ನನ್ನ ಬರೆಹದ ಪರಿ…

ರಹಮತ್ ತರೀಕೆರೆ

ಪಂಪ ತನ್ನನ್ನು ವ್ಯಾಸನ ಮಹಾಭಾರತವೆಂಬ ಕಡಲೊಳಗೆ ಬಿದ್ದಿರುವ ಈಜುಗಾರನೆಂದೂ, ಹಿತಮಿತ ಚತುರನೆಂದೊ ಕರೆದುಕೊಂಡನು. ಹೆದ್ದೆರೆಗಳಲ್ಲಿ ಈಜುವ ಆತ್ಮವಿಶ್ವಾಸ ಹಾಗೂ ವಿಸ್ತಾರದಲ್ಲಿ ಕಳೆದುಹೋಗದಂತೆ ಇರಬಲ್ಲೆ ಎಂಬ ನಿಯಂತ್ರಣ ಪ್ರಜ್ಞೆಗಳೆರಡೂ ಅವನ ಹೇಳಿಕೆಯಲ್ಲಿವೆ. ಅವನ ಬರೆಹದ ಪರಿಯನ್ನೂ ಸೂಚಿಸುತ್ತಿರುವ ಈ ಸ್ವವರ್ಣನೆಯನ್ನು ಅವನ ಕೃತಿಗಳು ಕೂಡ ಪ್ರಮಾಣಿಸುತ್ತವೆ. ಇದರಂತೆ, ಕನ್ನಡದ ಪ್ರಾಚೀನ-ಆಧುನಿಕ ಲೇಖಕರೆಲ್ಲರೂ ತಾವೇಕೆ ಮತ್ತು ಹೇಗೆ ಬರೆಯುತ್ತೇವೆ ಎಂದು ವಿವರಿಸಿದ್ದಾರೆ. ಲಂಕೇಶ್ ತಮ್ಮ ಬರೆಹದ ಕ್ರಮವನ್ನು ಗುಬ್ಬಚ್ಚಿ ಗೂಡು ಕಟ್ಟುವುದಕ್ಕೆ ಸಮೀಕರಿಸಿ ಕೊಳ್ಳುವುದುಂಟು. ಮೀಮಾಂಸಾತ್ಕವಾದ ಇಂತಹ ಬರೆಹಗಳಲ್ಲಿ ಲೇಖಕರು ಶಾಸ್ತ್ರೀಯ ಭಾಷೆಯಲ್ಲಿ ತರ್ಕಬದ್ಧವಾಗಿ ಕೊಡುವ ವಿವರಣೆಗಳಿಗಿಂತ, ಬಳಸುವ ರೂಪಕಗಳು ಹೆಚ್ಚು ಮಾರ್ಮಿಕವಾದವು.

ನನ್ನ ಬರೆಹದ ಪರಿ ಎಂಥದ್ದಿರಬಹುದು ಎಂಬ ಪ್ರಶ್ನೆಯನ್ನು ಒಮ್ಮೆ ಸ್ವಯಂ ಮುಖಾಮುಖಿ‌ ಮಾಡಿಕೊಂಡೆ. ಸ್ಪಷ್ಟ ಜವಾಬು ಸಿಗಲಿಲ್ಲ. ಆದರೆ‌ ಯಾವುದು ನನ್ನ ಹಾದಿಯಲ್ಲ ಎಂಬುದು ಖಚಿತವಾಯಿತು. ಬರೆಹವನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡು, ಶ್ರೇಷ್ಠವಾದುದನ್ನೇ ಸೃಷ್ಟಿಸಬೇಕೆಂಬ ಮಹತ್ವಾಕಾಂಕ್ಷಿ ಪಂಥ ನನ್ನದಲ್ಲ. ಹಾಗೆ ದೊಡ್ಡದನ್ನು ಸೃಷ್ಟಿಸಲು ಬೇಕಾದ ಕಸುವಿಲ್ಲದಿರುವುದೂ ಇದಕ್ಕೆ ಕಾರಣ. ಆದರೆ ನಾನು ಸ್ಮೃತಿಯ ಗೋದಾಮಿನ ಗುಜರಿಯಲ್ಲಿ ಬಿದ್ದಿರುವ ಅನುಭವ, ತಿರುಗಾಟದಲ್ಲಿ ಕಂಡ ನೋಟ, ಓದಿದ ಕೇಳಿದ ಸಂಗತಿಗಳಲ್ಲಿ ಕೆಲವನ್ನು ಎತ್ತಿಕೊಂಡು, ಒಲೆಯಲ್ಲಿಟ್ಟು ಕಾಸಿ, ಅಡಿಗಲ್ಲ ಮೇಲೆ ಬಡಿದು ಕತ್ತಿಯನ್ನೊ ಕುಡಗೋಲನ್ನೊ ಕುಳಕುಡವನ್ನೊ ಮಾಡುತ್ತಿರಬಹುದು -ಅಪ್ಪನಂತೆ; ಮನೆಯಲ್ಲಿದ್ದ ಹಳೆಬಟ್ಟೆಯ ಚೂರುಗಳನ್ನು ಸೇರಿಸಿ ಕೌದಿ ಹೊಲಿಯುತ್ತಿದ್ದ ಅಮ್ಮನ ಕೆಲಸಕ್ಕೆ ನನ್ನದು ಇನ್ನೂ ಸನಿಹ ಇರಬಹುದು.

ಅಮ್ಮನಿಗೆ ಕಸೂತಿ-ಕೌದಿ ಹೊಲಿಯುವ ಕುಶಲತೆ ಬಂದಿದ್ದು, ಅವಳ ಅಜ್ಜಿಯಿಂದ. ಈ ಅಜ್ಜಿ, ಹೊಸದುರ್ಗ ಸೀಮೆಯ ಹಳ್ಳಿಗಳಲ್ಲಿ ಸೂಜಿ-ದಾರಗಳಿದ್ದ ಸಂಚಿ ಹಿಡಿದು, ಕೌದಿ ಹೊಲೆಯುವ ಕಾಯಕ ಮಾಡುತ್ತಿದ್ದವಳಂತೆ ಗುಜರಿಯ ಅಥವಾ ಕೌದಿಯ ಪ್ರಾಥಮಿಕ ಗುಣ ಚೆಲ್ಲಿಬಿದ್ದ ಸಾಮಗ್ರಿಯನ್ನು ಹೆಕ್ಕುವುದು ಮತ್ತು ಹೊಸ ಅರ್ಥ ಬರುವಂತೆ ಜೋಡಿಸುವುದು. ಎಂತೊ ಏನೋ, ಬಾಲ್ಯದಲ್ಲಿ ಹೆಕ್ಕುವ ಕೆಲಸಗಳೇ ನನ್ನ ಮೇಲೆ ಕಡಿದುಕೊಂಡು ಬಿದ್ದವು. ಉದಾ.ಗೆ, ಕೆರೆಯಂಗಳದಲ್ಲಿ ಬಿದ್ದ ಕುಳ್ಳು ಆರಿಸುವುದು, ಕೊಯಿಲು ಮುಗಿದ ಹೊಲಗಳಲ್ಲಿ ಹಂಕಲು ಹುಡುಕುವುದು, ಕಾಡಿಗೆ ಹೋಗಿ ಸೀಗೇಸೊಪ್ಪು ಕೊಯ್ಯುವುದು, ಬಾವಲಿಗಳು ಹಿಪ್ಪೆಯ ಹಣ್ಣನ್ನು ತಿಂದುಗಿದ ಬೀಜಗಳನ್ನು ತಿರಿಯುವುದು ಇತ್ಯಾದಿ.

ನಮ್ಮ ಕುಲುಮೆಯ ಮುಂದಿದ್ದ ಬೃಹದಾಕಾರದ ಮಾವಿನಮರದಿಂದ ಬೆಳಗಿನ ಜಾವವೆದ್ದು ಬಿದ್ದ ಹಣ್ಣು ಹುಡುಕಲು ಆಮ್ರಪಾಲನಾಗಿ ಹೋಗುತ್ತಿದ್ದೆ. ಸೀಜನ್ನಿನಲ್ಲಿ ಮರದಡಿಯೇ ಮಲಗುತ್ತಿದ್ದೆ. ಆಗ ಫತ್ತೆಂದು ಬಿದ್ದ ಸಪ್ಪಳವಾದೊಡನೆ ಧಾವಿಸುತ್ತಿದ್ದ ಬಿಡಾಡಿ ದನಗಳ ಜತೆ ಹೋರಬೇಕಿತ್ತು. ನಾನೂ ಅಣ್ಣನೂ ಊರಬದಿಯಿದ್ದ ಅಡವಿಗೆ ಕಟ್ಟಿಗೆ ಹೆಕ್ಕಲು ಹೋಗುತ್ತಿದ್ದೆವು. ಹೊಲಗಳಿಗೆ ಹುಲ್ಲುಕೀಳಲು ಪ್ರಭಾತಫೇರಿ ಮಾಡುತ್ತಿದ್ದೆವು. ಶ್ಮಶಾನಕ್ಕೆ ಸಮೀಪವಿದ್ದ ಕುಲುಮೆಯ ಮುಂದೆ ಹೆಣಗಳು ಸಾಗುವಾಗ ಎಸೆಯಲಾಗುತ್ತಿದ್ದ -ಗ್ರಹಣಹಿಡಿದ ಚಂದ್ರನಂತಿದ್ದ, ಧೂಳಿನಲ್ಲಿ ಬಿದ್ದು ರಕ್ಷಿಸಿರಿ ಎಂದು ಬೇಡುತ್ತಿದ್ದ ಆಶೋಕಚಕ್ರದ ಮುದ್ರೆಯಿದ್ದ- ತಾಮ್ರದ ಪೈಸೆಗಳನ್ನು ಎತ್ತಿ ಸಂಚಯಿಸಿ, ಅಂಗಡಿಗೆ ಹಾಕಿ ಕೊಬ್ಬರಿ ಮಿಠಾಯಿ ತಿನ್ನುತ್ತಿದ್ದೆವು.

ಫಲ ಇಳಿಸಿದ ಮಾವಿನತೋಪುಗಳಲ್ಲಿ ದಟ್ಟವಾದ ಎಲೆಸಂದಿನಲ್ಲಿ ಕದ್ದು ಅಡಗಿರುತ್ತಿದ್ದ ಕಾಯನ್ನು ಕೀಳುತ್ತಿದ್ದೆವು; ಮೆರವಣಿಗೆಯಲ್ಲಿ ಈಡುಗಾಯಿ ಒಡೆದಾಗ,‌ಕ್ರಿಕೆಟ್ಟಿನಲ್ಲಿ ಪರಿಣತ ಫೀಲ್ಡರನು ಹಾರಿಹೋಗುವ ಚೆಂಡನ್ನು ನೆಗೆದು ಹಿಡಿವಂತೆ ಹೋಳನ್ನು ಹಿಡಿಯುತ್ತಿದ್ದೆವು; ಖಾಲಿಹಾಳೆಗಳನ್ನು ಸಂಗ್ರಹಿಸಿ ಜೋಡಿಸಿ ಹೊಲಿದು ಬೈಂಡು ಮಾಡಿ ಹೊಸ ಎಕ್ಸೈಜ್ ಪುಸ್ತಕ ತಯಾರಿಸುತ್ತಿದ್ದೆವು. ನಲ್ಲಿಯ ಮುಂದೆ ಉದ್ದನೆಯ ಪಾಳಿಯಲ್ಲಿ ಕಾಯುವ ಬದಲು, ಒಡೆದ ಕೊಳಾಯಿಯಿಂದ ಸಣ್ಣಗೆ ಚಿಮ್ಮುವ ಜಾಗದಲ್ಲಿ ಕೊಡವನ್ನಿಟ್ಟು ಹನಿಗಳಿಂದ ಕೊಡ ತುಂಬಿಸುತ್ತಿದ್ದೆವು. ಕಲ್ಯಾಣದ ಆಯ್ದಕ್ಕಿ ಮಾರಯ್ಯ ನಮ್ಮ ಪೂರ್ವಜನಿರಬೇಕು.

ಬಾಲ್ಯದಲ್ಲಿ ಬಿದ್ದ ಹೆಕ್ಕುಗುಣ ಬೆಳೆದಮೇಲೂ ಬಿಡಲಿಲ್ಲ. ಶಿವಮೊಗ್ಗೆಯಲ್ಲಿದ್ದಾಗ, ನಮ್ಮ ಬೀದಿಯಲ್ಲಿ ಹಾಕಿದ್ದ ಸಾಲುಮರಗಳಿಗೆ ಸಗಣಿಯನ್ನು ಎತ್ತಿಕೊಂಡು ಬರುತ್ತಿದ್ದೆ. ಚೆಲ್ಲಿಬಿದ್ದ ಎಲೆಗಳನ್ನೆಲ್ಲ ಹೆಕ್ಕಿ ಅದರ ಬುಡಕ್ಕೆ ದೂಡುತ್ತಿದ್ದೆ. ಬಾನು ನೀನು ಕೆಲಸ ಮಾಡುವ ಕಾಲೇಜಿಗಾದರೂ ಮರ್ಯಾದೆ ಕೊಡು ಮಾರಾಯ. ಬ್ಯಾಡಾ ಅಂದರೂ ಬಿಡಲ್ಲ. ಎಲ್ಲಿಹೋಗುತ್ತೇ ಬಾಲ್ಯದಲ್ಲಿ ಬಿದ್ದ ದುರಭ್ಯಾಸ!’ ಎಂದು ಝಂಕಿಸುತ್ತಿದ್ದಳು. ನಿಜ, ಕೆಲವು ಅಭ್ಯಾಸಗಳು ಬೇಗ ಕೈಬಿಡುವುದಿಲ್ಲ. ಆದರೆ, ಹೆಕ್ಕು ಸ್ವಭಾವದಿಂದ ನನ್ನ ದಿಟ್ಟಿ ಸೂರ್ಯ ಚಂದ್ರತಾರೆ ಮೋಡಗಳಿರುವ ಗಗನಕ್ಕಿಂತ ನೆಲದ ಮೇಲಿನ ಕಲ್ಲುಮಣ್ಣು ಹುಲ್ಲು ಕಸಗಳ ಕಡೆಯೇ ಹೆಚ್ಚು ಹರಿಯಿತು. ಈಗಲೂ ಹುಲ್ಲಿನ ಹೂವು, ಹರಿವ ಇರುವೆಗೊದ್ದ ಸಗಣಿಹುಳ ಬೇಗನೆ ಗೋಚರಿಸುತ್ತವೆ. ಆನೆಯಂತೆ ಸೊಂಡಿಲನ್ನು ಮೇಲಕ್ಕಳಿಸಿ ಕೊಂಬೆಯನ್ನು ಎಳೆದು ಸೊಪ್ಪು ತಿನ್ನುವ ಆನೆಗಿಂತ, ತಮ್ಮ ಮುಸುಡಿಯಿಂದ ಮಣ್ಣುಸರಿಸಿ ನೆಲಕ್ಕೆ ಹತ್ತಿದ ಗರಿಕೆಯನ್ನು ಕಡಿದು ತಿನ್ನುವ ಕತ್ತೆ ಕುದುರೆ ಕುರಿ ಮೇಕೆಗಳು ಬೆರಗು ಹುಟ್ಟಿಸುತ್ತವೆ. ಸೊಪ್ಪು ತಿನ್ನುತ್ತ ಬೇಲಿಗುಂಟ ಚಕಚಕನೆ ಚಲಿಸುವ ಮೇಕೆಯ ಗುಣವಂತೂ ಆದರ್ಶ. ಮಹಾರಾಣಿಯೊಬ್ಬಳು, ಸಂತಾನಪ್ರಾಪ್ತಿಗಾಗಿ ಋಷಿ ಮಂತ್ರಿಸಿಕೊಟ್ಟ ಹಣ್ಣಿನ ತಿರುಳು ತಿಂದು ಓಟೆಯನ್ನು ಆಚೆ ಎಸೆಯಲು, ಅದನ್ನು ಹೆಕ್ಕಿ ತಿಂದ ಆಡು ರಾಜಕುವರನನ್ನು ಹಡೆವ ಒಂದು ಕತೆಯಿದೆ. ಸೃಜನಶೀಲತೆ ವಿವರಿಸಲು ರಾಮಾನುಜನ್ ಹೇಳುವ ಈ ಕತೆ ನನಗೆ ಬಹಳ ಪಸಂದು. ಲಂಕೇಶರ ಗುಬ್ಬಚ್ಚಿಯ ಗೂಡು ಕಟ್ಟುವ ರೂಪಕದಲ್ಲೂ ಹೆಕ್ಕುವ ಹೆಣೆವ ಕ್ರಿಯೆಗಳಿವೆ. ಒಮ್ಮೆ ವಾಕ್ ಮಾಡುತ್ತ ತುಂಗಭದ್ರಾ ಕೆನಾಲಿನ ದಂಡೆಯಲ್ಲಿ ಬೆಳೆದ ಮರದಿಂದ ಗಾಳಿಗೆ ಬಿದ್ದ ಕಾಗೆಗೂಡನ್ನು ಎತ್ತಿಕೊಂಡು ಪರಿಶೀಲಿಸಿದೆ. ಅದು ಬೈಂಡಿಗ್ ವೈರು, ಪ್ಲಾಸ್ಟಿಕ್‌ಸಿಬಿರು, ಜಾಲಿಕಡ್ಡಿ ಒಳಗೊಂಡಂತೆ ಏನೆಲ್ಲ ಹೆಕ್ಕಿತಂದು ಜೋಡಿಸಿಕೊಂಡಿದೆ! ಹಲವು ದಿಕ್ಕಿನಿಂದ ಒದಗಿಬಂದ ಸಾಮಗ್ರಿಗಳು, ಸಂದರ್ಭ ಬಂದಾಗ ಒಟ್ಟಿಗೆ ಕಲೆತು ಹೊಸಹುಟ್ಟು ಸಂಭವಿಸುತ್ತವೆ. ಹಲವು ವ್ಯಂಜನಗಳು ಸೇರಿ ಸೃಷ್ಟಿಯಾಗುವ ಸಾರಿನಲ್ಲಿ, ಮೂಲವಸ್ತು ಗುರುತಿಸುವುದು ಕಷ್ಟ ಮತ್ತು ವ್ಯರ್ಥ.

ಹಾದೇವಿಯಕ್ಕ,ಮೊರಡಿಯಲ್ಲಾಡುವುದೇ ನವಿಲು? ಕಿರುವಳ್ಳಕ್ಕೆಳಸುವುದೇ ಹಂಸ?’ ಎಂದು ಕೇಳುವುದುಂಟು. ಇದರ ಪ್ರಾಕೃತಿಕ ಸತ್ಯಾಸತ್ಯತೆ ಏನೇ ಇರಲಿ, ಸಣ್ಣಪುಟ್ಟ ಕುಂಟೆಗಳಲ್ಲಿ ಈಸುತ್ತ ಮೀನುಹೆಕ್ಕುವ ಕಾಡುಬಾತುಗಳ ಅಥವಾ ನೆಲದ ಮೇಲೆ ವೇಷಮರೆಸಿ ಗೂಡುಕಟ್ಟುವ ನತ್ತಿಂಗ ಹಕ್ಕಿಗಳ ಬದುಕನ್ನೂ ಮಾನ್ಯ ಮಾಡಬೇಕು. ಕಡಲಲ್ಲಿ ಈಜುವವರಿಗೆ ಹಳ್ಳದ ಸಣ್ಣಮಡು ತಾತ್ಸಾರ ಹುಟ್ಟಿಸಬಹುದು. ಆದರೆ ಆಳುದ್ದ ನೀರಲ್ಲಿ ಮುಳುಗುವ ಭಯವಿಲ್ಲದೆ ಜಲಕೇಳಿ ಸಾಧ್ಯವಿದೆ. ನಾನು ಚಾರಣಿಗನಾಗಿ ಹಿಮಾಲಯ ಪರ್ವತಗಳ ಆರೋಹಣ ಮಾಡುವುದುಂಟು. ಆದರೂ ಊರಬದಿಯ ಸಣ್ಣಬೆಟ್ಟಗಳು ಇಷ್ಟವಾಗುತ್ತವೆ. ಅವನ್ನೇರಿ ಚಿತ್ರಬರೆದಂತೆ ಸುತ್ತ ಕಾಣುವ ಊರು ಬಯಲು ಹೊಲಗದ್ದೆಗಳನ್ನು ಗಮನಿಸುವೆ.

ಆ ದೃಶ್ಯ ಅಮ್ಮ ಪುರುಸೊತ್ತಿನಲ್ಲಿ ಹಾಕುತ್ತಿದ್ದ ಕಸೂತಿಯನ್ನು ಹೋಲುತ್ತದೆ. ನಮ್ಮೂರ ಸಂತೆಯಲ್ಲಿ ಮಣಿಸರದವರನ್ನು ಯಾರೂ ಲೆಕ್ಕಿಸುತ್ತಿರಲಿಲ್ಲ. ಅವರು ಒಂದು ಬ್ಯಾಗಿನಲ್ಲಿ ತುಂಬಬಹುದಾದ ಸರಕನ್ನು ಚಾಪೆಯಗಲ ಹರಡಿ ಕೂತಿರುತಿದ್ದರು. ಅಗ್ಗದ ದೀರ್ಘಕಾಲ ಬಾಳದ ಪಿನ್ನು ಟೇಪು ಬಾಚಣಿಗೆ ಬೇಕಾದ ಮಹಿಳೆಯರು ಅವರ ಎದುರುಕೂತು, ನಾಕಾಣೆ ಬೆಲೆಬಾಳುವ ಅವನ್ನು ರತ್ನಪರೀಕ್ಷಕರ ಗಾಂಭೀರ್ಯದಲ್ಲಿ ಪರಿಶೀಲಿಸಿ ಖರೀದಿಸುತ್ತಿದ್ದರು. ನನ್ನದು ಮಣಿಸರದವರ ರೀತಿಯ ಬರೆಹಗಾರಿಕೆ ಇದ್ದೀತು.

ನನ್ನ ಬರೆಹವನ್ನು ಮಿತ್ರರೊಬ್ಬರು, ಇದು ಓದುಗರನ್ನು ದಿಗ್ಭ್ರಮೆಗೊಳಿಸಬಲ್ಲ ದಟ್ಟಕಾಡಲ್ಲ. ನೀಟಾಗಿ ರೂಪಿಸಿದ ಉದ್ಯಾನವನ ಎಂದು ಗುರುತಿಸಿದ್ದುಂಟು.. ಒಪ್ಪಿದೆ. ಪ್ರತಿನಾಡಿಗೂ ಗಿಡಮರ ಖಗಮೃಗ ಬೆಟ್ಟ ಕಣಿವೆ ನದಿಗಳಿಂದ ಕೂಡಿದ ಕಾನನದ ಅಗತ್ಯವಿದೆ. ಆದರೆ ಪಟ್ಟಣಗಳಲ್ಲಿ ನಾಗರಿಕರಿಗೆ ವಾಯುವಿಹಾರಕ್ಕೆ, ಮನೆಯ ವಿಷಯ ಹರಟಿಕೊಂಡು ಕೂರಲು, ಪಾರ್ಕುಗಳ ಜರೂತ್ತೂ ಇದೆ. ಹಿತ್ತಲಜಗತ್ತು ನನಗೆ ಪ್ರಿಯವಾಗಿರಲು, ಅದರ ಕಿರಿಯಾಕಾರವೂ ಕಾರಣವಿದ್ದೀತು. ಬಹುಶಃ ನಾನು ದಿವಾನಖಾನೆಯಲ್ಲಿ ಹಾಸುವ ದೊಡ್ಡ ರತ್ನಗಂಬಳಿ ರಚಿಸಲಾರೆ. ನೆಗಡಿಯಾದಾಗ ಮುಖ ಬೆವರಿದಾಗ ತೊಡೆದುಕೊಳ್ಳಲು ಕರವಸ್ತ್ರಗಳನ್ನು ನೇಯಲು ಬಯಸುತ್ತೇನೆ. ಗುಜರಿಯೊಳಗಿನ ಸಾಮಗ್ರಿಯಿಂದ ಭವ್ಯವಾದ ಐಫೆಲ್ ಟವರನ್ನು ಕಟ್ಟಲಾಗದು. ಆದರೆ ಕಳೆಕೀಳುವ ಕುರ್ಪಿ ರೊಟ್ಟಿಚುಂಚಕ ಮುದ್ದೆಕೆರೆವ ಬಿಲ್ಲೆ ಮಾಡಬಹುದು. ಗಂಟೆಗಟ್ಟಲೆ ಖಯಾಲ್ ಗಾಯನ ಮಾಡಲು ಬೇಕಾದ ಕಂಠತ್ರಾಣ-ರಿಯಾಜ್ ಇಲ್ಲದವರು, ಅಪಸ್ವರ ಹೊರಡಿಸುವುದಕ್ಕೆ ಬದಲಾಗಿ, ಮಿಶ್ರರಾಗಗಳಲ್ಲಿ ಮಂದ್ರಸ್ವರದಲ್ಲಿ ಲಹರಿಯಲ್ಲಿ ಹರಿಯುವ ಗಜಲನ್ನೊ ಠುಮ್ರಿಯನ್ನೊ ಗುನುಗುವುದು ಉಚಿತ.

ಕುಮಾರವ್ಯಾಸನು ಹಲಗೆ ಬಳಪವ ಪಿಡಿಯದ ಅಗ್ಗಳಿಕೆಯಲ್ಲಿ ಬರೆದವನು. ಅವನ ಪರಂಪರೆಗೆ ಸೇರಿದ ಕೆಲವರು ಒಮ್ಮೆ ಮಾತ್ರ ಬರೆದುಬಿಡುತ್ತಾರೆ. ಅವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ನನ್ನದು ಹಾಗಲ್ಲ. ಬರೆಯುವ, ಬರೆದಿದ್ದನ್ನು ಕೀಳುವ, ಕಿತ್ತಿದ್ದನ್ನು ಮತ್ತೆಲ್ಲೊ ತೇಪೆ ಹಚ್ಚುವ ವಿಧಾನ. ಕಂಪ್ಯೂಟರ್ ಬಂದ ಬಳಿಕ ಈ ಕೆತ್ತೆಬಾಜಿ ಕೆಲಸ ಸುಲಭವಾಗಿದೆ. ನಾನು ಲೇಖನಿ ಹಿಡಿದು ಹಸ್ತಪ್ರತಿ ಸಿದ್ಧಪಡಿಸಿದ ಕೊನೆಯ ಪುಸ್ತಕ `ಕರ್ನಾಟಕದ ಸೂಫಿಗಳು’. ಅದರ ಹಸ್ತಪ್ರತಿಯನ್ನು ಈಚೆಗೆ ತೆರೆದು ನೋಡಿದೆ: ಫಕೀರರ ಗುದಡಿಯಂತಿದೆ. ಅನುಭವದ ತುಣುಕುಗಳನ್ನು ಮಾತ್ರವಲ್ಲ, ಶಬ್ದಗಳನ್ನೂ ಹೆಕ್ಕಿ, ಜೋಡಿಸಿ, ಹೊಲಿಯಲು ಯತ್ನಿಸುತ್ತೇನೆ-ಬಳಕೆದಪ್ಪಿದ ಗ್ರಾಮೀಣ ಶಬ್ದಗಳು, ಹಳಗನ್ನಡದ ಪದಗಳು, ಕನ್ನಡದ್ದೇ ಆಗಿರುವ ಉರ್ದುಫಾರಸಿ ಶಬ್ದಗಳು, ಬೇರೆಬೇರೆ ಕಸುಬುದಾರ ಪರಿಭಾಷೆಗಳು ಇತ್ಯಾದಿ. ನನ್ನ ಪಾಲಿಗೆ ಬರೆಹದ ಕಸುಬು, ಕೌದಿಹೊಲಿಕೆ, ನೇಕಾರಿಕೆ, ಕಮ್ಮಾರಿಕೆ, ಚಮ್ಮಾರಿಕೆಗಿಂತ ಬಹಳ ಭಿನ್ನವಲ್ಲ.

ಓದುಗನಾಗಿ ಮಾತ್ರ, ನಾನು ದೊಡ್ಡ ಕಲಾವಿದರ ಹೆಗ್ಗಾಡು, ಸಾಗರ ಪರ್ವತಗಳಂತಹ ಬರೆಹ-ಸಂಗೀತ-ಸಿನಿಮಾಗಳಲ್ಲಿ ಅಜ್ಞಾತನಾಗಿ ಕಳೆದುಹೋಗ ಬಯಸುತ್ತೇನೆ. ಅವರ ಸೃಜನಶೀಲತೆ ಕುಶಲತೆ ಕುಸುರಿಗೆಲಸದ ತಾಳ್ಮೆ ಜಾಣ್ಮೆಗಳನ್ನು ಆಸ್ವಾದಿಸುತೇನೆ. ಲಯ ಮತ್ತು ಅರ್ಥಗೆಡದಂತೆ ಬಳ್ಳಿಯಂತಹ ವಾಕ್ಯಗಳನ್ನು ಕಟ್ಟುವ ಕುವೆಂಪು ಗದ್ಯ; ಡಿವಿಜಿಯವರ ವ್ಯಕ್ತಿಚಿತ್ರಗಳಲ್ಲಿರುವ ಸರಳ ನೇರ ಆಪ್ತ ಗದ್ಯಶೈಲಿ; ಆಳವಾದ ಚಿಂತನೆಯಿರದ ಹಾಮಾನಾ ಅವರ ಹ್ರಸ್ವವಾಕ್ಯಗಳು; ಜಿ. ರಾಜಶೇಖರ ಆಳವಾದ ಚಿಂತನೆ ಮತ್ತು ತಾತ್ವಿಕ ಖಚಿತತೆ; ಲಂಕೇಶರ ಸರಳತೆ ಮತ್ತು ವೈರುಧ್ಯಗಳನ್ನು ಏಕಕಾಲಕ್ಕೆ ಹಿಡಿವ ದಾರ್ಶನಿಕತೆ; ಡಿ.ಆರ್. ನಾಗರಾಜರ ಪಾಂಡಿತ್ಯ ಮತ್ತು ಪ್ರಮೇಯ ಕಟ್ಟುವ ಕುಶಲತೆ; ನವರತ್ನ ರಾಮರಾಯರ ಆಕರ್ಷಕ ನಿರೂಪಣೆ; ತಮ್ಮ ವ್ಯಂಗ್ಯಪ್ರಜ್ಞೆಯಿಂದ ಹೊಸದನಿ ಹುಟ್ಟಿಸುವ ಬೊಳುವಾರರ ಜಾಣ್ಮೆ; ಸವೆದ ಪದವನ್ನು ಸಂದರ್ಭಾನುಸಾರ ಮುರಿದು ಹೊಸ ಅರ್ಥ ಬೆಳಗಿಸುವ ಬೇಂದ್ರೆಯವರ ಮಾಟಗಾರಿಕೆ; ಇದೇ ಕಾಯಕದಲ್ಲಿ ನಿರತರಾಗಿ ರಾಜಕೀಯ ಪ್ರಜ್ಞೆ ಚಿಮ್ಮಿಸುವ ಚಂಪಾರ ವಿಡಂಬನೆ; ಮೂರ್ತಿರಾಯರಲ್ಲಿ ಹರಿವ ಆಪ್ತತೆ; ಸರಳತೆಯಲ್ಲಿ ಘನವಾದ ಸಂವೇದನೆ ಕಾಣಿಸಬಲ್ಲ ಸವಿತಾರ ಕಾಣ್ಕೆ, ಗಂಗಾಧರ ಚಿತ್ತಾಲರ ಮೃತ್ಯುಗೀತೆಗಳಲ್ಲಿರುವ ಉತ್ಕಟತೆ; ಒಂದನ್ನು ಹೇಳುತ್ತ ಮತ್ತೊಂದಕ್ಕೆ ಜಿಗಿದು ಸಂಬಂಧ‌ ಕಲ್ಪಿಸುವ ಶಂಬಾರ ಜಿಜ್ಞಾಸಾ ಶೈಲಿ- ಕರ್ನಾಟಕದ ವಾಙ್ಮಯ ಬಯಲಿನಲ್ಲಿ ಎಷ್ಟೊಂದು ಹೊಳೆಗಳು! ಅವುಗಳಲ್ಲಿ ಮೀಯುತ್ತೇನೆ. ಬೊಗಸೆಯಿಂದ ಹೆಕ್ಕಿ ಕುಡಿಯುತ್ತೇನೆ. ಹೊಳೆಯ ಸಂಗ ಮಾಡಿದವರು ಸ್ವತಃ ಹೊಳೆಯಾಗಬೇಕಿಲ್ಲವಷ್ಟೆ.

  • ಲೇಖಕರು ತಾವೇಕೆ ಮತ್ತು ಹೇಗೆ ಬರೆಯುತ್ತೇವೆ ಎಂದು ಸಾವಿರ ಹೇಳಿಕೊಳ್ಳಲಿ, ಅದು ಏನಾಗಿದೆ ಎಂಬುದನ್ನು ಕಡೆಗೂ ಹೇಳಬೇಕಾದವರು ಸಹೃದಯ ವಾಚಕರು.

‍ಲೇಖಕರು Admin

October 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: