ಗಾಂಧಿ ಊರಲ್ಲಿ ಸಿಕ್ಕ ಕೃಷ್ಣನ ಗೆಳೆಯ ಸುದಾಮ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಬೆಳಗ್ಗಿನಿಂದ ತಯಾರಿ ಬಲು ಜೋರಿತ್ತು. ಫ್ರೆಂಡ್‌ಶಿಪ್‌ ಡೇ ಅಂತೆ, ಶಾಲೆಯಲ್ಲಿ ಫ್ರೆಂಡ್‌ಶಿಪ್‌ ಬ್ಯಾಂಡ್‌ ಮಾಡಲು ಹೇಳಿದ್ದಾರೆ ಎಂದು, ಕತ್ತರಿ, ಪೇಪರು, ಮಿಣಿಮಿಣಿ ಪೌಡರು, ಸ್ಟಿಕ್ಕರು ಏನೆಲ್ಲ ಚಂದ ಕಾಣುತ್ತದೋ ಅದೆಲ್ಲ ಹರವಿ ಕತ್ತರಿ ಕಾರ್ಯ ಪ್ರಾರಂಭವಾಯ್ತು. ಅಂತೂ ಇಂತೂ ಸಿಕ್ಕಲ್ಲಿ ಗಮ್ಮು ಚೆಲ್ಲಿ, ಒಂದಿಷ್ಟು ಸ್ಟಿಕ್ಕರು ಹರಿದು, ಮಿಣಿಮಿಣಿ ಮುಖದಲ್ಲಿ ಮಿಂದೆದ್ದು, ಬ್ಯಾಂಡು ರೆಡಿಯಾಗಿ ಅದನ್ನು ಆ ಗೆಳತಿಯ ಕೈಗೆ ಕಟ್ಟುವ ಸಂಭ್ರಮದಲ್ಲಿ ಅರ್ಧ ದಿನ ಸುಲಭದಲ್ಲಿ ಕಳೆಯಿತು.

ಈ ಹಾಳು ಕೊರೋನಾ, ಶಾಲೆಯಲ್ಲಿ ಮಕ್ಕಳು ಇಂಥದ್ದನ್ನೆಲ್ಲ ಸಂಭ್ರಮಿಸುವ ಅವಕಾಶವನ್ನು ಇದೀಗ ಎರಡನೇ ವರ್ಷವೂ ನುಂಗಿ ಹಾಕಿದ್ದರಿಂದ, ಮಕ್ಕಳು ಪಾಪ ವರ್ಚುವಲ್‌ ದುನಿಯಾದಲ್ಲಿ ತಮ್ಮ ಗೆಳೆಯರೊಂದಿಗೆ ಪಾಠ ಕೇಳುವ ಪ್ರಮೇಯಗಳನ್ನು ಸೃಷ್ಟಿಸಿಬಿಟ್ಟಿದೆ. ಬಾಲ್ಯದ ಗೆಳೆತನದ ಅಮೂಲ್ಯ ಕ್ಷಣಗಳನ್ನು ಅನುಭವಿಸುವ ಅವಕಾಶವನ್ನೇ ಕಸಿದುಕೊಂಡಿದೆ.

ಇರಲಿ, ಹೇಳಿ ಪ್ರಯೋಜನವಿಲ್ಲದ ಸದ್ಯದ ವ್ಯಥೆ ಇದು. ಈ ಮಕ್ಕಳ ಫ್ರೆಂಡ್‌ಶಿಪ್‌ ಬ್ಯಾಂಡಿನ ನೆಪದಲ್ಲಿ ನೆನಪಾದದ್ದು ಕೃಷ್ಣ ಮತ್ತು ಸುದಾಮರ ಕಥೆ. ಸ್ನೇಹ ಎಂಬ ಪದಕ್ಕೆ ಅನ್ವರ್ಥವೆನಿಸುವ ಪುರಾಣದ ಕಥೆ ಇದು. ಈ ಕೃಷ್ಣ ಸುದಾಮರ ಕಥೆಯಿಂದ, ಇತ್ತೀಚಿನ ನಮ್ಮ ʻಕುಚ್ಚಿಕೋʼ ಹಾಡಿನವರೆಗೆ ಗೆಳೆತನದ ಹೆಸರಿನಲ್ಲಿ ಸಿಗುವ ಕಥೆಗಳು ಬಹಳ. ಜೀವನಯಾನದ ನಾನಾ ಘಟ್ಟಗಳಲ್ಲಿ ಸಿಗುವ ಸಾವಿರಾರು ಮುಖಗಳಲ್ಲಿ ಕೆಲವೇ ಕೆಲವು ನೀಡುವ ಆಪ್ತಭಾವ ಮಾತ್ರ ಈ ಸ್ನೇಹ. ಕುಟುಂಬ ಸಂಬಂಧಗಳ ಹೊರತಾಗಿ, ಯಾವ ನಿರ್ಬಂಧವೂ ಇಲ್ಲದೆ, ಬೇರೆಲ್ಲ ಜವಾಬ್ದಾರಿಗಳಿಂದ ಕಳಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಲು ಮನುಷ್ಯನಾದವನಿಗೆ ಗೆಳೆಯರಿರದಿದ್ದರೆ ಹೇಗೆ! ಮನುಷ್ಯನೆಂಬ ಸಂಘಜೀವಿಗೆ ಗೆಳೆತನ ಎಂಬುದೊಂದು ಜೀವಜಲ. ಇದಿಲ್ಲದಿದ್ದರೆ, ಬದುಕು ನೀರಸ.

ದುರ್ಯೋಧನ- ಕರ್ಣ, ಕೃಷ್ಣ- ಅರ್ಜುನ, ಕೃಷ್ಣ-ದ್ರೌಪದಿ, ಸೀತೆ- ತ್ರಿಜಾತೆ ಹೀಗೆ ಹಲವು ಗೆಳೆತನದ ಕಥೆಗಳು ಪುರಾಣದುದ್ದಕ್ಕೂ ಸಿಕ್ಕರೂ, ಈ ಕೃಷ್ಣ- ಸುದಾಮರದ್ದೊಂದು ಅಪರೂಪದ ಉಳಿದವಕ್ಕಿಂತ ಭಿನ್ನವಾಗಿ ನಿಲ್ಲುವ ಬಲು ಪ್ರಸಿದ್ಧ ಕಥೆ. ಕೃಷ್ಣನೆಂಬ ಅಗಾಧ ವ್ಯಕ್ತಿತ್ವದ ಕಥೆಯಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರ ಈ ಸುದಾಮನದ್ದೆನಿಸಿದರೂ, ಸದಾ ಕಾಲ ನೆನಪಿನಲ್ಲಿ ಉಳಿಯಬಲ್ಲ ಚೆಂದದ ಕಥೆ. ಹುದ್ದೆಯಲ್ಲಿ, ಸ್ಥಾನದಲ್ಲಿ, ಶ್ರೀಮಂತಿಕೆಯಲ್ಲಿ ಎಲ್ಲದರಲ್ಲೂ ಮೇಲಿದ್ದರೂ, ಇದಾವುದೂ ಇಲ್ಲದ ಬಾಲ್ಯದ ಗೆಳೆಯನಿಗೆ ಗೆಳೆಯನೇ ಆಗಿರುವುದು ಹೇಗೆ ಎಂಬ ನೀತಿಪಾಠವನ್ನೂ ಹೇಳುವ ಸರ್ವಕಾಲಕ್ಕೂ ಸಲ್ಲುವ ಕಥೆ.

ಅದೊಂದು ದಿನ ಉಜ್ಜಯಿನಿಯಲ್ಲಿ ಸಾಂದೀಪನಿ ಗುರುಕುಲದಲ್ಲಿದ್ದಾಗ ಕೃಷ್ಣನೂ ಸುದಾಮನೂ ಕಾಡಿಗೆ ಸೌದೆ ತರಲು ಹೋಗಿದ್ದಾಗ ಕೃಷ್ಣನಿಗೆ ವಿಪರೀತ ಹಸಿವೆಯಾಗುತ್ತದಂತೆ. ಸುದಾಮನ ಬಳಿ ಅವಲಕ್ಕಿ ಇದ್ದರೂ, ಕೃಷ್ಣನಿಗೆ ಕೊಡಲು ಹಿಂಜರಿಕೆ. ಆದರೆ, ಕೃಷ್ಣನ ಪರಿಸ್ಥಿತಿ ಗಮನಿಸಿ ಕೊಟ್ಟ ಅವಲಕ್ಕಿಯಿಂದ, ಅದು ಆತನ ಬಲು ಪ್ರಿಯವಾದ ತಿನಿಸು ಎಂಬ ಸತ್ಯವೂ ಗೊತ್ತಾಗಿಬಿಡುತ್ತದೆ. ಗೆಳೆತನವೊಂದು ಅರಳುತ್ತದೆ. ಈ ಕೃಷ್ಣನೂ ಸುದಾಮನೂ ಸಾಂದೀಪನಿ ಮುನಿಗಳ ಬಳಿ ವಿದ್ಯೆ ಕಲಿತದ್ದು ೬೪ ದಿನವಂತೆ. ಈ ೬೪ ದಿನಗಳಲ್ಲಿ ಅವಲಕ್ಕಿಯಿಂದ ಚಿಗುರಿದ ಗೆಳೆತನ ಇವರದ್ದು. ಇದೇ ಅವಲಕ್ಕಿಯೇ ಮುಂದೆಯೂ ಇವರಿಬ್ಬರ ಗೆಳೆತನದ ಬಂಧವನ್ನೂ, ಕೃಷ್ಣನ ಸರಳತೆಯನ್ನೂ ಹೇಳುವ ಪ್ರತಿಮೆಯಾಗುತ್ತದೆ.

ಇದಾಗಿ, ಈ ಇಬ್ಬರ ದಾರಿಯೂ ಬೇರೆಬೇರೆಯಾಗಿ ಎಷ್ಟೋ ವರುಷಗಳ ನಂತರ ಮತ್ತೆ ಈ ಸುದಾಮ ಕೃಷ್ಣನ ಬಳಿಗೆ ಹೆಂಡತಿಯ ಒತ್ತಾಯದ ಮೇರೆಗೆ ಮನಸ್ಸಿಲ್ಲದ ಮನಸ್ಸಿನಿಂದ ತಿನ್ನಲು ಗತಿಯಿಲ್ಲದಾದಾಗ ಸಂಕೋಚದಿಂದ ಹೋಗುತ್ತಾನೆ. ಬಡತನದಿಂದ ಬೆಂದು ಹರಿದ ಅರಿವೆಯಲ್ಲಿ ಬಂದ ಸುದಾಮನನ್ನು ರಾಜವೇಷದಲ್ಲಿರುವ ಕೃಷ್ಣ ಬರಸೆಳೆದು ಅಪ್ಪಿಕೊಂಡು ಆತನ ಪಾದ ತೊಳೆದು, ಎಲ್ಲ ಸೇವೆಗಳನ್ನೂ ಒದಗಿಸಿ, ಅದ್ಭುತ ಆತಿಥ್ಯ ಕೊಟ್ಟು, ಹಳೆ ಕಥೆಗಳನ್ನೆಲ್ಲ ಮೆಲುಕು ಹಾಕಿ, ನಕ್ಕು ಹಗುರಾಗಿ ಕೊನೆಗೆ, ʻನೀನು ಮನೆಯಿಂದ ನನಗೇನೂ ತಂದಿಲ್ಲವೇ?ʼ ಎಂದು ಕೇಳುತ್ತಾನಂತೆ.

ಆಗ ಸುದಾಮ ಸಂಕೋಚದಿಂದ ಇಷ್ಟು ಶ್ರೀಮಂತ ಕೃಷ್ಣನಿಗೆ ಈ ನನ್ನ ಅವಲಕ್ಕಿ ಯಾವ ಲೆಕ್ಕ ಎಂಬ ಸಂಕೋಚದಲ್ಲಿ ತನ್ನ ಕಂಕುಳದ ಅಡಿಯಲ್ಲಿ ಕಾಣದಂತೆ ಇಟ್ಟಿದ್ದ ಅವಲಕ್ಕಿ ಗಂಟನ್ನು ಕೊಡುವುದೋ ಬೇಡವೋ ಅಂತಿದ್ದಾಗ ಕೃಷ್ಣನೇ ಅದೇ ಹಳೇ ಸಲುಗೆಯಲ್ಲಿ ಎಳೆದು ತಿನ್ನುತ್ತಾನೆ. ಒಂದು ಹಿಡಿ ಬಾಯಿಗೆ ಹಾಕುತ್ತಿದ್ದಂತೆ ಅತ್ತ ಸುದಾಮನ ಮನೆ ಅರಮನೆಯಾಗುತ್ತದೆ. ಇನ್ನೊಂದು ಹಿಡಿ ತಿನ್ನುವ ಮೊದಲೇ ರುಕ್ಮಿಣಿ ತಡೆದಳಂತೆ ಎಂಬುದು ಕಥೆ. ಇದು ಎಲ್ಲರಿಗೂ ಗೊತ್ತಿರುವ ಕಥೆ.

**
ಈ ಕಥೆ ಇಂದು ಈ ಹೊತ್ತಿನಲ್ಲಿ ಸ್ನೇಹದ ದಿನದ ನೆಪದಲ್ಲಿ ಈ ತಿರುಗಾಟದ ಕಥೆಯೊಳಗೆ ನೆನಪಾಗಲು ಕಾರಣವೂ ಇದೆ. ಅದೊಂದು ದಿನ, ಈ ಗುಜರಾತ್‌ ಎಂಬ ಸ್ವರ್ಗಕ್ಕೆ ಬಂದು ಗಾಂಧಿ ಹುಟ್ಟಿದೂರನ್ನು ನೋಡದಿದ್ದರೆ ಹೇಗೆ ಎಂದುಕೊಂಡು ಕೃಷ್ಣನ ಸಾಮ್ರಾಜ್ಯ ದ್ವಾರಕೆಯನ್ನು ಮುಗಿಸಿಕೊಂಡು ಗಾಂಧೀ ಸಾಮ್ರಾಜ್ಯ ಪೋರಬಂದರಿನತ್ತ ಕಾರು ತಿರುಗಿಸಿದ್ದೆವು. ಹಳೆಯ ಕಟ್ಟಡಗಳು ತೆರೆದಿಡುವ ಕಥೆಗಳನ್ನು ಕೇಳುವ ವ್ಯವಧಾನ, ಸಮಯ ಇದ್ದರೆ ಈ ಪೋರಬಂದರು ಎಂಬ ಊರೇ ಒಂದು ವಿಸ್ಮಯ.

ಗಾಂಧಿ ಮನೆ, ಕಸ್ತೂರಬಾ ಮನೆಗಳೊಳ ಹೊಕ್ಕು ಹೊರಬಂದು, ಇಲ್ಲಿ ಇನ್ನೇನಿದೆ ಎಂಬ ಹುಡುಕಾಟದಲ್ಲಿದ್ದಾಗ ಕಿವಿಗೆ ಬಿದ್ದಿದ್ದು ಈ ಸುದಾಮ ಮಂದಿರ. ಅರೆ, ಸುದಾಮ ಮಂದಿರವೇ? ಸುದಾಮನಿಗೂ ಮಂದಿರವಿದೆಯೇ ಅಂತ ಅನಿಸಿದ್ದು ಸುಳ್ಳಲ್ಲ. ಗುಜರಾತ್‌, ಉತ್ತರ ಪ್ರದೇಶಗಳೆಂಬ ರಾಜ್ಯಗಳ ಮಹಿಮೆಯೇ ಅಂಥದ್ದು. ರಾಮಾಯಣ, ಮಹಾಭಾರತಗಳನ್ನು ಓದಿಕೊಂಡು ಇಲ್ಲಿ ತಿರುಗಾಡಿದರೆ, ಹೋದಲ್ಲೆಲ್ಲ ಹೀಗೆ ಕಥೆಗಳು ಸಿಗುತ್ತದೆ. ಕಾಲಿಟ್ಟಲ್ಲೆಲ್ಲ ಕಥೆಗಳು!

ಈ ಸುದಾಮ ಎಂಬ ಪಾತ್ರವೊಂದಕ್ಕೂ ಹುಟ್ಟಿದೂರು ಎಂಬುದೊಂದು ಇದ್ದೀತು ಎಂಬೊಂದು ಯೋಚನೆಯೂ ತಲೆಯಲ್ಲಿ ಈವರೆಗೆ ನುಸುಳದಿದ್ದಾಗ, ಇದ್ದರೂ, ಕೃಷ್ಣನ ಬಾಲ್ಯದ ಗೆಳೆಯನಾದ್ದರಿಂದ ಮಥುರೆಯೇ ಇರಬಹುದೇನೋ ಅಂತ ಲೆಕ್ಕಾಚಾರವಿರುವಾಗ, ಹೀಗೆ ಅಚಾನಕ್ಕಾಗಿ ಗುಜರಾತಿನಲ್ಲಿ ಗಾಂಧೀ ತಾತನ ನೆನಪಿನಲ್ಲಿ ಅಡ್ಡಾಡುವಾಗ ಅದೇ ಊರೂ ಸುದಾಮನದೇ ಎಂಬ ಕಥೆ ಅಚಾನಕ್ಕಾಗಿ ಕೇಳಿದರೆ ಆಗಬಹುದಾದ ಆಶ್ಚರ್ಯ ಊಹಿಸಿ. ಹಾಗೇ ಆಯಿತು. ಹೌದು, ದ್ವಾರಕೆ ಎಂಬ ಕೃಷ್ಣನಾಳಿದ ಊರಿನಿಂದ ೧೦೪ ಕಿಮೀ ದೂರದ ಈ ಪೋರಬಂದರು ಎಂಬ ಸಮುದ್ರ ತೀರದ ಊರಿನಲ್ಲಿ ಸುದಾಮನಿಗೊಂದು ಮಂದಿರವಿದೆ. ಅದು ಭಾರತದಲ್ಲಿರುವ ಏಕೈಕ ಸುದಾಮನ ಮಂದಿರ. ಇಲ್ಲಿ ಸುದಾಮನೇ ಮುಖ್ಯ ದೇವರು. ಕೃಷ್ಣ ಸುದಾಮನ ಪಕ್ಕ. ಇಲ್ಲಿನ ಚಿತ್ರಗಳಲ್ಲಿ ಸುದಾಮನ ಪಾದ ತೊಳೆತುತ್ತಿರುವ ಕೃಷ್ಣ- ರುಕ್ಮಿಣಿಯರು.

ಪೋರವ ಎಂಬ ದೇವತೆಯಿಂದಾಗಿ ಪೋರಬಂದರು ಎಂಬ ಹೆಸರು ಇಲ್ಲಿಗೆ ಬಂತೆಂಬ ಕಥೆಯಿದೆಯಾದರೂ, ಇದಕ್ಕೆ ಬಹುಕಾಲ ಸುದಾಮಪುರಿಯೆಂಬ ಹೆಸರೂ ಇತ್ತಂತೆ. ಹಾಗೆ ನೋಡಿದರೆ ಈಗ ಇರುವ ಈ ದೇವಾಲಯವೇನೂ ಬಹಳ ಹಳೆಯದಲ್ಲ. ಒಂದು ನೂರು ವರ್ಷ ಕಳೆದ ಸಾಮಾನ್ಯ ದೇವಾಲಯ. ಆದರೆ, ೧೨ನೇ ಶತಮಾನದಲ್ಲಿ ನಿರ್ಮಿತವಾಗಿದ್ದ ಪುಟ್ಟ ದೇವಾಲಯದ ಜಾಗದಲ್ಲೇ ೧೯೦೨-೦೮ರ ನಡುವೆ ಪೋರಬಂದರಿನ ಮಹಾರಾಜ ಭವಸಿಂಗ್‌ ಮಾಧವಸಿಂಗ್‌ರಿಂದ ಮರು ನಿರ್ಮಾಣವಾದ ದೇವಾಲಯ. ಪೋರಬಂದರಿನ ಪ್ರಮುಖ ಸ್ಥಳದಲ್ಲೇ ಇರುವ ಇದು ಗಾಂಧಿನಾಡಿಗೆ ಬರುವ ಬಹುತೇಕ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಕೃಷ್ಣನೂ ಸುದಾಮನೂ ಇದ್ದ ಮೇಲೆ ಅವಲಕ್ಕಿಯಿಲ್ಲದಿದ್ದರೆ ಹೇಗೆ! ಹಾಗಾಗಿ ಈ ದೇವಾಲಯದಲ್ಲಿ ಅವಲಕ್ಕಿಯೇ ಪ್ರಸಾದ.

**

ಇಷ್ಟೆಲ್ಲ ನೆನಪಾಗುವಾಗ ಇನ್ನೂ ಒಂದು ತುಣುಕು ನೆನಪಾಗುತ್ತದೆ. ಸುಶಾಂತ್‌ ಸಿಂಗ್‌ ರಜಪೂತ್‌ ಅಭಿನಯದ ಎಂ. ಎಸ್‌ ಧೋನಿ ಸಿನೆಮಾದಲ್ಲೂ ಕೂಡಾ ಹೀಗೆ ಬಂದು ಹಾಗೆ ಹೋಗುವ ಪಾತ್ರವೊಂದು ಬರುತ್ತದೆ. ಅದು ಆತನ ಹಳೇ ಗೆಳೆಯ ಸತ್ಯಪ್ರಕಾಶ್‌ ಎಂಬ ಪಾತ್ರ. ಧೋನಿ ಆಗ ತನ್ನ ತಂಡದ ಕುರಿತಾಗಿ ಫೋನಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆಯಲ್ಲಿರುವ ಸಂದರ್ಭ ಆತನ ಭೇಟಿಗೆಂದು ಸತ್ಯಪ್ರಕಾಶ್‌ ಬರುತ್ತಾನೆ.

ಗೆಳೆಯನ ಜೊತೆ ಕೈಸನ್ನೆಯಲ್ಲೇ ಕೂರಲು ಹೇಳುತ್ತಾ ಮಾತು ಮುಂದುವರಿಸುವ ಧೋನಿ, ʻನನ್ನ ಟೀಂ ನನಗೆ ಸಿಗದಿದ್ದರೆ, ನಾಯಕತ್ವವೂ ಬೇಡʼ ಎಂದು ಹೇಳಿ ಕಾಲ್‌ ಕಟ್‌ ಮಾಡಿದಾಗ, ಈ ಸತ್ಯಪ್ರಕಾಶ್‌ ಧೋನಿಯೆಡೆಗೆ ತಿರುಗಿ, ʻಮತ್ತೆ ನಾನು ಬೇಕೂಫನಾಗೊದಿಲ್ಲ ಗೊತ್ತಾ? ಫೋನಿನಲ್ಲಿ ಮಾತನಾಡೋ ಥರ ನಾಟಕ ಆಡ್ತಾ ಇದ್ದೆ ತಾನೇ ನನ್ನ ಎದುರು? ನಂಗೆ ಗೊತ್ತಾಗಲ್ಲ ಅಂದ್ಕೊಂಡ್ಯಾʼ ಎಂದು ಮುಗ್ಧವಾಗಿ ಹೇಳುತ್ತಾನೆ. ಧೋನಿಯ ಮುಖದಲ್ಲಿ ಅದೇ ಹಳೆಯ ನಗು. ಫೋನಿನ ಮಾತು ನಾಟಕವಲ್ಲದಿದ್ದರೂ, ʻಗೆಳೆಯ ನೀನೇ ಸರಿ ನೋಡುʼ ಎಂಬ ಉತ್ತರ.

ತನ್ನ ಗೆಳೆಯ ಬಹಳ ದೊಡ್ಡ ವ್ಯಕ್ತಿಯಾಗಿ ಬೆಳೆದಿದ್ದಾನೆ ಎಂಬ ಹೆಮ್ಮೆ ಸಂತಸ, ಜೊತೆಗೆ ಇವ ನನ್ನ ಅದೇ ಹಳೇ ಗೆಳೆಯ ಎಂಬ ಸಲುಗೆ ಆಡಿಸುವ ಇಂಥಾ ಮಾತುಗಳು ಒಂಥರಾ ಬಲು ಆಪ್ತ.

**
ಹಾಂ, ಅಂದಹಾಗೆ ನಮ್ಮ ಗಾಂಧೀ ಅಜ್ಜನ ಮನೆಯ ಮೆಟ್ಟಿಲು ಹತ್ತಿಳಿದು, ಸುದಾಮ ದೇವಾಲಯದಲ್ಲಿ ಓಡಾಡಿ ಬಂದು, ಅದಕ್ಕೂ ಮೊದಲೇ ಕೃಷ್ಣ- ಸುದಾಮರ ಕಥೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಮಗರಾಯನಿಗೆ ಮಾತ್ರ ಈ ಗಾಂಧಿಗೂ ಸುದಾಮನಿಗೂ ಅದೇನೋ ಸಾಮ್ಯತೆ ಕಂಡುಬಿಟ್ಟಿತಪ್ಪ! ʻಇಬ್ಬರೂ ಒಂದೇ ಥರ ಇದ್ದಾರಮ್ಮಾ, ಇಬ್ಬರ ತಲೆಲೂ ಕೂದಲಿಲ್ಲʼ ಅಂದ.
‌ʻಹುಂ, ಹೌದೌದು, ಒಂದೇ ಊರಿನವರಲ್ವಾ!ʼ ಎಂದು ನಾನು ನಕ್ಕೆ. ಮುಂದೆ ಪ್ರಶ್ನೆ ಬರಬಹುದು ಎಂದುಕೊಂಡೆ. ಪುಣ್ಯಕ್ಕೆ ಬರಲಿಲ್ಲ ಎಂಬಲ್ಲಿಗೆ ನಾನು ಬಚಾವ್.

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: