ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವಿಲು

ಜಿ.ಪಿ. ಬಸವರಾಜು

ಸಂಜೆ ಬಾನು ಕೆಂಪಾಗಿ
ಜಿನುಗು ಮೋಡ ಹನಿಹನಿಯಾಗಿ
ಬಣ್ಣಗಳು ಕೂಡಿ ಬಣ್ಣದ ಬಿಲ್ಲಾಗಿ
ಮೋಡಿ ಮಾಡಿತು ಊರಿಗೆ ಬಂದ
ಗಿರಿಯ ನವಿಲು

ದಾರಿತಪ್ಪಿರಲಿಲ್ಲ ಅದಕೆ, ಗಿರಿ
ಕಾನನದಲ್ಲೆ ಗಿರಕಿ ಹೊಡೆದು
ದಣಿದು ಹೊಸ ನೋಟಕ್ಕೆಂದು
ಬಂದಿತ್ತು ಬಯಲಿಗೆ ಊರಿಗೆ

ಮುರುಕು ಮನೆಯ ಮೋಟು
ಗೋಡೆಯ ಮೇಲೆ ಕುಳಿತು
ನೋಡುತ್ತ ನೋಡುತ್ತ, ಎದೆಯ
ಹಾಡಿಗೆ ಮೀಟುತ್ತ ಹೆಜ್ಜೆ
ಹೆಜ್ಜೆ ಹೆಜ್ಜೆ ಕುಣಿದವು
ನೆರೆದವರ ಕಣ್ಣುತುಂಬಿ

ತಂಪು ಮೋಡಗಳ ಮರೆಯಲ್ಲಿ
ದೀಪ ಬೆಳಗುತ್ತಿದ್ದ ಕೆಂಪು ಸೂರ್ಯ
ಹನಿಹನಿಗೆ ಮೈತೆರೆದು, ಮನಬಿಚ್ಚಿ
ಕುಣಿಯುವ ನವಿಲಿಗೆ, ಊರಿಗೆ
ಊರೇ ಸೋಜಿಗದಲ್ಲಿ ಮೈಮರೆತು

ಮಿದುವಾದ ಎದೆಗಳಲಿ ಕರಗಿತು ಲೋಕ
ಎಳೆಗೆ ಎಳೆ ಕೂಡಿ ದನಿಗೆ ದನಿ ಕೂಡಿ
ಹಾಡೆ ಹಬ್ಬವಾಗಿ ಕುಣಿವ ಹುರುಪಾಗಿ

ಕುಣತಕ್ಕೆ ಕಣ್ಣು ಮಬ್ಬಾಗಿ ಕತ್ತಲಿಳಿದಂತೆ
ಎಗ್ಗಿಲ್ಲದೆ ನುಗ್ಗಿದನು ನಾಗ
ನಾಯಕರ ಹುಡುಗ, ರೆಪ್ಪೆತೆರೆದು
ಮುಚ್ಚಲಿಲ್ಲ ಜನ, ಕಂಡ ಕನಸು
ಮುಗಿದಿರಲಿಲ್ಲ ಇನ್ನೂ, ಮಾಯವಾದನು
ನಾಗ ಕತ್ತಲೊಳಗೆ ನವಿಲು ಹೊತ್ತು

ಅಲ್ಲಲ್ಲಿ ಬಿದ್ದ ಅದರ ಗರಿಗಳು
ತುಂಡು ಕನಸುಗಳ ಉಳಿಕೆಯಂತೆ
ಎದೆಯ ಇರಿಯುವ ನವಿಲ ಕೂಗು
ಊರು ತುಂಬಿ, ಬಯಲು ತುಂಬಿ
ಮುಗಿಲಿಗೇರಿ ಮತ್ತೆ ನೆಲಕ್ಕೆ ಬಂದು
ಬಡಿದಂತೆ, ಎಲ್ಲರೆದೆಗಳು ಬರಿದಾಗಿ

‍ಲೇಖಕರು Avadhi

1 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading