ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಏನನ್ನು ಹುಡುಕುತ್ತಿದ್ದೆ?

ಬೇರುಗಳನ್ನು ಅರಸುತ್ತಾ..

ಸುಧಾ ಆಡುಕಳ

ಕೆಲಸಕ್ಕೆಂದು ಬೆಂಗಳೂರಿಗೆ ಹೊರಟ ಮಗನನ್ನು ಕಳಿಸಲೆಂದು ರೈಲು ನಿಲ್ದಾಣಕ್ಕೆ ಮನೆಯವರೆಲ್ಲರೂ ಹೋಗಿದ್ದೆವು. ಪಾಸಿಂಗ್ ಇರುವುದರಿಂದ ಬೆಂಗಳೂರಿಗೆ ಹೋಗುವ ರೈಲು ಸುಮಾರು ಹೊತ್ತು ಅಲ್ಲಿಯೇ ನಿಂತಿತ್ತು. ತಕ್ಷಣವೇ ಆ ರೈಲು ಇಲ್ಲಿಗೆ ಬರುವ ಮೊದಲು ನನ್ನ ಊರಿನ ಮೂಲಕವೇ ಹಾದು ಬರುವುದೆಂಬುದು ನೆನಪಾಯಿತು.

ರೈಲಿನ ಬೋಗಿಯುದ್ದಕ್ಕೂ ಇಣುಕುತ್ತಾ ಸಾಗಿದೆ. “ಯಾರನ್ನು ಹುಡುಕುತ್ತಿರುವೆ?” ಪ್ರಶ್ನೆ ತೇಲಿಬಂತು. ಉತ್ತರ ನನಗೂ ಸ್ಪಷ್ಟವಿರಲಿಲ್ಲ. ಹೌದಲ್ಲಾ, ನಾನು ಯಾರನ್ನು ಹುಡುಕುತ್ತಿದ್ದೇನೆ? ನನ್ನೂರಿನ ಯಾರಾದರೂ ಬೆಂಗಳೂರಿಗೆ ಹೊರಟಿರುವರೆಂದೆ? ಹಾಗೆ ಹೊರಡುವವರು ಇತ್ತೀಚಿನ ತರುಣ ಪ್ರಾಯದವರೇ ಆಗಿರುತ್ತಾರೆ.

 

ಇಪ್ಪತ್ತು ವರ್ಷದ ಹಿಂದೆಯೇ ಹುಟ್ಟಿದೂರನ್ನು ತೊರೆದು ಬಂದ ನನಗೆ ತರುಣ ಪೀಳಿಗೆಯ ಪರಿಚಯವಿರುವುದು ಸಾಧ್ಯವೇ ಇಲ್ಲ. ಇನ್ನು ವಯಸ್ಸಾದ ನನ್ನೂರಿಗರಂತೂ ಬೆಂಗಳೂರಿಗೆ ಹೊರಡುವ ಸಾಧ್ಯತೆಗಳು ತೀರ ಕಡಿಮೆ. ಆದರೂ ನನ್ನೊಳಗಿನ ಹುಡುಕಾಟಕ್ಕೊಂದು ಕಾರಣವಂತೂ ಬೇಕೇ ಬೇಕೆನಿಸಿತು. ಏನೇ ದೊಡ್ಡ ಖಾಯಿಲೆ ಬಂದರೂ ಮಂಗಳೂರಿಗೆ ಬರಬೇಕಾದದ್ದು ನನ್ನೂರಿನ ದುರಂತಗಳಲ್ಲೊಂದು.

ಹಾಗೆ ಆಸ್ಪತ್ರೆಗೆ ಹೊರಟರ‍್ಯಾರಾದರೂ ಖಂಡಿತ ರೈಲಿನಲ್ಲಿ ಇರಬಹುದೆನಿಸಿತು. ಪ್ರಶ್ನಿಸಿದವರಿಗೆ ಅದನ್ನೇ ಉತ್ತರವಾಗಿ ಹೇಳಿದೆ. ಮತ್ತೊಮ್ಮೆ ಇಣುಕುತ್ತಾ, ಯಾರನ್ನೂ ಕಾಣದೇ ನಿರಾಸೆಗೊಳ್ಳುತ್ತಾ, ರೈಲು ಸಿಳ್ಳೆ ಹೊಡೆದು ಹೊರಟೊಡನೇ ಮಗನಿಗೆ ವಿದಾಯ ಹೇಳಿ ಮನೆಗೆ ಹೊರಟಾಗಲೂ ಮತ್ತದೇ ಪ್ರಶ್ನೆ ನನ್ನನ್ನು ಕಾಡುತ್ತಿತ್ತು, ಕೊಂಚ ಬದಲಾವಣೆಗೊಂಡು. ನಾನು ಏನನ್ನು ಹುಡುಕುತ್ತಿದ್ದೆ?.

ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿ ಐದು ವರ್ಷಗಳನ್ನು ಕಳೆದುಬಂದ ನನ್ನ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದರು, “ಪ್ರತಿ ಶನಿವಾರವೂ ಮೆಜೆಸ್ಟಿಕ್‌ನಲ್ಲಿ ನಿಂತು ರಾತ್ರಿ ಊರಿನ ಕಡೆಗೆ ಹೊರಡುವ ಬಸ್‌ಗಳನ್ನು ಇಣುಕುವುದು ಒಂದು ಹವ್ಯಾಸವೇ ಆಗಿ ಹೋಗಿತ್ತು. ಊರಿನರ‍್ಯಾರಾದರೂ ಸಿಗುತ್ತಾರೇನೋ ಎಂದು ಹಂಬಲಿಸುವುದು, ಸಿಕ್ಕಾಗ ಅವರೊಂದಿಗಿಷ್ಟು ಮಾತನಾಡುವುದು, ಮತ್ತೆ ಅವರು ಬಸ್ಸೇರಿ ಹೊರಟಾಗ ನಾನೇ ಊರಿಗೆ ಹೊರಟಂತೆ ಸಂಭ್ರಮಿಸುವುದು. ಅವರು ತೀರ ಮನೆಯ ಹತ್ತಿರದವರಾದರೆ ಮನೆಯಲ್ಲಿ ನನ್ನ ವಿಷಯ ಹೇಳಿ ಬರುವಾಗ ಏನಾದರೂ ಊರಿನ ತಿನಿಸುಗಳನ್ನು ತಂದುಕೊಡುತ್ತಿದ್ದರು. ದೂರವಿದ್ದಾಗಲೇ ಊರಿನ ಬೆಲೆ ತಿಳಿಯುವುದು” ಎಂದು.

ತಿಂಗಳಿಗೊಮ್ಮೆಯೋ ಅಥವಾ ಎರಡು ಸಲವೋ ಊರಿಗೆ ಹೋಗಿ ಬರುತ್ತಿದ್ದ ನನಗೆ ಆಗ ಅವರು ಹೇಳಿದ್ದು ಅಷ್ಟೊಂದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಕಾಲವುರುಳಿದಂತೆ, ಸಂಬಂಧಗಳೆಲ್ಲ ಹೊಸಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಬೇರುಗಳೆಲ್ಲ ಸಡಿಲಗೊಂಡ ಅನುಭವವಾಗಿತ್ತು. ಆಗೊಮ್ಮೆ, ಈಗೊಮ್ಮೆ ಪ್ರತ್ಯಕ್ಷವಾಗುವ ಅಲೆಮಾರಿಗಳನ್ನು ಸ್ವಂತ ಊರು ಕೂಡ ಅಷ್ಟು ಗಾಢವಾಗಿ ತೆಕ್ಕೆಗೆ ತೆಗೆದುಕೊಳ್ಳಲಾಗದು.

ಇವರು ಅಲ್ಲೆಲ್ಲೋ ಪರವೂರಿನಲ್ಲಿ ಕೆಲಸ ಮಾಡುತ್ತಿರುವವರು ಎಂಬ ಚಹರೆಯಲ್ಲಿಯೇ ಅದು ಗುರುತಿಸುತ್ತದೆ. ಹಾಗೆಯೇ ಎಷ್ಟೋ ವರ್ಷಗಳು ವಾಸವಿದ್ದವರನ್ನೂ ಪರವೂರು ವಲಸಿಗರೆಂದೇ ಗುರುತಿಸುವುದು. ಎಷ್ಟೋ ಸಲ ಊರಿಂದ ಊರಿಗೆ ಚಲಿಸುವ ನಾವುಗಳು ಬೇರುಕಿತ್ತ ಸಸಿಗಳಂತೆಯೇ ಭಾಸವಾಗುವುದಿದೆ. ಮತ್ತೆ ಹೊಸಮಣ್ಣಲ್ಲಿ ತಳವೂರಿ ಬೇರು ಬಿಡಬೇಕಾದುದು ಅನಿವಾರ್ಯವೂ ಆಗಿದೆ. ಈ ಪರಕೀಯತೆಯ ಭಾವವೇ ಅಲ್ಲಲ್ಲಿ ನಮ್ಮವರನ್ನು ಆಸೆಪಟ್ಟು ಹುಡುಕುವಂತೆ ಮಾಡುತ್ತದೆಯೇನೊ?

 

ಒಮ್ಮೆ ಮಗ ನನ್ನನ್ನು ಕೇಳಿದ್ದ. “ಯಾರಾದರೂ ನನ್ನ ಊರು ಯಾವುದೆಂದು ಕೇಳಿದರೆ ಏನು ಹೇಳಬೇಕೆಂದು ಗೊಂದಲಗೊಳ್ಳುತ್ತೇನೆ. ಹುಟ್ಟಿದೂರು ಒಂದಾದರೆ ನನ್ನ ಬಾಲ್ಯವನ್ನು ಕಳೆದದ್ದು ಇನ್ನೊಂದೇ ಊರಿನಲ್ಲಿ. ಹದಿಹರೆಯದಲ್ಲಿ ಗೆಳೆಯರ ಬಳಗ ಕಟ್ಟಿಕೊಂಡದ್ದು ಮತ್ತೊಂದೇ ಊರಿನಲ್ಲಿ. ಕುಟುಂಬವನ್ನು ಬಿಟ್ಟು ಸ್ವತಂತ್ರವಾದ ಬದುಕನ್ನು ಆಸ್ವಾದಿಸಿದ್ದು ಮಗದೊಂದು ಊರಿನಲ್ಲಾದರೆ, ಉದ್ಯೋಗ ನಿಮಿತ್ತ ಇರುವುದು ಬೇರೆಯೇ ಊರಿನಲ್ಲಿ.

ಆದರೂ ಯಾವೂರು ಎಂದು ಕೇಳಿದಾಗ ಎಲ್ಲರೂ ತಮ್ಮ ಪೂರ್ವಿಕರು ವಾಸವಾಗಿದ್ದ ಊರಿನ ಹೆಸರನ್ನೇ ಹೇಳುತ್ತಾರಲ್ಲ ಯಾಕೆ? ಮನೆಕಟ್ಟಿ ವಾಸ ಮಾಡಿದ ಮೇಲೆಯೂ ತಮ್ಮ ಪೂರ್ವಿಕರ ಊರಿನಿಂದಲೇ ಗುರುತಿಸಿಕೊಳ್ಳಬೇಕಾ? ಅದು ಎಷ್ಟು ತಲೆಮಾರಿನ ಕಾಂಟ್ರಾಕ್ಟ್?” ಎಂದು. ನಾನೂ ಯೋಚಿಸತೊಡಗಿದೆ, “ಹೌದಲ್ಲ, ನಮ್ಮ ಊರು ಎಂದು ನಿರ್ಧಾರ ಮಾಡುವ ಮಾನದಂಡಗಳೇನು?” ಎಂದು. ಅದು ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ.

ಹಾಗೆ ಕೇಳಿದ ಮಗ ಕೆಲವೊಮ್ಮೆ ಹೆಮ್ಮೆಯಿಂದ ಹೇಳುವುದೂ ಇದೆ, “ನನ್ನ ಗೆಳೆಯರೆಲ್ಲ ನನ್ನನ್ನು ತೀರ ಕುತೂಹಲದಿಂದ ನೋಡುತ್ತಾರೆ. ಯಾಕೆಂದರೆ ಶಾಂತಿನಿವಾಸ ಚಿತ್ರದಲ್ಲಿ ಸುದೀಪ್ ತಾನು ಎಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಆ ಕೆಲಸ ಮಾಡುತ್ತಿದ್ದೆ, ಈ ಕೆಲಸ ಮಾಡುತ್ತಿದ್ದೆ ಎಂದು ಹೇಳುವಂತೆ ನಾನು ಕರ್ನಾಟಕದ ಸುಮಾರು ಊರುಗಳ ಹೆಸರು ಹೇಳಿದಾಗ ಅದು ನಾನಿದ್ದ ಊರು ಎನ್ನುತ್ತೇನೆ. ಆಗ ಅವರು ಸರೀ ಹೇಳು ಮಾರಾಯ, ಯಾವ ಊರಿನಲ್ಲಿ ನೀನು ಇರಲಿಲ್ಲವೆಂದು ಎನ್ನುತ್ತಾ ಛೇಡಿಸುತ್ತಾರೆ. ಆಗ ಅದೆಲ್ಲ ಊರುಗಳೂ ನನ್ನದೇ ಅನಿಸುತ್ತದೆ” ಎಂದು.

ಆದರೆ ಬಾಲ್ಯ, ಹರೆಯವೆಲ್ಲವನ್ನೂ ಒಂದೇ ಮನೆಯ ಜಗುಲಿಯಲ್ಲಿ ಕಳೆದ ನಮ್ಮಂಥವರಿಗೆ ಅದರ ನೆನಪು ಅಳಿಸಲಾರದ ಚಿತ್ತಭಿತ್ತಿಯಾಗಿ ಅಂಟಿಕೊಂಡೇ ಇರುತ್ತದೆ. ಅಲ್ಲಿನ ಗಾಳಿಯಲ್ಲಿ ಹಾದು ಬಂದ ರೈಲು ಕೂಡ ಊರಿನ ಘಮವನ್ನು ಹೊತ್ತು ತರುತ್ತದೆ. ಬಹುಶಃ ಅದನ್ನೇ ನಾನು ಹುಡುಕುತ್ತಿದ್ದೆನೇನೊ?

‍ಲೇಖಕರು avadhi

10 September, 2019

6 Comments

  1. ಅರೆಹೊಳೆ ಸದಾಶಿವ ರಾವ್

    ನನ್ನದೂ ಇದೇ ಅವಸ್ಥೆ. ಅದು ಸರಿ…ತಮ್ಮ ಬರವಣಿಗೆ ನಮ್ಮದೂ ಎಂಬಂತೆ ಬರಿತೀರಲ್ಲ….ಅದು ಹೇಗೆ ಎಂಬುದೇ ಈಗ ನಾನು ಹುಡುಕುತ್ತಿರುವುದು…

    • Sudha Hegde

      Thank u

  2. Shripad bhat

    ನನಗಂತೂ ಊರಿನ ಜತೆ ಸೇರಿದ ಎಷ್ಟೆಲ್ಲ ಹೆಸರಿದೆ ಅಂದ್ರೆ , ನನ್ನೂ ಯಾವುದು ಕೇಳಿದರೆ ಈಗ ನಾನಿರುವ ಊರು ಎಂಬ ಹೆಸರೇ ಸತ್ಯ ಅನಿಸುವದು. ಶ್ರೀಪಾದ್ ಧಾರೇಶ್ವರ, ಶ್ರೀಪಾದ್ ಶೇಷಗಿರಿ, ಶ್ರೀಪಾಸ್ ತಿಳವಳ್ಳಿ, ಶ್ರೀಪಾದ್ ಶಿರಸಿ, ಅಂತೆಲ್ಲ ಆಗಿದೆ. ಮುಂದೇನೋ ಗೊತ್ತಿಲ್ಲ.

    • Sudha Hegde

      ನೀನು ಸರ್ವಾಂತರ್ಯಾಮಿ ಬಿಡು

  3. T S SHRAVANA KUMARI

    ಆತ್ಮೀಯವಾದ ಲೇಖನ

    • Sudha Hegde

      Thank u

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading