ಮತ್ತೆ ದ್ವಿಪದಿಗಳು
– ಬಸವರಾಜ ಸೂಳಿಬಾವಿ
ಲಡಾಯಿ ಪ್ರಕಾಶನ
೧
ನಿನ್ನ ಬಳಿಗೆ ನಾ ಪೌರುಷ ತುಂಬಿಕೊಂಡವನ ಹಾಗೆ ಬಂದಿರಲಿಲ್ಲ
ನೀ ಸೋಲು ಗೆಲುವು ಹುಡುಕುವಾಗ ಪ್ರೇಮದ ತುಟಿ ಲಜ್ಜೆಯಿಂದ ನಡುಗಿದವು
೨
ಬೆಳಗು ಅಂಗಳದಲಿ ಅದೇ ಅರಳಿದ ಹೂ ಕಿತ್ತು ನಿನಗೆ ಮುಡಿಸಿದೆ
ಎಂದೊ ಸತ್ತ ಹಿಟ್ಲರ್ ನನ್ನ ಕೈಯಲ್ಲಿಯೆ ಬದುಕಿ ಬಂದಂತೆನಿಸಿತು
೩
ಕೋಳಿ ಕೂಗಿದಾಗ ಬೀದಿ ಬಾಗಿಲು ಬಾಯಿ ತೆರೆಯಿತು
ಕನಸಿನ ಮೇಲೆ ಕಾಲೂರಿ ಬಂದ ಹೆಜ್ಜೆಸದ್ದು ಬೀದಿ ಆವರಿಸಿತು
೪
ಹೊರಗೆ ಮೌನದ ಫರದೆ ಕಟ್ಟಿಕೊಂಡೆ ಒಳಗಿನ ಸಂತೆ ನೆರೆಯುತಿದೆ
ಗಾಯದ ಪಾದದ ಮೇಲೂ ನಿರಾಕರಿಸಿದುಸಿರಿನಲ್ಲೇ ಮೋಹಗೊಳ್ಳುವ ಪಾತ್ರದ ನೆರಳು
೫
ಬೆಂಕಿ ಇಡುವಾಗ ಆ ಮನಸು ಏನಂದುಕೊಂಡಿತ್ತೊ
ಕೊನೆಗೂ ಪಾದಕ್ಕಂಟಿದ ಬೂದಿ ಅರಿವಿಗೆ ಬರುವುದು
೬
ಈ ಸಂಜೆಯಲಿ ಏನು ಮಾತು
ಆಗಷ್ಟೇ ಹುಟ್ಟಿದ ಚಂದ್ರ ಈಗ ಇಲ್ಲವಾದನು
೭
ಹಗಲ ಹುಡುಗಿ ಬಿಡಿಸಿದ ಚಿತ್ರ ಖಾಲಿ ಇತ್ತು
ಕಪ್ಪು ಬಣ್ಣ ತುಂಬಲು ಇರುಳ ಹುಡುಗಿಗೆ ಅವಕಾಶ ದೊರೆಯಿತು
೮
ನನ್ನ ಬದುಕಿಸುವುದು ರೊಟ್ಟಿಯೇ ಎನಿಸಿತ್ತು
ನಿನ್ನ ಸಂಧಿಸುವ ತನಕ…
]]>





ಚೆನ್ನಾಗಿದೆ ಸರ್, ಅಭಿನಂಧನೆಗಳು…