ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾನಾದರೂ ಎಂಥವಳಿರಬಹುದು..’

ಆಶಾ ಜಗದೀಶ್

ನಾನಾದರೂ ಎಂಥವಳಿರಬಹುದು
ಈ ನೋವನ್ನು ಸದಾ ಅಪ್ಪುತ್ತೇನೆ

ನಾನಾದರೂ ಎಂಥವಳಿರಬಹುದು
ಈ ನೋವನ್ನು ಸದಾ ಲಾಲಿಸುತ್ತೇನೆ

ನಾನಾದರೂ ಎಂಥವಳಿರಬಹುದು
ಈ ನೋವನ್ನು ಸದಾ ಪೋಷಿಸುತ್ತೇನೆ

ನಾನಾದರೂ ಎಂಥವಳಿರಬಹುದು
ಈ ನೋವನ್ನು ಬಚ್ಚಿಟ್ಟುಕೊಳ್ಳುತ್ತೇನೆ

ನಾನಾದರೂ ಎಂಥವಳಿರಬಹುದು
ಈ ನೋವನ್ನು ನಾಳೆಗೂ ಉಳಿಸಿಟ್ಟುಕೊಳ್ಳುತ್ತೇನೆ

ಬಹುಶಃ ಈ ನೋವೇ ನನ್ನ
ಅಸ್ತಿತ್ವವಿರಬಹುದು…
ಅದಿಲ್ಲದೇ ನಾನು ನಾನಲ್ಲದೇ
ಇರಬಹುದು…

ಆದರೂ ಅವನ ಮೇಲೆ ಹೊರಿಸಲು ತಕರಾರುಗಳ ಮೂಟೆಯನ್ನು ಹೊತ್ತು ತಿರುಗುವ
ನಾನಾದರೂ ಎಂಥವಳಿರಬಹುದು

ತಕರಾರುಗಳ ಹೂವಿನ ಎದೆಯಾಳದಲ್ಲಿ ಮಕರಂದವನ್ನು ಅವನಿಗಾಗಿ ಮಾತ್ರ ಮೀಸಲಿಟ್ಟು
ತಿರುಗುವ ನಾನಾದರೂ ಎಂಥವಳಿರಬಹುದು

ಹಂಚಲು ಸಮಯ ಹೊಂಚುತ್ತಾ
ಅವನದೇ ಚಿಂತೆಯಲ್ಲಿ ಕಳೆದ ಕ್ಷಣಗಳ
ಚಿತೆಯೇರುವ ನಾನಾದರೂ ಎಂಥವಳಿರಬಹುದು

ಒಂದು ಮುದ್ದು ಕ್ಷಣ ನಮ್ಮ ಮಿಲನಕ್ಕಾಗಿ
ಜನಿಸಲೆಂದು
ಸದಾ ಪ್ರಾರ್ಥಿಸುವ ನಾನು…
ಒಂದು ಸಂಜೆಯ ರಾಗ ಒಂದು ಮುಂಜಾನೆಯ ರಂಗನು
ನೀವಾಳಿಸಿ ತೆಗೆದು ಲಟಿಕೆ ಮುರಿಯಲಿಕ್ಕಾಗಿ
ಬೋಗುಣಿಯಲಿ ತುಂಬಿಟ್ಟುಕೊಳ್ಳುವ
ನಾನು…

ಈ ನಾನಾದರೂ ಎಂಥವಳಿರಬಹುದು

ಆದರೆ ಪ್ರೇಮದ ವ್ಯಾಖ್ಯಾನ ಗೊತ್ತಿಲ್ಲದ ನಾನು
ಪ್ರೀತಿಯ ವರ್ಣಮಾಲೆ ತಿಳಿಯದ ನಾನು
ಅನುರಾಗದ ಅಪರಾವತಾರವಾದದ್ದು ಹೇಗೆಂದು
ಅರಿವೇ ಆಗದ ನಾನು

ಈ ನಾನಾದರೂ ಎಂಥವಳಿರಬಹುದು…

‍ಲೇಖಕರು Avadhi

15 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading