ನಾನು, ನನ್ನಜ್ಜಿ, ಇಂದಿರಾಗಾಂಧಿ ಮತ್ತು ದೀಪಾವಳಿ…

ಉಗಮ ಶ್ರೀನಿವಾಸ್

‘ಸೀತೆ’ ಅಂತಾ ಯಾವ ಹೆಣ್ಣು ಮಕ್ಕಳಿಗೂ ಹೆಸರಿಡಬಾರದು ಎಂದು ಮನೆಯ ಹಜಾರದಲ್ಲಿ ಪಗಡೆಯಾಡುತ್ತಿದ್ದ ನನ್ನಜ್ಜಿ ‘ಸೀತಮ್ಮಜ್ಜಿ’ ದಾಳ ಉರುಳಿಸುತ್ತಾ ಹೇಳಿದಳು. ಮತ್ತೆ ಸಾವರಿಸಿಕೊಂಡು ರಾಮಾಯಣದಲ್ಲಿ ‘ಸೀತೆ’ಗೆ ಆದ ವನವಾಸವೇ ಈ ಹೆಸರಿಗೆ ಅಂಟಿಕೊಳ್ಳುತ್ತದೆ ಎಂದೇಳಿ ದೇವರಿಗೆ ದೀಪ ಹಚ್ಚಲು ಹೊರಟಳು. ತಾನು ಹುಟ್ಟಿದಂದಿನಿಂದ ಇಲ್ಲಿಯವರೆಗೂ ಪಟ್ಟ ಕಷ್ಟಕ್ಕೆ ‘ಸೀತೆ’ ಎಂಬ ಹೆಸರೇ ಕಾರಣ ಎಂಬುದು ಆಕೆಯ ಬಲವಾದ ನಂಬಿಕೆ. ಇಳಿ ವಯಸ್ಸಿನ ಸೀತಮ್ಮಜ್ಜಿ ಪ್ರತಿ ದಿನ ಬೆಳಗು ಮುಂಚೆ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರನಾಮಗಳನ್ನು ಹಾಡಿಕೊಳ್ಳುತ್ತಿದ್ದಳು. ಪ್ರಾರ್ಥನೆಯ ತುದಿಯಲ್ಲಿ ಇಂದಿರಾಗಾಂಧಿಗೂ ಮುಂಚೆ ನನ್ನನ್ನು ನಿನ್ನ ಪಾದಕ್ಕೆ ಸೇರಿಸಿಕೋ ಎಂಬ ಮೊರೆಯೊಂದಿಗೆ ಅಂದಿನ ಪೂಜೆ ಸಂಪನ್ನವಾಗುತ್ತಿತ್ತು.

ತಿಪಟೂರಿನ ವಠಾರವೊಂದರ ತಮ್ಮ ಮನೆಯ ಹಜಾರದಲ್ಲಿ ಆರಾಮ ಕುರ್ಚಿಯಲ್ಲಿ ಕೂತು ದಿನಪತ್ರಿಕೆ ಓದುತ್ತಿದ್ದ ನ್ಯಾಯವಾದಿಯೂ ಹಾಗೂ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ನನ್ನಜ್ಜನಿಗೆ ಅನತಿ ದೂರದಲ್ಲಿ ಕುಳಿತು ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಸೀತಮ್ಮಜ್ಜಿ ’ಇಂದಿರಾಗಾಂಧಿ’ ಬಗ್ಗೆ ಏನಾದರೂ ವಿಷಯ ಇದ್ಯಾ ಎಂದು ಕೇಳುವಷ್ಟರ ಮಟ್ಟಿಗೆ ದೊಡ್ಡ ಅಭಿಮಾನಿಯಾಗಿದ್ದಳು.

ಒಮ್ಮೆ ಹೀಗಾಯಿತು. ಅದು ಚುನಾವಣೆ ಸಮಯವಿರಬಹುದು. ತಿಪಟೂರಿನ ಹೈಸ್ಕೂಲ್ ಮೈದಾನದಲ್ಲಿ ಇಂದಿರಾಗಾಂಧಿ ಬರುವ ಕಾರ್ಯಕ್ರಮವಿತ್ತು. ಇಡೀ ಊರಿಗೆ ಊರೇ ಇಂದಿರಾಗಾಂಧಿಯನ್ನು ಕಣ್ಣು ತುಂಬಿಕೊಳ್ಳಲು ಹಾತೊರೆಯುತ್ತಿತ್ತು. ಇನ್ನು ಸೀತಮ್ಮಜ್ಜಿಯ ಸಂಭ್ರಮ ಹೇಳತೀರದು. ಇಂದಿರಾಗಾಂಧಿ ಬರಲು ಒಂದು ವಾರವಿರುವಾಗಲೇ ಆಕೆಯ ಮುಖದಲ್ಲಿ ಎಂತದ್ದೋ ಕಳೆ. ತಾನು ಇಷ್ಟಪಡುವ ಇಂದಿರಾಗಾಂಧಿಯನ್ನು ಕಣ್ಣಾರೆ ನೋಡಬಹುದಲ್ಲ ಎಂಬ ಖುಷಿ. ಆಕೆ ಖುಷಿ ಒಂದೆರೆಡು ದಿವಸದಲ್ಲೇ ಇಲ್ಲವಾಯಿತು.

ಕೊನೆ ಕ್ಷಣದಲ್ಲಿ ಇಂದಿರಾ ಕಾರ್ಯಕ್ರಮ ರದ್ದಾಗಿತ್ತು. ಬಹುಶಃ ಅಂದು ಆಕೆಯ ಮುಖದಲ್ಲಾದ ಬೇಸರವನ್ನು ಮತ್ಯಾವತ್ತು ನಾನು ಕಂಡಿರಲಿಲ್ಲ. ಆಗ ಚುನಾವಣೆ ಸಮಯವಾಗಿತ್ತು. ಹಸ್ತದ ಗುರುತಿನ ಬ್ಯಾಡ್ಜ್‌ನಲ್ಲಿ ಇಂದಿರಾಗಾಂಧಿಯ ಫೋಟೋವನ್ನು ಮುದ್ರಿಸಿ ಹಂಚುತ್ತಿದ್ದರು. ಬಿಸಿಲು ಕಾಯಿಸುತ್ತಿದ್ದ ಅಜ್ಜಿಗೆ ಯಾರೋ ಕಾರ್ಯಕರ್ತ ಇಂದಿರಾಗಾಂಧಿ ಭಾವಚಿತ್ರವಿರುರವ ಬ್ಯಾಡ್ಜ್ ಅನ್ನು ಕೊಟ್ಟಿದ್ದ. ಆಕೆ ಕೊನೆಯುಸಿರು ಬಿಡುವ ತನಕವೂ ಆಕೆ ಅದನ್ನು ಜೋಪಾನ ಮಾಡಿದ್ದಳು.

ಪ್ರತಿ ದಿನ ದೇವರಕೋಣೆಗೆ ಹೋಗಿ ತುಪ್ಪದ ದೀಪ ಹಚ್ಚುವಾಗ ಇಂದಿರಾಗಾಂಧಿಗೂ ಮುನ್ನ ನನ್ನನ್ನು ನಿನ್ನ ಬಳಿ ಕರೆದುಕೋ ಎಂಬ ಕೋರಿಕೆ ಇದ್ದೇ ಇತ್ತು. ಅದು ಇಂತದ್ದೇ ದೀಪಾವಳಿ ಸಮಯ. ಮನೆಯ ವಠಾರದವರೆಲ್ಲರೂ ಹಬ್ಬದ ಸಂಭ್ರಮದಲ್ಲಿದ್ದೆವು. ನಾವು ಹುಡುಗರು ಪಟಾಕಿ ಸಿಡಿಸುವ ಖುಷಿಯಲ್ಲಿದ್ದೆವು. ತಾನು ಮಲಗಿದ್ದ ಹಾಸಿಗೆಯಿಂದ ಎದ್ದು ಅಜ್ಜನ ಹಾಸಿಗೆಯತ್ತ ಹೋಗಿ ಉಸಿರು ಬಿಟ್ಟಳು. ಕಾಕತಾಳೀಯವೆಂಬಂತೆ ಅಜ್ಜಿ ಸತ್ತ ಒಂದು ವಾರಕ್ಕೆ ಇಂದಿರಾಗಾಂಧಿ ಕೂಡ ಸಾವನ್ನಪ್ಪಿದ್ದರು. ಅಜ್ಜಿ ಗತಿಸಿ ೪ ದಶಕಗಳೇ ಆಗಿವೆ. ಆದರೆ ಪ್ರತಿ ದೀಪಾವಳಿಯಲ್ಲೂ ಅಜ್ಜಿ ಹಾಗೂ ಇಂದಿರಾಗಾಂಧಿ ಕಣ್ಣ ಮುಂದೆ ಬರುತ್ತಾರೆ.

‍ಲೇಖಕರು Admin

October 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: