ಮಳೆ ಮತ್ತು ನಾನು
ಕೆ ನಲ್ಲತಂಬಿ

ನಾನು ಹುಟ್ಟಿದ್ದು
ಒಂದು ಜಡಿ ಮಳೆ ದಿನ.
ಕುದುರೆ ಗಾಡಿಯಲ್ಲಿ
ತೊಯ್ದ ದೇಹದೊಂದಿಗೆ
ಆಮ್ಮನ ಆಸ್ಪತ್ರೆಗೆ ಕರೆದೊಯ್ದರು
ನಾನು ಗರ್ಭದಲ್ಲೇ ಒದ್ದೆಯಾಗಿದ್ದವನು
ಅಂದಿನಿಂದ
ನನಗೆ ಮಳೆಯೆಂದರೆ ಇಷ್ಟ
ಮೋಡ ಕರಗಿ ಪನ್ನೀರಾಗಿ ಸುರಿವಾಗೆಲ್ಲ
ನಾನು ಆಕಾಶದ ಕೆಳಗೆ
ನನ್ನ ಮೈ ತುಂಬಾ ಮಳೆಯ ಘಮ್ಮುವಾಸನೆಯ
ತುಂಬಿಕೊಂಡೇ ಮನೆಯೊಳಗೆ ಬರುವುದು
ಮಳೆ ಬಂದಾಗೆಲ್ಲ ಎಲ್ಲೂ ಆಶ್ರಯಕ್ಕೆ
ನಿಂತವನಲ್ಲ – ಮರದ ಕೆಳಗೆ ,
ಕಟ್ಟಡದ ಒಳಗೆ.
ಮಳೆಯಲ್ಲಿ ಛತ್ರಿಯ ಮಡಿಚಿಟ್ಟು
ನಡೆವವನು ನಾನು
ಮಳೆ ಬಂದಾಗೆಲ್ಲ ಮೊಮ್ಮಕ್ಕಳ
ಬೀದಿಗೆಳೆದು ಆಡುವ ತಾತ ನಾನು
ತೊಯ್ದು ಬಂದಾಗೆಲ್ಲ
ಮಡದಿಯ ಸೆರಗಲ್ಲಿ ತಲೆ ಒರೆಸಿಕೊಳ್ಳುವ
ಮುಗ್ಧ ಪ್ರೇಮಿ ಇನ್ನೂ
ಮಳೆ ನನಗೊಂದು ಶುಭ ಸಂಕೇತ –
ನಮ್ಮ ಮನೆಯ ಎಲ್ಲ ಹಬ್ಬಹರಿದಿನಗಳಲ್ಲಿ
ಮಳೆ ಕರೆಯದ ಅತಿಥಿ
ಕಾಲ ,ಋತುಗಳ ಕಟ್ಟುನಿಟ್ಟ
ಮೀರಿ ಮೋಡ ಸೀಳಿ ಸುರಿವ ಗೆಳೆಯ
ನನ್ನ ಆಮ್ಮನ ಚಟ್ಟವ ಹೊತ್ತು ನಡೆದಂದೂ
ಜೋರು ಮಳೆ –ತೊಯ್ದ ದೇಹದೊಂದಿಗೆ
ಅವಳ ಅಂತಿಮ ಯಾತ್ರೆ
ಅಂದೇಕೋ ನನ್ನ ಕಣ್ಣೀರಿಂದ
ಆ ಮಳೆ ತೊಯ್ದುಹೋಯಿತು






ತುಂಬಾ ತುಂಬಾ ಇಷ್ಟವಾಯ್ತು ಕವಿತೆ.
ಇಷ್ಟವಾಯ್ತು ಪದ್ಯ.
ತುಂoooooooooooooooooooooooooooooಬಾ ಇಷ್ಟವಾದ ಕವಿತೆ.
ಮನ ಮುಟ್ಟಿತು…
“ಅಂದೇಕೋ ನನ್ನ ಕಣ್ಣೀರಿಂದ
ಆ ಮಳೆ ತೊಯ್ದುಹೋಯಿತು” – ಅದ್ಭುತ ಸಾಲುಗಳು!
ಕಾವ್ಯ ಬಾಳ ಚಂದೈತಿ ರೀ.ಕಣ್ಣೀರಿಂದ ಮಳೆ ಹನಿ ತೊಯ್ದ ಭಾವ ಅದ್ಭುತ.
ಕವಿತೆ ಉತ್ತಮವಾಗಿದೆ
nice..bhavapurna kavite..
Sandhya Rani avare Bahala Bahala Thanks.