ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನಗೊಬ್ಬಳು ಹೆಂಡತಿಯಿದ್ದಳು…' – ರಾಘವೇಂದ್ರ ಜೋಶಿ ಕವಿತೆ

ರಾಘವೇಂದ್ರ ಜೋಶಿ

 
ನನಗೊಬ್ಬಳು ಹೆಂಡತಿಯಿದ್ದಳು
ಎಲ್ಲರಿಗಿರುವಂತೆ.
ನನಗೊಬ್ಬಳು ಮಗಳಿದ್ದಳು
ಎಲ್ಲರಿಗಿರುವಂತೆ.

ಮೊದಮೊದಲು
ಭುಜದೊಳಗೆ ತಂಪಿತ್ತಾ
ತಂಪಿದ್ದುದರಿಂದ ಭುಜಬಲವಿತ್ತಾ
ಗೊತ್ತಿಲ್ಲ;
ಮಜವಂತೂ ಗಜವಾಗಿತ್ತು.
ಒಂದೇ ಒಂದು ಕೊಸರಿತ್ತು
ಮಕ್ಕಳಿಲ್ಲದ ಕೊರತೆಯಿತ್ತು
ಮತ್ತು
ನಂಬಿಕೆಯಿತ್ತು;
ತಮಸೋಮ ಜ್ಯೋತಿರ್ಗಮಯದೊಳಗೆ

ಎಂಟೂ ಮುಕ್ಕಾಲು ವರ್ಷ
ಬೆಟ್ಟವನೇರಿ ಕಣಿವೆಯಿಳಿದು
ಬೆವರಿಳಿಸಿ ಸುಸ್ತಾಗಿ
ಕೊನೆಗೊಮ್ಮೆ ಅಶ್ವತ್ಥ ವೃಕ್ಷದ ಕಟ್ಟೆಯಲ್ಲಿ
ಜೋಡಿ ನಾಗರಗಳ ಗಂಟು
ನೋಡಿದ ಬಳಿಕ
ಮಗಳು ಸ್ವಯಂಭೂ!

ಸಿಟ್ಟಿತ್ತು ಹೆಂಡತಿಗೆ
ನನ್ನ ಹುಚ್ಚಾಟಗಳ ಬಗ್ಗೆ.
ಹೆಂಡತಿಯ ಹೆಸರೂ ಒಂದೇ
ಮಗಳದೂ ಅದೇ.
ಇದೇ ಕಾರಣಕ್ಕೆ
ಅವಳಿಗೆ ಅಸಹನೆಯಿತ್ತು
ಜಗತ್ತಿನ ಕುಹಕದ ಮಾತಿಗೆ,ನೋಟಕ್ಕೆ.

ಕಿರಿಕಿರಿಯಿತ್ತು ಅವಳಿಗೆ
ಮಗಳ ಬಗೆಗಿನ ನನ್ನ ಪ್ರೀತಿಗೆ.
ಅನುಮಾನವಿತ್ತು ತನ್ನದೇ
ಸ್ನಿಗ್ಧ ಚೆಲುವಿನ ಬಗ್ಗೆ.
ಆದರೂ ಆಕೆ ಯಾವತ್ತೂ
ಬೊಗಸೆ ಮುಚ್ಚಿಕೊಂಡವಳಲ್ಲ;
ನನ್ನ ಪಕ್ಕೆಲುಬಿನ ಕಫಕ್ಕೆ,ಕೆಮ್ಮಿಗೆ.

ಮೊನ್ನೆ ವಿಮಾನ ಪತನಗೊಂಡಾಗ
ಸುಟ್ಟು ಹೋದಳು
ಬೊಗಸೆ ಮುಚ್ಚಿತ್ತು
ನನಗೆ ಅಳಲಾಗಲಿಲ್ಲ ಕಿರುಚಲಾಗಲಿಲ್ಲ.
ಕಣ್ಣೆದುರಿಗೆ ನಿಂತ ನಿಜದ
ಚಿತ್ರಪಟ ನೋಡಿ ಸಂಕಟಗೊಂಡೆ.
ಹೌದು,ಇಷ್ಟುದಿನ ಅವಳು ನನಗೆ
ಬರೇ ಹೆಂಡತಿಯಾಗಿರಲಿಲ್ಲ;
ಚೊಕ್ಕಟ ಮಗಳಾಗಿದ್ದಳು..
 

‍ಲೇಖಕರು avadhi

31 July, 2013

4 Comments

  1. mmshaik

    mana kalukitu kone..sir uttama kavana.

  2. shanthi k.a.

    maarmika……….

  3. chetan

    ಮೊದಲ ಸಾಲುಗಳ ಅಥ೯ವಾಗದ ಪ್ರಶ್ನೆಗಳೆಲ್ಲ ಕೊನೆಯ ಸಾಲುಗಳನ್ನೊದಿದ ಮೇಲೆ ಗಂಟಲಲ್ಲಿ ಸಿಕ್ಕ ಕಲ್ಲುಗಳಾಗಿವೆ…

  4. Vijendra

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading