ಕಿಂಬರ್ಲಿ ಕಿರಿಕಿರಿ: ಅಂಗೋಲಾದ ಕಥೆಯಾಗದ ಕಥೆಗಳು

‘Kimberley Process’

ಅಂಗೋಲಾದ ಯುನೀಟಾದಂತಹ ಪಕ್ಷಗಳ ದಂಗೆಕೋರರು ಮತ್ತು ಆಫ್ರಿಕಾದ ಇತರ ಭಾಗಗಳಲ್ಲಿ ವಿನಾಶಗೈಯುತ್ತಿದ್ದ ಬಂಡುಕೋರರ ಸಂಪತ್ತಿನ ಮೂಲವನ್ನು ಕಿತ್ತೆಸೆಯಲು ಇಂಥದ್ದೊಂದು ಮಹತ್ವದ ಹೆಜ್ಜೆಯನ್ನಿಟ್ಟಿತ್ತು ವಿಶ್ವಸಂಸ್ಥೆ. ‘ಕಿಂಬರ್ಲಿ ಪ್ರಕ್ರಿಯೆ’ಯೆಂಬ ವ್ಯವಸ್ಥಿತ ಜಾಲದ ಮೂಲಕವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬ್ಲಡ್ ಡೈಮಂಡ್ ಗಳು ಬಿಕರಿಯಾಗದಂತೆ ನೋಡಿಕೊಳ್ಳುವ ಸದುದ್ದೇಶದಿಂದ ಆರಂಭವಾದ ಪ್ರಕ್ರಿಯೆಯಿದು. ಇದರ ಪ್ರಕಾರ ತಮ್ಮ ದೇಶದಿಂದ ರಫ್ತಾಗುತ್ತಿರುವ ವಜ್ರಗಳು ‘ಬ್ಲಡ್ ಡೈಮಂಡ್’ ವರ್ಗಕ್ಕೆ ಸೇರಿದವುಗಳಲ್ಲ ಎಂಬ ಪ್ರಮಾಣಪತ್ರವನ್ನು ನೀಡುವ ಒಂದು ವ್ಯವಸ್ಥೆಯನ್ನು ಕಿಂಬರ್ಲಿ ಪ್ರಕ್ರಿಯೆಯ ನಿಯಮಾವಳಿಗಳ ಪ್ರಕಾರ ರೂಪಿಸಿ ಅನುಷ್ಠಾನಕ್ಕೆ ತರುವುದು ಆಯಾ ದೇಶಗಳ ಸರಕಾರಗಳ ಜವಾಬ್ದಾರಿಯಾಗಿತ್ತು. ಹೀಗೆ ರಕ್ತಸಿಕ್ತ ವಜ್ರಗಳೆಂಬ ಹಣೆಪಟ್ಟಿ ಹೊತ್ತುಕೊಂಡು ವಿಶ್ವದೆಲ್ಲೆಡೆ ಬಿಕರಿಯಾಗುತ್ತಾ ಸಾವಿನ ವ್ಯಾಪಾರವನ್ನು ಹಾಯಾಗಿ ಮಾಡುತ್ತಿದ್ದ ಬಂಡುಕೋರರ ಸದ್ದಡಗಿಸುವ ನಿಟ್ಟಿನಲ್ಲಿ ಕಿಂಬರ್ಲಿ ಪ್ರಕ್ರಿಯೆಯು ಒಂದು ಹೊಸ ಭರವಸೆಯಾಗಿ ಕಂಡಿದ್ದಂತೂ ಸತ್ಯ.

ಅಂಗೋಲಾ ಕಿಂಬರ್ಲಿ ಪ್ರಕ್ರಿಯೆಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲೂ ಒಂದು. ಅಂಗೋಲಾದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿದ್ದ ಆಗಸ್ಟಿನೋ ನೇಟೋ ಎಡಪಂಥೀಯ ನಿಲುವನ್ನು ಹೊಂದಿದ್ದು ಆ ಕಾಲದಲ್ಲೇ ಸೋವಿಯತ್, ಫಿಡೆಲ್ ಕಾಸ್ಟ್ರೋ, ಚೇಗೆವಾರನಂತಹ ನಾಯಕರ ಬೆಂಬಲವನ್ನು ಪಡೆದುಕೊಂಡಿದ್ದವರು. ಆದರೆ ಸೋವಿಯತ್ ಪತನದ ನಂತರ ಭ್ರಮನಿರಸನಕ್ಕೊಳಗಾದವರಂತೆ ಕಂಡ ಡಿ ಸಾಂತುಸ್ ನೇತೃತ್ವದ ಅಂಗೋಲಾದ ಆಡಳಿತಾರೂಢ ಎಂ.ಪಿ.ಎಲ್.ಎ ಪಕ್ಷವು ಹೊರಳಿಕೊಂಡಿದ್ದು ಬಂಡವಾಳಶಾಹಿ ನಾಯಕತ್ವದ ಕಡೆ. ಇತ್ತ ಆಂತರಿಕ ಯುದ್ಧದ ಕೊನೆಯ ಹಂತದ ವರ್ಷಗಳಲ್ಲಿ ಯುನಿಟಾ ಪಡೆಯ ಗೆರಿಲ್ಲಾ ಕಮಾಂಡೋಗಳು ತಮ್ಮ ಶಸ್ತ್ರಾಸ್ತ್ರ ಖರೀದಿಗೆಂದು ದೇಶದ ವಜ್ರನಿಕ್ಷೇಪಗಳನ್ನು ಲೂಟಿ ಮಾಡುತ್ತಿರುವುದು ಆಗಲೇ ಜಗಜ್ಜಾಹೀರಾಗಿತ್ತು. ಹೀಗಾಗಿ ಯಾವ ಕ್ಷಣದಲ್ಲಾದರೂ ಜೋನಸ್ ಸವಿಂಬಿ ನೇತೃತ್ವದ ಯುನಿಟಾ ಪಡೆಯು ತನ್ನಿಂದ ಅಧಿಕಾರವನ್ನು ಕಿತ್ತುಕೊಳ್ಳಬಹುದು ಎಂಬಂತಿದ್ದ ಪರಿಸ್ಥಿತಿಯಲ್ಲಿ ಯುನಿಟಾವನ್ನು ಬಗ್ಗುಬಡಿಯಲು ಕಿಂಬರ್ಲಿ ಪ್ರಕ್ರಿಯೆಯ ಹುಟ್ಟಿನಲ್ಲೂ ಅಂಗೋಲಾದ ಎಂ.ಪಿ.ಎಲ್.ಎ ಸರಕಾರ ತನ್ನದೇ ಆದ ಪಾತ್ರವನ್ನು ವಹಿಸಿತ್ತು.

ಆದರೆ ಕಿಂಬರ್ಲಿ ಸಮಿತಿಯ ಆಗಮನದ ತರುವಾಯ ಬ್ಲಡ್ ಡೈಮಂಡ್ ಗಳ ಕಥೆಯು ಬೇರೆಯದೇ ತಿರುವನ್ನು ಪಡೆದುಕೊಳ್ಳಲಿದೆ ಎಂಬ ನಿರೀಕ್ಷೆ ಯಾರಿಗಾದರೂ ಇತ್ತು? ಅಂಗೋಲಾದಲ್ಲಿ ಆಂತರಿಕ  ಯುದ್ಧದ ಅಂತ್ಯದ ಬೆನ್ನಿಗೇ ಅಂಗೋಲಾದ ವಜ್ರ ವ್ಯಾಪಾರ ವ್ಯವಸ್ಥೆಯ ಮೇಲೆ ನಿಗಾ ಇಟ್ಟಿದ್ದ ಬಹುತೇಕ ಎಲ್ಲಾ ವ್ಯವಸ್ಥೆಗಳನ್ನೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಒಂದೊಂದಾಗಿ ತೆಗೆಯುತ್ತಾ ಬಂದಿತ್ತು. ಆಂತರಿಕ ಯುದ್ಧವು ಮುಗಿದಾಯಿತು, ಇನ್ನು ಅಂಗೋಲಾದಲ್ಲಿ ಬಂಡುಕೋರರಿರುವುದಿಲ್ಲ, ಹೀಗಾಗಿ ಬ್ಲಡ್ ಡೈಮಂಡ್ ಗಳನ್ನು ಇನ್ನು ಅಂಗೋಲಾದ ವಜ್ರನಿಕ್ಷೇಪಗಳಿಂದ ಹೊರತೆಗೆಯಲಾಗುವುದಿಲ್ಲ ಎಂಬಂತೆ ಅಲ್ಲಿಂದ ಮರಳಿದ್ದವು ಭದ್ರತಾ ಮಂಡಳಿಯ ತಂಡಗಳು. ಹೀಗೆ ಥಿಯರಿಯ ಪ್ರಕಾರ ಏಕಾಏಕಿ ‘ಮಾಯವಾದ’ ಬ್ಲಡ್ ಡೈಮಂಡ್ ಗಳು ಈ ಮೂಲಕವಾಗಿ ಸಂಪೂರ್ಣ ವಶವಾಗಿದ್ದು ಅಂಗೋಲಾ ಸರ್ಕಾರಕ್ಕೆ. ಇನ್ನು ವಿಶ್ವಸಂಸ್ಥೆಯ ನಿರ್ಗಮನದಿಂದಾಗಿ ಅಂಗೋಲಾದ ಎಲ್ಲಾ ಬಗೆಯ ವಜ್ರವ್ಯಾಪಾರಗಳು ಸಂಪೂರ್ಣವಾಗಿ ಸರಕಾರದ ಸುಪರ್ದಿಗೆ ಬಂದು ಸರಕಾರವು ದೇಶದ ವಜ್ರಸಂಪತ್ತನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಹಾದಿ ಸುಗಮವಾಯಿತು.

ಬ್ಲಡ್ ಡೈಮಂಡ್ ಮತ್ತು ಕಿಂಬರ್ಲಿ ಪ್ರಕ್ರಿಯೆಗಳ ವಿಚಾರಕ್ಕೆ ಬಂದರೆ ಅಗತ್ಯಕ್ಕಿಂತಲೂ ಹೆಚ್ಚು ಸುದ್ದಿಯಲ್ಲಿದ್ದು ಜಗತ್ತಿನ ಗಮನ ಸೆಳೆದ ದೇಶಗಳೆಂದರೆ ಅಂಗೋಲಾ ಮತ್ತು ಜಿಂಬಾವ್ವೆ. ಅಂಗೋಲಾದ ಕ್ವಾಂಗು ನದಿ ಜಲಾನಯನ ಪ್ರದೇಶದಂತೆಯೇ ಜಿಂಬಾವ್ವೆಯ ಮರಾಂಜ್ ಗಣಿಪ್ರದೇಶದಲ್ಲಿದ್ದ ವಜ್ರಗಳು ತಮ್ಮ ಗುಣಮಟ್ಟದಿಂದಲೂ, ಬ್ಲಡ್ ಡೈಮಂಡ್ ಹಣೆಪಟ್ಟಿಯಿಂದಲೂ ಕುಖ್ಯಾತಿಗೊಳಗಾಗಿದ್ದವು. Human Rights Watch (HRW) ನ 2009 ರ ವರದಿಯು ಜಿಂಬಾವ್ವೆಯ ಪೋಲೀಸ್ ಇಲಾಖೆ ಮತ್ತು ಮಿಲಿಟರಿಯಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಈ ವರದಿಯು ಜಿಂಬಾವ್ವೆಯನ್ನು ಕಿಂಬರ್ಲಿ ಪ್ರಕ್ರಿಯೆಯ ಸದಸ್ಯತ್ವದಿಂದ ಅಮಾನತುಗೊಳಿಸುವುದಲ್ಲದೆ ಸರಕಾರವು ಈ ಹಿಂಸಾಚಾರಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೂ ಇಲ್ಲಿಯ ವಜ್ರಗಳ ರಫ್ತನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದೂ ಅನುಮೋದಿಸಿತ್ತು.

”ಬ್ಲಡ್ ಡೈಮಂಡ್ಸ್: ಟಾರ್ಚರ್ ಆಂಡ್ ಕಿಲ್ಲಿಂಗ್ಸ್” ಕೃತಿಯ ಲೇಖಕರಾದ ಮಾರ್ಕಸ್ ಮೊರಾಯಿಸ್ ಹೇಳುವ ಪ್ರಕಾರ ಕಿಂಬರ್ಲಿ ಪ್ರಕ್ರಿಯೆಯಿಂದಾಗಿ ಹೆಚ್ಚಿನ ಹೊಡೆತಕ್ಕೊಳಗಾದ ರಾಷ್ಟ್ರವು ಜಿಂಬಾವ್ವೆಯೇ ಹೊರತು ಅಂಗೋಲಾ ಅಲ್ಲ. ಇದರ ಹಿಂದಿರುವ ಕಾರಣವನ್ನು ವಿಕಿಲೀಕ್ಸ್ ದಾಖಲೆಗಳ ಉಲ್ಲೇಖದ ಜೊತೆಗೆ ಹೇಳುವ ಮಾರ್ಕಸ್ ಜಿಂಬಾವ್ವೆಯ ವಿರುದ್ಧ ಹೇರಲಾದ ನಿರ್ಬಂಧಗಳ ಮೇಲೆ ಬ್ರಿಟನ್ನಿನ ಸ್ಪಷ್ಟ ಪಾತ್ರವಿರುವುದರ ಬಗ್ಗೆ ದಾಖಲಿಸುತ್ತಾರೆ. ಮೊದಲಿನಿಂದಲೂ ರಾಬರ್ಟ್ ಮುಗಾಬೆ ಸರಕಾರದ ಕಟ್ಟಾ ವಿರೋಧಿಯಾಗಿರುವ ಬ್ರಿಟನ್ ತನ್ನ ಪ್ರಭಾವವನ್ನು ಬಳಸಿ ಈ ನಿರ್ಣಯಕ್ಕೆ ಬರುವಂತೆ ಅಮೆರಿಕಾ, ಯೂರೋಪಿನ ಕೆಲ ದೇಶಗಳು, ಕೆನಡಾ ಮತ್ತು ‘ಗ್ಲೋಬಲ್ ವಿಟ್ನೆಸ್’, ‘ಪಾರ್ಟನರ್ಷಿಪ್ ಆಫ್ರಿಕಾ ಕೆನಡಾ’ ದಂತಹ ಸರಕಾರೇತರ ಸಂಸ್ಥೆಗಳನ್ನು ಒಪ್ಪಿಸುವಲ್ಲಿ ಯಶಸ್ವಿಯಾಯಿತು ಎನ್ನುತ್ತಾರೆ.

ಇತ್ತ ಕಿಂಬರ್ಲಿ ಪ್ರಕ್ರಿಯೆಯ ಗಲಾಟೆಯಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾದ ಜಿಂಬಾವ್ವೆಯ ಬೆಂಬಲಕ್ಕೆ ನಿಂತಿದ್ದು ಅಂಗೋಲಾ. ಹಿಂದಿನಿಂದಲೂ ಮುಗಾಬೆ ಸರಕಾರದೊಂದಿಗೆ ಒಳ್ಳೆಯ ರಾಜತಾಂತ್ರಿಕ ಮೈತ್ರಿಯನ್ನಿಟ್ಟುಕೊಂಡಿದ್ದ ಅಂಗೋಲಾ ಈಗ ಇಡೀ ಆಫ್ರಿಕಾದ ಮುಖವಾಣಿಯೆಂಬಂತೆ ಜಿಂಬಾವ್ವೆಯ ಬೆಂಬಲಕ್ಕೆ ನಿಂತಿತ್ತು. ”ಕಿಂಬರ್ಲಿ ಪ್ರಕ್ರಿಯೆಯ ನಿಯಮಾವಳಿಗಳು ಅನ್ವಯವಾಗುವುದು ಬ್ಲಡ್ ಡೈಮಂಡ್ ಗಳಿಗೆ ಮಾತ್ರ. ಜಿಂಬಾವ್ವೆಯಲ್ಲಿ ಯಾವುದೇ ಆಂತರಿಕ ಯುದ್ಧವು ನಡೆಯುತ್ತಿಲ್ಲ. ಹೀಗಾಗಿ ಅಲ್ಲಿ ಬ್ಲಡ್ ಡೈಮಂಡ್ ಇದೆ ಎಂಬ ಆರೋಪದಲ್ಲಿ ಹುರುಳಿಲ್ಲ”, ಎನ್ನುವುದು ಅಂಗೋಲಾದ ವಾದ. ಕಿಂಬರ್ಲಿ ತನ್ನ ಅಧಿಕಾರದ ಪರಿಧಿಯನ್ನು ಮೀರಿ ವರ್ತಿಸುತ್ತಿದೆ ಎಂದು ನೇರ ಆರೋಪ ಮಾಡುವ ಅಂಗೋಲಾ ಇಂಥಾ ಪ್ರಕರಣಗಳನ್ನು WTO ಮತ್ತು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗಳು ಮಾತ್ರ ಇತ್ಯರ್ಥ ಮಾಡಬಲ್ಲವು ಎಂದೂ ವಾದಿಸುತ್ತದೆ.

ಇಷ್ಟಿದ್ದರೂ ಕಿಂಬರ್ಲಿ ಪ್ರಕ್ರಿಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಅಂಗೋಲಾದ ಚಾಕಚಕ್ಯತೆಯು ಯಾವ ಚಾಣಕ್ಯ ನಡೆಗಿಂತಲೂ ಕಮ್ಮಿಯಿಲ್ಲ. ಡಿ ಸಾಂತುಸ್ ಆಡಳಿತದ ಕಾರ್ಯವೈಖರಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿದ್ದರೂ 2007 ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ರಾಷ್ಟ್ರವಾಗಿ ಅಂಗೋಲಾವನ್ನು ಆರಿಸಿತು. ಅಷ್ಟು ಸಾಲದ್ದೆಂಬಂತೆ 2010-13 ರ ಅವಧಿಗೂ ತನ್ನ ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವವನ್ನು ಕಾಯ್ದುಕೊಳ್ಳಲು 2009 ರಲ್ಲಿ ಅಂಗೋಲಾ ಯಶಸ್ವಿಯಾಗಿತ್ತು. ಬ್ಲಡ್ ಡೈಮಂಡ್ ಗಳಿಗೆ ಸಂಬಂಧಪಟ್ಟಂತೆ ಹಲವು ಆರೋಪಗಳನ್ನು ಆಗಲೇ ತನ್ನ ಮೈಮೇಲೆ ಎಳೆದುಕೊಂಡಿದ್ದ ಅಂಗೋಲಾ ಮಾರ್ಚ್ 2001 ರ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ 16 ನೇ ಸಭೆಯಲ್ಲಿ ಗದ್ದಾಫಿ ಆಧಿಪತ್ಯದ ಲಿಬಿಯಾ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಹೊರಿಸಿ, ಅದನ್ನು ಬಲವಾಗಿ ಖಂಡಿಸಿದ್ದು ಆಷಾಢಭೂತಿತನದ ಪರಮಾವಧಿಯೇ ಸರಿ.

ಲೇಖಕ ಮಾರ್ಕಸ್ ಕಿಂಬರ್ಲಿ ತಂಡವು ತನ್ನ ವರದಿಯಲ್ಲಿ ಅಂಗೋಲಾ ನೆಲದಲ್ಲಿ ಅಂಗೋಲನ್ನರ ಮೇಲೆ ನಡೆದ ದೌರ್ಜನ್ಯಕ್ಕಿಂತ ಕಾಂಗೋಲೀಸರ ಮೇಲೆ ನಡೆದ ಹಿಂಸಾಚಾರದ ಬಗ್ಗೆಯೇ ಹೆಚ್ಚು ಒತ್ತನ್ನು ಕೊಟ್ಟಿದ್ದು ಮತ್ತು ಜಿಂಬಾವ್ವೆಯ ವಿರುದ್ಧ ತೆಗೆದುಕೊಂಡ ಕ್ರಮದಷ್ಟೇ ಕಟುವಾಗಿ ಅಂಗೋಲಾದ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದ ವಿಚಾರವನ್ನು ಪ್ರಸ್ತಾಪಿಸುತ್ತಾ ಸಂಪೂರ್ಣ ಕಿಂಬರ್ಲಿ ಪ್ರಕ್ರಿಯೆಯ ಬದ್ಧತೆಯ ಬಗ್ಗೆಯೇ ಪ್ರಶ್ನಿಸುತ್ತಾರೆ. 2009 ರ ಆಗಸ್ಟ್ ತಿಂಗಳಲ್ಲಿ ಐದು ದಿನಗಳ ಕಾಲ ಅಂಗೋಲಾಕ್ಕೆ ಭೇಟಿ ನೀಡುವ ಕಿಂಬರ್ಲಿ ಸಮಿತಿಯ ತಂಡವು ಕಿಂಬರ್ಲಿ ನಿಯಮಾವಳಿಗಳ ಅನುಷ್ಠಾನದ ಬಗೆಯನ್ನು ಪರೀಕ್ಷಿಸುತ್ತದೆ. ತಂಡವು ತನ್ನ ವರದಿಯಲ್ಲಿ ಕಾಂಗೋಲೀಸ್ ಮಹಿಳೆಯರ ವಿರುದ್ಧ ನಡೆದ ಅತ್ಯಾಚಾರದಂತಹ ದೌರ್ಜನ್ಯ ಮತ್ತು ಪೋಲೀಸ್ ಇಲಾಖೆ/ಸೇನೆ/ಖಾಸಗಿ ಭದ್ರತಾ ಸಂಸ್ಥೆಗಳಿಂದ ಸ್ಥಳೀಯರ ಮೇಲೆ ನಡೆದ ದಬ್ಬಾಳಿಕೆಗಳನ್ನು ಉಲ್ಲೇಖಿಸಿದ್ದರೂ ಇನ್ನೂ ಬೆಳಕಿಗೆ ಬರದಿದ್ದ ಬಹಳಷ್ಟು ಸೂಕ್ಷ್ಮ ಸತ್ಯಗಳನ್ನು ಗುರುತಿಸುವಲ್ಲಿ ಎಡವಿತ್ತು ಎನ್ನುತ್ತಾರೆ ಲೇಖಕರು.

ಕಿಂಬರ್ಲಿ ನಿಯಮಾವಳಿಗಳ ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎಂದು ಅಂಗೋಲಾ ಸರಕಾರದ ಪ್ರತಿನಿಧಿಗಳು ತಂಡವನ್ನು ಒಪ್ಪಿಸಿದರೂ ಕಿಂಬರ್ಲಿ ತಂಡವು ಮಾರಾಟಕ್ಕೆ ಸಂಬಂಧಪಟ್ಟಂತೆ ವ್ಯವಸ್ಥಿತವಾಗಿರಬೇಕಿದ್ದ ಅವಶ್ಯಕ ದಾಖಲಾತಿಗಳನ್ನು ಆತಿಥೇಯರಿಂದ ಪಡೆಯಲು ವಿಫಲವಾಯಿತು. ಇದ್ದ ಅರ್ಧಬಂರ್ಧ ದಾಖಲೆಗಳು ಯಾವ ರೀತಿಯಲ್ಲೂ ಮಾರಾಟದ ಪ್ರಮಾಣ ಮತ್ತು ತತ್ಸಂಬಂಧಿ ಮಾಹಿತಿಗಳನ್ನು ಹೊರತೆಗೆಯಲಾಗುವಷ್ಟು ಸಮರ್ಥವಾಗಿರದೆ ಅಪೂರ್ಣವಾಗಿದ್ದವು. ಇನ್ನು ಗಣಿಕಾರ್ಮಿಕರಿಗೆ ಪರವಾನಗಿಯನ್ನು ನೀಡಲಾಗುತ್ತದೆ ಎಂದು ಆತಿಥೇಯರು ಹೇಳಿಕೊಂಡರೂ ಸ್ಥಳೀಯ ಕಾರ್ಮಿಕರೊಂದಿಗಿನ ಪ್ರಾಥಮಿಕ ಹಂತದ ಮಾತುಕತೆಗಳಲ್ಲಿ ಕಿಂಬರ್ಲಿ ತಂಡಕ್ಕೆ ಅಂಥದ್ದೇನೂ ದೊರಕಲಿಲ್ಲ.

ಅಸಲಿಗೆ ಈ ಪರವಾನಗಿಯ ದಾಖಲಾತಿಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತೇ ಹೊರತು ಗಣಿಕಾರ್ಮಿಕರಿಗಲ್ಲ ಎನ್ನುತ್ತಾರೆ ಮಾರ್ಕಸ್. ಅಷ್ಟಕ್ಕೂ ಈ ವ್ಯವಸ್ಥೆಯು ಹೇಗಿತ್ತೆಂದರೆ ಗಣಿಕಾರ್ಮಿಕರಿಂದ ಮಧ್ಯವರ್ತಿಗಳ ಮೂಲಕವಾಗಿ ಗ್ರಾಹಕರಿಗೆ ದೊರಕುವ ವಜ್ರಗಳಲ್ಲಿ ಆಯ್ದ ಮಾರಾಟಗಳಿಗೆ ಮಾತ್ರ ರಸೀದಿಯನ್ನು ಮಂಜೂರು ಮಾಡಲಾಗುತ್ತಿತ್ತು. ಈ ಮಧ್ಯವರ್ತಿಗಳಿಗೆ ಸರಕಾರದಿಂದ ಮಾರಾಟ ವ್ಯವಸ್ಥೆಯನ್ನು ನಿಯಂತ್ರಿಸಲು ರಚಿಸಲಾಗಿದ್ದ Diamond Security Corps ಕಾಪ್ರ್ಸ್‍ನಿಂದ (CSD) ಆಸ್ಕಾರ್ಪ್ (ASCORP) ನಂತಹ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಹೆಸರಿನಲ್ಲಿ ಪರವಾನಗಿಗಳನ್ನು ನೀಡುತ್ತಿದ್ದಿದ್ದಲ್ಲದೆ ಈ ಇಡೀ ಪ್ರಕ್ರಿಯೆಯಲ್ಲಿ ಬಡ ಗಣಿಕಾರ್ಮಿಕರನ್ನು ಪರಿಗಣಿಸುವ ರೂಢಿಯೇ ಮಧ್ಯವರ್ತಿಗಳು ಮತ್ತು ಶ್ರೀಮಂತ ವಿದೇಶಿ ಗ್ರಾಹಕರ ನಡುವಿನ ವ್ಯವಹಾರದಲ್ಲಿರಲಿಲ್ಲ. ವಜ್ರಗಳು ಯಾವ ದರದಲ್ಲಿ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ ಎಂಬ ಮಾಹಿತಿಯಿಂದ ಕಾರ್ಮಿಕರನ್ನು ದೂರ ಉಳಿಸುವುದು ಮತ್ತು ಈ ಮೂಲಕ ಮಾರುಕಟ್ಟೆಯಲ್ಲಿ ಕಾರ್ಮಿಕರಿಂದ ಉಂಟಾಗಬಹುದಾದ ಹೊಸ ಸ್ಪರ್ಧೆಗಳನ್ನು ಹತ್ತಿಕ್ಕುವುದು ಇದರ ಹಿಂದಿನ ಕುತಂತ್ರವಾಗಿತ್ತು.

ಇತ್ತ ಕಿಂಬರ್ಲಿ ತಂಡದ ನಿರ್ಗಮನದ ನಂತರ ಸರಕಾರಿ ಅಧೀನದ ಪತ್ರಿಕೆಯಾದ ‘ಜರ್ನಲ್ ದೆ ಅಂಗೋಲಾ’ ನವೆಂಬರ್ 2009 ರ ಆವೃತ್ತಿಯಲ್ಲಿ ಈ ಬಗ್ಗೆ ಬರೆಯುತ್ತಾ ಕಿಂಬರ್ಲಿ ಪ್ರಕ್ರಿಯೆಯ ನಿಯಮಾವಳಿಗಳನ್ನು ಅಂಗೋಲಾ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದಲ್ಲದೆ ಇತರ ದೇಶಗಳಿಗೂ ಅಂಗೋಲಾ ಮಾದರಿಯಾಗಲಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತು. ಒಟ್ಟಿನಲ್ಲಿ ಕಿಂಬರ್ಲಿ ಪ್ರಕ್ರಿಯೆಯ ವ್ಯವಸ್ಥೆಯನ್ನು ಅಂಗೋಲಾ ಸರ್ಕಾರವು ತನ್ನ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಂತೂ ಸತ್ಯ.

ಆದರೆ ಕಿಂಬರ್ಲಿ ಪ್ರಕ್ರಿಯೆಯ ಹುಳುಕುಗಳು ಹೆಚ್ಚು ದಿನ ರಹಸ್ಯವಾಗಿರಲೂ ಇಲ್ಲ. ಕಿಂಬರ್ಲಿ ಸಮಿತಿಯಲ್ಲಿದ್ದ ಸರ್ಕಾರೇತರ ಸಂಸ್ಥೆಯಾದ ಪಾರ್ಟನರ್ಷಿಪ್ ಆಫ್ರಿಕಾ ಕೆನಡಾ / Partnership Africa Canada (PAC) ಬಹಿರಂಗವಾಗಿಯೇ ಅಂಗೋಲಾದ ವಿರುದ್ಧ ದನಿಯೆತ್ತಿ ‘ಕಿಂಬರ್ಲಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಅಂಗೋಲಾ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಜರೆಯಿತು. ಅಷ್ಟೇ ಅಲ್ಲದೆ ‘ಮಾನವ ಹಕ್ಕುಗಳ ಬಗ್ಗೆ   ಕಳಕಳಿಯುಳ್ಳ ಎಲ್ಲಾ ದೇಶಗಳೂ ಕೂಡ ಅಂಗೋಲಾದಿಂದ ರಫ್ತಾಗುವ ವಜ್ರಗಳನ್ನು ನಿರಾಕರಿಸಬೇಕು’ ಎಂದೂ ದೃಢವಾಗಿ ಹೇಳಿತು. ಇನ್ನು ಲಂಡನ್ ಮೂಲದ ಸರ್ಕಾರೇತರ ಸಂಸ್ಥೆಯಾದ ಗ್ಲೋಬಲ್ ವಿಟ್ನೆಸ್ ‘ಬ್ಲಡ್ ಡೈಮಂಡ್’ ಸಮಸ್ಯೆಯನ್ನು ಕಿಂಬರ್ಲಿ ಸಮಿತಿಯು ಪರಿಣಾಮಕಾರಿಯಾಗಿ ಪರಿಹರಿಸಲು ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡು 2011 ರಲ್ಲಿ ಸಮಿತಿಯಿಂದ ಹೊರನಡೆಯಿತು. ಗ್ಲೋಬಲ್ ವಿಟ್ನೆಸ್ ಸಂಸ್ಥೆಯು ‘ಬ್ಲಡ್ ಡೈಮಂಡ್’ ಗಳ ವಿಚಾರವನ್ನು ಮುನ್ನೆಲೆಗೆ ತಂದು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಲ್ಲದೆ ಕಿಂಬರ್ಲಿ ಸಮಿತಿಯ ಸ್ಥಾಪನೆಯಲ್ಲಿ ಗಣನೀಯ ಪಾತ್ರವನ್ನು ವಹಿಸಿದ್ದ ಒಂದು ಶಕ್ತಿಯೂ ಹೌದು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಲೇಬೇಕು.

ಕಿಂಬರ್ಲಿ ಸಮಿತಿಯಿಂದ ಗ್ಲೋಬಲ್ ವಿಟ್ನೆಸ್ ಸಂಸ್ಥೆಯ ನಿರ್ಗಮನದ ನಂತರ ಕಿಂಬರ್ಲಿ ಸಮಿತಿಯ ಪ್ರಾಮುಖ್ಯತೆಯೇ ಬಹುತೇಕ ಕುಸಿದುಹೋಯಿತು ಎಂದರೆ ಅಚ್ಚರಿಯಿಲ್ಲ. ಆಗಸ್ಟ್ 2011 ರಲ್ಲಿ ಜಿಂಬಾವ್ವೆಯ ಗಣಿಪ್ರದೇಶಗಳ ಬಗ್ಗೆ ಬಿಬಿಸಿ ನಡೆಸಿದ್ದ ರೇಡಿಯೋ ಡಾಕ್ಯುಮೆಂಟರಿಯೊಂದರಲ್ಲಿ ಕಿಂಬರ್ಲಿ ಸಮಿತಿಯ ಅಧಿಕಾರಿಗಳು ಗಣಿಪ್ರದೇಶಗಳಲ್ಲಿ ನಡೆಯುವ ಹಿಂಸಾಚಾರ ಮತ್ತು ಹತ್ಯಾಕಾಂಡಗಳ ಬಗ್ಗೆ ತಮಗಿದ್ದ ಪರಿಮಿತ ಜ್ಞಾನದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದರು. ಕಿಂಬರ್ಲಿ ಸಮಿತಿಯ ಅಧಿಕಾರಿಗಳು ತಾವು ಭೇಟಿ ನೀಡಿದ್ದ ಬೆರಳೆಣಿಕೆಯ ಪ್ರದೇಶಗಳ ಬಗ್ಗೆ ಮಾತ್ರ ವರದಿ ಸಿದ್ಧಪಡಿಸುತ್ತಿದ್ದರೇ ಹೊರತು ಗಣಿಕಾರಿಕೆಯ ಹೆಸರಿನಲ್ಲಿ ಇತರ ಭಾಗಗಳಲ್ಲಿ ನಡೆಯುತ್ತಿದ್ದ ರಕ್ತಪಾತಗಳ ಬಗ್ಗೆ ಆಳವಾಗಿ ತಿಳಿಯುವ ಅವಕಾಶಗಳಾಗಲೀ, ತರಬೇತಿಗಳಾಗಲೀ ಅವರಿಗಿರಲಿಲ್ಲ. ಹೀಗಾಗಿ ಕಿಂಬರ್ಲಿ ಸಮಿತಿಯನ್ನು ಕೆಲ ದೇಶಗಳು ತಮ್ಮ ಕೈಗೊಂಬೆಗಳಾಗಿಸಿ ಆಟವಾಡುತ್ತಿರುವುದು ಸ್ಪಷ್ಟವಾಗಿತ್ತು.

‘ಬ್ಲಡ್ ಡೈಮಂಡ್’ ಗಳನ್ನು ಬುಡಸಮೇತ ಕಿತ್ತೊಗೆಯಲು ಸ್ಥಾಪಿಸಲಾಗಿದ್ದ ಕಿಂಬರ್ಲಿ ಪ್ರಕ್ರಿಯೆ ಮತ್ತು ವಜ್ರಗಳ ಕಿಂಬರ್ಲಿ ಪ್ರಮಾಣೀಕರಣ ಪದ್ಧತಿಯು ಜಾಗತಿಕ ರಾಜಕಾರಣಕ್ಕೆ ಬಲಿಯಾಗಿ ದಿಕ್ಕುತಪ್ಪಿದ್ದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಅಂಗೋಲಾ ಸೇರಿದಂತೆ ಹಲವು ಆಫ್ರಿಕನ್ ದೇಶಗಳ ಅಮೂಲ್ಯ ವಜ್ರಗಳ ಮೇಲೆ ಅಂಟಿಕೊಂಡಿರುವ ನೆತ್ತರಿನ ಕಲೆಯು ಇನ್ನೂ ಉಳಿದಿದೆ. ಬ್ಲಡ್ ಡೈಮಂಡ್ ಗಳು ಅಂದಿಗೂ ಇಂದಿಗೂ ಬೂದಿ ಮುಚ್ಚಿದ ಕೆಂಡವೇ!

‍ಲೇಖಕರು avadhi

October 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: