ನಮ್ಮೂರಿನಕ್ಕರೆಯ ಸಕ್ಕರೆಯ ಗೊಂಬೆಯನು ನೋಡಬೇಕೇ ಇಂಥ ಕಪ್ಪು ಗಂಡು?

ಇವತ್ತೊಂದು ಸುದ್ದಿಯನ್ನು ಓದಿದೆ. ʻಪತಿಯನ್ನು ಕಪ್ಪು ಚರ್ಮದವನು ಎಂದು ಜರೆಯುತ್ತಿದ್ದ ಪತ್ನಿಯ ಧೋರಣೆಯನ್ನು ʻಕ್ರೌರ್ಯʼ ಎಂದು ಪರಿಗಣಿಸಿರುವ ಹೈಕೋರ್ಟ್ ದಂಪತಿಯ ಮದುವೆಯನ್ನು ಅಸಿಂಧುಗೊಳಿಸಿ, ವಿಚ್ಛೇದನ ಮಂಜೂರು ಮಾಡಿದೆʼ.

ಇದು ನಿಸ್ಸಂದೇಹವಾಗಿ ಕ್ರೌರ್ಯವೇ ಸರಿ. ನಾನು ಕಳೆದ ತಿಂಗಳು ತಂಜಾವೂರು, ಚಿದಂಬರಂ, ಕುಂಭಕೋಣಂ ಮುಂತಾದ ಸ್ಥಳಗಳಿಗೆ ಟ್ರಾವೆಲ್ಸ್ ಒಂದರಲ್ಲಿ ಪ್ರವಾಸಕ್ಕೆ ಹೋಗಿದ್ದೆ. ನಮ್ಮೊಂದಿಗೆ ಅನೇಕ ಜನರಿದ್ದರು. ದೇವಸ್ಥಾನವೊಂದರ ಮುಂದೆ ಬಸ್ಸು ನಿಂತಾಗ ಪ್ರವಾಸಿಯೊಬ್ಬ ತನ್ನ ಹೆಂಡತಿಯನ್ನು, ʻದೇವರಲ್ಲಿ ಏನು ಬೇಡಿಕೊಳ್ಳುತ್ತೀಯ?ʼ ಎಂದು ಪ್ರೀತಿಯಿಂದ ಕೇಳುತ್ತಿದ್ದ. ಹೆಂಡತಿಗೆ  ಯಾವ್ಯಾವುದೋ ಕಾರಣಗಳಿಗೆ ಆರು ಬಾರಿ ಶಸ್ತ್ರಚಿಕಿತ್ಸೆಯಾಗಿದೆ. ಹಾಗಾಗಿ ಬಹಳ ಕಾಳಜಿಯಿತ್ತು ಅವನಿಗೆ. ನಾನು ಕುತೂಹಲದಿಂದ ಅವರ ಮಾತುಗಳನ್ನು ಕೇಳುತ್ತಿದ್ದೆ. ʻನನಗೆ ಮುಂದಿನ ಜನ್ಮದಲ್ಲಾದರೂ ಬೆಳ್ಳಗಿರುವ ಗಂಡನನ್ನು ಕೊಡಪ್ಪ, ಇಲ್ಲವಾದರೆ ನನ್ನ ಗಂಡನ ಮುಖವನ್ನು ಬೆಳ್ಳಗೆ ಮಾಡಪ್ಪʼ ಎಂದು ಕೇಳಿಕೊಳ್ಳುತ್ತೇನೆ ಎಂದು ಅತ್ಯಂತ ಗಂಭೀರವಾಗಿ ಆಕೆ ಹೇಳಿದಳು. ಗಂಡನ ಮುಖ ಸಪ್ಪಗಾಯಿತು. ನಾನು ಆಕೆ ತಮಾಷೆಗೆ ಹೇಳುತ್ತಿರಬಹುದು, ಗಂಡನನ್ನು ಛೇಡಿಸುತ್ತಿರಬೇಕು ಎಂದುಕೊಂಡೆ. ಇಲ್ಲ, ಆಕೆ ಬಹಳ ಸೀರಿಯಸ್ ಆಗಿ ಈ ಮಾತುಗಳನ್ನು ಕಪ್ಪು ಬಣ್ಣದ ಮತ್ತೊಬ್ಬ ವ್ಯಕ್ತಿಯ ಬಳಿ ಹೇಳುತ್ತಿದ್ದಳು. ಆ ಮೂಲಕ ತನ್ನ ಗಂಡನಿಗೆ ಮಾತ್ರವಲ್ಲ, ಇದಕ್ಕೆ ಏನೇನು ಸಂಬಂಧವಿಲ್ಲದ ಮತ್ತೊಬ್ಬ ವ್ಯಕ್ತಿಯಲ್ಲೂ ಕೀಳರಿಮೆ ಹುಟ್ಟಿಸುತ್ತಿದ್ದಳು. ಉಳಿದ ಪ್ರವಾಸಿಗಳು ಇದೊಂದು ಸಹಜ ಸಂಭಾಷಣೆ ಎನ್ನುವಂತೆ ಆರಾಮವಾಗಿದ್ದರು. ನಾನು ಬೆಚ್ಚಿದೆ. ಕತ್ತಿಯಲ್ಲಿ ಇರಿಯದೆ ಮಾಡುವ ನೂರಾರು ಕ್ರೌರ್ಯಗಳಲ್ಲಿ ಇದೂ ಒಂದು ಎಂದು ಹೇಳಬೇಕೇ?

ಕಂಡ ಕಂಡವರನ್ನೆಲ್ಲ ದಪ್ಪ, ಸಣ್ಣ ಎಂದು ಬೇಕಾಬಿಟ್ಟಿ ಮಾತನಾಡುತ್ತಾ ಜನರು ಇಡೀ ಜೀವನವನ್ನು ಸವೆಸುತ್ತಿರುತ್ತಾರೆ. ಹಾಗೆ ಹೇಳುವಾಗ ಆರೋಗ್ಯದ ದೃಷ್ಟಿಯೇನೋ ಇರುವುದಿಲ್ಲ. ನಮ್ಮ ಸಮಾಜಕ್ಕೆ ಇದರ ಬಗ್ಗೆ ಯಾವ ಪಾಪಪ್ರಜ್ಞೆಯೂ ಇಲ್ಲ. ತಳಮಳ ಮೊದಲೇ ಇಲ್ಲ. ನಾನು ಬಹುವಾಗಿ ಇಷ್ಟಪಡುವ ಕವಿ ಎಂದರೆ ಕೆ.ಎಸ್‌. ನರಸಿಂಹ ಸ್ವಾಮಿಯವರು. ಅವರ ಎಷ್ಟೋ ಕವಿತೆಗಳು ನನ್ನ ಬದುಕನ್ನು ಕೈ ಹಿಡಿದು ನಡೆಸಿವೆ. ಆದರೆ ʻಶಾನುಭೋಗರ ಮಗಳುʼ ಕವಿತೆಯಲ್ಲಿ ಬರುವ ಕೆಲವು ಸಾಲುಗಳು ಮಾತ್ರ ಭಯಂಕರ  ಕಸಿವಿಸಿ ಹುಟ್ಟಿಸಿದ್ದು ನಿಜ. ʻಶಾನುಭೋಗರ ಮಗಳು, ರತ್ನದಂತಹ ಹುಡುಗಿ ಊರಿಗೆಲ್ಲ, ಬಲು ಜಾಣೆ ಗಂಭೀರೆʼ ಸಾಲುಗಳನ್ನು ಚಿಕ್ಕವರಿದ್ದಾಗ ಮತ್ತೆ ಮತ್ತೆ ಓದುತ್ತಾ ನಾವು ಅಕ್ಕತಂಗಿಯರು ನಮಗೇ ಬರೆದ ಸಾಲುಗಳು ಎನ್ನುವಂತೆ ಹಿಗ್ಗುತ್ತಿದ್ದೆವು.  

ʻಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ ನೀರು ತರುವಾಗವಳ ನೋಡಬೇಕು

ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ ಅವಳ ಗಂಡನ ಹೆಸರ ಕೇಳಬೇಕುʼ.

ಹಳ್ಳಿಯಲ್ಲಿದ್ದ ನಮ್ಮೊಳಗೆ ಈ ಕವಿತೆ ಒಂದು ರಮ್ಯ ಭಾವನೆಯನ್ನು ಮೂಡಿಸುತ್ತಿತ್ತು. ಇಂತಹ ಹುಡುಗಿಯನ್ನು ತಾವರೆಕೆರೆಯ ಜೋಯಿಸರ ಮಗನೊಬ್ಬ ನೋಡಲು ಬರುತ್ತಾನೆ. ʻವೈದಿಕರ ಮನೆಗಳಲ್ಲಿ ಊಟ ಹೊತ್ತಾಗುವುದು ಒಲ್ಲೆನೆಂದಳು ಸೀತೆ ಕೋಣೆಯೊಳಗೆʼ ಎನ್ನುವ ವಿಷಯ ತಂದೆಗೆ ತಿಳಿದಾಗ ನಕ್ಕು ಬಿಡುತ್ತಾರೆ. ಈ ಸಾಲಂತೂ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಬರೆದ ಸಾಲೆಂದು ಹಿಗ್ಗಿದ್ದೆವು. ನಾವೆಲ್ಲಾ ಮುಕ್ತ ವಾತಾವರಣದಲ್ಲಿ ಬೆಳೆದವರು. ಮಡಿ ಹುಡಿ, ನೂರೆಂಟು ಸಂಪ್ರದಾಯದ ಸಂಕೋಲೆಗಳು  ಯಾವುದೂ ತಿಳಿಯದ ಗಾಳಿ ಬೆಳಕಿನ ಬಾಲ್ಯ ಮತ್ತು ಯೌವನವದು. ಸಂಪೂರ್ಣ ನಿಷ್ಠೆಯಿಂದ ಕೆಲಸವನ್ನು ಮಾಡುವುದು. ಸಾಧ್ಯವಾದರೆ ಬೇರೆಯವರಿಗೆ ಸಹಾಯ ಮಾಡುವುದು, ಉಳಿದ ಸಮಯದಲ್ಲಿ ಖುಷಿಯಾಗಿ ಅಲೆದಾಡುವುದು. ಹರಟುವುದು, ಚರ್ಚಿಸುವುದು ಇತ್ಯಾದಿ. ಇಷ್ಟು ಮಾತ್ರ ನಮಗೆ ತಿಳಿದಿದ್ದು.

ಆದರೆ ʻಸೀತೆಯೆಂಬ ರತ್ನದಂಥ ಹುಡುಗಿʼ ಗಂಡನ್ನು ನಿರಾಕರಿಸುವುದಕ್ಕೆ ನಿಜವಾದ ಕಾರಣವನ್ನು ಗೆಳತಿಗೆ ಹೇಳುತ್ತಾಳೆ. ʻಹೊನ್ನೂರ  ಕೇರಿಯಲಿ ಬಂದಿದ್ದ ಹೊಸ ಗಂಡು ತನ್ನ ಕೂದಲಿಗಿಂತ ಕಪ್ಪು ಎಂದುʼ. ಸೀತೆ ಬೆಳೆದ ಸಮಾಜಕ್ಕೆ, ವಾತಾವರಣಕ್ಕೆ ಇಂಥ ಮಾತು ಸಹಜವೇ ಆಗಿದ್ದಿರಬಹುದು. ಅದೊಂದು ಕ್ರೌರ್ಯದ ಮಾತು ಎಂಬುದು ಅರಿವಾಗದಂತಹ ಅಸೂಕ್ಷ್ಮ ಪರಿಸರ. ಹುಡುಗನನ್ನು ಇಷ್ಟಪಡುವುದು, ಬಿಡುವುದು ಅವಳ ವೈಯಕ್ತಿಕ ಆಯ್ಕೆಯೇ ಇರಬಹುದು. ಆದರೆ ಕವನ ಕೊನೆಯಾಗುವ ರೀತಿ ಮಾತ್ರ ಒಳಗೊಂದು ಕಸಿವಿಸಿಯನ್ನು ಹುಟ್ಟಿಸಿದ್ದು ನಿಜ.

ʻನಮೂರಿನಕ್ಕರೆಯ ಸಕ್ಕರೆಯ ಬೊಂಬೆಯನು ನೋಡಬೇಕೆ ಇಂಥ ಕಪ್ಪು ಗಂಡು

ಶಾನುಭೋಗರ ಮನೆಯ ತೋರಣವೇ ಹೇಳುವುದು ಬಂದ ದಾರಿಗೆ ಸುಂಕವಿಲ್ಲವೆಂದುʼ

ನಾನು ʻವರ್ಣಭೇದ ನೀತಿʼ, ʻಬಾಡಿ ಶೇಮಿಂಗ್ʼ ಇತ್ಯಾದಿ ಗಂಭೀರ ವಿಷಯಗಳನ್ನು ಇಲ್ಲಿ ಚರ್ಚಿಸುತ್ತಿಲ್ಲ. ಆ ಬಗ್ಗೆ ಸಾಕಷ್ಟು ಬರೆದಿದ್ದಾಗಿದೆ, ಅನೇಕ ಪುಸ್ತಕಗಳನ್ನು ಅನುವಾದಿಸಿದ್ದೇನೆ. ಆದರೆ ಕ್ರೌರ್ಯ ಎನ್ನುವುದು ಯಾವ ಯಾವ ಮಾತುಗಳಲ್ಲಿರುತ್ತದೆ  ಎನ್ನುವುದು ತಿಳಿಯದ ಸಮಾಜದಲ್ಲಿ ಬಾಯಿಗೆ ಬಂದಿದ್ದೆಲ್ಲವನ್ನು ಮಾತನಾಡುವ ನಮ್ಮ ಪ್ರವೃತ್ತಿ ಮಾತ್ರ ಆಘಾತಕಾರಿಯಾಗಿದೆ. ದೇವಸ್ಥಾನದ ಮುಂದೆ ಆ ಹೆಣ್ಣುಮಗಳು ಮಾತಾಡಿದ್ದು ಇಂತಹದನ್ನೇ. ಆ ದಿನ ಅವಳೆಷ್ಟು ಮನಸ್ಸುಗಳನ್ನು ಬಾಡುವಂತೆ ಮಾಡಿದಳು ಎಂಬುದು ಅವಳಿಗೆ ತಿಳಿದಿದೆಯೇ? 

ಸೂಫಿ ಸಂತ ಯೂನಸ್ ಹೇಳಿದ ಮಾತುಗಳನ್ನು ನೆನಪಿಟ್ಟುಕೊಳ್ಳದಿದ್ದರೆ ನಮ್ಮ ಮಾತುಗಳು ಇಡೀ ಸಮಾಜವನ್ನು, ಮನಸ್ಸುಗಳನ್ನು ಅಸ್ವಸ್ಥಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ʻಒಂದು ಪದ ಮುಖವೊಂದಕ್ಕೆ

ಹೊಳಪು ನೀಡಬಹುದು

ಮಾತಿನ ಬೆಲೆ ತಿಳಿದವರಾಗಿದ್ದರೆ!

ಮೌನದಲ್ಲಿ ಮಾಗಿದ ಒಂದು ಪದ

ಕೆಲಸಕ್ಕೆ ಶಕ್ತಿ ತುಂಬಬಹುದು

ಒಂದು ಪದ ಯುದ್ಧವನ್ನೇ ನಿಲ್ಲಿಸಬಹುದು

ಗಾಯಗಳ ಮಾಯಿಸಬಹುದು

ಒಂದು ಪದ ವಿಷವನ್ನು ಜೇನಾಗಿ ಬದಲಿಸಬಹುದುʼ ಪದಗಳ ಶಕ್ತಿಯ ಅರಿವಿರದೆ, ಪದಗಳನ್ನು ಬಾಣವಾಗಿ ಬಳಸುತ್ತಿರುವಾಗ ನಾವು ಎಷ್ಟೇ ಉನ್ನತ ವಿಷಯಗಳನ್ನು ಹೇಳಿದರೂ ಪರಿಣಾಮ ಘೋರವೇ ಎಂಬ ಎಚ್ಚರಿಕೆಯ ನಡವಳಿಕೆ ಇರಲೇಬೇಕೆನ್ನಿಸುತ್ತಿದೆ.

‍ಲೇಖಕರು Adminm M

August 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: