ಪ್ರಮೋದ್ ಮುತಾಲಿಕ್ ಅನುವಾದದಲ್ಲಿ ಮಾಯಾ ಎಂಜಿಲೊ

ಮೂಲ: ಮಾಯಾ ಎಂಜಿಲೊ

ಬಹುಮುಖ ಪ್ರತಿಭೆಯ  ಮಾಯಾ ಎಂಜಿಲೊ ಇಪ್ಪತ್ತನೆ ಶತಮಾನದ ಆಫ್ರೋ ಅಮೆರಿಕನ್ ಸಾಹಿತಿ. ಕವಿಯಾಗಿ, ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿ ಮುಂಚೂಣಿಯಲ್ಲಿದ್ದವರು. ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ಕೊನೆಯವರೆಗೂ ತೊಡಗಿಸಿ ಕೊಂಡರು. ವೇಕ್ ಫಾರೆಸ್ಟ್ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಸುಮಾರು ಐವತ್ತಕ್ಕೂ ಮಿಕ್ಕಿ ಗೌರವ ಪದವಿಗಳು ಇವರ ಪ್ರತಿಭೆಗೆ ಸಂದಿವೆ.

ಸಾಹಿತಿಯಾಗಿ ಇವರ ಕೊಡುಗೆ ಅನನ್ಯ. ಶೋಷಿತರ ದನಿಯಾಗಿ ಹೊಮ್ಮುವ ಇವರ ಕಾವ್ಯದಲ್ಲಿ ಶೋಷಣೆಯ ವಿರುದ್ಧ ಪುಟಿದೇಳುವಿಕೆ , ಕಪ್ಪು ಜನರ ಅಸಹಾಯಕ ಸಿಟ್ಟು ಪ್ರಮುಖ ವಿಷಯ ಗಳಾಗುವವು. ಮೌನವಾಗಿ ಶೋಷಣೆ ಸಹಿಸುವದರಿಂದ ಪ್ರತಿಭಟನೆಯ ವರೆಗೂ ಇವರ ಕಾವ್ಯ ವ್ಯಾಪಿಸುವದು. ತಮ್ಮ ಕವನಗಳನ್ನು ತುಂಬ ಪರಿಣಾಮಕಾರಿಯಾಗಿ ಓದುವ ಕಲೆ ಇವರಿಗೆ ಕರಗತವಾಗಿತ್ತು. ಕಾವ್ಯವಲ್ಲದೆ ಏಳು ಆತ್ಮ ಚರಿತ್ರೆಗಳನ್ನು, ಮಕ್ಕಳ ಸಾಹಿತ್ಯವನ್ನ ರಚಿಸಿದ್ದಾರೆ.

ಕನ್ನಡಕ್ಕೆ : ಪ್ರಮೋದ ಮುತಾಲಿಕ

1. ಕಪ್ಪು ಕುಟುಂಬದ ಒಂದು ಪ್ರತಿಜ್ಞೆ.

ಮರೆತು ಬಿಟ್ಟಿದ್ದೇವೆ ನಾವು ನಮ್ಮ ಹಿರಿಯರ
ಎಂತೆಲೆ ಇಲ್ಲ ನಮ್ಮ ದರಕಾರ ನಮ್ಮ ಮಕ್ಕಳಿಗೆ.

ಮರೆತು ಬಿಟ್ಟಿದ್ದೇವೆ ಹಿರಿಯರು ತೋರಿದ ದಾರಿಯ
ಎಂತೆಲೆ ಕಾಣದಾಗಿದೆ ದಾರಿ ನಮ್ಮ ಮಕ್ಕಳಿಗೆ.

ಮರೆತು ಬಿಟ್ಟಿದ್ದೇವೆ ಪ್ರಾರ್ಥಿಸುವದ ಹಿರಿಯರ ದೇವರುಗಳ
ಎಂತೆಲೆ ಗೊತ್ತೇ ಇಲ್ಲ ಪ್ರಾರ್ಥಿಸುವದು ನಮ್ಮ ಮಕ್ಕಳಿಗೆ.

ಕೇಳಿಸಿಕೊಳ್ಳಲಿಲ್ಲ ನಮ್ಮ ಹಿರಿಯರ ಕಷ್ಟಗಳ ರೋದನೆ
ಎಂತೆಲೆ ಕೇಳಿಸದು ನಮ್ಮ ರೋದನೆ ನಮ್ಮ ಮಕ್ಕಳಿಗೆ.

ಮಾಡಲೇ ಇಲ್ಲ ಯತ್ನವ ಮಕ್ಕಳ ಬೆಳೆಸುವ
ಒಳ್ಳೆಯ ತಾಯ್ತಂದೆ ಆಗುವ.
ಹೆರುತ್ತಾರೆ ನಮ್ಮ ಮಕ್ಕಳೂ
ಬೇಡದ ಶಿಶುಗಳ, ಬೇಡದ ತಾಯ್ತಂದೆಯರಾಗಿ.

ಪ್ರೀತಿಯನ್ನೇ ಮರೆತ ನಾವು, ನೀಡೀವು ಹೇಗೆ
ಬೇರೆಯವರಿಗೆ, ತಿಳಿಸೇವು ಹೇಗೆ ಶಕ್ತಿ ಪ್ರೀತಿಯ?

ಎಂತೆಲೆ ಪಣ ತೊಡೋಣ ನಾವು ಇಂದು
ಬಿಗಿಯಾದ ಬಂಧಕ್ಕೆ, ಚಿಕ್ಕ ದೊಡ್ಡವರೆನ್ನದೆ.
ಆಗೋಣ ಆಸರೆ ಒಬ್ಬಂಟಿಯಾದವರಿಗೆ,
ನೀಡೋಣ ಅನ್ನ ಹಸಿದೋರಿಗೆ, ಸುತ್ತೋಣ
ಬಟ್ಟೆ ಬೆತ್ತಲಿರೋರಿಗೆ, ಮಾಡೋಣ ಒಳ್ಳೆಯದು ಮಾತ್ರ.

ನಾವೇ ನಮ್ಮ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು.

ಪರಿಪರಿಯಾಗಿ ದೇವರ ಬೇಡಿಕೊಂಡ ನಮ್ಮ
ಹಿರಿಯರ ನೆನಪಿಗಾದರೂ, ಸಂಕಷ್ಟಗಳ
ಸಂಕೋಲೆ ಬಿಡಿಸಿದ ಆತನ ನೆನೆಯಲಾದರೂ
ಇಂದು ಪಣ ತೊಡೋಣ ನಾವೆಲ್ಲ!

2. ಉರುಳಿದಾಗ ಬೃಹತ್ ಮರಗಳು

ಉರುಳಿದಾಗ ಬೃಹತ್ ಮರಗಳು
ನಡುಗುವವು ದೂರ ಬೆಟ್ಟದ ಬಂಡೆಗಳು.

ನುಸುಳುವವು ಸಿಂಹಗಳು ದಪ್ಪ
ಹುಲ್ಲುಗಾವನಲಿ ಅವಿತು ಕೊಳ್ಳಲು.

ಇಡುವವು ಆನೆಗಳು ಹೆಜ್ಜೆ ಎಚ್ಚರದಿ
ಸ್ವಯಂ ರಕ್ಷಣೆಗೆ.

ಉರುಳಿದಾಗ ಬೃಹತ್ ಮರಗಳು
ಚಿಕ್ಕ ಚಿಕ್ಕವು ಅಡವಿಯಲಿ
ಶರಣಾಗುವವು ನಿಶ್ಯಬ್ದಕ್ಕೆ
ಭಯಭೀತವಾಗಿ.

ಮಹಾವ್ಯಕ್ತಿಗಳು ಹೋದಾಗ
ಆಗುವದು ವಾತಾವರಣ
ನಿಶ್ಚಲ, ನೀರವ. ಉಸಿರಾಡುತ್ತೇವೆ
ನಾವು ಮೆಲ್ಲಗೆ, ಕಣ್ಣುಗಳು ನೋಡುವವು
ಘಾಸಿಗೊಂಡ ಸತ್ಯವ.
ನೆನಪಿಸುತ ತಕ್ಷಣ ಹೇಳದೆ
ಉಳಿದ ಕೃತಜ್ಞತೆಗಳ
ತುಳಿಯದೆ ಉಳಿದ ದಾರಿಗಳ.

ಮಹಾವ್ಯಕ್ತಿಗಳು ಹೋದಾಗ
ನಮ್ಮ ಅರಿವು ಇರುವದು
ಹೊಡೆದಂತೆ ಲಕ್ವ.
ಅವರನ್ನು ನಂಬಿದ ನಮ್ಮಾತ್ಮಗಳು
ಮುದುಡುವವು. ಚದುರುವವು
ನಮ್ಮ ಮನಸುಗಳು.

ಮಹಾವ್ಯಕ್ತಿಗಳು ಹೋದಾಗ
ಅರಳುವದೆಲ್ಲೆಲ್ಲೂ ಶಾಂತಿ
ಸ್ವಲ್ಪ ಸಮಯದ ನಂತರ
ನಿಧಾನ ನಿಧಾನವಾಗಿ
ಅನುಭವಿಸುವದು ಜಗವೆಲ್ಲ
ಅವ್ಯಕ್ತ ಸಮಾಧಾನ.

ಬರದು ಎಂದಿಗೂ ಮೊದಲ
ಸ್ಥಿತಿ, ಸಾಧ್ಯವೇ ಇಲ್ಲ ಅದು,
ಆದರೂ ಕೇಳಿಸುವದು
ಮೆಲುದನಿಯ ಸಾಂತ್ವನ.

‘ಅವರು ಇದ್ದರು ಇಲ್ಲೇ
ಅವರು ಇದ್ದರು ಇಲ್ಲೇ.
ಇರೋಣ ನಾವೂ -ಇನ್ನೂ ಚೆನ್ನಾಗಿ
ಯಾಕೆಂದರೆ ಅವರು ಇದ್ದರು’

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: