ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ – ಅಪರೂಪಕ್ಕೊಮ್ಮೆ…

ನಂದಿನಿ ಹೆದ್ದುರ್ಗ

ಅಪರೂಪಕ್ಕೊಮ್ಮೆ
ತೀರ
ಅಪರೂಪಕ್ಕೊಮ್ಮೊಮ್ಮೆ
ಅವನದನ್ನು ಸಾಕಿಕೊಂಡೇ
ಇಲ್ಲ ಎಂದು ನಾನು
ವಾದಿಸುವ
ಮಿಡಿನಾಗರ ಮೆಲ್ಲಗೆ
ಸುರುಳಿ ಬಿಚ್ಚುತ್ತದೆ

ಒಳಗೊಂದು
ಸೊಕ್ಕು ಉಕ್ಕಿಸುವ
ಪ್ರೇಮಪದ್ಯ ಓದಿದಾಗ
ಕಡಲತಡಿಯಲ್ಲಿ ಕೈಕೈ
ಬೆಸೆದ ಜೋಡಿ ನೋಡಿದಾಗ
ನೀಲಿಹೂವಿನ ಮರದಿಂದ
ಛಂಗನೆ ನವಿಲೊಂದು‌
ಜಿಗಿದಾಗ
ಸುರುಳಿ ಬಿಚ್ಚುವ ಅವನ
ಮಿಡಿನಾಗರದ ಹೆಡೆ
ತುದಿಯಲಿ
ಹೊಳೆಹೊಳೆವ ಶಮಂತಕ
ಮಣಿ

ಅಂದು ಸಂಜೆಗೆ ಮಧುರ ವಿಷದ
ಹಚ್ಚೆಗಳಿಗೆ ಮುಲಾಮು
ಹಚ್ಚುತ್ತಾ
ಮುಗುಳುನಗುತ್ತೇನೆ ನಾನು
ಮೈಮೇಲೆ ಹಬ್ಬಿರುವ
ನವಿಲುಗರಿಗಳ
ಮರಿ ಹಾಕಿಸುವುದು
ಹೇಗೆಂದು ಅವನನ್ನೊಮ್ಮೆ
ಕೇಳಬೇಕೆಂದುಕೊಳ್ಳುತ್ತೇನೆ

ಕಳೆದ ರಾತ್ರಿ ಕಾಣಿಸಿದ್ದ
ಹಾವು ಈ ಮುಂಜಾವಿಗೇ
ಮನೆ ಬಿಟ್ಟಿರುವುದಿಲ್ಲವೆಂಬ
ನಿರೀಕ್ಷೆಯಲ್ಲಿ
ನವುರು ನಾಚಿಕೆಯಲ್ಲಿ
ಅವನನ್ನೊಮ್ಮೆ ಮೆಲುವಾಗಿ
ಕರೆದರೆ
ಹಾವು ಬಿಲ ಸೇರಿರುವ ಸುದ್ದಿ
ತಿಳಿಯುತ್ತದೆ

ನೆನಪ ಉರುವಲಿನಲ್ಲಿ
ಮೈ ಕಾಯಿಸಿಕೊಳ್ಳುವುದು
ಹೊಸ ಭಾಷಣಕ್ಕೆ ಅಣಿಯಾಗುವ
ಅವನ ಕಿಸೆಗೆ ಒಗೆದ
ಕರ್ಚೀಫು ಇಡುವುದು
ಸದ್ಯ
ಹಿತವೆನಿಸುತ್ತಿದೆ

‍ಲೇಖಕರು avadhi

20 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading