ನಿಧನವಾರ್ತೆ
ಮೂಲ – ಈ ಎಥೆಲ್ಬರ್ಟ್ ಮಿಲ್ಲರ್
ಕನ್ನಡಕ್ಕೆ- ಪ್ರತಿಭಾ ನಂದಕುಮಾರ್
ಎರಡು ಕವನಗಳು – ಒಂದು ಅನುವಾದಿತ, ಇನ್ನೊಂದು ಸ್ವಂತ
—
ನನ್ನ ನಿಧನವಾರ್ತೆ ಪ್ರಸಾರವಾದ ತಕ್ಷಣ
ಹೆಂಗಸರು ನನ್ನ ಸೀರೆ ಕಲೆಕ್ಷನ್ ಬಗ್ಗೆ
ಗಂಡಸರು ನನ್ನ ಅಪ್ರಕಟಿತ ಕವನಗಳ ಬಗ್ಗೆ
ಮಾತಾಡತೊಡಗಿದರು.
ಯಾರೂ ಯಾವ ಪುಸ್ತಕದಂಗಡಿಗಳಿಗೂ ಕಾಲಿಡಲಿಲ್ಲ,
ಯಾರಿಗೂ ಯಾವ ಹೆಸರೂ ನೆನಪಾಗಲಿಲ್ಲ
ಇವರು ಯಾರು ಏನು ಬರೆದರು ಯಾವ ಭಾಷೆಯಲ್ಲಿ
ಎಂದೆಲ್ಲಾ ವಿಚಾರಿಸಿ ಕೊನೆಗೆ ಯಾಕೆ ಬರೆದರು ಎಂದರು
ಕಿಡಿಗೇಡಿಯೊಬ್ಬ ಮಾತ್ರ ವಿಚಿತ್ರ ನಗೆ ಬೀರುತ್ತಾ
ಮೆಳ್ಳೆಗಣ್ಣಿನಲ್ಲಿ ವಾರೆ ನೋಟ ಬೀರುತ್ತಾ
ಒಂದು ಸುದ್ದಿ ತೇಲಿಬಿಟ್ಟ ನಾಲಿಗೆಗಳಿಗೆ ಕೆಲಸ ಕೊಟ್ಟ
ಇವರು ಗೊತ್ತಲ್ಲಾ, ಅದೇ, ಹಾಗೇ, ಹೇಳ್ತಾರಪ್ಪಾ
ಎಂದಂದು ಎಲ್ಲರಿಗಿಂತ ದೊಡ್ಡ ಹಾರ ತಂದ
ದಾರಿ ಬಿಡಿ ದಾರಿ ಬಿಡಿ ಎಂದು ದಡಬಡಿಸುತ್ತಾ ಬಂದ
ಕ್ಯಾಮರಾ ಕೋನಗಳಿಗೆ ಸರಿಯಾಗಿ ಪೋಸು ಕೊಟ್ಟು
ತಾಯಿ ಮಹಾಲಕ್ಷ್ಮಿ ಅನ್ನಪೂರ್ಣೇ ಸಾಕ್ಷಾತ್ ಸರಸ್ವತೀ
ಹಾಡಿ ಕೊಂಡಾಡಿ ಸಧ್ಯ ಇನ್ನು ಹಿಂತಿರುಗಿ ಕೊಡಬೇಕಾಗಿಲ್ಲ
ಎಂದು ನಿರಾಳ ನಡೆದ ಕದ್ದ ಕವನಗಳನ್ನು ತುರುಕಿ ಜೇಬಿನಲ್ಲಿ
**
ನಿಧನವಾರ್ತೆ
ನನ್ನ ನಿಧನವಾರ್ತೆ ಓದಿ ಜನರು
ಹತ್ತಿರದ ಪುಸ್ತಕದಂಗಡಿಗಳಿಗೆ ಹೋಗಿ
ನನ್ನ ಪುಸ್ತಕಗಳಿಗಾಗಿ ತಡಕಾಡಿದರು.
ಸ್ವಲ್ಪ ಕಾಲ ಅಲ್ಲಲ್ಲಿ ನನ್ನ ಮಾತುಗಳನ್ನು
ಕೋಟ್ ಮಾಡಿಯೇ ಮಾಡಿದರು.
ನನ್ನ ಫೋಟೋ ಮುದ್ರಿಸಿದ ಟಿ ಶರ್ಟ್ ಗಳನ್ನೂ
ಹುಡುಕಿ ಕೊಂಡುಕೊಂಡರು.
ಟೀಚರುಗಳ ಡೆಸ್ಕುಗಳ ಮೇಲೆ ನನ್ನ ಪುಸ್ತಕಗಳು
ಟಿಪ್ಪಣಿಗಳು, ಗುರುತುಗಳು, ಬುಕ್ ಮಾರ್ಕ್ ಗಳ
ಸಹಿತ ರಾರಾಜಿಸಿದವು. ಯಾರೋ ಒಬ್ಬರು ನುಡಿದರು
ವಿಮರ್ಶಕರೊಬ್ಬರ ಪ್ರಕಾರ ಎಥೆಲ್ಬರ್ಟ್ ಕವನಗಳಲ್ಲಿ
ಅತೀ ಆಸೆಗಳು ಮತ್ತು ಹತಾಶೆಗಳಿರುವುದರಿಂದ ಸೋತಿವೆ.
ಇನ್ನೊಬ್ಬ ನೆರೂಡಾ ಬೇಕಿಲ್ಲ ಜಗತ್ತಿಗೆ ಎಂದರು.
ಎಥೆಲ್ಬರ್ಟ್ ತಮ್ಮ ಕೊನೆಯ ಸಂದರ್ಶನದಲ್ಲಿ ಹೇಳಿದ್ದಾರೆ
“ಪ್ರೀತಿ ಎನ್ನುವುದು ಅತಿ ಸೂಕ್ಷ್ಮವಾದುದು
ಅದಕ್ಕೆ ಕತ್ತಲೆಯಲ್ಲಿ ಉಸಿರುಗಟ್ಟುತ್ತದೆ.”






0 Comments