ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ರುಮೆ…

ಜಮುನಾ ರಾಣಿ ಹೆಚ್.ಎಸ್.


ನನ್ನದೂ ಒಂದು ಕಥೆ…
ಮುಗಿಯದ ಕಥೆ..
ನನ್ನೊಟ್ಟಿಗೆ ಮುಗಿಯುವ ಕಥೆ.

ನಾನು ರುಮೆ…
ರಾಮಾಯಣವೆಂಬ ಮಹಾಕಥನದಲ್ಲಿ
ನನ್ನದೂ ಒಂದು ಪಾತ್ರ
ಆದರೂ ನಿಮ್ಮ ಕಣ್ಣಿಗೆ ನಾನು ಬಿದ್ದಿಲ್ಲ ಎನ್ನುವುದಂತೂ ಖರೆ
ನಾನೇ ವಾನರ ರಾಜ ಸುಗ್ರೀವನ ಪತ್ನಿ… ರುಮೆ

ನನ್ನದು ಸುಖದ ಕಥೆಯಲ್ಲ
ಸಂಭ್ರಮದ ಕಥೆಯಲ್ಲ
ಬರೀ ನೋವಿನ ಕಥೆ
ಅಪೂರ್ಣವಾಗಿ ಉಳಿಯುವ ಕಥೆ

ದೇವಾಂಶ ಸಂಭೂತ ಸುಗ್ರೀವನ ಮದುವೆಯಾದಾಗ
ನಾಚಿಕೆ, ಅಂಜಿಕೆ ಸಂಕೋಚದಿಂದಲೇ ದಿನಗಳು ಬಿಚ್ಚಿಕೊಂಡವು,
ಹೊಸತನದ ಆತಂಕ ಮುಗಿದು ಸುಖದ ಸವಿ
ಇನ್ನೇನು ಕೈ ಹಿಡಿಯಿತು ಅನ್ನುವ ವೇಳೆಗೆ
ಅವನ್ಯಾರೋ ಗಂಧರ್ವ ಕನ್ಯೆಯೊಬ್ಬಳ
ಅಪರಿಸಿದ್ದನ್ನು ಬೆನ್ನತ್ತಿ ಹೋದ ವಾಲಿ
ಗುಹೆಯೊಳಗಿಂದ ಬರಲೇ ಇಲ್ಲವಂತೆ,
ರಕ್ತ ಪ್ರವಾಹವ ಕಂಡ ಸುಗ್ರೀವ
ಅಣ್ಣ ಸತ್ತನೆಂದು ತಿಳಿದು ಕಿಷ್ಕಿಂದೆಯ ಅರಸನಾದ… ಸರಿ
ಆದರೆ ಅವನ ಪತ್ನಿ ತಾರೆಯ ವರಿಸುವ ಜರೂರೇನಿತ್ತು ?
ಆರ್ಯಾವರ್ತದ ಕಡೆ ಹೀಗೊಂದು ಶಾಸ್ತ್ರವಿದೆಯಂತೆ
ಆದರೆ ಅದನ್ನು ಪಾಲಿಸಬೇಕೆಂಬ ವಿಧಿ ಇಲ್ಲ,
ಆಗಲೇ ನನ್ನ ಮನಸ್ಸು ಕನ್ನಡಿಯ ಹಾಗೆ ಒಡೆದು ಚೂರಾಗಿದ್ದು
ನೀವೇ ಹೇಳಿ ?
ಗಂಡನನ್ನು ಮತ್ತೊಬ್ಬಳೊಂದಿಗೆ ಹೇಗೆ ಹಂಚಿಕೊಳ್ಳಲಿ ?
ಅಧಿಕಾರ ಸಿಕ್ಕಿದ ಸಂಭ್ರಮದಲ್ಲಿ ಸುಗ್ರೀವ
ಸಂವೇದನೆ ಕಳೆದುಕೊಂಡಿರಬಹುದು.
ಆದರೆ ತಾರೆಗೇನಾಗಿತ್ತು ?
ಮೊದಲೇ ಇವರಿಬ್ಬರಿಗೂ ಆಕರ್ಷಣೆ ಇತ್ತೇ ?
ಈ ಸಂದೇಹ ಹುಟ್ಟಿದ್ದಕ್ಕೊಂದು, ಕ್ಷಮೆಯಿರಲಿ


ಮತ್ತೆ ಬಂದ ವಾಲಿ
ಸುಗ್ರೀವನ ಪಕ್ಕದಲ್ಲಿ ತಾರೆಯನು ಕಂಡು ಉರಿಗೆಂಡವಾದ
ತಲೆಗೂದಲ ಹಿಡಿದೆಳೆದು, ತುಳಿದು ಅವನನ್ನು ಹೊರಗಟ್ಟಿದ
ವಾಲಿಯ ಪರಾಕ್ರಮದೆದುರು ಎಲ್ಲರೂ ಸುಮ್ಮನಾದರು
ನಿಜ ಹೇಳಬೇಕೆಂದರೆ ಅವನಿಗೆ ಪೆಟ್ಟು ಬಿದ್ದಾಗ
ಮೊದಲು ಖುಷಿಪಟ್ಟವಳೇ ನಾನು

ಸುಗ್ರೀವನ ಮೇಲಿನ ಸೇಡಿಗೆ
ವಾಲಿಯ ಶಯ್ಯೆಗೆ ನಾನು ಮೈಯೊಪ್ಪಿಸುವಂತಾಯಿತು
ಯಾವ ಹೆಣ್ಣೂ ಬಯಸದ ಹೇಸಿಗೆಯ ಜೀವನ ನನ್ನದಾಯಿತು
ಸುಗ್ರೀವ ವಾಲಿಗೆ ಸವಾಲೊಡ್ಡುತ್ತಲೇ ಹೋದ
ಸೋತು ಸುಣ್ಣವಾದ,
ಭಾವನೆಗಳು ಸತ್ತ ಬದುಕು ನನ್ನದಾಗಿತ್ತು

ಅಂತೂ ನನಗೆ ಬಿಡುಗಡೆಯ ಭಾಗ್ಯ ಬಂತು
ವಾಲಿಯನ್ನು ಕೊಂದ ರಾಮನಲ್ಲಿ ಶಬರಿ, ಅಹಲ್ಯೆಯರಂತೆ
ನನ್ನ ನೋವನೂ ನಿವೇದಿಸಿಕೊಳ್ಳುವುದರಲ್ಲಿದ್ದೆ
ಆದರೆ ಆ ಅವಕಾಶ ದೊರೆತದ್ದು ಮಾತ್ರ ತಾರೆಗೆ
ಕಲ್ಲಾಗಿದ್ದ ಅಹಲ್ಯೆಯ ಕಂಡ ರಾಮನಿಗೆ
ಬದುಕಿದ್ದೂ ಜೀವಚ್ಚವವಾಗಿದ್ದ ನಾನು ಕಾಣಲೇ ಇಲ್ಲ
ಹಟ ಹಿಡಿದು ಅವನನು ಸಂಧಿಸಿ ನನ್ನೊಡಲ ಬಿಚ್ಚಿಟ್ಟರೂ
ರಾಮ ಕೇಳಿಯಾನು ಎಂದು ಹೇಗೆ ನಂಬಲಿ ?
ಸೀತೆಯನ್ನು ಲಂಕೆಯಿಂದ ಕರೆತರಲು
ಅವನಿಗೆ ಸುಗ್ರೀವನ ಅಗತ್ಯವಿತ್ತಲ್ಲವೇ ?
ಅವನ ಮಾತಿಗಿರುವ ಬೆಲೆ ನನ್ನ ಮಾತಿಗೆಲ್ಲಿದೆ
ಎಂದು ಅನ್ನಿಸಿದ್ದಂತೂ ನಿಜ

ಆಮೇಲಿನದೂ ಅಷ್ಟೆ
ತಿಂಗಳಿಗೊಮ್ಮೆ ಮುಖ ತೋರುವ ಸುಗ್ರೀವನದು
ಕೇವಲ ದೇಹಗಳ ಭಾಷೆಯಷ್ಟೆ
ತಾರೆಯೊಂದಿಗಿದ್ದ ಮಾತು ಕಥೆ, ಸರಸ, ಸಲ್ಲಾಪ… ಉಹುಂ
ಯಾವುದೂ ಇಲ್ಲ ನನ್ನೊಟ್ಟಿಗೆ

ವಾಲಿಯೆಡೆಗೆ ನನಗೆ ಯಾವುದೇ ಕೋಪವಿಲ್ಲ
ಅವನು ಕೊಟ್ಟ ದೈಹಿಕ ನೋವು ಸೇಡಿನಿಂದಷ್ಟೇ
ಆದರೆ ಸುಗ್ರೀವ ಕೊಟ್ಟ ಮಾನಸಿಕ ನೋವು
ಕೊನೆವರೆಗೂ ಅಳಿಯಲಾರದು


ರಾಮಾಯಣವ ಕೇಳಿದವರಿಗೆ
ನನ್ನ ಮೌನದ ಮಾತು ಅರ್ಥವಾಗಲಾರದು
ಕಥೆಯೇ ನನ್ನ ಬಗ್ಗೆ ಮೌನ ತಳೆದ ಮೇಲೆ
ಇನ್ನೆಲ್ಲಿಯ ಮಾತು ಅಲ್ಲವೆ ?
ಇದು ರಾಮನ ಕಥೆ, ಸೀತಾದೇವಿಯ ಕಥೆ
ರಾವಣನ ಅಂತ್ಯದ ಕಥೆ…
ಈ ಕಥೆಯೆಂಬ ಮಹಾ ಸಾಗರದಲಿ ಕಂಡೂ ಕಾಣದ
ಬಿಂದು ನಾನು
ನನ್ನ ಬದುಕನ್ನು ನಾನೇ ಬಾಳಬೇಕು
ಯಾರಿರುವರು ನನಗಾಗಿ ಈ ಕಿಷ್ಕಿಂದೆಯಲ್ಲಿ ?
ಹೆತ್ತವರು ? ಗಂಡ ? ಮಕ್ಕಳು ?
ಉಹುಂ, ಯಾರೂ ಇಲ್ಲ
ಬಂಜೆ ಎಂಬ ಕಳಂಕವ ಹೊತ್ತ
ಮುಗಿದ ಮಹಾಕಥೆಯ
ಮುಗಿಯದ ಅಧ್ಯಾಯ ನನ್ನದು…

‍ಲೇಖಕರು Avadhi

15 November, 2018

4 Comments

  1. Nasrin

    ಅಧ್ಬುತ ಮೇಡಂ…ಕವನ ಬಹಳ ಚೆನ್ನಾಗಿದೆ…..

  2. Jamuna Rani

    Thank u

  3. ಸೋಮು ಕುದರಿಹಾಳ

    ಗಂಡನನ್ನು ಮತ್ತೊಬ್ಬಳೊಂದಿಗೆ ಹೇಗೆ ಹಂಚಿಕೊಳ್ಳಲಿ ಅನ್ನುವ ಸ್ತ್ರೀತನದ ಪೊಸೆಸಿವನೆಸ್ ಇಲ್ಲಿ ಗೌಣವಾಗಿ ಸಹಜ ಭಾವವಾಗಿ ಸಂಕಟ ಮೂಡಿಸಿದೆ.
    ಮೊದಲೇ ಆಕರ್ಷಣೆ ಇತ್ತೇ ಎಂಬ ಅನುಮಾನ ಕಾಡುವ ಮನ ಮುನ್ಸೂಚನೆಯನ್ನು ಚಂದಾಗಿ ಹಿಡಿದಿದ್ದೀರಿ..

    ಪೆಟ್ಟು ಬಿದ್ದಾಗ ಮೊದಲು ಖುಷಿಪಟ್ಟವಳೇ ನಾನು ಎಂಬ ಸ್ವಗತ ಸಾಂತ್ವನ ಮಹಿಳಾ ಲೋಕದ ಶಾಶ್ವತ ರೂಢಿ ಎಷ್ಟೋ ನೋವುಗಳನ್ನು ಹೀಗೆ ಸಹಿಸಿಕೊಂಡು ಸಮಾಧಾನಪಡುತ್ತಾಳೆ ಆದರೂ ಗಂಡನಿಗೆ ಏನಾದರೂ ಆದರೆ ಹೆಚ್ಚೇ ಸಂಕಟಪಡುವ ಹೆಣ್ತನ ದೊಡ್ಡಗುಣ.
    ಇಬ್ಬರು ಪುರುಷರ ನಡುವೆ ಸವೆದ ನವೆದ ರುಮೆ
    ಸೀತೆಯಂತೆಯೇ ಆದಳು. ರಾಮ ರಾವಣರಂತೆ ವಾಲಿ ಸುಗ್ರೀವ.. ಪುರುಷರ ನಡುವೆ ವ್ಯತ್ಯಾಸ ಎಲ್ಲಿ ಎಲ್ಲರೂ ಗಂಡಸರೇ ಅಲ್ಲವೇ ಮಹಿಳೆಯರು ಮುಂದೆ..!
    ಹೀಗೆ ಹಲವಾರು ಚಿಂತನೆಗೆ ಹಚ್ಚುವ ಕವಿತೆ ಇಷ್ಟ ಆಯ್ತು ಮೇಡಂ.

  4. jamunarani

    Thank u Somu kudarihala… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading