್ರದ ನಿರೀಕ್ಷೆಯಲ್ಲಿರುತ್ತೇನೆ…” ಎಂಬ ಸಾಲುಗಳು ಮಾತ್ರ ಅವನಲ್ಲಿ ಅವ್ಯಾಹತವಾದ ಸಂಯಮವನ್ನು ಕಾಪಾಡಬಲ್ಲವು.

‍ಲೇಖಕರು avadhi

December 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

18 ಪ್ರತಿಕ್ರಿಯೆಗಳು

  1. ರೇಣುಕಾ ರಮಾನಂದ

    ಇಲ್ಲ ಎಂಬುದರಲ್ಲಿದೆ ಹೌದು ಎಂಬಷ್ಟೇ ಖುಷಿ..ಬಹಳ ಇಷ್ಟಪಟ್ಟೆ ಬರಹವನ್ನು.
    ಹೊಸಬಗೆ ಗುಂಗಿನ ನಿಶೆ…

    ಪ್ರತಿಕ್ರಿಯೆ
    • ಶಿವಕುಮಾರ್ ಮಾವಲಿ

      ಧನ್ಯವಾದಗಳು ಮೇಡಂ . ನಾನೂ ಖುಷ್

      ಪ್ರತಿಕ್ರಿಯೆ
  2. Jyothi

    ಮುದುಡಿದ ಮನಸು ಕಡದಿದಷ್ಟೇ ಸಂತೋಷ. ಎಲ್ಲೋ ಒಂದು ಕಾಣದ ಆಪ್ತತೆ ತೀರಾ ಹತ್ತಿರ ಸುಳಿದಂತಹ ಭಾವ. ಬರಹ ಭಾವಕ್ಕೆ ಹತ್ತಿರವೇನಿಸಿತು.

    ಪ್ರತಿಕ್ರಿಯೆ
  3. Ahalya Ballal

    ಕುತೂಹಲದಿಂದ ಓದಿಸಿಕೊಂಡ ಕತೆ. ಅಭಿನಂದನೆ.

    ಪ್ರತಿಕ್ರಿಯೆ
  4. ರಾಜೀವ ನಾಯಕ

    ಬ್ಯೂಟಿಫುಲ್ ಬರಹ/ಕತೆ. ವ್ಯಕ್ತ ಮತ್ತು ಅವ್ಯಕ್ತದಲ್ಲಿ ಮನಸ್ಸು ತುಯ್ದಾಡುವ ಬಗೆ ಚೆನ್ನಾಗಿ ಮೂಡಿ ಬಂದಿದೆ. ವಾಸ್ತವ ಮತ್ತು ಕಲ್ಪನೆ- ಖಾಲಿತನವನ್ನು ಉದ್ದೀಪಿಸುವಂತೆ ಅದನ್ನು ಭರಿಸಬಲ್ಲವು ಕೂಡ! ಅನಾಮಿಕ ಪುಳಕ ಮತ್ತು ನಿಗೂಢ ಆನಂದ ಮನುಷ್ಯನ ಜೀವಸೆಲೆ ಜಿನುಗಿಸುವುದು ನಿಜವಾದರೂ, ಅರುಹಿ ಬರಿದಾಗುವ ಮತ್ತು ಅರ್ಥೈಸದೇ ಅಪೂರ್ಣವಾಗುವ ಬದುಕಿನ ವಿಷಾದ ಬರಹದಲ್ಲಿದೆ.
    ತುಂಬಾ ಇಷ್ಟವಾಯಿತು. ಅಭಿನಂದನೆಗಳು.

    ಪ್ರತಿಕ್ರಿಯೆ
    • Shivakumar mavali R M

      ಚೆನ್ನಾಗಿ ಬರೆದಿದ್ದೀರಿ . ಧನ್ಯವಾದಗಳು …

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: