ಜೆ ವಿ ಕಾರ್ಲೊ ಅನುವಾದಿಸಿದ ‘ಕೊಡಲಿ ಮತ್ತು ಗರಗಸ’

ಇಂಗ್ಲಿಷ್‌ ಮೂಲ : ರೊಆಲ್ಡ್ ದಾಹ್ಲ್

ಕನ್ನಡಕ್ಕೆ: ಜೆ.ವಿ. ಕಾರ್ಲೊ

ಎಂಟು ವರ್ಷಗಳ ಹಿಂದೆ ಸರ್ ವಿಲಿಯಂ ಟರ್ಟನ್ ತೀರಿಕೊಂಡರು. ಅವರ ʻದಿ ಟರ್ಟನ್ ಪ್ರೆಸ್ʼ, ಅವರ ರಾಜಪದವಿ ʻಸರ್ʼನೊಂದಿಗೆ ಮಗ ಬೇಸಿಲನಿಗೆ ಹಸ್ತಾಂತರವಾಯಿತು. ಲಂಡನಿನ ಫ್ಲೀಟ್ ಸ್ಟ್ರೀಟಿನಲ್ಲಿ (ಪತ್ರಿಕೋದ್ಯಮದ ಮುಖ್ಯ ಕೇಂದ್ರ) ಎಲ್ಲರ ಬಾಯಲ್ಲೂ ಒಂದೇ ವಿಷಯ: ಯಾವಾಗ ಒಂದು ಸ್ಫುರದ್ರೂಪಿ ಹೆಣ್ಣು ಸರ್ ಬೇಸಿಲನಿಗೆ ಗಾಳ ಹಾಕಿ ಅವನನ್ನು ವರಿಸಿ ಟರ್ಟನ್ ಸಾಮ್ರಾಜ್ಯವನ್ನು ಆಳುತ್ತಾಳೆ ಎಂಬುದು!

ಪ್ರಾಯ ನಲ್ವತ್ತಾದರೂ ಕುವರನಾಗಿದ್ದುಕೊಂಡೇ, ತಾನಾಯಿತು ತನ್ನ ಪೇಂಟಿಂಗ್ ಮತ್ತು ಕಲಾಕೃತಿಗಳ ಸಂಗ್ರಹಣೆಯಲ್ಲೇ ವ್ಯಸ್ತನಾಗಿದ್ದುಕೊಂಡು ತಂದೆಯ ಪತ್ರಿಕೋದ್ಯಮದ ವ್ಯವಹಾರದಲ್ಲಿ ಕಿಂಚಿತ್ತೂ ಆಸಕ್ತಿ ತೋರದ ಸರ್ ಬೇಸಿಲ್ ತಂದೆಯ ನಾಡಮನೆಯಲ್ಲಿ ಅಜ್ಞಾತನಾಗಿದ್ದುಕೊಂಡಿದ್ದ ಸಾದಾ ಜೀವಿಯಾಗಿದ್ದ. ತಂದೆಯ ಮರಣದ ನಂತರ ಸರ್ ಬೇಸಿಲ್ ಅನಿವಾರ್ಯವಾಗಿ ನಾಡಮನೆಯಿಂದ ಲಂಡನ್‌ಗೆ ಬರಲೇ ಬೇಕಾಯಿತು.

ಸಹಜವಾಗಿ ಅವನ ಸುತ್ತಮುತ್ತ ಹದ್ದುಗಳು ಹಾರಾಡಲು ಶುರುವಾದವು. ಫ್ಲೀಟ್ ಸ್ಟ್ರೀಟ್ ಅಷ್ಟೇ ಅಲ್ಲ, ಲಂಡನ್ ನಗರವೂ ಕೂಡ ಸರ್ ಬೇಸಿಲನ ನಡೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸತೊಡಗಿತ್ತು. ಮದುವೆಯಾಗದ ಕುಲೀನ ಮನೆತನದ ಸುಂದರ ಹೆಣ್ಣುಗಳು ಅವನ ಸುತ್ತಮುತ್ತ ಠಳಾಯಿಸ ತೊಡಗಿದರು. ಆದರೆ ಸರ್ ಬೇಸಿಲ್ ಅವರಾರ ಕಡೆಗೂ ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಯದಾಗಿ ಆ ಹುಡುಗಿಯರೇ ಬೇಜಾರಾಗಿ ದೂರ ಸರಿದರು. ಹಠಾತ್ತಾಗಿ ರಂಗಮಂಚಕ್ಕೆ ನತಾಲಿಯ ಎಂಬ ಹೆಣ್ಣಿನ ಪ್ರವೇಶವಾಯಿತು. ಆಕೆ ಸರ್ ಬೇಸಿಲನ ಕೈ ಪಟ್ಟಾಗಿ ಹಿಡಿದಿದ್ದಷ್ಟೇ ಅಲ್ಲದೇ, ವಾರದೊಳಗೆ ಕ್ಯಾಕ್ಸ್‌ಟನ್ ಹಾಲಿನ ರೆಜಿಸ್ಟರ್ ಕಛೇರಿಗೆ ಕರೆದುಕೊಂಡು ಹೋಗಿ ಮದುವೆಯೂ ಆದಳು.

ಸಹಜವಾಗಿ ಲಂಡನಿನ ಹುಡುಗಿಯರು ಹೊಟ್ಟೆಕಿಚ್ಚಿನಿಂದ ಲೇಡಿ ನತಾಲಿಯಾಳಿಗೆ ಏನೆಲ್ಲಾ ಹೆಸರುಗಳಿಂದ ಜರೆದು ತಮ್ಮ ಸಂಕಟವನ್ನು ಶಮನಗೊಳಿಸಿದರು.

… ಇದೆಲ್ಲಾ ಆರು ವರ್ಷಗಳ ಹಿಂದಿನ ಮಾತು. ವರ್ತಮಾನಕ್ಕೆ ಬರುವುದಾದರೆ ನನಗೆ ಕಳೆದ ವಾರವಷ್ಟೇ ಲೇಡಿ ಟರ್ಟನಳ ಪರಿಚಯವಾಗಿದ್ದು. ನೀವು ಈಗಾಗಲೇ ಊಹಿಸಿರಬಹುದು. ʻಟರ್ಟನ್ ಪ್ರೆಸ್‌ʼ ಈಗ ಸಂಪೂರ್ಣವಾಗಿ ಲೇಡಿ ನತಾಲಿಯಾಳ ಹಿಡಿತದಲ್ಲಿತ್ತು ಮತ್ತು ಇದರಿಂದಾಗಿ ರಾಜಕೀಯ ವರ್ತುಲದಲ್ಲಿ ಲೇಡಿ ನತಾಲಿಯ ಟರ್ಟನ್ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದಳು. ಲೇಡಿ ನತಾಲಿಯ ರಾಜಕೀಯ ಪ್ರಭಾವ ಗಳಿಸಿದ ಮೊದಲ ಹೆಣ್ಣುಮಗಳಲ್ಲದಿದ್ದರೂ ಒಬ್ಬ ವಿದೇಶಿ ಹೆಣ್ಣು, ಅದೂ ಲಂಡನ್‌ನಲ್ಲಿ ಇಷ್ಟೊಂದು ಶೀಘ್ರವಾಗಿ ಪ್ರಭಾವ ಗಳಿಸಿದ್ದು ಮಾತ್ರ ಕುತೂಹಲ ಮೂಡಿಸುವಂತದ್ದು. ಮತ್ತೊಂದು ಕುತೂಹಲದ ವಿಷಯವೆಂದರೆ ಲೇಡಿ ನತಾಲಿಯಳ ರಾಷ್ಟ್ರೀಯತೆಯ ಬಗ್ಗೆ ಯಾರಿಗೂ ಗೊತ್ತಿಲ್ಲದಿರುವುದು: ಯುಗೊಸ್ಲಾವಿಯಾನೋ, ಬಲ್ಗೇರಿಯಾನೋ ಅಥವಾ ರಷ್ಯಾನೋ!

ಕಳೆದ ಗುರುವಾರ ನಾನು ನನ್ನ ಸ್ನೇಹಿತನೊಬ್ಬನ ಔತಣಕೂಟದಲ್ಲಿ ಪಾಲ್ಗೊಂಡಿದ್ದೆ. ಎಲ್ಲರ ಕೈಯಲ್ಲೂ ಮದ್ಯದ ಗ್ಲಾಸುಗಳು. ಮಾತು ಆಟಂಬಾಂಬಿನಿಂದ ಹಿಡಿದು ಆರೋಗ್ಯ ಸಚಿವ ಬೆವನ್‌ನವರೆಗೆ ಸಾಗಿತ್ತು. ಅಷ್ಟರಲ್ಲಿ ಮನೆಯೊಡತಿ ಅಂದಿನ ಕೊನೆಯ ಅತಿಥಿಯ ಆಗಮನವನ್ನು ಸಾರಿ ಹೇಳಿದಳು:

“ಲೇಡಿ ಟರ್ಟನ್!”

ಯಾರೂ ಮಾತು ನಿಲ್ಲಿಸಲಿಲ್ಲ. ಎಲ್ಲರೂ ಕಣ್ಣುಗಳನ್ನು ಒಮ್ಮೆ ಅತ್ತ ತಿರುಗಿಸಿ ತಮ್ಮ ತಮ್ಮ ಸಂಭಾಷಣೆಗಳಲ್ಲೇ ತೊಡಗಿಸಿಕೊಂಡರು. ಲೇಡಿ ಟರ್ಟನ್ ದಾಪುಗಾಲುಗಳನ್ನಿಡುತ್ತಾ ಒಳಗೆ ಬಂದಳು. ಆಕೆಯ ಮುಖ ಮುಗುಳ್ನಗೆ ಸೂಸುತ್ತಿತ್ತು. ಆಕೆ ಸ್ವಲ್ಪ ತೆಳ್ಳಗಿದ್ದು ಎತ್ತರವಾಗಿದ್ದಳು. ಅವಳು ಉಟ್ಟಿದ್ದ ಕೆಂಪು ಡ್ರೆಸ್ ಅವಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿತ್ತು. ಅವಳು ಎರಡೂ ಕೈಗಳನ್ನು ಹಿಗ್ಗಲಿಸುತ್ತಾ ಮನೆಯೊಡತಿಯನ್ನು ಆಲಂಗಿಸಿದಳು. ಅವಳು ನಿಜಕ್ಕೂ ಚೆಲುವೆಯಾಗಿದ್ದಳು.

“ಗುಡ್ ಈವ್ನಿಂಗ್ ಮಿಲ್ಡ್ರೆಡ್”

“ಹೌ ನೈಸ್ ಮೈ ಡಿಯರ್ ಲೇಡಿ ಟರ್ಟನ್!”

ಆಗ ನಾವೆಲ್ಲಾ ನಮ್ಮ ಮಾತುಕತೆಗಳನ್ನು ಅರ್ಧಕ್ಕೇ ನಿಲ್ಲಿಸಿ ಪರಿಚಯ ಮಾಡಿಕೊಳ್ಳುವ ಶಿಷ್ಟಾಚಾರವನ್ನು ಎದುರು ನೋಡುತ್ತಾ ಅತ್ತ ತಿರುಗಿದೆವು. ನಮ್ಮ ಪರಿಚಯ ಮಾಡಿಕೊಟ್ಟ ನಂತರ ಮನೆಯೊಡತಿ ಲೇಡಿ ಟರ್ಟನ್‌ಳನ್ನು ಹಾಲಿನ ಮತ್ತೊಂದು ಬದಿಗೆ ಕರೆದುಕೊಂಡು ಹೊರಟಳು. ನಾನು ಆಕೆಯನ್ನೇ ಗಮನಿಸುತ್ತಿದ್ದೆ. ಎಲ್ಲರ ಕಣ್ಣುಗಳೂ ತನ್ನ ಮೇಲಿರುವುದು ಆಕೆಗೆ ಗೊತ್ತಿರುವಂತೆ ಕಾಣಿಸುತ್ತಿತ್ತು. ಆಕೆಯ ನಡೆಯಲ್ಲಿ ನನಗೆ ಒಬ್ಬ ಯಶಸ್ವೀ ಹೆಣ್ಣಿನ ಗರ್ವ ಎದ್ದು ಕಾಣಿಸುತ್ತಿತ್ತು.

ಕೆಲ ಹೊತ್ತಿನಲ್ಲೇ ಊಟಕ್ಕೆ ಎಬ್ಬಿಸಿದರು. ನನಗೆ ಲೇಡಿ ಟರ್ಟನ್‌ಳ ಪಕ್ಕದಲ್ಲೇ ಆಸನ ಲಭಿಸಿದ್ದು ನನಗೆ ಕೊಂಚ ಆಶ್ಚರ್ಯವನ್ನುಂಟು ಮಾಡಿತು. ಬಹುಶಃ ಮನೆಯ ಯಜಮಾನ ಪ್ರಜ್ಞಾಪೂರ್ವಕವಾಗಿ ಈ ಏರ್ಪಾಡನ್ನು ಮಾಡಿರಬೇಕೆಂದು ನನಗನಿಸಿತು. ನಾನು ಒಂದು ಸಂಜೆಯ ಪತ್ರಿಕೆಗೆ ಅಂಕಣಕಾರನಾಗಿದ್ದೆ. ಲೇಡಿ ಟರ್ಟನ್‌ಳಿಂದ ನನ್ನ ಅಂಕಣಕ್ಕೆ ಏನಾದರೂ ವಿಷಯ ಸಿಗಬಹುದೆಂಬ ದೂರಾಲೋಚನೆ ನನ್ನ ಗೆಳೆಯನಿಗಿದ್ದರಬೇಕು. ಆದರೆ ಊಟ ಮುಗಿಯುವವರೆಗೆ ಆಕೆ ನನ್ನತ್ತ ನೋಡಲೇ ಇಲ್ಲ. ಆಕೆಯ ಎಡ ಬದಿಯಲ್ಲಿ ಕುಳಿತಿದ್ದ ಮನೆಯೊಡೆಯ, ನನ್ನ ಸ್ನೇಹಿತನೊಡನೆಯೇ ಹರಟಿದಳು. ಕೊನೆಗೆ ಐಸ್‌ಕ್ರೀಂ ಸರದಿ ಬಂದಾಗ ಆಕೆ ಹಠಾತ್ತನೆ ನನ್ನ ಕಡೆಗೆ ತಿರುಗಿ ನನ್ನ ಪರಿಚಯ ಕಾರ್ಡನ್ನು ಎತ್ತಿಕೊಂಡಳು. ನಂತರ ಕಣ್ಣುಗಳನ್ನು ಓರೆ ಮಾಡಿ ನನ್ನನ್ನೇ ತುಸು ಹೊತ್ತು ಗಮನಿಸಿದಳು. ನಾನು ಮುಗುಳ್ನಗುತ್ತಾ ಶಿರ ಬಾಗಿಸಿದೆ. ಆದರೆ ಆಕೆ ಮರುನಗೆ ಸೂಸಲಿಲ್ಲ. ಪಟಪಟನೆ ಕೆಲವು ವಯುಕ್ತಿಕ ಪ್ರಶ್ನೆಗಳನ್ನು ಕೇಳಿದಳು: ವೃತ್ತಿ, ವಯಸ್ಸು, ಕುಟುಂಬ… ಇತ್ಯಾದಿ. ಆಕೆಯ ತನಿಖೆಯಲ್ಲಿ ನನ್ನ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಕುರಿತ ಆಸಕ್ತಿಯ ವಿಚಾರವೂ ಹೊರಬಂದಿತು.

“ಹಾಗಾದರೆ ನೀವು ಖಂಡಿತವಾಗಿಯೂ ನನ್ನ ಗಂಡನ ನಾಡಮನೆಗೆ ಬರಬೇಕು. ಅವರು ಪೇಂಟಿಂಗ್ಸ್‌ ಮತ್ತು ಶಿಲಾಕೃತಿಗಳ ಮಹಾನ್ ಸಂಗ್ರಹಕಾರ”. ಆಕೆ ಈ ಮಾತನ್ನು ಶಿಷ್ಟಾಚಾರಕ್ಕಾಗಿ ಹೇಳಿದಳೋ            ಇಲ್ಲ ಹೃದಯಪೂರ್ವಕವಾಗಿ ಹೇಳಿದಳೋ ಗೊತ್ತಾಗಲಿಲ್ಲ. ಆದರೆ ನಾನಂತೂ ಆಕೆಯ ಆಹ್ವಾನವನ್ನು ಗಂಭೀರವಾಗಿಯೇ ಸ್ವೀಕರಿಸಿದೆ. ಇಂತಹ ಸುಸಂದರ್ಭವನ್ನು ಕಳೆದುಕೊಳ್ಳಲು ನಾನು ತಯಾರಿರಲಿಲ್ಲ.

“ಒಹ್, ಲೇಡಿ ಟರ್ಟನ್! ನೀವು ಆಮಂತ್ರಿಸುವುದು ಹೆಚ್ಚೋ ನಾನು ಬರುವುದು ಹೆಚ್ಚೋ? ಯಾವಾಗ ಬರಲಿ? ನೀವೇ ಹೇಳಿ” ನಾನು ಉತ್ಸಾಹದಿಂದ ಬಡಬಡಿಸಿದೆ. ಇಂತಹ ಸಂದರ್ಭವನ್ನು ಕಳೆದುಕೊಳ್ಳುವ ಮೂರ್ಖ ನಾನಲ್ಲ!

ನನ್ನ ಪ್ರತಿಕ್ರಿಯೆಯಿಂದ ಆಕೆ ಕೊಂಚ ಗಲಿಬಿಲಿಗೊಂಡಿರಬೇಕು! ತಕ್ಷಣವೇ ಸಾವರಿಸಿಕೊಂಡು, “ಐ ಡೋಂಟ್ ಕೇರ್…! ಯಾವಾಗಲಾದರೂ ಬನ್ನಿ!” ಲೇಡಿ ಟರ್ಟನ್ ತನ್ನ ನಾಜೂಕಾದ ಭುಜಗಳನ್ನು ಕುಣಿಸುತ್ತಾ ಉಲಿದಳು.

“ನಿಮ್ಮ ಅಭ್ಯಂತರವಿಲ್ಲದಿದ್ದರೆ ಮುಂದಿನ ಶನಿವಾರ?” ನಾನೆಂದೆ.

ಆಕೆ ಕೆಲವು ಕ್ಷಣ ನನ್ನನ್ನೇ ದಿಟ್ಟಿಸಿ, “ಐ ಡೋಂಟ್ ಕೇರ್!” ಎಂದಳು.

ಹಾಗೆ, ಶನಿವಾರದಂದು ನಾನು ನನ್ನ ಸೂಟ್‌ಕೇಸ್ ಸಮೇತ ʻವೂಟನ್ʼ ದಾರಿ ಹಿಡಿದೆ. ವೃತ್ತಿಸಹಜ ಕುತೂಹಲ ಹೊರತುಪಡಿಸಿ ನನಗೆ ಸರ್ ಬೇಸಿಲರ ನಾಡಮನೆಯನ್ನೊಮ್ಮೆ ನೋಡುವ ಕಾತುರತೆ ಇತ್ತು. ಅಲ್ಲದೆ ʻವೂಟೊನ್ʼ, ಆರಂಭದ ಇಂಗ್ಲಿಷ್ ನವೋದಯ ಸಂಪ್ರದಾಯದ ಕಲ್ಲಿನ ಮನೆಗಳಿಗೆ ಪ್ರಖ್ಯಾತವಾಗಿತ್ತು. ಲಂಡನ್‌ನಿಂದ ಹೆಚ್ಚು ದೂರವೂ ಇರಲಿಲ್ಲ. ಗೇಟಿನಿಂದ ಸರ್ ಬೇಸಿಲರ ಮನೆಗೆ ಸುಮಾರು ಅರ್ಧ ಮೈಲು ದೂರವಿತ್ತೇನೋ. ವಿವಿಧ ಆಕಾರಗಳಲ್ಲಿ ಕತ್ತರಿಸಿದ್ದ ಅಲಂಕಾರಿಕ ಮರಗಿಡಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ನಾನು ಮೆಲ್ಲಗೆ ಡ್ರೈವ್ ಮಾಡುತ್ತಾ ಮುನ್ನಡೆದೆ. ನಿಜವಾಗಿಯೂ ಸರ್ ಬೇಸಿಲರ ಮನೆಯ ಪರಿಸರ ಸ್ವರ್ಗವೇ ಎನ್ನಬಹುದು. ಕೊನೆಗೂ ನಾನು ಸರ್ ಬೇಸಿಲರ ಇಟಾಲಿಯನ್ ಪ್ರಭಾವಿತ ಟ್ಯೂಡೋರ್ ಶೈಲಿಯ ಅರಮನೆಯಂತಹ ಮನೆಗೆ ತಲುಪಿದೆ. ಮುಖ್ಯದ್ವಾರದ ಕಡೆಗೆ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಎಡಬಲಗಳಲ್ಲಿ ವಿವಿಧ ಕಲಾಕಾರರ ಶಿಲಾಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು.

ಸಮವಸ್ತ್ರ ಧರಿಸಿದ್ದ ಸೇವಕನೊಬ್ಬ ನನ್ನನ್ನು ಒಳಗೆ ಬರಮಾಡಿಕೊಂಡು ಮೊದಲ ಮಾಳಿಗೆಗೆ ಕರೆದುಕೊಂಡು ಹೋಗಿ, ʻಲೇಡಿ ಟರ್ಟನ್ ಮತ್ತು ಇತರ ಅತಿಥಿಗಳು ಈ ಹೊತ್ತಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಇನ್ನೊಂದು ತಾಸಿನಲ್ಲಿ ಎಲ್ಲರೂ ಡಿನ್ನರ್ ಜಾಕೆಟಿನಲ್ಲಿ ಊಟದ ಕೋಣೆಯಲ್ಲಿ ಸೇರುತ್ತಾರೆʼ ಎಂದು ಹೇಳಿ ಹೊರಟುಹೋದ. ನನ್ನ ವೃತ್ತಿಗೆ ಸಂಬ<ಧಿಸಿದಂತೆ ನಾನು ಗಣ್ಯವ್ಯಕ್ತಿಗಳ ಮೆನೆಗೆ ಆಗಿಂದಾಗ್ಗೆ ಹೋಗುತ್ತಿರುವವನಾದ್ದರಿಂದ ಆ ಮನೆಯ ವಾತಾವರಣವನ್ನು ಅಂದಾಜಿಸಬಲ್ಲವನಾಗಿದ್ದೆ. ಆದರೆ, ಸರ್ ಬೇಸಿಲರ ಮನೆಯನ್ನು ಹೊಕ್ಕುತ್ತಿದ್ದಂತೆ ನನಗೆ ಅಲ್ಲಿಯ ವಾತಾವರಣ ಅಷ್ಟೊಂದು ಹಿತವೆನಿಸಲಿಲ್ಲ. ನಾನು ದುಗುಡದಿಂದಲೇ ವೇಳೆಯನ್ನು ಕಳೆಯತೊಡಗಿದೆ.

ಸುಮಾರು ಹತ್ತು ನಿಮಿಷಗಳ ನಂತರ ಕರಿಯ ಕೋಟು ಧರಿಸಿದ ಕುಳ್ಳನೆಯ ವ್ಯಕ್ತಿಯೊಬ್ಬ ಬಂದು ನನ್ನ ಯೋಗಕ್ಷೇಮ ವಿಚಾರಿಸತೊಡಗಿದ. ತಾನು ಸರ್ ಬೇಸಿಲ್ ಟರ್ಟನ್‌ರವರ ಮನೆಯ ಬಟ್ಲರ್ ಎಂದು ಪರಿಚಯಿಸಿಕೊಂಡ. ಅವನ ಹೆಸರು ಜೆಲ್ಕ್.

“ನಿಮ್ಮ ವಾರಾಂತ್ಯದ ರಜೆಯನ್ನು ಖುಷಿಯಾಗಿ ಕಳೆಯುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ”.

ನಾನು ಅವನಿಗೆ ಧನ್ಯವಾದಗಳನ್ನು ಅರ್ಪಿಸಿದೆ.

“ಸರ್, ಊಟದ ನಂತರ ಕಾರ್ಡ್ಸ್ ಗೇಮ್ ಇರುತ್ತದೆ. ನಿಮ್ಮ ಎದುರಾಳಿ ಲೇಡಿ ಟರ್ಟನ್. ಲೇಡಿ ಮತ್ತು ಮೇಜರ್ ಹ್ಯಾಡೋಕ್ ಒಟ್ಟಾಗಿ ಆಡುತ್ತಾರೆ. ಅವರಿಬ್ಬರು ಯಾವಾಗಲೂ ಒಟ್ಟಾಗಿಯೇ ಆಡುವುದು”.

“ಮೇಜರ್ ಹ್ಯಾಡೋಕ್? ಯು ಮೀನ್ ಜಾಕ್ ಹ್ಯಾಡೋಕ್?” ನಾನು ಆಶ್ಚರ್ಯಚಕಿತನಾಗಿ ಕೇಳಿದೆ.

“ಅವರೇ… ಅವರೇ ಸರ್!” ಜೆಲ್ಕನ ಮುಖದ ಮೇಲೆ ಒಂದು ತಿರಸ್ಕಾರದ ಭಾವ ಮೂಡಿ ಮರೆಯಾಗಿದ್ದು ನಾನು ಗಮನಿಸದಿರಲಿಲ್ಲ.

“ಎಕ್ಸ್‌ಕ್ಯೂಸ್‌ ಮಿ ಸರ್… ನಾನು ಹೊರಟೆ. ಸರಿಯಾಗಿ ಏಳು ಗಂಟೆಗೆ ಲೇಡಿ ಟರ್ಟನ್ ಮತ್ತು ಮೇಜರ್ ಹ್ಯಾಡೋಕ್ ಕೆಳಗಿಳಿಯುತ್ತಾರೆ” ಎಂದು ಹೇಳಿ ಅವನು ಹೊರಟು ಹೋದ.

ಸುಮಾರು ಏಳು ಗಂಟೆಯ ಹೊತ್ತಿಗೆ ನಾನು ಕೆಳಗಿಳಿದು ಡ್ರಾಯಿಂಗ್ ರೂಮಿಗೆ ಹೋದೆ. ಅದಾಗಲೇ ಆಸೀನರಾಗಿದ್ದ ಸುಂದರ ಚೆಲುವೆ ಲೇಡಿ ಟರ್ಟನ್ ಎದ್ದು ಬಂದು ನನ್ನನ್ನು ನಗುಮುಖದಿಂದ ಸ್ವಾಗತಿಸಿದರು.

“ಗುಡ್! ನೀವು ಬರುತ್ತೀರೆಂದು ನಾನು ಖಂಡಿತವಾಗಿಯೂ ಎಣಿಸಿರಲಿಲ್ಲ!” ಆಶ್ಚರ್ಯಗೊಂಡಂತೆ ಆಕೆ ಉದ್ಗರಿಸಿದಳು. “ಕ್ಷಮಿಸಿ, ನಿಮ್ಮ ಹೆಸರು ಏನೆಂದಿರಿ?”

“ಕ್ಷಮಿಸಿ, ಲೇಡಿ ಟರ್ಟನ್. ನಾನೇನೋ ನಿಮ್ಮ ಆಹ್ವಾನವನ್ನು ಗಂಭೀರವಾಗಿಯೇ ಸ್ವೀಕರಿಸಿದ್ದೆ… ನನ್ನಿಂದ ಏನಾದರೂ ಅಚಾತುರ್ಯವಾಯಿತೆಂದರೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ”.

“ಒಹ್…! ಅಂತದ್ದೇನೂ ಆಗಲಿಲ್ಲ ಬಿಡಿ. ನಮ್ಮ ಮನೆಯಲ್ಲಿ ನಲವತ್ತೇಳು ಬೆಡ್‌ರೂಮುಗಳಿವೆ…!! ಹಾಂ, ಇವರು ನನ್ನ ಪತಿ, ಮಿಸ್ಟರ್ ಟರ್ಟನ್. ಬೇಸಿಲ್ ಟರ್ಟನ್” ಆಕೆಯ ಹಿಂಬದಿಯಿಂದ ತುಸು ಕುಳ್ಳನೆಯ ವ್ಯಕ್ತಿ ಮುಂದೆ ಬಂದರು. ಮುಗುಳ್ನಗುತ್ತಾ ನನ್ನ ಕೈ ಕುಲುಕಿ, “ನೀವು ಬಂದಿದ್ದು ತುಂಬಾ ಸಂತೋಷವಾಯಿತು” ಎಂದರು. ಅವರ ನಿಷ್ಕಲ್ಮಶ ನಗು ನನಗೆ ಕೃತ್ರಿಮವೆನಿಸಲಿಲ್ಲ.

“ಇವರು, ಮಿಸ್ಸ್ ಕಾರ್ಮೆನ್ ರೋಜಾ…” ಲೇಡಿ ಟರ್ಟನ್ ಮತ್ತೊಬ್ಬ ಸ್ತ್ರೀಯನ್ನು ನನಗೆ ಪರಿಚಯಿಸಿದರು. ನಾನು ಕೈ ಚಾಚಿದೆ. ಆದರೆ ಆಕೆ ಹಿಂದೆ ಸರಿದಳು. “ಕ್ಷಮಿಸಿ, ನಿಮಗೆ ನೆಗಡಿಯಾಗಿದೆ!” ಎಂದಳು. ಈ ಹೆಂಗಸು ನನಗೆ ಕಿಂಚಿತ್ತೂ ಇಷ್ಟವಾಗಲಿಲ್ಲ.

“ಇವರು ಮೇಜರ್ ಹ್ಯಾಡೋಕ್…”.

ನಾನು ಈ ವ್ಯಕ್ತಿಯ ಬಗ್ಗೆ ಅಲ್ಪಸ್ವಲ್ಪ ಕೇಳಿದ್ದೆ. ಬಹಳಷ್ಟು ಕಂಪೆನಿಗಳ ನಿರ್ದೇಶಕ ಮತ್ತು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ. ನನ್ನ ಅಂಕಣಗಳಲ್ಲಿ ಹಲವು ಬಾರಿ ಅವರನ್ನು ಉಲ್ಲೇಖಿಸಿದ್ದೆ. ಸೈನಾಧಿಕಾರಿಗಳು ನಾಗರಿಕ ಜೀವನದಲ್ಲೂ ತಮ್ಮ ಮೇಜರ್, ಕರ್ನಲ್ ಪದವಿಗಳನ್ನು ಬಳಸುವುದು ನನಗಿಷ್ಟವಾಗುತ್ತಿರಲಿಲ್ಲವಾದ್ದರಿಂದ ನಾನು ಅವರೊಡನೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಅವರು ತಮ್ಮ ಡಿಸೈನರ್‌ ಜಾಕೆಟಿನಲ್ಲಿ ಅಶ್ಲೀಲವೆನಿಸುವಷ್ಟು ಸುಂದರವಾಗಿ ಕಾಣಿಸುತ್ತಿದ್ದರು. ಅವರು ತಮ್ಮ ರೋಮಭರಿತ ತೋಳನ್ನು ನನ್ನೆಡೆಗೆ ಚಾಚಿದರು.

“ನಿಮ್ಮ ಅಂಕಣದಲ್ಲಿ ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರಿಯಪ್ಪಾ” ಎಂದರು ಜೋರಾಗಿ ನಗುತ್ತಾ.

“ಬರೆದೇ ಬರೆಯುತ್ತಾರೆ ಮೇಜರ್!” ಲೇಡಿ ಟರ್ಟನ್ ಹೇಳಿದಳು. “ಇಲ್ಲಾಂದ್ರೆ ಅವರನ್ನು ನಮ್ಮ ಪೇಪರಿನ ಮುಖಪುಟದಲ್ಲೇ ಬೆತ್ತಲು ಮಾಡುವುದಿಲ್ಲವೇ!?”

ನಾನು ನಕ್ಕೆ. ಆದರೆ, ಅಷ್ಟರಲ್ಲಿ ಲೇಡಿ ಟರ್ಟನ್, ಹ್ಯಾಡೋಕ್ ಹಾಗೂ ಕಾರ್ಮೆನ್ ರೋಜಾ ನನ್ನ ಕಡೆಗೆ ಬೆನ್ನು ತಿರುಗಿಸಿ ನಡೆಯುತ್ತಿದ್ದರು. ಅಷ್ಟರಲ್ಲಿ ಜೆಲ್ಕ್ ವಿಸ್ಕಿಯ ಗ್ಲಾಸಿನೊಂದಿಗೆ ಹಾಜರಾದ. ಸರ್ ಬೇಸಿಲ್ ಏನೋ ಮಾತನಾಡುವುದಿದೆ ಎಂದು ನನ್ನನ್ನು ಪ್ರತ್ಯೇಕವಾದ ಆಸನಕ್ಕೆ ಕರೆದೊಯ್ದರು. ಗಳಿಗೆಗೊಮ್ಮೆ ಲೇಡಿ ಟರ್ಟನ್, ಸಿಗರೆಟ್ಟೋ, ಮಾರ್ಟಿನಿನೋ, ಕರವಸ್ತ್ರವನ್ನೋ ತಂದು ಕೊಡುವಂತೆ ಸರ್ ಬೇಸಿಲರಿಗೆ ಆದೇಶಿಸುತ್ತಿದ್ದಳು. ಸರ್ ಬೇಸಿಲ್ ಏಳುವಷ್ಟರಲ್ಲಿ ಜೆಲ್ಕ್ ಅಲ್ಲಿಗೆ ಪ್ರತ್ಯಕ್ಷನಾಗಿ ಲೇಡಿ ಟರ್ಟನ್‌ಳ ಅಗತ್ಯಗಳನ್ನು ಪೂರೈಸುತ್ತಿದ್ದ. ಅವನು ಸರ್ ಬೇಸಿಲರನ್ನು ಎಷ್ಟು ಗೌರವಿಸುತ್ತಿದ್ದನೋ ಲೇಡಿ ಟರ್ಟನ್‌ಳಿಗೆ ಅಷ್ಟೇ ತೀವ್ರವಾಗಿ ಅಸಹ್ಯಪಡುತ್ತಿದ್ದನೆಂಬುದು ಅವನ ನಡೆಯಲ್ಲೇ ಅಂದಾಜಿಸಬಹುದಿತ್ತು.

ಊಟದ ಮೇಜಿನಲ್ಲಿ ತನ್ನ ಒಂದು ಬದಿಗೆ ಹ್ಯಾಡೋಕ್ ಮತ್ತು ಮತ್ತೊಂದು ಬದಿಗೆ ಕಾರ್ಮೆನ್ ರೋಜಾ ಕುಳಿತಿರುವಂತೆ ಲೇಡಿ ಟರ್ಟನ್ ವ್ಯವಸ್ಥೆ ಮಾಡಿದ್ದಳು. ನಾನು ಮತ್ತು ಸರ್ ಬೇಸಿಲ್ ಪೇಂಟಿಂಗ್ಸ್‌ ಮತ್ತು ಶಿಲಾಕೃತಿಗಳ ಬಗ್ಗೆ ಚರ್ಚಿಸುತ್ತಾ ಪ್ರತ್ಯೇಕವಾಗಿ ಕುಳಿತಿದ್ದೆವು.

ಈವರೆಗೆ ನನ್ನ ಗಮನಕ್ಕೆ ಬಂದ ವಿಷಯವೆಂದರೆ ಈ ಮೇಜರ್ ಹ್ಯಾಡೋಕ್ ಲೇಡಿ ಟರ್ಟನಳ ಮೇಲೆ ಅನುರಕ್ತನಾಗಿದ್ದರೆ, ಕಾರ್ಮೆನ್ ರೋಜಾ ಮೇಜರನ ಮೇಲೆ ಕಣ್ಣಿಟ್ಟಿದ್ದಳು.

ಈ ವಿಷಯವನ್ನು ಅರಿತಿದ್ದ ಲೇಡಿ ಟರ್ಟನ್ ಸಂತೃಪ್ತಿಯಿಂದ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು. ಈ ಪಾಪದ ಮನುಷ್ಯ ಸರ್ ಬೇಸಿಲ್ ಒಳಗಿಂದೊಳಗೇ ಬೇಗುದಿಪಡುತ್ತಿದ್ದ. ಸರ್ ಬೇಸಿಲ್ ನನ್ನೊಟ್ಟಿಗೆ ಇದ್ದರಾದರೂ ಅವರ ದೃಷ್ಟಿ ಗಳಿಗೆಗೊಮ್ಮೆ ತಮ್ಮ ಮಡದಿಯ ಕಡೆಗೆ ಹರಿಯುತ್ತಿತ್ತು. ಮೇಜರ್‌ನ ಕೈ ಆಕೆಯ ಕೈ ಮೇಲೆ ಕುಳಿತಿರುವುದನ್ನು ಕಂಡು ಅವರು ವಿಚಲಿತರಾಗಿರುವುದು ನನಗೆ ಗೊತ್ತಾಗುತ್ತಿತ್ತು.

“ಸರ್ ಬೇಸಿಲ್, ನಾಳೆ ನೀವು ಖಂಡಿತವಾಗಿಯೂ ನಿಮ್ಮ ಗಾರ್ಡನಿನಲ್ಲಿ ಜೋಡಿಸಿಟ್ಟಿರುವ ಕಲಾಕೃತಿಗಳನ್ನು ನನಗೆ ತೋರಿಸಬೇಕು” ಅವರ ಗಮನ ಬೇರೆಡೆಗೆ ಸೆಳೆಯಲು ನಾನು ಹೇಳಿದೆ.

“ಖಂಡಿತ, ಖಂಡಿತ!” ಅವರು ಖುಷಿಯಿಂದ ಹೇಳಿದರಾದರೂ ಗಳಿಗೆಗೊಮ್ಮೆ ಅವರ ದೃಷ್ಟಿ ಲೇಡಿ ಟರ್ಟನ್ ಕುಳಿತಿರುವ ಕಡೆಗೇ ಹರಿಯುತ್ತಿತ್ತು ಮತ್ತು ಹಾಗೆಯೇ ಅವರ ಮುಖ ಬಾಡುತ್ತಿತ್ತು. ತಮಾಷೆ ಎಂದರೆ ಅವರ ಕಣ್ಣುಗಳಲ್ಲಿ ಕಿಂಚಿತ್ತೂ ಸಿಟ್ಟು ಕಾಣಿಸುತ್ತಿರಲಿಲ್ಲ. ಅಸಹಾಯಕತೆ ಎದ್ದು ಕಾಣಿಸುತ್ತಿತ್ತು. ನನಗೆ ಸರ್ ಬೇಸಿಲ್‌ರ ಬಗ್ಗೆ ಕನಿಕರ ಉಂಟಾಯಿತು. ಇಂತಹ ಮನುಷ್ಯನಿಗೆ ಅಂತಹ ಹೆಂಡತಿ ಖಂಡಿತ ಅಲ್ಲ.

ಊಟದ ನಂತರ ನನಗೆ ನೇರವಾಗಿ ಕಾರ್ಡ್ಸ್ ಮೇಜಿನ ಕಡೆಗೆ ಕರೆ ಬಂದಿತು. ನಾನು ಮತ್ತು ಕಾರ್ಮೆನ್ ರೋಜಾ ಪಾರ್ಟನರ್‌ಗಳಾದರೆ, ನಮಗೆ ಎದುರಾಳಿಗಳು ಲೇಡಿ ಟರ್ಟನ್ ಮತ್ತು ಮೇಜರ್ ಹ್ಯಾಡೋಕ್. ಸರ್ ಬೇಸಿಲ್ ಯಾವುದೋ ಪೇಂಟಿಂಗ್ ಪುಸ್ತಕವನ್ನು ಕೈಗೆತ್ತಿಕೊಂಡು ಸನಿಹದ ಸೋಫಾದ ಮೇಲೆ ಕುಳಿತುಕೊಂಡರು. ಬಟ್ಲರ್ ಜೆಲ್ಕ್ ಗಳಿಗೆಗೊಮ್ಮೆ ಡ್ರಿಂಕ್ಸ್, ಸಿಗರೇಟು ವಿಚಾರಿಸಿಕೊಂಡು ಸುಳಿದಾಡುತ್ತಿದ್ದ. ಲೇಡಿ ಟರ್ಟನ್‌ಳಿಗೆ ಆಗಾಗ್ಗೆ ಆಫೀಸಿನಿಂದ ಕರೆಗಳು ಬರುತ್ತಿದ್ದವು. ಅವಳು ಫೋನಿನ ಬಳಿಗೆ ಹೋಗಿ ಬರುವುದು ನಡೆದೇ ಇತ್ತು.

ಲೇಡಿ ಟರ್ಟನ್ ಸರಿಯಾಗಿ ಹನ್ನೊಂದು ಗಂಟೆ ಹೊಡೆಯುತ್ತಿದ್ದಂತೆ ಸರ್ ಬೇಸಿಲ್‌ರ ಕಡೆಗೆ ತಿರುಗಿ, “ಬೇಸಿಲ್ ಡಿಯರ್, ಹನ್ನೊಂದಾಯಿತು! ನೀನು ಮಲಗುವ ಹೊತ್ತಾಯಿತು” ಎಂದಳು. 

“ಹೌದು… ಹೌದು ಡಿಯರ್…” ಎನ್ನುತ್ತಾ ಸರ್ ಬೇಸಿಲ್ ಎದ್ದು ನಿಂತು ಕೆಲ ಹೊತ್ತು ನಮ್ಮ ಆಟವನ್ನೇ ನೋಡುತ್ತಾ, “ಹೇಗೆ ನಡೀತಾ ಇದೆ ಡಿಯರ್?” ಎಂದರು. ಯಾರೂ ಉತ್ತರಿಸದಿದ್ದನ್ನು ಗಮನಿಸಿ, “ನೈಸ್ ಗೇಮ್ ಸರ್ ಬೇಸಿಲ್!” ಎಂದು ನಾನೇ ಉತ್ತರಿಸಿದೆ.

“ಗುಡ್! ನಿಮಗೇನಾದರೂ ಬೇಕಿದ್ದಲ್ಲಿ ಜೆಲ್ಕ್ ನೋಡಿಕೊಳ್ಳುತ್ತಾನೆ” ಎಂದರು.

“ಜೆಲ್ಕನದೂ ನಮಗೆ ಅಗತ್ಯವಿಲ್ಲ. ಅವನೂ ಹೋಗಿ ನಿದ್ದೆ ಮಾಡಿಕೊಳ್ಳಲಿ” ಲೇಡಿ ಟರ್ಟನ್ ಎಂದಳು.

ನನ್ನ ಬದಿಯಲ್ಲಿದ್ದ ಮೇಜರ್ ಹ್ಯಾಡೋಕ್ ಒಂದೊಂದೇ ಪಾನುಗಳನ್ನು ಮೇಜಿನ ಮೇಲೆ ಸುರುವಿದರು. ಅವರು ದೀರ್ಘವಾಗಿ ಉಸಿರಾಡುತ್ತಿದ್ದರು. ಅತ್ತ ಕಡೆಯಿಂದ ಜೆಲ್ಕ್ ಕೂಡ ನಮ್ಮ ಕಡೆಗೆ ಬರುತ್ತಿರುವುದು ನನ್ನ ಗಮನಕ್ಕೆ ಬಂದಿತು.

“ನಾನು ಹೋಗಲೇ ಮೈ ಲೇಡಿ?” ಅವನು ತಲೆ ಬಗ್ಗಿಸಿ ಕೇಳಿದ.

“ಆಯ್ತು, ಆಯ್ತು. ನೀನು ಹೋಗಿ ಮಲಗಿಕೋ ಜೆಲ್ಕ್”.

ಜೆಲ್ಕ್ ಮುಂದಕ್ಕೆ ಹೋಗಿ ಸರ್ ಬೇಸಿಲ್‌ರಿಗೆ ಬಾಗಿಲನ್ನು ತೆರೆದು ನಿಂತುಕೊಂಡ. ಅವರು ದಾಟುತ್ತಿದ್ದಂತೆ ಅವನೂ ಅವರನ್ನು ಹಿಂಬಾಲಿಸಿ ಹೋದ.

ಮುಂದಿನ ಆಟ ಮುಗಿಯುತ್ತಿದ್ದಂತೆ ನಾನು ಎದ್ದು ನಿಂತು, “ಎಕ್ಸ್‌ಕ್ಯೂಸ್ ಮಿ. ನನಗೂ ನಿದ್ದೆ ಎಳೀತಾ ಇದೆ. ನಾನು ಏಳುತ್ತೇನೆ” ಎಂದೆ. 

“ಆಯ್ತು, ಆಯ್ತು. ನೀವು ಹೋಗಿ. ಗುಡ್ ನೈಟ್” ಲೇಡಿ ಟರ್ಟನ್ ಹೇಳಿದಳು. ನಾನು ನನ್ನ ರೂಮಿಗೆ ಹೋಗಿ, ಲಾಕ್ ಮಾಡಿ ಮಲಗಿದೆ.

ಮಾರನೆಯ ದಿನ್ ಭಾನುವಾರವಾದ್ದರಿಂದ ನಾನು ಸ್ವಲ್ಪ ತಡವಾಗಿಯೇ ಎದ್ದು ಕೆಳಗೆ ಬೆಳಗಿನ ಉಪಹಾರ ಸೇವಿಸಲು ಹೋದೆ. ಸರ್ ಬೇಸಿಲ್ ಆಗಾಗಲೇ ಆಸೀನರಾಗಿದ್ದರು. ಜೆಲ್ಕ್ ಅವರ ತಟ್ಟೆಯಲ್ಲಿ ಗ್ರಿಲ್‌ ಮಾಡಿದ ಕಿಡ್ನಿ, ಬೇಕನ್ ಮತ್ತು ಕರಿದ ಟೊಮ್ಯಾಟೊ ಬಡಿಸಿಯಾಗಿತ್ತು. ನನ್ನನ್ನು ನೋಡುತ್ತಿದ್ದಂತೆ ಅವರ ಮುಖ ಪ್ರಫುಲ್ಲವಾಯಿತು. “ತಿಂಡಿ ಮುಗಿಸಿದ ಮೇಲೆ ನಿಮ್ಮನ್ನು ನನ್ನ ಗಾರ್ಡನಿಗೆ ಕರೆದುಕೊಂಡು ಹೋಗುತ್ತೇನೆ” ಬೇಸಿಲ್ ಹೇಳಿದರು.

“ವ್ಹಾಹ್! ನಾನು ತಯಾರು!” ನಾನೆಂದೆ.

ಅರ್ಧಗಂಟೆಯ ನಂತರ ನಾವು ಅವರ ಗಾರ್ಡನಿನಲ್ಲಿದ್ದೆವು. ನಮ್ಮ ಮಧ್ಯೆ ಏನೂ ಮಾತುಕತೆ ನಡೆಯಲಿಲ್ಲ. ಆ ಸುಂದರ ವಾತಾವರಣದಲ್ಲಿ ಮಾತು ಅನಗತ್ಯವೆನಿಸಿತ್ತು. ನಾನು ಅಲ್ಲಿಯ ಗಿಡಮರಗಳ ಸೌಂದರ್ಯಕ್ಕಿಂತ ಸಮಕಾಲೀನ ಯುರೋಪಿನ ಶಿಲಾ, ಕಂಚು, ಸುಣ್ಣದ ಕಲ್ಲು ಮತ್ತು ಮರದಲ್ಲಿ ಕೆತ್ತಿದ್ದ ಕಲಾಕೃತಿಗಳನ್ನು ಅಸ್ವಾದಿಸುವುದರಲ್ಲಿ ಮಗ್ನನಾಗಿದ್ದೆ.

ಸುಮಾರು ಒಂದು ಗಂಟೆಯ ತಿರುಗಾಟದ ನಂತರ ಸರ್ ಬೇಸಿಲ್, “ಕೊಂಚ ವಿಶ್ರಮಿಸೋಣವೇ?” ಎಂದರು. 

ನಾವು ಒಂದು ಮಾನವನಿರ್ಮಿತ, ತಾವರೆ ಹೂಗಳಿಂದ ಕಂಗೊಳಿಸುತ್ತಿದ್ದ ಪುಟ್ಟ ಕೊಳದ ಬಳಿಯ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡೆವು. ಕೊಳದಲ್ಲಿ ವಿವಿಧ ಜಾತಿಯ ಮೀನುಗಳು ನೀರಿಂದ ಮೇಲಕ್ಕೆ ಯಾವುದೇ ಭೀತಿ ಆತಂಕಗಳಿಲ್ಲದೆ ನೆಗೆದಾಡುತ್ತಿದ್ದವು. ನಾವು ಮನೆಯಿಂದ ಬಹಳ ದೂರ ತಲುಪಿದ್ದೆವು. ಸರ್ ಬೇಸಿಲ್‌ರ ಗಾರ್ಡನ್ ಇನ್ನೂ ಮುಂದಕ್ಕೆ ಹರಡಿತ್ತು.

“ಈ ಜಾಗ ನಾನು ಹುಟ್ಟುವ ಮೊದಲೇ ನನ್ನ ತಂದೆ ಅಭಿವೃದ್ಧಿಪಡಿಸಿದ್ದರು. ನನಗೆ ಈ ತೋಟದ ಇಂಚಿಂಚೂ ಗೊತ್ತಿದ್ದು ಬೆಳೆದಿದ್ದೇನೆ” ಸರ್ ಬೇಸಿಲ್ ಹೇಳುತ್ತಿದ್ದರು. ಅವರು ಎರಡೂ ಕಣ್ಣುಗಳನ್ನು ಮುಚ್ಚಿಕೊಂಡಿದ್ದರು. “ನೀವು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಇಲ್ಲಿಗೆ ಬರಬೇಕು! ಬರುತ್ತೀರಿ ತಾನೆ?”

“ಖಂಡಿತವಾಗಿಯೂ ನಾನು ಬರುತ್ತೇನೆ” ಖುಷಿಯಿಂದ ನಾನೆಂದೆ. ಅದೇ ವೇಳೆ ನನಗೆ ಗಾರ್ಡನಿನ ಒಂದು ಮೂಲೆಯಲ್ಲಿ ಕೆಂಪು ಡ್ರೆಸ್ ಧರಿಸಿದ್ದ ಮಹಿಳೆಯೊಬ್ಬಳು ದೃಷ್ಟಿಗೆ ಬಿದ್ದಳು. ಆಕೆ ನಡೆಯುತ್ತಾ ಹೆನ್ರಿ ಮೂರನ ಒಂದು ದೊಡ್ಡ ಕುದುರೆಯ ಕಲಾಕೃತಿಯ ಬಳಿ ಹೋಗಿ ನಿಂತಳು.

“ಈ ಮನೆ ಈ ತೋಟಕ್ಕಿಂತಲೂ ಪುರಾತನವಾದದ್ದು. ಇದನ್ನು ಬ್ಯೂಮೊಂಟ್ ಎಂಬ ಫ್ರೆಂಚ್ ವಿನ್ಯಾಸಕಾರನ ರಚಿಸಿದ್ದು. ಸುಮಾರು ಒಂದು ವರ್ಷ, ಇನ್ನೂರೈವತ್ತು ಕೆಲಸಗರರನ್ನು ಕಟ್ಟಿಕೊಂಡು ಈ ತೋಟವನ್ನು ವಿನ್ಯಾಸಗೊಳಿಸಿದ!”.

ಕೆಂಪು ಡ್ರೆಸ್ಸಿನ ಮಹಿಳೆಯ ಬಗಲಲ್ಲಿ ಈಗ ಒಬ್ಬ ಗಂಡಸು ಪ್ರತ್ಯಕ್ಷನಾದ. ಅವರಿಬ್ಬರೂ ಮಾತನಾಡುತ್ತಿದ್ದರು. ಗಂಡಸಿನ ಕೈಯಲ್ಲೊಂದು ಕಪ್ಪನೆಯ ವಸ್ತುವಿತ್ತು.

“ಬ್ಯೂಮೊಂಟ್ ಕಳಿಸಿದ್ದ ಬಿಲ್ಲುಗಳು ಈಗಲೂ ನನ್ನ ಬಳಿ ಇವೆ…” ಸರ್ ಬೇಸಿಲ್ ಹೇಳತೊಡಗಿದರು. “ನಿಮಗೆ ಆಸಕ್ತಿ ಇದ್ದರೆ ತೊರಿಸುತ್ತೇನೆ”.

“ಖಂಡಿತವಾಗಿಯೂ!” ನಾನು ಕುತೂಹಲಗೊಂಡು ಹೇಳಿದೆ.

… ಗಂಡಸಿನ ಕೈಯಲ್ಲಿದ್ದ ವಸ್ತು ಕ್ಯಾಮರವಾಗಿತ್ತು. ಕೆಂಪು ಡ್ರೆಸ್ಸಿನ ಮಹಿಳೆಯನ್ನು ಹೆನ್ರಿ ಮೂರನ ಕಲಾಕೃತಿಯ ಬಳಿ ವಿವಿಧ ಭಂಗಿಗಳಲ್ಲಿ ನಿಲ್ಲಿಸಿ ಆ ಗಂಡಸು ಫೋಟೊ ತೆಗೆಯಲಾರಂಭಿಸಿದ. ನಾನು ಆ ತಮಾಷೆಯನ್ನು ನೋಡಿ ಆನಂದಿಸತೊಡಗಿದೆ. ಒಮ್ಮೆ ಆ ಮಹಿಳೆ ಹೆನ್ರಿ ಮೂರನ ಕುದುರೆಯನ್ನು ತಬ್ಬಿಕೊಳ್ಳುತ್ತಿದ್ದಳು, ತಲೆ ಸವರುತ್ತಿದ್ದಳು, ಬೆನ್ನು ತಟ್ಟುತ್ತಿದ್ದಳು, ಮತ್ತೊಮ್ಮೆ ಕುದುರೆಯ ಮೇಲೆ ಕುಳಿತುಕೊಂಡು ಲಗಾಮು ಹಿಡಿದಂತೆ ನಟಿಸುತ್ತಿದ್ದಳು. ಅವರಿದ್ದ ಜಾಗ ಮರಗಳಿಂದ ಆವೃತ್ತವಾಗಿದ್ದರಿಂದ, ನಾನು ಮತ್ತು ಸರ್ ಬೇಸಿಲ್‌ರವರಿದ್ದ ಜಾಗದಿಂದ ಬಿಟ್ಟರೆ ಬೇರೆ ಎಲ್ಲಿಂದಲೂ ಅವರು ಕಾಣಿಸುತ್ತಿರಲಿಲ್ಲ.

ಗಂಡಸು ಆ ಮಹಿಳೆಗೆ ಕುದುರೆಯನ್ನು ತೋರಿಸುತ್ತಾ ಏನನ್ನೋ ಹೇಳತೊಡಗಿದ. ಅವರಿಬ್ಬರೂ ನಗತೊಡಗಿದರು. ನಂತರ ಮಹಿಳೆ ಕುದುರೆಯ ಮತ್ತೊಂದು ಪಾರ್ಶ್ವಕ್ಕೆ ಹೋದಳು. ತನ್ನ ಕಲಾಕೃತಿಗಳ ಮಧ್ಯೆ ರಂಧ್ರಗಳನ್ನು ಕೊರೆಯುವುದು ಹೆನ್ರಿ ಮೂರನ ಖಾಸಾ ಶೈಲಿ. ಅಂತೆಯೇ ಮಹಿಳೆ ಗಂಡಸು ನಿಂತಿದ್ದ ವಿರುದ್ಧ ಪಾರ್ಶ್ವದಿಂದ ಕುದುರೆಯ ನಡುವಿನಲ್ಲಿ ಕೊರೆದಿದ್ದ ರಂಧ್ರದಿಂದ ಸರ್ಕಸ್ಸು ಮಾಡುತ್ತಾ ಗಂಡಸಿನ ಕಡೆಗೆ ತಲೆಯನ್ನು ತೂರಿಸಿದಳು. ನಾವು ನಿಂತಲ್ಲಿಂದ ನಮಗೆ ಕುದುರೆಯ ಎರಡೂ ಪಾರ್ಶ್ವಗಳು ಕಾಣಿಸುತ್ತಿದ್ದವು. ನಮಗೆ ಒಂದು ಬದಿಯಲ್ಲಿ ಆಕೆಯ ಮುಖ ಮತ್ತು ಮತ್ತೊಂದು ಬದಿಯಲ್ಲಿ ಆಕೆಯ ಕುತ್ತಿಗೆಯ ಕೆಳಗಿನ ಶರೀರ ಕಾಣಿಸುತ್ತಿತ್ತು. ಈ ಭಂಗಿಯಲ್ಲಿ ಗಂಡಸು ಆಕೆಯ ಫೋಟೊಗಳನ್ನು ತೆಗೆಯಲಾರಂಭಿಸಿದ…

“… ನಮ್ಮ ತೊಟದ ಈ ಯ್ಯೂ (Yew) ಮರಗಳ ಬಗ್ಗೆ ನಿಮಗೇನಾದರೂ ಗೊತ್ತೆ…?” ಎನ್ನುತ್ತಾ ಸರ್ ಬೇಸಿಲ್ ಹಠಾತ್ತನೇ ನಿಲ್ಲಿಸಿದರು. ಅವರ ದೃಷ್ಟಿಯೂ ನಾನು ನೋಡುತ್ತಿದ್ದ ದೃಶ್ಯದ ಮೇಲೆ ಹರಿದಿತ್ತು. ಗಂಡಸು ಆ ಮಹಿಳೆಯ ಕಡೆಗೆ ನಡೆಯತೊಡಗಿದ. ಸಮೀಪಿಸುತ್ತಿದ್ದಂತೆ ಆಕೆಯ ಮೊಗವನ್ನು ತನ್ನೆರಡೂ ಕೈಗಳಿಂದ ಹಿಡಿದು ಬಾಗಿದ. ಬಹುಶಃ ಅವನು ಆಕೆಯನ್ನು ಚುಂಬಿಸುತ್ತಿದ್ದ!

“ನಾವು ಹಿಂದಿರುಗೋಣವೇ ಮಿ. ಬೇಸಿಲ್?” ನಾನು ಕೇಳಿದೆ.

“ಮನೆಗಾ?” ಅವರು ಕೇಳಿದರು. ಅವರು ಅಲ್ಲಿಂದ ಏಳುವ ಹಾಗೆ ನನಗೆ ಕಾಣಿಸಲಿಲ್ಲ. ಅವರ ಕಣ್ಣುಗಳು ದೂರದ ಆ ಜೋಡಿಯ ಮೇಲೆಯೇ ನೆಟ್ಟಿತ್ತು. ನಾನೂ ಕೂಡ ಅವರ ದೃಷ್ಟಿಯನ್ನೇ ಹಿಂಬಾಲಿಸಬೇಕಾಯಿತು. ನಾನು ನೋಡುತ್ತಿದ್ದಂತೆ ಆ ಮಹಿಳೆ ವಿಚಿತ್ರವಾಗಿ ಆಡತೊಡಗಿದಳು. ಗಂಡಸು ಸ್ವಲ್ಪ ದೂರದಲ್ಲಿ ನಿಂತು ಆಕೆಯನ್ನೇ ನೋಡುತ್ತಿದ್ದ. ನಂತರ ಕ್ಯಾಮೆರವನ್ನು ಕೆಳಗಿಟ್ಟು ಆಕೆಯನ್ನು ಸಮೀಪಿಸಿ ಅವಳ ಮುಖವನ್ನು ತನ್ನ ಎರಡೂ ಕೈಯಲ್ಲಿಡಿದು ಆಚೀಚೆ ಅಲುಗಾಡಿಸುತ್ತಾ ಒಳಕ್ಕೆ ತಳ್ಳತೊಡಗಿದ.

ನಾವಿಬ್ಬರೂ ಈ ದೃಶ್ಯವನ್ನು ಮಂತ್ರಮುಗ್ಧಗೊಂಡವರಂತೆ ಕುತೂಹಲದಿಂದ ನೋಡ ತೊಡಗಿದೆವು. ಗಂಡಸು ಗಳಿಗೆಗೊಮ್ಮೆ ಹಿಂದಕ್ಕೆ ಬಂದು, ಕೆಲಹೊತ್ತು ನೋಡುತ್ತಾ ಮತ್ತೆ ಮತ್ತೆ ಆಕೆಯ ಮುಖವನ್ನು ಹಿಂದಕ್ಕೆ ತಳ್ಳುವ ವ್ಯರ್ಥ ಪ್ರಯತ್ನಪಡುತ್ತಿದ್ದ. ಆಕೆ ಕೂಡ ಮತ್ತೊಂದು ಪಾರ್ಶ್ವದಲ್ಲಿ ಕೊಸರಾಡುತ್ತಾ ತನ್ನ ಕತ್ತನ್ನು ಹಿಂದಕ್ಕೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಳು. ಮೊದಲ ಬಾರಿ ಕುತ್ತಿಗೆಗೆ ಪಟ್ಟಿ ಕಟ್ಟಿದ ನಾಯಿಯಂತೆ ಅವಳು ಒದರಾಡುತ್ತಿದ್ದಳು.

“ಅವಳು ಆ ರಂಧ್ರದೊಳಕ್ಕೆ ಸಿಕ್ಕಿಹಾಕಿಕೊಂಡಿದ್ದಾಳೆ!” ಸರ್ ಬೇಸಿಲ್ ಹೇಳಿದರು. ಅವರು ಅಪ್ರಜ್ಞಾಪೂರ್ವಕವಾಗಿ ತಮ್ಮ ಕತ್ತನ್ನು ಮೇಲಕ್ಕೆ, ಕೆಳಕ್ಕೆ, ಆಚೀಚೆ ಅಲುಗಾಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು. “ನಾನು ಸಣ್ಣವನಿದ್ದಾಗ ಕುಕ್ಕೀಸ್ ಜಾಡಿಯೊಳಗೆ ಕೈ ಹಾಕಿದ್ದೆ. ಎಷ್ಟು ಕೊಸರಾಡಿದರೂ ಕೈ ಹೊರಕ್ಕೆಳೆಯಲು ಆಗುತ್ತಿರಲಿಲ್ಲ!” ಅವರು ಹೇಳತೊಡಗಿದರು.

… ಅಷ್ಟರಲ್ಲಿ ಗಂಡಸು ಕುದುರೆಯ ಮತ್ತೊಂದು ಪಾರ್ಶ್ವಕ್ಕೋಗಿ ಆಕೆಯ ಭುಜಗಳನ್ನಿಡಿದು ಹೊರಕ್ಕೆಳೆಯುವ ಸಾಹಸಕ್ಕೆ ಕೈ ಹಾಕಿದ್ದ. ಆ ಮಹಿಳೆ ನೋವಿನಿಂದ ಮತ್ತು ಸಿಟ್ಟಿನಿಂದ ಚೀರಾಡಿದ್ದು ನಾವಿದ್ದ ಕಡೆಗೆ ಕೇಳಿಸಿತು.

… “ನಾನು ಜಾಡಿಯನ್ನು ಗೋಡೆಗೆ ಬಡಿದು ಕೈಯನ್ನು ಹೊರಕ್ಕೆ ತೆಗೆದಿದ್ದೆ! ಆಕಸ್ಮಿಕವಾಗಿ ಅದು ಬಿದ್ದು ಒಡೆದು ಹೋಯಿತೆಂದು ಅಮ್ಮನಿಗೆ ಸಮಜಾಯಿಷಿ ಕೊಟ್ಟೆ!” ಇಷ್ಟು ಹೇಳಿದ ನಂತರ ಸರ್ ಬೇಸಿಲ್ ಕೊಂಚ ಶಾಂತರಾದಂತೆ ಕಾಣಿಸಿತು. ನಂತರ, ನಿರ್ಭಾವುಕ ದನಿಯಲ್ಲಿ, “ನಡೀರಿ, ಅಲ್ಲಿ ಏನಾಗುತ್ತಿದೆ ನೋಡೋಣ?” ಎಂದರು.

“ಖಂಡಿತ, ಖಂಡಿತ…” ನಾನು ಎದ್ದೆ. ಅವರಿನ್ನೂ ಕುಳಿತೇ ಇದ್ದರು. ಮೆಲ್ಲಗೆ ಸಿಗರೇಟನೊಂದನ್ನು ಹೊರಗೆಳೆದು ಬೆಂಕಿ ಹಚ್ಚಿದರು. ನನ್ನನ್ನು ಗಮನಿಸಿ, “ಕ್ಷಮಿಸಿ, ಸ್ಮೋಕ್ ಮಾಡುತ್ತೀರಾ?” ಎಂದರು ಸಿಗರೇಟು ಪ್ಯಾಕನ್ನು ನನ್ನೆಡೆಗೆ ತೋರಿಸುತ್ತಾ.

“ಥ್ಯಾಂಕ್ಸ್!” ಎನ್ನುತ್ತಾ ನಾನೂ ಸಿಗರೇಟು ಹಚ್ಚುತ್ತಾ ನಾವು ಇಳಿದು ಆ ಜೋಡಿಯ ಕಡೆಗೆ ನಡೆಯತೊಡಗಿದೆವು. ಮರಗಳ ಆಸರೆ ಇದ್ದುದರಿಂದ ನಾವು ಅವರ ಬಳಿ ತಲುಪುವವರೆಗೂ ಅವರಿಗೆ ನಾವು ಬರುತ್ತಿರುವುದು ಗೊತ್ತಾಗಲಿಲ್ಲ. ನಮ್ಮನ್ನು ನೋಡಿದಾಕ್ಷಣ ಅವರಿಗೆ ಅತ್ಯಾಶ್ಚರ್ಯವಾಯಿತು.

“ಏನಾಗ್ತಾಯಿದೆ ಇಲ್ಲಿ?” ಸರ್ ಬೇಸಿಲ್ ಎಷ್ಟು ಶಾಂತವಾಗಿ, ಕಕ್ಕುಲತೆಯಿಂದ ಕೇಳಿದರೆಂದರೆ, ಸ್ವತಃ ಲೇಡಿ ಟರ್ಟನ್ ಕೂಡ ಹೌಹಾರಿದಳು.

“ಲೇಡಿ ಟರ್ಟನ್ ಆ ದರಿದ್ರ ಕುದುರೆಯ ರಂಧ್ರದೊಳಗೆ ತಮಾಷೆಗೆ ಕತ್ತನ್ನು ತೂರಿಸಿದಳು. ಈಗ, ಪಾಪ, ಹೊರತೆಗೆಯಲು ಬರುತ್ತಿಲ್ಲ!” ಮೇಜರ್ ಹ್ಯಾಡೋಕ್ ಉತ್ತರಿಸಿದ.

“ಯಾಕಂತೆ ತಲೆ ಹಾಕಿದ್ದು?”

“ಬೇ…ಸಿ…ಲ್…!?” ಲೇಡಿ ಟರ್ಟನ್ ಗುಡುಗಿದಳು. “ನೀನೇನು ನನ್ನ ತನಿಖೆ ನಡೆಸುತ್ತಿದ್ದೀಯಾ, ಅಥವಾ ನನ್ನನ್ನು ಈ ಸಂಕಷ್ಟದಿಂದ ಪಾರು ಮಾಡಲು ಬಂದಿರುವೆಯಾ?” ಆಕೆಗೆ ಆಚೀಚೆ ಅಲುಗಾಡಲು ಹೆಚ್ಚು ಸ್ವಾತಂತ್ರವಿರದಿದ್ದರೂ ನಾಲಿಗೆಗೆ ಯಾವುದೇ ಬಂಧನವಿರಲಿಲ್ಲ!

“ಈ ಮರದ ಕೊರಡನ್ನು ಸೀಳದ ಹೊರತು ಬೇರೆ ಉಪಾಯವಿಲ್ಲ!” ಮೇಜರ್ ಹ್ಯಾಡೋಕ್ ಸಲಹೆಯನ್ನಿತ್ತ. ಅವನ ಹಣ್ಣಾದ ಮೀಸೆಯ ಅಂಚಿನಲ್ಲಿ ಗಾಢವಾದ ಕೆಂಪು ಲಿಪ್‌ಸ್ಟಿಕ್ ಮೆತ್ತಿಸಿಕೊಂಡು ಮೇಜರ್ ಹ್ಯಾಡೋಕ್ ಒಬ್ಬ ಸರ್ಕಸ್‌ನ ಜೋಕರನಂತೆ ಕಾಣಿಸುತ್ತಿದ್ದ.

“ನನ್ನ ಹೆನ್ರಿ ಮೂರ್‌ನನ್ನು ಒಡೆದು ಹಾಕಬೇಕು ಅಂತೀರಾ?!” ಸರ್ ಬೇಸಿಲ್ ಭಾರವಾದ ದನಿಯಲ್ಲಿ ಕೇಳಿದರು.

“ಸರ್ ಬೇಸಿಲ್, ಬೇರೆ ದಾರಿಯೇ ಇಲ್ಲವೆಂದು ತೋರುತ್ತದೆ. ಲೇಡಿ ಟರ್ಟನ್ ಆ ರಂಧ್ರದೊಳಗೆ ಹೇಗೆ ತೂರಿಕೊಂಡಳೋ ನನಗೆ ಗೊತ್ತಿಲ್ಲ. ಹೊರಕ್ಕೆ ಬರಲು ಮಾತ್ರ ಆಕೆಯ ಕಿವಿಗಳು ತಡೆಯುತ್ತವೆ!”

“ಒಹ್, ಡಿಯರ್… ನನ್ನ ಹೆನ್ರಿ ಮೂರ್…!” ಸರ್ ಬೇಸಿಲ್ ದುಃಖಭರಿತರಾಗಿ ಉದ್ಗರಿಸಿದರು. ಇದನ್ನು ಕೇಳಿದ್ದೇ ಲೇಡಿ ಟರ್ಟನ್ ಚಂಡಿಯ ಅವತಾರ ತಳೆದು ಸರ್ ಬೇಸಿಲರನ್ನು ಕೆಟ್ಟ ಕೆಟ್ಟದಾಗಿ ಬಯ್ಯತೊಡಗಿದಳು. ಪುಣ್ಯಕ್ಕೆ ಜೆಲ್ಕ್ ಅಲ್ಲಿಗೆ ಬಂದ. ಲೇಡಿ ಟರ್ಟನ್ ಭುಸುಗುಡುತ್ತಾ ಸುಮ್ಮನಾದಳು. ಜೆಲ್ಕ್ ಸರ್ ಬೇಸಿಲರ ಬಗಲಿಗೆ ಬಂದು ನಿಂತು ಅವರ ಆದೇಶಕ್ಕೆ ಕಾದು ನಿಂತ. ಲೇಡಿ ಟರ್ಟನ್ ಕಡೆಗೆ ಅವನ ದೃಷ್ಟಿ ಹೊರಳಿದಾಗ ಅವನ ಕಣ್ಣುಗಳಲ್ಲಿ ಮೂಡಿದ್ದ ತಿರಸ್ಕಾರ ಕಂಡು ನನಗೆ ಆಶ್ಚರ್ಯವಾಗಲಿಲ್ಲ.

“ಜೆಲ್ಕ್, ಮನೆಗೆ ಹೋಗಿ ಒಂದು ಗರಗಸನೋ ಮತ್ತೆಂತಾದ್ದೋ ತೆಗೆದುಕೊಂಡು ಬಾ. ಈ ಮೂರ್ತಿಯನ್ನು ತುಂಡರಿಸದೆ ಬೇರೆ ಮಾರ್ಗವಿಲ್ಲ”.

“ಸಹಾಯಕ್ಕಾಗಿ ಬೇರೆ ಯಾರನ್ನಾದರೂ ಕರೆದುಕೊಂಡು ಬರಲೇ ಸರ್? ಫಿಲಿಪ್ ಇದ್ದಾನೆ. ಒಳ್ಳೆಯ ಕಾರ್ಪೆಂಟರ್…”

“ಬೇಡ ಜೆಲ್ಕ್. ಈ ಕೆಲಸ ನಾನೇ ಮಾಡುತ್ತೇನೆ. ಬೇಗ ಹೋಗಿ, ಬೇಗ ಬಾ”. ಜೆಲ್ಕ್ ಅಲ್ಲಿಂದ ಹೊರಡುತ್ತಿದ್ದಂತೆ ಲೇಡಿ ಟರ್ಟನ್ ಮತ್ತೆ ಗಂಡನನ್ನು ಶಪಿಸಲು ಆರಂಭಿಸಿದಳು. ಇದನ್ನು ಕೇಳಲು ಕಿರಿಕಿರಿಯಾಗಿ ನಾನು ಅಡ್ಡಾಡುತ್ತಾ ಮುಂದಕ್ಕೆ ಸಾಗಿದೆ. ಜೆಲ್ಕ್ ಬರುತ್ತಿರುವುದು ಕಾಣಿಸುತ್ತಿದ್ದಂತೆಯೇ ನಾನು ವಾಪಾಸ್ಸಾಗತೊಡಗಿದೆ. ಜೆಲ್ಕ್‌ನ ಹಿಂದೆ ಮತ್ತೊಂದು ವ್ಯಕ್ತಿ ಏದುಸಿರು ಬಿಡುತ್ತಾ ಓಡೋಡಿ ಬಂದಿತು. ಅದು ಕಾರ್ಮೆನ್ ಲಾ ರೋಜಾ!

“ನ…ತಾ…ಲಿ…ಯಾ…!! ಏನಾಯ್ತು ಡಾರ್ಲಿಂಗ್‌?”

“ಒಹ್…! ಶಟಪ್ ಕಾರ್ಮೆನ್. ದೂರ ನಿಲ್ಲು” ಲೇಡಿ ಟರ್ಟನ್ ಸಿಟ್ಟಿನಿಂದ ಅರಚಿದಳು.

ಸರ್ ಬೇಸಿಲ್, ಜೆಲ್ಕ್‌ನನ್ನು ನಿರೀಕ್ಷಿಸುತ್ತಾ ಲೇಡಿ ಟರ್ಟನ್‌ಳ ತಲೆಯ ಬಳಿ ನಿಂತಿದ್ದರು. ಜೆಲ್ಕ್ ಮೆಲ್ಲಗೆ ಬೇಸಿಲ್‌ರನ್ನು ಸಮೀಪಿಸಿದ. ಅವನ ಬಲಗೈಯಲ್ಲಿ ಕೊಡಲಿ ಮತ್ತು ಎಡಗೈಯಲ್ಲಿ ಗರಗಸವಿತ್ತು. ಅವನು ಸುಮಾರು ಒಂದು ಗಜ ದೂರ ನಿಂತು ಎರಡೂ ಕೈಗಳನ್ನು, ಅವರು ಬೇಕಾದ ಹತ್ಯಾರಗಳನ್ನು ಆರಿಸಿಕೊಳ್ಳಲಿ ಎನ್ನುವಂತೆ ಸರ್ ಬೇಸಿಲರ ಕಡೆಗೆ ಚಾಚಿದ. ನಾನು ಗಮನವಿಟ್ಟು ಜೆಲ್ಕನನ್ನೇ ನೋಡುತ್ತಿದ್ದೆ. ಅವನ ಕೊಡಲಿ ಹಿಡಿದ ಕೈ ಗರಗಸ ಹಿಡಿದ ಕೈಗಿಂತ ತುಸು ಮುಂದಿತ್ತು. ಅವನು, ಸರ್ ಬೇಸಿಲ್ ಕೊಡಲಿಯನ್ನು ಆಯ್ದುಕೊಳ್ಳುವಂತೆ ಅವರ ಮೇಲೆ ಅಪರೋಕ್ಷವಾಗಿ ಒತ್ತಡ ಹೇರುತ್ತಿದ್ದ!

ಇದನ್ನು ಸರ್ ಬೇಸಿಲ್ ಗಮನಿಸಿದರೋ ಇಲ್ಲವೋ ನನಗೆ ಗೊತ್ತಿಲ್ಲ! ಅವರು ದ್ವಂದ್ವಕ್ಕೆ ಸಿಲುಕಿರುವಂತೆ ನನಗೆ ಭಾಸವಾಯಿತು. ಸರ್ ಬೇಸಿಲ್ ಯಾವುದೋ ಕನಸೊಳಗೆ ಮುಳುಗಿರುವವರಂತೆ ಕೊಡಲಿಯನ್ನು ಎತ್ತಿಕೊಂಡರು. ಕೊಡಲಿಯ ಕಾವು ಕೈ ಸ್ಪರ್ಶಿಸುತ್ತಿದ್ದಂತೆ ಅವರು ಎಚ್ಚೆತ್ತು ಕೊಂಡರು.

ಅ ಗಳಿಗೆಗೆ ನನಗೆ ಏನನ್ನಿಸಿತೆಂದರೆ ರಸ್ತೆಯ ಕಡೆಗೆ ವೇಗವಾಗಿ ಓಡೋಡಿ ಬರುತ್ತಿರುವ ಒಬ್ಬ ಪುಟ್ಟ ಬಾಲಕ ರಸ್ತೆ ತಲುಪುತ್ತಿದ್ದಂತೆ ಆಚೆಯಿಂದ ವೇಗವಾಗಿ ಬರುತ್ತಿರುವ ಕಾರು…! ನಾನು ಬಲವಾಗಿ ಕಣ್ಣುಗಳನ್ನು ಮುಚ್ಚಿದೆ.. ಬ್ರೇಕಿನ ಕರ್ಕಶ ಶಬ್ಧ ಕೇಳಿಸಿಕೊಳ್ಳಲು ಕಿವಿಗಳು ಚುರುಕಾದವು… ಧಡ್ಡ್…! ಅಪ್ಪಳಿಸಿದ ಶಬ್ಧ…! ಆದರೆ, ಅಂತಾದ್ದೇನೂ ಘಟಿಸಲಿಲ್ಲ! ಆದರೂ ನನ್ನ ಹೃದಯ ಡವಗುಟ್ಟುತ್ತಿತ್ತು. ಹೊಟ್ಟೆಯೊಳಗೆ ಮಂಜು ಕಲೆಸಿದಂತಾಗುತ್ತಿತ್ತು. ಹಣೆಯ ಮೇಲೆ ಬೆವರಹನಿಗಳು ಮೂಡಿದ್ದವು.

“ಜೆಲ್ಕ್!!” ಸರ್ ಬೇಸಿಲ್ ಅತ್ಯಂತ ಮೃದುವಾಗಿ ಕರೆಯುವವರೆಗೂ ನಾನು ಕಣ್ಣುಗಳನ್ನು ತೆರೆಯಲಿಲ್ಲ.

ನಾನು ಕಣ್ಣುಗಳನ್ನು ತೆರೆದಾಗ ಸರ್ ಬೇಸಿಲ್ ಕೈಯಲ್ಲಿ ಕೊಡಲಿಯನ್ನು ಎತ್ತಿಕೊಂಡು ನಿಂತಿದ್ದರು. ಆದರೆ ಅವರ ಮುಖಚರ್ಯೆ ಬಹಳ ಶಾಂತವಾಗಿತ್ತು. ನಾನು ಲೇಡಿ ಟರ್ಟನ್‌ಳ ಕಡೆಗೆ ನೋಡಿದೆ. ಆಕೆಯ ಮುಖ ಸುಣ್ಣ ಬಳಿದ ಗೋಡೆಯಂತೆ ಬಿಳುಚಿಕೊಂಡಿತ್ತು. ಕಣ್ಣುಗಳಲ್ಲಿ ಆತಂಕ ತುಂಬಿತ್ತು. ಆಕೆಯ ತೆರೆದ ಬಾಯಿಯಿಂದ ವಿಚಿತ್ರವಾದ ಶಬ್ಧ ಹೊರಡುತ್ತಿತ್ತು.

“ಜೆಲ್ಕ್…! ಇದನ್ನು ಯಾಕೆ ನನ್ನ ಕೈಗೆ ಕೊಟ್ಟೆಯಪ್ಪಾ…? ಇದು ತುಂಬಾ ಆಪಾಯಕಾರಿ ಆಯುಧ ಕಣಪ್ಪ. ಎಲ್ಲಿ, ಆ ಗರಗಸ ತಾ…” ಎಂದರು ಸರ್ ಬೇಸಿಲ್.

ಕೈಯಲ್ಲಿ ಗರಗಸವನ್ನು ಹಿಡಿಯುತ್ತಿದ್ದಂತೆ ಸರ್ ಬೇಸಿಲರ ಕೆನ್ನೆಗಳ ಮೇಲೆ ಗುಲಾಬಿ ಬಣ್ಣದ ಛಾಯೆ ಹರಡಿತು. ಕಣ್ಣುಗಳ ಸುತ್ತಾ ಮುಗುಳ್ನಗೆಯ ಅಲೆ ಪಸರಿಸಿತು.

(Roald Dahl ರವರ Neck ಕಥೆಯ ಅನುವಾದ)

* * * *

‍ಲೇಖಕರು Adminm M

August 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: