ವಿನತೆ ಶರ್ಮ
ಈ ಕಾಲದಲಿ ಸೂರ್ಯಚಂದ್ರಮರು ದಿನವಾಳುವ ಅರಸರಲ್ಲ
ಮೂಡಲಮನೆಯ ಬೆಳ್ಳಿಕಿರಣ ಪದಕೋಶ ಕಾಣೆಯಾಗಿದೆ
ಫೋನಿನ ಅಲಾರಾಂ ಕರೆದು ಕನಸ ಕಾಣುವ
ಮನಸಿನ ಮೇಲೆ ಮೊಟಕಿ ಅಪ್ಪಿಕೊಂಡಿರುವ
ಕಣ್ಣರೆಪ್ಪೆಗಳಿಗೆ ವಂಚಿಸುವ ಕತ್ತಲಿನ ಬೆಳಗು ದಿನಸೂಚಿ.
ಬೀದಿದೀಪಗಳ ಮಂಕುಮಬ್ಬು ಬೆಳಕಲಿ ನಗರಪರ್ವತಗಳ
ಈ ಕಟ್ಟಡ ಪ್ರಪಂಚದಲ್ಲಿ ಉದರನಿಮಿತ್ತಂ
ಉದ್ಯೋಗದಿನಂ ದಿನಚರಿ ಗಡಿಯಾರದ ಮುಳ್ಳು ಚುಚ್ಚಿದಂತೆ.
ಮೂಡಲರವಿ ಅನುಭೂತಿಯ ಎರಕವ ಹೊಯ್ದ
ಹುಣ್ಣಿಮೆ ತುಂಬುಚಂದಿರ ಪ್ರಿತಿರಾಗಗಳ ಮೀಟಿದ
ಎಂಬ ಕವಿಸಾಲು ಹುಟ್ಟಲು ಕೆಲಸಕ್ಕೆ ರಜೆ ಹಾಕಿ,
ಕಾರನ್ನೇರಿ ಪಯಣಿಸಿ ಹಾಲಿಡೇ ಹಾಲಿಡೇ ಹಾಡ
ಗುನುಗುತ್ತಿರಬೇಕು. ಶುರುವಾಗುವ ಮೊದಲೇ ಹಾಲಿಡೇ
ಮುಗಿಯುವ ದಿನಾಂಕದ ನೆನಪಿರಬೇಕು. ಪ್ರತಿಗಂಟೆಯ
ಫೋನ್ ಕರೆ, ಇಮೇಲ್, ವಾಟ್ಸಾಪ್ ಸಾಂಗತ್ಯದಲ್ಲಿ
ಕವಿಹೃದಯ ಡವಗುಟ್ಟಲು ಎದೆಗೆ ಕರೆಂಟ್ ಕೊಡಬೇಕು.

ಯಾರು, ಎಲ್ಲಿ, ಯಾಕೆ ಪ್ರಶ್ನೆಗಳ ಸುಳಿ ಆವರಿಸುತ್ತಲೇ
ಇಲ್ಲಿ ಕಾಲ ಸರಿಯುತ್ತಿದೆ, ಮಳೆ ಇನ್ನೂ ಹುಯ್ಯುತ್ತಿದೆ.
ಸ್ಮಶಾನಗೋರಿಗಳ ಅನುಭವಗಳು ಕರೆಯುತ್ತಿವೆ,
ನವಜಾತ ಕಂದನ ಅಳು ಕೇಳುತ್ತದೆ. ಪೇಲವಚರ್ಮದ
ಮುದುಕನಿಗೆ ಎಂಭತ್ತು ವರ್ಷಗಳ ಹಿಂದೆ ತಿಂದ
ಪನ್ನೇರಳೆ ಹಣ್ಣು ನೆನಪು ಕಾಡಿ ಕನಸು ಹುಟ್ಟುತ್ತದೆ.
ಇಲ್ಲಿ ಜೀವಸೆಲೆಯ ಆಳದ ಗುಹೆಗಳು ಅಡಗಿವೆ.
ಇಲ್ಲಿ ಸೂರ್ಯಚಂದ್ರಮರು ಮಿಣುಕುಹುಳುಗಳು.
ನಗರಪರ್ವತದ ಮೇಲಂಚಿಗೆ ಏರಿದರೆ ಧೂಳಾವರಿಸಿದ
ಸೂರ್ಯಚಂದ್ರಮರು ಸಿಗುತ್ತಾರೆ. ಕಟ್ಟಡಗಳ ಆಚೆ
ಮಣ್ಣಪದರವ ಹುಡುಕಿದರೆ ಒಂದೊಂದು ಹಸಿರುಎಲೆ ಕಂಡೀತು.
ಉದರನಿಮಿತ್ತಂ ಉದ್ಯೋಗದಾಚೆ ಅವರ ಹಸಿದ
ಹೊಟ್ಟೆಗಳು ತಡಕುತ್ತಿವೆ, ಪುಟಗುಟ್ಟುವ ಪ್ರಾಣ
ಸಾಕ್ಷಿ ತಾಕುತ್ತದೆ. ದಿನನಿದ್ದೆಯ ರಾತ್ರಿಎಚ್ಚರಿಕೆಯ ಕತೆಗಾರ್ತಿ,
ಕತ್ತಲೆಯ ಮಾತು, ಬೆಳಕಿನ ಮೌನ, ಮಿಣುಕುಹುಳುಗಳು
ನಗರಗುಹೆಗಳಲ್ಲಿ ಈಜಾಡುವ ಮೀನುಗಾಳಗಳು.






ಜೀವ ಸೆಲೆಯೇ ಇಲ್ಲದ ಯಾಂತ್ರಿಕ ಜೀವನದ ಸುಂದರ ಚಿತ್ರಣ, ವಾಸ್ತವಿಕತೆಯ ನಿರೂಪಣೆ.
Thank you!
Good.poems are helpful to students who do their masters and phd in kannada.They can use these replicas.