ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನಿರುವೆ ಜೊತೆಯಲಿ ನನ್ನದಲ್ಲವೇ ನಿನ್ನ ಅಳಲು..

ಸರೋಜಿನಿ ಪಡಸಲಗಿ

ಅತ್ತ ಇತ್ತ ತೇಲಾಡಿ ಅಲ್ಲಿ ಇಲ್ಲಿ ಹಾರಾಡಿ
ದಣಿದ ಯೋಚನೆಯು ನುಸುಳಿತಲ್ಲಿ
ಮನದ ಸಂದಿಯಲಿ ಸಿಕ್ಕಿತೊಂದು ಠಾವೆಂದು
ವಿಶ್ರಮಿಸುತಿದೆ ಬಸವಳಿದು ಬಳಲಿಬೆಂಡಾಗಿ

ತರ ತರದ ರೂಪಗಳ ಆಕಾರ ವಿಕಾರಗಳ ಕಂಡು
ಕಣ್ಬಿಟ್ಟು ನೋಡುತಿಹುದು ಆ ಯೋಚನೆ
ಏನು ಈ ಮನದ ಪಾಡು ಏನಿದರ ಹಾಡು
ಕೇಳುತಿದೆ ಕಿವಿಗೊಟ್ಟು ಅಲ್ಲಿಯೇ ದಿಟ್ಟಿ ನೆಟ್ಟು

ಕಂಡಿತು ಮನ ಹೊರಳುವುದನು ನೊಂದ ಬೆಂದ
ಮೊಗ ದತ್ತ ಕಣ್ಣೀರೊರೆಸಲು ಧಾವಿಸುತ್ತ
ಯಾಕೆ ಈ ನೋವು ಯಾಕೆ ಈ ಗೋಳು
ನಾನಿರುವೆ ಜೊತೆಯಲಿ ನನ್ನದಲ್ಲವೇ ನಿನ್ನ ಅಳಲು

ಅತ್ತ ನೋಡೆ ಅಲ್ಲೊಂದು ಪೆಚ್ಚು ಮುಖ
ಕಣ್ತುಂಬಿ ನಿಂದ ವೇದನೆ ಎದೆತುಂಬಿ ಆಕ್ರಂದನ
ಬಿಟ್ಟು ಅಳುವ ಮೊಗವ ಬೊಗಸೆ ತುಂಬಾ ಹಿಡಿದು
ಪೆಚ್ಚು ಮುಖಕೆ ಹೇಳಿತ್ತು ನಗು ಬೀರು ನೋಡಿತ್ತ

ಆ ಮೊಗವ ಸವರಿ ಈ ಮೊಗವ ಮುದ್ದಿಸೆ
ತಾಕಿ ಹುದು ಅಲ್ಲೊಂದು ಸುಯ್ಯುತಿಹ ಬಿಸಿಯುಸಿರು
ಕಣ್ಣೆತ್ತಿ ನೋಡೆ ಕಂಡಿತೊಂದು ಗರಬಡಿದು
ಗೋಡೆ ಹಿಡಿದು ತಡವರೆಸುತಿಹ ಮೊಗನೊಂದ

ಏನಾಯ್ತು ಹೇಗಾಯ್ತು ನಿಲ್ಲು ಬೀಳಬೇಡ
ಇಲ್ಲಿ ಹುದು ನಿನಗಿಂಬು ಇಹುದೊಂದು ಆಸರೆ
ನಾನಿರುವಾಗ ಯಾಕೆ ಹೇಳು ಈ ವೇದನೆ
ಯಾಕಿರುವೆ ಹೀಗೆ ಮಂಕಾಗಿ ಕಿತ್ತೆಸೆದೇಳು ಎಂದಿತ್ತು

ಅಲ್ಲಿಯೇ ಹಿತವಾದ ಹೂನಗುವ ಬೀರುವ ಮೊಗ
ನೋಡುತ್ತಿತ್ತು ಈ ಎಲ್ಲ ತಾಕಲಾಟದ ನೋಟವ
ಅದು ನೋಡಿ ಮನದ ಅಧರಲಿ ಮೂಡಿತೊಂದು
ಹುಸಿ ನಗುವಿನ ಕಿರಣ ಅದುಮಿಟ್ಟು ನೋವು ಗರ ಪೆಚ್ಚನ

ಮೈಮುರಿದೆದ್ದಿತು ಯೋಚನೆ ಸಾಕಿನ್ನು ವಿಶ್ರಾಂತಿಯೆಂದು
ಒರಗುತ್ತ ಅಡರುತ್ತ ಹೇಳಿತು ಆ ಪುಟ್ಟ ಮನಕೆ
ನಾ ಹೋಗಲಾರೆ ಬಿಟ್ಟು ನಿನ್ನ ಠಾವೆಂದು
ನಸು ನಕ್ಕು ಹೇಳಿತಾ ಮನ ನಾನಿರುವೆನೆ ಇರದೆ ನೀನು
ನೀನಲ್ಲದೆ ನನಗ್ಯಾರಿಹರು ಹೇಳು ಜೊತೆಗೆ

‍ಲೇಖಕರು Avadhi GK

25 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading