ಬಿದಲೋಟಿ ರಂಗನಾಥ್
ದೀಪ ಧೂಪದಾರತಿ ಎತ್ತಿ
ಬೆಳಗುವೆನು ತಾಯೇ
ಕರುಳು ಅರಚುವ ಸದ್ದನ್ನು ನಿಲ್ಲಿಸು
ಹರಕು ಬಟ್ಟೆಯಲಿ
ಮುರುಕು ಜೋಪಡಿಯಲಿ
ಬಿದ್ದ ಕನಸುಗಳಿಗೆ ಜೀವ ಕೊಡು
ಬೆಳಗಾಗುವ ನಾಳೆಗಳು
ಸುಡುವ ಬಂಡೆಯ ಮೇಲೆ ನಿಂತರು
ಅವುಗಳ ಪಾದಮುಟ್ಟಿ
ನಡೆಯುವ ಹಾದಿಯ ಸುಗಮಗೊಳಿಸು
ಕಾರುಣ್ಯದ ಕರುಳಲ್ಲಿ
ಬೆಳದಿಂಗಳನ್ನು ಕಡೆದು
ಗೌವ್ವಗತ್ತಲಿಗೆ ಕಣ್ಣುಬಿಡಿಸಿ
ನಂಜಾದ ಗೋಡೆಯಲ್ಲಿ
ಬಿರಿದ ಬೆರಳ ಗುರುತುಗಳಿಗೆ
ಜೀವಚೈತನ್ಯ ತುಂಬಿ
ಮರಳ ಮೇಲೆ ಬರೆದ ಕಾವ್ಯ
ಎದೆಯ ಗರ್ಭದಲಿ ಅಚ್ಚಾಗಿ
ಕರಿ ಮೋಡದ ಗರ್ಭ
ಕೋಟಿಗೂ ಮೀರಿ
ವಂಕಿ ಹೊಲಿಗೆಯ ಹೆಜ್ಜೆಗೆ
ಕಾವುಕೊಟ್ಟ ಕಾಲ
ರಥ ಬೀದಿಯಲಿ ನಿಂತಿದೆ

ಶೃಂಗಾರ ಮುಡಿದ ಮನಸು
ನಗ್ಗಲು ಮುಳ್ಳಿನ ಭಯಕೆ ಅದುರಿದೆ
ಹೆಜ್ಜೆಗುರುತಿನ ಮೇಲೆ
ಯಾರದೋ ನೆರಳ ಸುಳಿವಿದೆ
ಕರುಳ ಮಮಕಾರ
ಜೋಳಿಗೆಯನೇ ತೊಟ್ಟಿಲ ಮಾಡಿ ತೂಗಿದೆ
ಬೆವರಿದ ನೆಲಕೆ
ತೂಪರಿಸುವ ಮಳೆಯಾದರೂ ಬರಲಿ
ಹಸಿವಿಲ್ಲದ ಹೊಟ್ಟೆಗೆ ಕರುಣೆ ತೊಡಿಸಿ
ಹಸಿದವರ ಹೊಟ್ಟೆ ತಣಿಸಲಿ..
ಬೇಡುವೆನು ತಾಯೇ
ಜಗದ ಮಂಕು ಮರೆಯಾಗಿ
ಚೈತನ್ಯದೊಲುಮೆ ಉಕ್ಕಲಿ
ಕಡಿದಾದ ಕವಲು ದಾರಿಯ ಮೇಲೆ
ನಕ್ಷತ್ರದ ಬೆಳಕಾದರೂ ಕಾಣಲಿ…






0 Comments