ನಾಗರಾಜ್ ಹರಪನಹಳ್ಳಿ
ಅವಳು ಮನಸು ಬದಲಿಸಿದಳು
ಕಲ್ಲಾಗಿದ್ದ ಅವಳು
ಮತ್ತೆ ಇನಿದನಿಯಲ್ಲಿ
ಉಸುರಿದಳು ‘ಮಾತನಾಡುವೆ’
ಮೊದಲೆಲ್ಲಾ ಒಂಚೂರು ತಡವಾದರೆ
ಕೂಗುತ್ತಿದ್ದೆ
ಅವಳು ಅಷ್ಟೇ ;
ಒಂಚೂರು ಆಚೀಚೆ ಆದರೂ
ಆತಂಕಪಡುತ್ತಿದ್ದಳು

ಕೊನೆಗೆ ಕಾಲದ ಹೊಡೆತಕ್ಕೆ ಸಿಕ್ಕಿ
ಸೋತು ಹೋಗಿದ್ದೆವು
ಮೌನವಾದೆವು, ಕಾದಡಿದೆವು
ಘನಘೋರ ಯುದ್ಧ ಮಾಡಿದೆವು
ನಮ್ಮದೇ ತಪ್ಪುಗಳ ಹೆಕ್ಕಿತೆಗೆದೆವು
ಸಂಬಂಧ ಕೆಡಿಸಲು ಹವಣಿಸಿದವರ
ಪೋಸ್ಟ್ ಮಾರ್ಟಂ ಸಹ ಆಯಿತು
ಕೊನೆಗೆ ಉಳಿದದ್ದು ಒಂದು ವಿಷಣ್ಣ ವಿಷಾಧ
ತಣ್ಣನೆಯ ಕ್ರೌರ್ಯ ನಮ್ಮನ್ನೆ ಕೊರೆಯ ತೊಡಗಿತು
ಒಮ್ಮೆ ಉತ್ಸಾಹ ಚಿಮ್ಮಿದರೆ
ಮೊಗದೊಮ್ಮ ಗಾಢವಿಷಾದ
ಆವರಿಸುತ್ತಿತ್ತು…
ಸಂಬಂಧ ಮುರಿಯಲು ಅಥವಾ ಯಥಾಸ್ಥಿತಿಯಲ್ಲಿಡಲು ಆಡಿದ ಮಾಡಿದ ತಂತ್ರಗಳು ಮುಗಿದವು
ಇದು ಬಗೆಹರಿಯುವುದಲ್ಲ ಎಂದೆನಿಸಿದರೂ
ಬಿಡಲಾಗದ ಬಿಡಿಸಲಾಗದ
ಪ್ರೀತಿ ಎದೆಯ ತುಂಬಿತ್ತು
ಕಾರಣ ಇಷ್ಟೆ; ಬಿತ್ತಿದ ಬೀಜ
ಭೂಮಿಗೆ ಬೇರು ಬಿಟ್ಟು ಮರವಾಗಿತ್ತು…

ಎಂಥ ಸನ್ನಿವೇಶದಲ್ಲೂ ಬಿಟ್ಟಿರಲಾಗದು ಎನಿಸಿದ ದಿನ
ಅವಳು ಉಸಿರಿದಳು
‘ಈ ಕಡೆಯ ನಿಟ್ಟುಸಿರಿಗೆ’
ನಾನು ಕರೆ ಮಾಡುವೆ
ಮೊದಲಿನಂತೆ ಪಿಸುಮಾತನಾಡುವೆನೆಂದು
ನಟ್ಟ ನಡುರಾತ್ರಿ ಕತ್ತಲಲ್ಲಿ
ಬೆಳಕೊಂದು ದಿಗಿಲು ಬಡಿದಂತೆ
ಹೊತ್ತಿಕೊಂಡಿತು






0 Comments