ನಾಯಿಗಳ ಸಾರ್ವಜನಿಕ ರತಿಕೇಳಿ ಮತ್ತು ಭೀಮನ ಶಾಪ !
ಎಚ್ ಎಸ್ ರೇಣುಕಾರಾಧ್ಯ
ನಮ್ಮ ಜನಪದ ಕವಿಗಳು ಅದೆಷ್ಟು ಸೃಜನಶೀಲರು ಅನ್ನೊದಕ್ಕೆ ಕತೆಗೊಂದು ಕತೆಯನ್ನು ಸೃಷ್ಟಿಸಿ, ಅದನ್ನು ತಾರ್ಕಿಕವಾಗಿ ಮಂಡಿಸುವ ಕ್ರಮ ಇದೆಯಲ್ಲ, ಇದು ನಮ್ಮ ಶಿಷ್ಟ ಕವಿಗಳಲ್ಲಿ ಕಾಣುವುದೇ ಇಲ್ಲ. ಇಂಥ ಜನಪದ ಕವಿಗಳ ಮುಂದೆ ಶಿಷ್ಟ ಕವಿಗಳನ್ನ ನಿವಾಳಿಸಿ ಪಕ್ಕಕ್ಕಿಡಬೇಕು ಅನ್ನಿಸುತ್ತೆ.
ಅಂಥ ಸೃಜನಶೀಲತೆಯ ಒಂದು ಉದಾಹರಣೆ ಇಲ್ಲಿದೆ.
ದುರ್ಯೋಧನನೊಂದಿಗೆ ಹೊಂದಾಣಿಕೆಯಾಗದೆ ಹಸ್ತಿನಾಪುರವನ್ನು ಬಿಟ್ಟು ಪಾಂಡವರು ಇಂದ್ರಪ್ರಸ್ಥಕ್ಕೆ ಬಂದು ಅಲ್ಲೊಂದು ಹೊಸ ಅರಮನೆಯನ್ನು ಕಟ್ಟಿಕೊಂಡು ಮಡದಿಯಾದ ದ್ರೌಪದಿ ಹಾಗು ತಾಯಿ ಕೊಂತಿಯೊಂದಿಗೆ ಸುಖವಾಗಿ ಕಾಲಕಳೆಯುತ್ತಿರುವಾಗ ಒಂದು ದಿನ ಭೀಮ, ಉಳಿದ ಅಣ್ಣ ತಮ್ಮಂದಿರನ್ನು ಕೂರಿಸಿಕೊಂಡು ಒಂದು ನ್ಯಾಯವ ಹೇಳಿದನಂತೆ.
“ನೋಡಿ ನಾವು ಐವರು ಗಂಡಂದಿರು ದ್ರೌಪದಿಗೆ. ತಾಯಿ ಮಾತನ್ನು ಮೀರದ ನಾವು ಈ ಮಾತನ್ನೂ ಮೀರುವಂತಿಲ್ಲ. ನನ್ನದೊಂದು ಸಲಹೆ. ಏನಪ್ಪಾ ಅದು ಅಂದ್ರೆ, ನಾವು ಐದು ಜನ ಅಣ್ಣ ತಮ್ಮರಲ್ಲಿ ಯಾರು ದ್ರೌಪದಿಯ ಅರಮನೆಗೆ ಹೋದರೂ “ನಾನು ಒಳಗೆ ಇವ್ನಿ” ಅನ್ನೊ ಗುರುತಿಗೆ, ನಮ್ಮ ಜೋಡುಗಳ ಕಳಚಿ ಬಾಗ್ಲು ಬದೀಲಿ ಬುಡ್ಬೇಕು. ಈ ಜೋಡುಗಳಿರೋ ಗುರುತು ಕಂಡ್ಕೊಂಡು ಅಂತೆ ಹೊತ್ನಲ್ಲಿ ಬ್ಯಾರೆ ಯಾರೂ ಒಳೀಕೆ ಹೋಗ್ಕೂಡ್ದು. ಇದು ನಿಮ್ಮೆಲ್ಲುರ್ಗು ಒಪ್ಕೆ ತಾನೆ ಅಂದ.
ಭೀಮನ ಮಾತಿಗೆ ಎಲ್ಲರೂ ಒಪ್ಪಿದರು. ಒಪ್ಪಂದದ ಪ್ರಕಾರ ಅವುರು ಐದೂ ಜನರು ಒಬ್ಬಳನು ಆಳುತಿರುವಾಗ. ಒಂದಿನ ಭೀಮನು ದ್ರೌಪದಿಯ ನೋಡಲು ಅರಮನೆಗೆ ಬಂದು ಸರಸದಿಂದಿರುವಾಗ, ಅವುರು ಆನಂದ ಪಡುತ್ತಿದ್ದ ಸರಸದ ವೇಳೆ ಧರ್ಮರಾಯನೂ, ದ್ರೌಪದಿಯ ನೋಡಲು ಬಂದನು. ದ್ರೌಪದಿಯ ಬಳಿಯಲ್ಲಿ ಭೀಮನು ಇರುವುದು ಧರ್ಮರಾಯನಿಗೆ ತಿಳಿಯಾದು. ಬಾಗಿಲಿಗೆ ಯಾರಾದ್ರೂ ಜೋಡುಗಳ ಬುಟ್ಟವ್ರ ಅಂಥ ನೋಡಿದ, ಬಾಗ್ಲಲ್ಲಿ ಜೋಡುಗಳು ಕಾಣಲಿಲ್ಲ, ಆಗ ಧರ್ಮರಾಯನು ನಿರಮ್ಮಳವಾದ ಮನಸಲ್ಲಿ ದ್ರೌಪದಿಯ ಅರಮನೆಯ ಬಾಗಿಲ ನೂಕಿ, ದ್ರೌಪದಿ ಮಲಗುವ ಕಿರುಮನೆಗೆ ಬಂದು ನೋಡಬಾರದ ನೋಟಾವ ಕಂಡು, ಕಾಣದವನಂತೆ ಅಲ್ಲಿಂದ ತಕ್ಷಣವೆ ಹೊರಗೆ ಬಂದನಂತೆ.
ಧರ್ಮರಾಯ ಬಂದು ದ್ರೌಪದಿ ಭೀಮರ ಇರುವನ್ನು ಕಂಡದ್ದು ಭೀಮನೂ ನೋಡಿದ, ಮನಸೀಗೆ ಬಾಳ ಬೇಸರವಾಗಿ, ಸ್ನಾನ ಮಡಿಗಳ ಮಾಡಿ ಹೊರಗೆ ಬಂದು “ಏನಣ್ಣ ಹಿಂಗೆ ನಡ್ಕೊಂಡುಬಿಟ್ಟೆಯಲ್ಲ ಹಿರಿಯನಾಗಿ ಇದು ಸರಿಯಾ? ಎಂದ. ಅದಕ್ಕೆ ಧರ್ಮರಾಯನು “ತಮ್ಮಯ್ಯ ಭೀಮ, ನೀನು ಮಾಡಿದ ಕರಾರು ನೀನೆ ಮರುತಲ್ಲಪ್ಪ, ನೀನು ಒಳೀಕೋಗುವಾಗ, ನಿನ್ನ ಮಾತಿನ ಪ್ರಕಾರ ನಿನ್ನ ಜೋಡುಗಳ ಬಾಕ್ಲಲ್ಲಿ ಬುಟ್ಟು ಹೋಗ್ಬೇಕಿತ್ತು ತಾನೆ” ಎಂದು ಅದಕ್ಕೆ ಭೀಮ “ಹೂಂ” ಎಂದ, ಮತ್ತೆ ಯಾಕೆ ಬುಟ್ಟಿರಲಿಲ್ಲ ಎಂದ. ಇದ್ಯಾಕಣ್ಣ ಹಿಂಗ್ ಕೇಳ್ತಿಯೇ? ನಾನು ಬಾಕ್ಲಲ್ಲಿ ಜೋಡುಗಳ ಬುಟ್ಟು ಬಂದಿವ್ನಿ, ನೀನು ನೋಡದೆ ಒಳಕೆ ಬಂದು ನನಗೆ ನಾಚಿಕೆ ಮಾಡ್ಬುಟ್ಟೆ, ಬಾಕ್ಲಲ್ಲಿ ಜೋಡುಗಳಿರಾದ ನೋಡಬಾರ್ದ? ಎಂದ.
ಇಬ್ಬರೂ ಬಂದು ಬಾಕ್ಲಲ್ಲಿ ನೋಡಿದರು ಜೋಡು ಇಲ್ಲ.
ನೋಡುದ್ಯಪ್ಪ? ನನ್ನದು ತಪ್ಪಲ್ಲ ತಾನೆ ಎಂದ ಧರ್ಮರಾಯ.
ನಾನು ಜೋಡ್ಗುಳ ಬುಟ್ಟು ಬಂದಿದ್ದೆ ಕಾಣಣ್ಣ, ಏನಾದ್ವೊ ಕಾಣೆ? ಯಾರಾದ್ರೂ ತಗೊಂಡೋದ್ರೋ, ಅಂತ ಹೇಳಿ ಸುತ್ತ ಮುತ್ತ ಭೀಮ ನೋಡಿದ, ನೋಡಿದರೆ, ಮಾಡಿ ಮೇಗಳಿಂದ ಒಂದು ಹೆಣ್ಣು ನಾಯಿ, ಒಂದು ಗಂಡು ನಾಯಿ ಒಂದೊಂದು ಎಕ್ಕಡವ ಕಚ್ಚಿಕೊಂಡು ಹೋಗುತ್ತಿದ್ದವು. ನೋಡಿದವನೆ ಭೀಮನಿಗೆ ಭಾರಿ ಕ್ವಾಪ ಬಂತು
“ಅಯ್ಯೋ ಪಾಪಿ ನಾಯಿಗಳೆ ನನ್ನ ಎಕ್ಕಡ ಕಚ್ಕೊಂಡೋಗಿ, ಬಾಕ್ಲಲ್ಲಿ ಮಡಗಿದ್ದ ಗುರುತ ಇಲ್ಲದಂಗೆ ಮಾಡುದ್ರಾ? ನನ್ನ ಅಣ್ಣ ನಾನು ಬುಂಡು ಬುಂಡಗೆ ಇರೋದನ್ನ (ಬೆತ್ತಲೆ) ನೋಡಿ ನನಗೆ ಅವುಮಾನ ಆಗೊಂಗೆ ಮಾಡಿದ್ರಾ, ಪಾಪಿ ನಾಯಿಗಳ, ನಾನು ನನ್ನ ಹೆಂಡ್ತಿ ಜೊತೆ ಸರಸವಾಗಿರೋದ ನನ್ನ ಅಣ್ಣ ನೋಡಿ ನನ್ನ ಮಾನ ಹೆಂಗೆ ಹರಾಜು ಆಯ್ತೊ, ಅದೇ ಪ್ರಕಾರವಾಗಿ ನೀವುಗಳೂ ಜೊತೆಗೂಡಿ ಸರಸದಲ್ಲಿರುವಾಗ, ನೀವು ತೂಯ್ದಾಡುವುದ ಕಂಡು ಹಕ್ಳು ಮಕ್ಳುಗಳೆಲ್ಲ ಬೀದಿ ಬೀದಿಗುಂಟ ಅಟ್ಟಾಡ್ತ ಕಲ್ ಕಲ್ಲಲೇ ಹೊಡಿಲಿ, ನಿಮ್ಮ ಜನುಮವೆಲ್ಲ ಬೊಯ್ಲಿ,, ಥೂ ನಾಯ್ಗಳ ನಿಮ್ಮ ಮಾನ ಮೂರು ಕಾಸಿಗೆ ಇಲ್ಲದಂಗೆ ಹರಾಜ್ ಆಗ್ಲಿ ಅಂಥ ಹೇಳಿ ಭೀಮ ಶಾಪ ಕೊಟ್ಟನಂತೆ.
ಮೂಲ : ಜನಪದ ಮಹಾಭಾರತ
( ಸಂ.ಡಾ.ಪಿ.ಕೆ. ರಾಜಶೇಖರ)






0 Comments