ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಡು ಹಾಳೆಯಲ್ಲೊಂದು ಮೊಗ್ಗು..

ಜೋಡು ಗೆರೆ ಪಟ್ಟಿ

ಚೈತ್ರಿಕಾ ಶ್ರೀಧರ್ ಹೆಗಡೆ, ಕಂಚೀಮನೆ

ನನಗ್ಯಾಕೋ ಈಗೀಗ
ಜೋಡುಗೆರೆ ಪಟ್ಟಿ ತೀರ
ನೆನಪಾಗುತ್ತದೆ…

ಅ ಆ ಇ ಈ, ಕ ಕಾ ಬಳ್ಳಿ
ಗೌಡರ ಬ್ಯಾಣ ಹತ್ತಿ ಹೋಗುತ್ತಿದೆ
ಎಂದು ಅಕ್ಕೋರು ಅಣುಕಿಸುತ್ತಿದ್ದರಲ್ಲ
ಅದೇ ಆ ಮೂರುಕತ್ರಿಯ
ಗೂಡಂಗಡಿಯಲಿ
sheಇದು ಬ್ಯಾಡ ಅದು ಬ್ಯಾಡ ಎನ್ನುತ್ತಾ
ಆರಿಸಿ ಆರಿಸಿ ಕೊಳ್ಳುತ್ತಿದ್ದೆವಲ್ಲ?
ಆ ಪಟ್ಟಿ..

ನಡು ಹಾಳೆಯಲ್ಲೊಂದು
ಮೊಗ್ಗು ಬಿಡಿಸಿ ಹೂವಾಗುತ್ತದೇನೋ
ಎಂದು ದಿನಾ ದಿನಾ ತೆಗೆದು
ನೋಡುತ್ತಿದ್ದೆವಲ್ಲ,
ಕಣ್ಣಾಮುಚ್ಚಾಲೆ ಕುಂಟು ಮುಟ್ಟಾಟದ
ಗುಂಗಲ್ಲಿ ತಪ್ಪು ಬರೆದು
ಎಂಜಲು ಹಾಕಿ
ಒರೆಸುತ್ತಿದ್ದೆವಲ್ಲ ಅದೇ ಪಟ್ಟಿ..

ಮೇಲು ಮೆತ್ತಿಯ ಮೂರು
ಸಲ ಅಲೆದು, ಗೂಡಂಗಡಿಯ
ಮುಂದೆ ನಿಂತೆ..,
ಬರೇ ಉದ್ದುದ್ದ ಪಟ್ಟಿಗಳೇ ಕಂಡವು..
ಮೊನ್ನೆ ಸಿಕ್ಕಿದ್ದ
ಜಯು, ಕುಮಿಯನ್ನು ಕೇಳಿದೆ
ಕಿಸಕ್ಕನೆ ನಕ್ಕರು..
ತೌಸಿ, ಮನು ಹತ್ತಿರವೂ ಹೇಳಿದೆ
ಮುಖ ಮುಖ ನೋಡಿದರು..

ದಿನಕ್ಕೆ ಮೂರು ಸಲ
‘ದೋಸ್ತಿ ಕಟಾಫ್’ ಎನ್ನುತ್ತಿದ್ದ
ಅವರು ಮರೆತರೆ ಮರೆಯಲಿ
ಆದರೆ, ನಿನಗೇನಾಗಿದೆ?

ನಾನು ಶಾಲೆಗೆ ರಜಾ
ಹಾಕಿದಾಗಲೆಲ್ಲ ಊರೂಟಗೆ
ನನ್ನ ಹೆಸರು ಬರೆದು ಮುಖ
ಹುದುಗಿಸಿ ಅಳುತ್ತಿದ್ದೆಯಂತಲ್ಲಾ,

ಮರುದಿನ ರಜಾ ಚೀಟಿ
ಬರೆಯಲು ಹಾಳೆ ಕಿತ್ತು
ಕೊಡುತ್ತಿದ್ದೆಯಲ್ಲ
ಅದೇ ಪಟ್ಟಿ ಕಣೇ,

ನೆನಪಾಯಿತಾ?

‍ಲೇಖಕರು Admin

9 August, 2016

3 Comments

  1. Anonymous

    ಪಟ್ಟಿ ತುಂಬಾ ಸೊನ್ನೆ ಸಿತ್ತಿದ್ರೂ ಅಕ್ಷರ ಈಗ್ಲೂ ಕೋಳಿ ಕಾಲೇ…:)
    ಚಂದ ಕವಿತೆ…

  2. ಸಮಗಮೇಶ ಡಿಗ್ಗಿ ಸಂಗಾಮಿತ್ರ

    ಅಬ್ಬಾ ನನ್ ಪ್ರಾಥಮಿಕ ಶಾಲಾ ನೆನಪು ಮಾಡಿಬಿಟ್ರಿ…

    ದಿನಕ್ಕೆ ಮೂರು ಸಲ
    ‘ದೋಸ್ತಿ ಕಟಾಫ್’ ಎನ್ನುತ್ತಿದ್ದ
    ಅವರು ಮರೆತರೆ ಮರೆಯಲಿ
    ಆದರೆ, ನಿನಗೇನಾಗಿದೆ?

    ನಿಜ ಅದೆಷ್ಟೋ ಬಾರಿ ದೋಸ್ತಿ ಕಟಾಫ್ ಮಾಡಿ ಹುಣಸೆಹಣ್ಣೋ, ಪೆಪ್ಪರಮಿಮಿಂಟ್ ಕೊಟ್ಟು ರಾಜಿಯಾಗತಿದ್ರು

  3. Sangeeta Kalmane

    ಚಿಕ್ಕವರಾಗಿನ ನೆನಪು ಓದಿ ಖುಷಿ ಆಯಿತು. ನಾನೂನು ಒಮ್ಮೆ ಹಳೆಯ ನೆನಪಲ್ಲಿ ಸುತ್ತಾಡಿ ಬಂದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading