ನಾಗೇಶ್ ಹೆಗಡೆ ಓದಿದ ‘ಸೌಹಾರ್ದ ಕರ್ನಾಟಕ’

“ನಂಜುಣಿಸುವವರ ನಡುವೆ ಅಮೃತ ಹಂಚುವ ಕೆಲಸ”

ನಾಗೇಶ್ ಹೆಗಡೆ

ಅನೇಕ ಬಗೆಯ ದಾಖಲೆಗಳೊಂದಿಗೆ ಒಂದು ಅಪೂರ್ವ ಪುಸ್ತಕ ಬಂದಿದೆ. ಗೆಳೆಯ ಚಂದ್ರಕಾಂತ ವಡ್ಡು ಅವರು “ಸೌಹಾರ್ದ ಕರ್ನಾಟಕ” ಹೆಸರಿನ ಪುಸ್ತಕದ ಮೊದಲ ಸಂಪುಟವನ್ನು ಲೋಕಾರ್ಪಣೆ ಮಾಡಿದ್ದಾರೆ. ಢಾಳಾಗಿ ಕಾಣುವ ದಾಖಲೆ ಏನೆಂದರೆ ಕೇವಲ 40 ದಿನಗಳಲ್ಲಿ 48 ಲೇಖಕರ ಇನ್ನೂರು ಪುಟಗಳ ಈ ಚೊಕ್ಕ ಚಂದದ ಪುಸ್ತಕ ಹೊರಬಂದಿದೆ.

ಇಷ್ಟು ಕ್ಷಿಪ್ರ ಅವಧಿಯಲ್ಲಿ ಅಷ್ಟೊಂದು ಜನರಿಂದ (ಅದೂ ಖ್ಯಾತನಾಮರಿಂದ) ಲೇಖನವನ್ನು ಬರೆಸುವುದೆಂದರೆ ಸಣ್ಣ ಮಾತಲ್ಲ; ಅವರಿಗೆಲ್ಲ ವಿಷಯ ಕೊಟ್ಟು, ಒಂದೋ ಎರಡೋ ಮೂರೋ ಬಾರಿ ರಿಮೈಂಡರ್‌ ಕಳಿಸಿ ತರಿಸಿಕೊಂಡು, ಅವನ್ನೆಲ್ಲ ಅಚ್ಚುಕಟ್ಟಾಗಿ ಜೋಡಿಸಿ, ಪ್ರೂಫ್‌ ಚೆಕ್‌ ಮಾಡಿ, ಮುದ್ರಿಸಿ ಪುಸ್ತಕ ರೂಪದಲ್ಲಿ ತರುವುದೆಂದರೆ ವರ್ಷಗಟ್ಟಲೆ ಹಿಡಿಯುತ್ತದೆ. ಆ ಇಡೀ ಕೆಲಸವನ್ನು ದೀಕ್ಷೆಯಂತೆ, ಧ್ಯಾನದಂತೆ ಮಗ್ನಭಾವದಲ್ಲಿ ಕೈಗೊಂಡರೆ ಮಾತ್ರ ಸಾಧ್ಯ. ವಡ್ಡೂ ಅದನ್ನು ಸಾಧಿಸಿದ್ದಾರೆ. ಗೊತ್ತಲ್ಲ, ಅವರು “ಸಮಾಜಮುಖಿ” ಪತ್ರಿಕೆಯ ಸಂಪಾದಕರು.

ಹಿಂದೂ-ಮುಸ್ಲಿಮ್‌ ಮತ್ತು ಕ್ರಿಶ್ಚಿಯನ್‌ ಸಮುದಾಯ ಹೇಗೆ ಒಟ್ಟಾಗಿ ಬಾಳುತ್ತಿದೆ ಎಂಬುದನ್ನು ಇಲ್ಲಿನ ಒಂದೊಂದು ಲೇಖನವೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. ಎಲ್ಲೂ ಉದ್ದುದ್ದ ಪೀಠಿಕೆ, ಪ್ರವಚನ ಏನೂ ಇಲ್ಲ. ಮೂರು ನಾಲ್ಕು ಪುಟಗಳಲ್ಲಿ ತಂತಮ್ಮ ಸಿಹಿ ನೆನಪಿನ ಆಪ್ತ ನೆನಪುಗಳನ್ನು ಬರೆದಿದ್ದಾರೆ. ಅಂಥ ಲೇಖನಗಳ ಪ್ರವಾಹ ಅದೆಷ್ಟು ಜೋರಾಗಿದೆ ಎಂದರೆ ಈಗ ಎರಡನೇ ಸಂಪುಟವೂ ಹೊರಬರುತ್ತಿದೆ ಎಂದು ವಡ್ಡೂ ಹೇಳಿದ್ದಾರೆ. ಈಗಿನ ಈ ಕೋಮುದಳ್ಳುರಿಯ ದಿನಗಳಲ್ಲಿ ಉಸಿರುಗಟ್ಟಿದಂತಿದ್ದವರಿಗೆ ಒಂದು ಹಾಯಾದ ತಂಗಾಳಿ ಬೀಸಿಬಂದಂತೆ “ಸೌಹಾರ್ದ ಕರ್ನಾಟಕʼʼ ಮೈದಳೆದಿದೆ.
ನಾನು ಬರೆದ ಲೇಖನದ ಆರಂಭದ ಭಾಗ ಹೀಗಿದೆ:

“ಬಂಡೆಮಠದಲ್ಲಿ ಕಂಡ ಮುಖಗಳು”

ಢಾಳಾಗಿ ವಿಭೂತಿ ಬಳಿದುಕೊಂಡ ಸ್ವಾಮೀಜಿಯೊಬ್ಬರು ಕೆಂಗೇರಿಯ ಪಕ್ಕದ ಬಂಡೆಮಠದ ಕಲ್ಲುಬೆಟ್ಟದಿಂದ ಇಳಿದು ಬರುತ್ತಿದ್ದರು. ನೋಡಿ ದಂಗಾದೆ. ಹೊಸ ಮಠ-ಮಂದಿರಗಳೇನೊ ಅಣಬೆಗಳಂತೆ ಎಲ್ಲೆಲ್ಲೋ ನೆಲದಿಂದೆದ್ದು ನಿಲ್ಲುತ್ತವೆ; ಆದರೆ ಇಲ್ಲಿ ಆಕಾಶದಿಂದಲೇ ಎಂಬಂತೆ ಹಿರಿಯ ಯತಿಯೊಬ್ಬರು ಅಧ್ಯಾತ್ಮದ ಕಳೆ ಹೊತ್ತು, ಲಕಲಕ ಮಡಿಯುಟ್ಟ ಇಳಿದು ಬಂದರಲ್ಲ! ಇದ್ಯಾವ ಹೊಸ ದೇಗುಲ ಇಲ್ಲಿ ತಲೆ ಎತ್ತಿತೆಂದು ಅತ್ತಿತ್ತ ಇಣುಕುತ್ತಿದ್ದಾಗ, ಕ್ಯಾಮರಾ ಹೊತ್ತ ಚಿತ್ರತಂಡವೊಂದು ಅಲ್ಲೇ ಸಂದಿಮೂಲೆಗಳಿಂದ ಪ್ರತ್ಯಕ್ಷವಾಯಿತು.

ನೋಡಿದರೆ, ಅವರ ಗುಂಪಿನಲ್ಲಿ ನನಗೆ ಪರಿಚಿತರಾಗಿದ್ದ ಸಂಗೀತ ಶಿಕ್ಷಕ ಪ್ರಶಾಂತ್‌ ಅಗೇರಾ ಕೂಡ ಇದ್ದರು. ತಾನೊಂದು ಫೋಟೊ ಕಾಮಿಕ್ಸ್‌ ಶೂಟ್‌ ಮಾಡುತ್ತಿದ್ದೇನೆಂದೂ ಈ ಸ್ವಾಮೀಜಿಯ ಹೆಸರು ನಗೀನ್‌ ಅಹ್ಮದ್‌ ಎಂದೂ ಪರಿಚಯಿಸಿದರು. ಅಗೇರಾ ಕ್ರಿಶ್ಚಿಯನ್‌. ನಗೀನ್‌ ಮುಸ್ಲಿಮ್‌.

ಇವರ ತಂಡದಲ್ಲಿದ್ದ ಇನ್ನೊಬ್ಬ ಪ್ರಮುಖರೆಂದರೆ ಸಿವಿಲ್‌ ಎಂಜಿನಿಯರ್‌ ಮಹದೇವ್‌ ಆಚಾರ್‌. ಇವರ ತಂಡದಲ್ಲಿ ಮಂಜುನಾಥ ಶರ್ಮಾ ಎಂಬ ಬ್ರಾಹ್ಮಣ ಕೂಡ ಇದ್ದಾರಂತೆ, ಆದಿನ ಅಲ್ಲಿ ಇರಲಿಲ್ಲ.

ಅಂತೂ ಇವರೆಲ್ಲ ಸೇರಿ ಪರಿಸರ ರಕ್ಷಣೆಯ ಸಂದೇಶವುಳ್ಳ ‘ಹುಯ್ಯೊ ಹುಯ್ಯೊ ಮಳೆರಾಯʼ ಹೆಸರಿನ ಫೋಟೊ ಕಾಮಿಕ್ಸ್‌ಗೆ ಸಿದ್ಧತೆ ನಡೆಸಿದ್ದರು.

ನನ್ನ ನೆನಪು ಮಲೆನಾಡಿನ ನನ್ನ ಊರು ಬಕ್ಕೆಮನೆಗೆ ಓಡಿತು. ಮಳೆಗಾಲ ಬರುವುದಕ್ಕೆ ಮುನ್ನ ಅಲ್ಲಿನ ಸಂಭ್ರಮ ಮನಸ್ಸಿನಲ್ಲಿ ಅಚ್ಚೊತ್ತಿದೆ. ಮನೆಯ ಹೊಸ್ತಿಲಿಗೆ ಇಸೋಪ್‌ ಸಾಬ ಮೆಟ್ಟಿಲು ಕಟ್ಟಿ ಸಿಮೆಂಟ್‌ ಗಿಲಾಯ ಮಾಡುತ್ತಿದ್ದ; ದೇವಪ್ಪ ಆಚಾರಿ ಕಟಾಂಜನಕ್ಕೆ ವಾರ್ನಿಶ್‌ ಹಚ್ಚುತ್ತಿದ್ದ; ಗೋವಾ ಮೂಲದ ಕ್ರಿಶ್ಚಿಯನ್‌ ಕುಶಲಕರ್ಮಿ ಪೆಡ್ರೊ ಎಂಬಾತ ಅಡಿಕೆ ಹಾಳೆಯನ್ನು ಓರಣವಾಗಿ ಕತ್ತರಿಸಿ, ಬಿದಿರು ಕಡ್ಡಿಯ ಹೊಲಿಗೆ ಹಾಕಿ, ಅಡಿಕೆ ಗೊನೆಗಳಿಗೆಂದು ಹಾಳೆಕೊಟ್ಟೆ ಮಾಡುತ್ತಿರುತ್ತಿದ್ದ. ಈಡಿಗರ ಈಶಾ ನಾಯ್ಕ ಅಡಿಕೆಯ ಅಟ್ಟವನ್ನು ಕಳಚುತ್ತಿರುತ್ತಿದ್ದ.

ಒಳಗೆ ಅಪ್ಪಯ್ಯ ಮಂಗಳಾರತಿ ಮುಗಿಸಿ ಗಂಟೆ ಬಾರಿಸಿದ ಸಿಗ್ನಲ್‌ ಬರುತ್ತಲೇ ಅವರೆಲ್ಲ ಕೆಲಸ ಬಿಟ್ಟು ಕೈಕಾಲು ತೊಳೆಯಲು ಹೊರಡುತ್ತಿದ್ದರು. ನಮ್ಮೆಲ್ಲರ ಊಟವಾಗುತ್ತಲೇ ಹಿತ್ತಿಲಕಟ್ಟೆಯ ಬಳಿ ಅವರನ್ನು ಸಾಲಾಗಿ ಕೂರಿಸಿ, ಬಾಳೆಲೆ ಕೊಟ್ಟು ಊಟ ಬಡಿಸುವ ಕೆಲಸ ನನಗೆ, ನನ್ನ ಅಕ್ಕನಿಗೆ ಬರುತ್ತಿತ್ತು.

ಊಟದ ವಿರಾಮದ ನಂತರದ ನನ್ನ ಕತೆ ಉತ್ತರ ಪ್ರದೇಶಕ್ಕೆ ಹೋಗುತ್ತದೆ. ಎಮರ್ಜನ್ಸಿ ಪೊಲೀಸ್‌ ದಬ್ಬಾಳಿಕೆಯಿಂದ ಬಚಾವಾಗಲು ನಾವು ನಾಲ್ಕು ಧರ್ಮಗಳ ಏಳು ಮಂದಿ, ಹಸನ್‌ ಗಂಜ್‌ ಎಂಬ ಮುಸಲ್ಮಾನ ರೈತರ ಹಳ್ಳಿಯಲ್ಲಿ ಅಜ್ಞಾತವಾಸ ಮಾಡಿದ ರಂಜನೀಯ ಅನುಭವ ಇದೆ.

ಅದಾದ ಮೇಲೆ ಸ್ವಿತ್ಸರ್ಲೆಂಡಿನ ರಾಜಧಾನಿ ಝೂರಿಕ್‌ ನಗರದ ಒಂದು ರೆಸ್ಟೊರೆಂಟ್‌ನ ನೆನಪಿನ ಬುತ್ತಿ ಇದೆ. ಅಲ್ಲಿ ಮಾಣಿಯಾಗಿದ್ದ ಪಾಕಿಸ್ತಾನಿ ಯುವಕನೊಬ್ಬ ನಾನು ಭಾರತೀಯ ಹಿಂದೂ ಎಂದು ಗೊತ್ತಾದ ಮೇಲೂ ಅದೆಷ್ಟು ಪ್ರೀತ್ಯಾದರಗಳಿಂದ ಸತ್ಕರಿಸಿದ ಎಂಬ ಕತೆ ಬರುತ್ತದೆ.

“ಸೌಹಾರ್ದ ಕರ್ನಾಟಕ” ನಮ್ಮೆಲ್ಲರ ಮನೆ-ಮನದಲ್ಲಿ, ಗ್ರಂಥಾಲಯದಲ್ಲಿ ಇರಬೇಕಾದ ಪುಸ್ತಕ. ಅಂದಹಾಗೆ ಈ ಲೇಖನದ ಶಿರೋನಾಮೆಯನ್ನು ಪ್ರೊ. ರಹಮತ್‌ ತರೀಕೆರೆ ಅವರ ಬರೆಹದಿಂದ ಎತ್ತಿದ್ದೇನೆ.

ಚಿತ್ರದಲ್ಲಿರುವ ಪೂಜಾರಿ ವೇಷದ ವ್ಯಕ್ತಿ ನಗೀನ್‌ ಅಹ್ಮದ್‌. ಅವರ ಕುರಿತು ಹೆಚ್ಚಿನ ವಿವರಗಳು ನನ್ನ ಲೇಖನದಲ್ಲಿವೆ. ಈ ಚಿತ್ರವನ್ನು ಅವರದೇ “ಹುಯ್ಯೊ ಹುಯ್ಯೊ ಮಳೆರಾಯ” ಹೆಸರಿನ ಫೋಟೊಕಾಮಿಕ್ಸ್‌ ಪುಸ್ತಕದಿಂದ ಎತ್ತಿದ್ದು.

‍ಲೇಖಕರು Admin

May 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: